ಅಂಬೇಡ್ಕರ್ ಕನಸಿನ ಜನಪ್ರಭುತ್ವ ಸ್ಥಾಪಿತವಾಗಲಿ(ಸ್ವತಂತ್ರ, ಸಮಾನತೆ, ಬಂಧುತ್ವವೆಂಬುದು ಸರ್ವಜನರ ಮೌಲ್ಯ ನೆನಪಿರಲಿ)-ಮೇಘ ರಾಮದಾಸ್ ಜಿ

ಸೆಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿದೆ. ಈ ದಿನದಂದು ವಿಶ್ವದ  ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಎಲ್ಲಾ ರಾಷ್ಟ್ರಗಳು ಹೆಮ್ಮೆಯಿಂದ ಈ ದಿನವನ್ನು ಆಚರಿಸುತ್ತವೆ. ಪ್ರಜಾಪ್ರಭುತ್ವದ ಮೌಲ್ಯಗಳು, ಸುಸ್ತಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಈ ಪ್ರಜಾಸತ್ತಾತ್ಮಕ ವ್ಯವಸ್ಥೆ ಎಷ್ಟು ಮುಖ್ಯ, ದೇಶಗಳಲ್ಲಿ ಈ ಮೌಲ್ಯ ಎಷ್ಟು ಪ್ರಭಾವ ಬೀರಿದೆ ಎನ್ನುವುದರ ಕುರಿತಾಗಿ ಈ ದಿನ ಅವಲೋಕನ ನಡೆಸಲಾಗುತ್ತದೆ. ಈ ದಿನವನ್ನು ನಮ್ಮ ದೇಶದಲ್ಲಿ ಮತ್ತಷ್ಟು ಘನತೆಯಿಂದ ಆಚರಿಸಬೇಕಿದೆ. ಕಾರಣ ನಮ್ಮದು ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಸತ್ತಾತ್ಮಕ ವ್ಯವಸ್ಥೆ ಹೊಂದಿರುವ ದೇಶ. ಆದರೆ ದೇಶದ ಜನರಿಗೆ ಈ ಮೌಲ್ಯದ ಅರ್ಥ ಇನ್ನೂ ಸ್ಪಷ್ಟವಾದಂತೆ ಕಾಣದಿರುವುದು ವಿಪರ್ಯಾಸ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ರಚನಾ ಸಮಯದಲ್ಲಿ ಈ ಪ್ರಜಾಪ್ರಭುತ್ವ ಎನ್ನುವ ಮೌಲ್ಯಕ್ಕೆ ಬಹಳ ಒತ್ತು ನೀಡಿದ್ದರು. ಈ ಮೌಲ್ಯದಿಂದ ದೇಶವು ಉತ್ಕೃಷ್ಟ ಮಟ್ಟಕ್ಕೆ ಏರುತ್ತದೆ ಎಂದು ಅವರು ನಂಬಿದ್ದರು. ಈ ವ್ಯವಸ್ಥೆಯಿಂದ ಜನರು ಆಡಳಿತದಲ್ಲಿನ ಸರ್ಕಾರಗಳನ್ನು ಪ್ರಶ್ನಿಸುವ, ತರಾಟೆಗೆ ತೆಗೆದುಕೊಳ್ಳುವ, ಉತ್ತಮ ಕಾರ್ಯಗಳನ್ನು ಪ್ರಶಂಸಿಸುವ, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತಾರೆ. ಹಾಗಾಗಿ ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಯುವ ಸರ್ಕಾರವನ್ನು ಸೃಷ್ಟಿಸುವ ಶಕ್ತಿ ಈ ಪ್ರಜಾಪ್ರಭುತ್ವಕ್ಕೆ ಇದೆ ಎಂದು ಅಂಬೇಡ್ಕರ್ ಅಂದೇ ತಿಳಿಸಿದ್ದರು. ಆದರೆ ಸ್ವತಂತ್ರ ಪಡೆದು 77 ವಸಂತಗಳು ಕಳೆದರೂ ಸಹಾ ಈ ಮಹತ್ವದ ಆಶಯದ ಬಗ್ಗೆ ಜನರಿಗೆ ಇನ್ನೂ ಪೂರ್ಣವಾಗಿ ಅರ್ಥವಾದ ಹಾಗೆ ಕಾಣುತ್ತಿಲ್ಲ.

ವಿಶ್ವದಾದ್ಯಂತ ಪ್ರಜಾಪ್ರಭುತ್ವ ಎಂಬ ಪದವು ಬಹಳ ಜನಪ್ರಿಯವಾಗಿದೆ. ಆದರೆ ಈ ಪರಿಕಲ್ಪನೆಯು ಬಹಳ ಸಂಕೀರ್ಣವೂ ಕೂಡ ಆಗಿದೆ. ಇದು ಗ್ರೀಕ್ ಪದವಾದ ‘ ಡೆಮೋಸ್ ‘ ಮತ್ತು ‘ ಕ್ರಾಟೋಸ್ ‘ ಎಂಬ ಪದಗಳಿಂದ ಸೃಷ್ಟಿಯಾಗಿದ್ದು. ಡೆಮೋಸ್ ಎಂದರೆ ಜನರು ಮತ್ತು ಕ್ರಾಟೋಸ್ ಎಂದರೆ ಅಧಿಕಾರ ಅಥವಾ ಆಳ್ವಿಕೆ ಎಂದರ್ಥ. ಹಾಗಾಗಿ ಪ್ರಜಾಪ್ರಭುತ್ವ ಎಂಬ ಪದದ ಮೂಲ ಅರ್ಥವೂ ಜನರ ಅಧಿಕಾರ ಅಥವಾ ಜನರ ಆಡಳಿತ. ಇದು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕ ಆಳುವ ಸರ್ಕಾರವನ್ನು ರಚಿಸುವ ಕ್ರಮವಾಗಿದೆ. ಜನರೇ ಈ ವ್ಯವಸ್ಥೆಯಲ್ಲಿ ಸಾರ್ವಭೌಮತ್ವ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಶಸ್ವಿ ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಅಂಶಗಳು ಯಾವುವು ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ ಸಮಾನತೆ, ಬಹು ಪಕ್ಷ ವ್ಯವಸ್ಥೆ, ಕಾನೂನು ಮತ್ತು ಆಡಳಿತದಲ್ಲಿ ಸಮಾನತೆ, ನೈತಿಕ ಕ್ರಮ ಮತ್ತು ಸಾರ್ವಜನಿಕ ಆತ್ಮಸಾಕ್ಷಿ ಸಬಲ ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಾಗಿವೆ.



ಸಮಾನತೆ


ಪ್ರಜಾಪ್ರಭುತ್ವದ ಮೊದಲ ಹಾಗೂ ಪ್ರಮುಖ ಅಂಶವೆಂದರೆ ಸಮಾನತೆ. ದೇಶದ ಎಲ್ಲಾ ಜನತೆಯಲ್ಲಿಯೂ ಸಮಾನತೆ ಉಂಟಾಗಬೇಕು, ಇಲ್ಲಿ ಯಾರೂ ಕೂಡ ಶೋಷಣೆಗೆ, ಅಸಮಾನತೆಗೆ ಒಳಗಾಗಬಾರದು. ರಾಷ್ಟ್ರದ ಸರ್ವ ಜಾತಿ, ಧರ್ಮ, ಲಿಂಗ, ವರ್ಣ, ಪ್ರದೇಶಗಳಲ್ಲಿ ಯಾವುದೇ ರೀತಿಯ ಭೇದಭಾವ ಇಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳು, ಸ್ಥಾನಮಾನಗಳು ಲಭಿಸಬೇಕು. ಇಲ್ಲಿ ಯಾವುದೇ ಶೋಷಿತ ವರ್ಗ ಅಥವಾ ಶೋಷಕ ವರ್ಗ ನೆಲಸಬಾರದು. ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು. ಈ ಸಮಾನತೆಗೆ ಎರಡು ಪ್ರಮುಖ ಸ್ತಂಭಗಳೆಂದರೆ ಸ್ವಾತಂತ್ರ್ಯ ಮತ್ತು ಬಂಧುತ್ವ ಎಂದು ಅವರು ತಿಳಿಸಿದರು. ಆದ್ದರಿಂದ ಪ್ರಜಾಸತ್ತಾತ್ಮಕತೆಗೆ ಸಮಾನತೆ ಸ್ವತಂತ್ರ ಬಂಧುತ್ವಗಳು ಮೂಲ ಆಧಾರಗಳಾಗಿವೆ.

ಬಹು ಪಕ್ಷ ವ್ಯವಸ್ಥೆ


ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಆಡಳಿತ ಪಕ್ಷಕ್ಕೆ ಸರಿಸಮನಾಗಿ ಕೆಲಸ ಮಾಡುವ ವಿರೋಧಪಕ್ಷ ಇರುವುದು ಬಹಳ ಮುಖ್ಯವಾಗುತ್ತದೆ. ಒಂದಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಇದ್ದಾಗ ಮಾತ್ರ ಜನರ ಆಯ್ಕೆಗೆ ನ್ಯಾಯ ಸಿಗುತ್ತದೆ. ಅಧಿಕಾರದಲ್ಲಿರುವ ಪಕ್ಷ ತನ್ನ ಜವಾಬ್ದಾರಿಯನ್ನು ಮರೆತಾಗ ಅದನ್ನು ಬದಲಿಸುವ ಅಧಿಕಾರ ಜನರಿಗಿದೆ ಎಂಬುದು ನಿಜವಾದ ಜನಸತ್ತಾತ್ಮಕತೆ. ಆದ್ದರಿಂದ ಬಹು ಪಕ್ಷಗಳ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಬಲ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು.

ಕಾನೂನು ಮತ್ತು ಆಡಳಿತದಲ್ಲಿ ಸಮಾನತೆ


ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದಲೇ ಯಾರು ಬೇಕಾದರೂ ಆಡಳಿತದ ಗದ್ದುಗೆ ಹಿಡಿಯಬಹುದು ಹಾಗೂ ಸರ್ವರಿಗೂ ಕಾನೂನು ಒಂದೇ ಮತ್ತು ಕಾನೂನು ಮುಂದೆ ಎಲ್ಲರೂ ಸಮಾನರು ಎಂದು ಪರಿಗಣಿಸಲಾಗುತ್ತಿದೆ. ಪ್ರಜಾಪ್ರಭುತ್ವದ ಭದ್ರ ಅನುಷ್ಠಾನಕ್ಕೆ ಈ ಕಾನೂನು ಹಾಗೂ ಆಡಳಿತದ ಸಮಾನತೆ ಅಡಿಪಾಯ ಆಗಿರುವುದುಂಟು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು.

ಸಾರ್ವಜನಿಕ ಆತ್ಮಸಾಕ್ಷಿ


ಪ್ರಜಾಸತ್ತಾತ್ಮಕ ಸಂವಿಧಾನದ ಯಶಸ್ವಿ ಕಾರ್ಯ ನಿರ್ವಹಣೆಗೆ ಅಗತ್ಯವಾದುದು ಸಾರ್ವಜನಿಕ ಆತ್ಮ ಸಾಕ್ಷಿ. ಬಾಬಾ ಸಾಹೇಬರ ಅನುಸಾರ ಸಾರ್ವಜನಿಕರ ಆತ್ಮಸಾಕ್ಷಿ ಎಂದರೆ ಯಾರೇ ಯಾವುದೇ ತೊಂದರೆಯಿಂದ ನಳುತ್ತಿದಾಗ ಅನ್ಯಾಯ ನಡೆದಾಗ, ಪ್ರತಿ ತಪ್ಪು ಕಂಡಾಗ ಸಾರ್ವಜನಿಕರು ಅದರ ವಿರುದ್ಧ ದನಿಯಾಗಬೇಕಿದೆ. ವ್ಯಕ್ತಿಯ ಹಿನ್ನೆಲೆ ಆಧಾರವಿಲ್ಲದೆ ನೊಂದ ವ್ಯಕ್ತಿಯನ್ನು ಬೆಂಬಲಿಸಬೇಕಿದೆ. ಇದು ನಿಜವಾದ ಆತ್ಮಸಾಕ್ಷಿ ದೇಶದ ಸಾರ್ವಜನಿಕರಿಗೆ ಈ ಸೂಕ್ಷ್ಮ ಸಂವೇದನೆ ಬೆಳೆಯಬೇಕು ಎಂಬುದು ಅವರ ಆಶಯವಾಗಿತ್ತು.

ಅಂಬೇಡ್ಕರ್ ಅವರ ಈ ಎಲ್ಲಾ ಆಶಯಗಳನ್ನು ಒಳಗೊಂಡ ಪ್ರಜಾಪ್ರಭುತ್ವ ಇನ್ನು ದೇಶದಲ್ಲಿ ಸ್ಥಾಪಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ ಸಾಧಿಸಲು ಸಾಧ್ಯವಿಲ್ಲ ಎಂದೇನಿಲ್ಲ. ಅಂಬೇಡ್ಕರ್ ಕನಸಿನ ಜನಪ್ರಭುತ್ವ ನಿರ್ಮಾಣವಾಗಲು ಜನರ ಒಳಗೊಳ್ಳುವಿಕೆ ಮತ್ತು ಅರ್ಥೈಸಿಕೊಳ್ಳುವಿಕೆ ಮುಖ್ಯವಾಗಿದೆ. ಆದ್ದರಿಂದ ಜನರಿಂದ ಸೃಷ್ಟಿಯಾಗಿ ಜನರೇ ಅರ್ಥ ಮಾಡಿಕೊಂಡು ಜನರಿಗಾಗಿಯೇ ಕೆಲಸ ಮಾಡುವಂತಹ ಸರ್ಕಾರಗಳನ್ನು ಆರಿಸುವ ತಮ್ಮ ಅಧಿಕಾರವನ್ನು ಚಲಾಯಿಸಿದಾಗ ಜನಸತ್ತಾತ್ಮಕತೆಗೆ ನಿಜವಾದ ನ್ಯಾಯ ದೊರೆಯುತ್ತದೆ.


Leave a Reply

Back To Top