ಕಾವ್ಯ ಸಂಗಾತಿ
ಜಯಂತಿಸುನಿಲ್
ಗಜಲ್
ನಿನ್ನ ನೋಡದ ಈ ಕಂಗಳೇಕೆ? ರೆಪ್ಪೆ ಸೇತುವೆಗಳನು ಮುಚ್ಚಿಬಿಡು ಗೆಳೆಯ..
ನಿನ್ನೊಡನಾಡದ ಈ ನಾಲಿಗೆಯೇಕೆ? ತುಟಿಗಳೆರಡನು ಹೊಲಿದುಬಿಡು ಗೆಳೆಯ..!!
ನೀನಿರದೆ ಬಿಲ್ ಕುಲ್ ಬದುಕಿಲ್ಲಾ ನನಗೀಗ…
ಮನದಿ ಸತ್ತ ಈ ಭಾವಗಳೇಕೆ? ಹಿಡಿಮಣ್ಣು ಹಾಕಿಬಿಡು ಗೆಳೆಯ..!!
ನಿನ್ನ ನೆರಳಿಗೂ ಕೊಡೆಹಿಡಿದು ಬರುವಾಸೆ ನನಗೆ..
ನಿನ್ನೊಡನೆ ಹೆಜ್ಜೆಬೆರೆಸದ ಮೇಲೆ ಈ ಕಾಲುಗಳೇಕೆ? ಪಾದಗಳನು ಕತ್ತರಿಸಿಬಿಡು ಗೆಳೆಯ..!!
ನೀನಿಲ್ಲದ ವೇಳೆ ಮನದಿ ಕಡಲ ಜೋಗುಳವೂ ಅಬ್ಬರಿಸುವಂತಿದೆ..
ನೀನಿರದೆಡೆ ಈ ಎದೆಯ ಹಾಡೇಕೆ? ಹೃದಯವನು ಬಗೆದುಬಿಡು ಗೆಳೆಯ..!!
ಪಿಸುಗಾಳಿ ಬಿರುಗಾಳಿಯಾಗಿ ನನ್ನನು ಆವರಿಸಿದರೆ ಹೇಗೆ ತಾಳಲಿ?
ನೀನಿಲ್ಲದ ಈ ಉಸಿರೇಕೆ? ಉಚ್ವಾಸ, ನಿಶ್ಚ್ವಾಸಗಳನು ನಿಲ್ಲಿಸಿಬಿಡು ಗೆಳೆಯ..!!
ಈ ಜೀವದ ಆಜುಬಾಜುಗಳಲ್ಲಿ ನಿನ್ನ ಪ್ರೀತಿಯ ಸುಳಿವಿಲ್ಲಾ..
ನೀ ಜೊತೆಗೂಡದ ಈ ಬಾಳೆನೌಕೆಯೇತಕೆ? ಮುಳುಗಿಸಿಬಿಡು ಗೆಳೆಯ..!!
ಬದುಕಿನ ಉಮೇದಿಗೆ ಜೀವಸ್ವರ ತುಂಬುತ್ತಿರುವವನು ನೀನು…
ನಿನ್ನೊಲುಮೆ ಸಿಗದೆ ಜಯವೆಲ್ಲದೆ? ಜರೂರಾಗಿ ಕೊಂದುಬಿಡು ಗೆಳೆಯ..
ಜಯಂತಿಸುನಿಲ್