ಹೆಣ್ಣನ್ನು ಹೊನ್ನು ಮಣ್ಣಿನಂತೆ ಸ್ವತ್ತೆಂದು ಪರಿಭಾವಿಸಲಾದೀತೆ..? ಡಾ.ಯಲ್ಲಮ್ಮ ಕೆ

 ಈ ಜೀವ ಜಗತ್ತಿನಲ್ಲಿ ಮನುಷ್ಯಜೀವಿಗಳನ್ನು ಸ್ವತ್ತೆಂದು ಹೇಳಲಾಗದು. ಹಾಗೆ ಹೇಳಿದರೆ ಅವು ಮಾರಾಟದ ಸರಕಾಗಿ ಬಿಡುತ್ತವೆ. ಮಾರಾಟ ಅಥವಾ ವ್ಯಾಪರವೆಂದರೆ..? ಒಂದರ್ಥದಲ್ಲಿ ಮೋಸವೇ ಆಗಿದೆ. ಈ ಕೊಡು-ಕೊಳ್ಳಿಯಲ್ಲಿ ವ್ಯಕ್ತಿಯು ತನ್ನ ವ್ಯವಹಾರ ಕುಶಲತೆಯನ್ನು ಮೆರೆಯುತ್ತಾನೆ. ಈ ಕುಶಲತೆಯನ್ನು ಕರಗತ ಮಾಡಿಕೊಡಲೆಂದೇ ಎಲ್ಲ ವಿಶ್ವವಿದ್ಯಾಲಯಗಳು ಬಿ.ಕಾಂ, ಎಂ.ಕಾಂ, ಬಿ.ಬಿಎಂ, ಎಂ.ಬಿ.ಎ. ಗಳೆಂಬ ಅಧ್ಯಯನ ಶಾಖೆ, ಕೇಂದ್ರ, ಪೀಠಗಳನ್ನು ಮುಕ್ತವಾಗಿ ತೆರೆದಿಟ್ಟಿವೆ. ಹೆಣ್ಣನ್ನು ಸ್ವತ್ತೆಂದು ಪರಿಭಾವಿಸುವ ಮೂರ್ಖನು/ಳು ನಾನಲ್ಲ, ಅಂಥ ಮೂರ್ಖತನ ನನ್ನಲಿಲ್ಲ. ಆ ಸರಕನ್ನು ಕೊಂಡುಕೊಳ್ಳುವ ಧನಿಕತನ, ಸಿನಿಕತನ, ಸ್ವತ್ತನ್ನು ಸ್ವಂತವಾಗಿಸಿಕೊಳ್ಳುವ ಯಾವುದೇ ಹಪಾಹಪಿತನ ನನ್ನಲಿಲ್ಲ.

ಯುಗಯುಗಾಂತರದ ಆಚೆಗಿನ ಒಂದು ಕಾಲಘಟ್ಟದಲ್ಲಿ ಹೆಣ್ಣು, ಮಣ್ಣು, ಹೊನ್ನನ್ನು ಮಾಯೆ ಎಂದು ಕರೆದು, ಭೋಗದವಸ್ತುವೆಂದು ಜರಿದು, ಧರ್ಮ ಸಮ್ಮತವಾಗಿಯೇ…

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯವ್ವನೇ ।ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ ॥

-ಧರ್ಮಶಾಸ್ತ್ರ, ಮನುಸ್ಮೃತಿ

ಮೇಲಿನ ದಾರ್ಶನಿಕನೊಬ್ಬನ ಅಣತಿಯಂತೆ ಗಂಗೆಯನ್ನು ಜಲಾಗಾರಗಳಲ್ಲಿ ಹಿಡಿದಿಡುವ ಪ್ರಯತ್ನ ಅಂದಿನಿಂದ ಇಂದಿನವರೆಗೂ ಹವ್ಯಾತವಾಗಿ ನಡೆದುಕೊಂಡುಬಂದ ಪದ್ಧತಿಯಾಗಿದೆ. ನೀರಿನ ಒಳ ಹರಿವು ಹೆಚ್ಚಿದಾಗ ಹೊರ ಹರಿವು ಕೊಡಲೇಬೇಕು ಎಂಬುದು ನಿರ್ವಿವಾದದ ಸಂಗತಿ. ಮನುಷ್ಯನಿಗೆ ಅನುಕೂಲವಾದದ್ದೆಲ್ಲವೂ ಧರ್ಮ, ಅನನಕೂಲವಾದದ್ದೆಲ್ಲವೂ ಅಧರ್ಮ ಎಂಬರ್ಥದಲ್ಲಿ ಅನಾದಿ ಕಾಲ ದಿಂದ್ದಿಡಿದು ಪ್ರಸ್ತುತ ಕಾಲಘಟ್ಟದವರೆಗೂ ಈ ನೀತಿ-ನಿಯಮ, ಸಂಪ್ರದಾಯ, ಆಚರಣೆಗಳು, ಸಾಮಾಜಿಕ ಕಟ್ಟುಪಾಡುಗಳೆಲ್ಲವೂ ಹೆಣ್ಣು-ಗಂಡೆಂಬ ತರತಮ ಭಾವದಿ, ಹೆಣ್ಣನ್ನು ತನ್ನ ಅಧೀನಳನ್ನಾಗಿ ಸಿಕೊಳ್ಳುವ ಪ್ರವೃತ್ತಿಯನ್ನೇ ತೋರುತ್ತ ಮನುಷ್ಯ ಮುಂದಡಿಯಿಡುತ್ತಿದ್ದಾನೆ. ಕೊಡಲಿಯ ಕಾವು ಕುಲಕ್ಕೆ ಮೃತ್ತು ಎಂಬ ಜನಜನಿತ ಗಾದೆಮಾತಿನಂತೆ ಹೆಣ್ಣಿನಿಂದಲೇ ತನ್ನ ಅಸ್ತಿತ್ವವನ್ನು ಪಡೆದವನು ಹೆಣ್ಣನ್ನಾಳಬೇಕು ಎಂಬ ಚಿತ್ತಭ್ರಮೆಯಲ್ಲಿ ಮುಳುಗೇಳುತ್ತಿರುವುದು ವಿಷಾದನೀಯ ಸಂಗತಿಯೇ ಸರಿ.

ಇಂದು ಹೆಣ್ಣಿಗೆ ಸಂರಕ್ಷಣೆ ಬೇಕು ಎನ್ನುವುದಕ್ಕಿಂತ ರಕ್ಷಣೆ ಬೇಕು ಎಂಬುದು ಹೆಚ್ಚು ಅರ್ಥ ಪೂರ್ಣವೆನಿಸುತ್ತದೆ.
ಆದರೆ ಯಾರಿಂದ ರಕ್ಷಣೆ ಎಂಬುದು ಇಲ್ಲಿ ಯಕ್ಷ ಪ್ರಶ್ನೆ.? ತಂದೆ-ತಾಯಿ, ಗಂಡ- ಹೆಂಡತಿ, ಅಣ್ಣ-ತಂಗಿ, ಅಕ್ಕ-ತಮ್ಮ, ನೆರೆಹೊರೆಯವರಿಂದ ಯಾರಿಂದ..? ಯಾರಿಗೆ ಬೇಕು ರಕ್ಷಣೆ..? ಹಾಗಾದರೆ ನಾವಿಂದು ಎಲ್ಲಿ ಬದುಕುತ್ತಿದ್ದೇವೆ..? ವನ್ಯಮೃಗ-ಖಗಗಳಿರುವ ಗೊಂಡಾರಣ್ಯದಲ್ಲೋ..? ನಾಗರೀಕ ಸಮಾಜದಲ್ಲೋ..? ನಿಜಕ್ಕೂ ಸಂಶಯ ಮೂಡುತ್ತಿದೆ. ಹೆಣ್ಣಿಗೆ ಈ ಭೀತಿ ಎದಿರಾಗಿರುವುದು ಯಾರಿಂದ..? ಹಾಗಾದರೆ ಈ ಸ್ವರಕ್ಷಣೆಯ ಭೀತಿ ಪುರುಷರಿಗೆ ಇಲ್ಲವೇ..? ಕಡಲ್ಗಳ್ಳರಿಂದ ರಕ್ಷಿಸಿಕೊಳ್ಳಬಹುದು ಆದರೆ ಒಡಲ್ಗಳ್ಳರಿಂದ ಹೆಣ್ಣಿಗೆ ರಕ್ಷಣೆ ನೀಡುವವರು ಯಾರು..? ನಾವು ದಾರಿಯಲ್ಲಿ ಹೋಗಬೇಕಾದರೆ ಯಾರಾದರೂ ಚುಡಾಯಿಸಿದ ಸುದ್ದಿ ತಿಳಿದ ಕ್ರೋಧಗೊಳ್ಳುವ ನನ್ನ ಸಹೋದರರು ತಾವು ದಾರಿಯಲ್ಲಿ ಒಂಟಿಯಾಗಿ ಸಿಕ್ಕ ಮಹಿಳೆಯ ಮೇಲೆ ಅತ್ಯಾಚಾರವೆಸಗುವ ಸಂದರ್ಭದಿ ಅವರನ್ನು ತಮ್ಮ ಸಹೋದರಿಯರು ಎಂದೇಕೆ ಭಾವಿಸುವುದಿಲ್ಲ..? ಈ ಕೋರ್ಟು, ಕಛೇರಿ, ಕಾನೂನು, ನ್ಯಾಯ-ನೀತಿ, ನಿಯಮಗಳೆಲ್ಲವೂ ಉಳ್ಳವರ ಪಾಲಾಗಿರುವಾಗ ಅಬಲೆಯರಿಗೆ ರಕ್ಷಣೆ ಇನ್ನೆಲ್ಲಿ ಸಿಗಬೇಕು..? ಈ ಹಿನ್ನಲೆಯಲ್ಲಿ ನೋಡುವುದಾದರೆ… ಹೆಣ್ಣು ಶಿಕ್ಷಣ ಎನ್ನುವ ರಹದಾರಿಯ ಮೂಲಕ ಸ್ವರಕ್ಷಣೆ ಮಾಡಿಕೊಂಡು, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳವುದೇ ಸ್ತ್ರೀ ಅಸ್ತಿತೆಯಾಗಿದೆ ; ಅದೇ ಸ್ತ್ರೀತ್ವದ ತಿರುಳಾಗಿದೆ. ಸ್ತ್ರೀ, ಸ್ತ್ರೀತ್ವ, ಸ್ತ್ರೀವಾದಿ ಎಂದರೆ..? ಕೆಂಗಣ್ಣಿನಿಂದ ನೋಡುತ್ತ, ಪುರುಷ ವಿರೋಧಿ ಎಂದೇ ಬಿಂಬಿಸಿಕೊಂಡು ಬಂದಿರುವಂತದ್ದು, ಬದಲಾಗಿ ಅದು ವಾಸ್ತವದಲ್ಲಿ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಹೆಣ್ಣಿನ ತಣ್ಣನೆಯ ಸಾಮೂಹಿಕ ಪ್ರತಿರೋಧವಾಗಿದೆ.

ಹೆಣ್ಣು ಧಾರ್ಮಿಕತೆಯನ್ನು, ಸಾಮಾಜಿಕ ಹೊಣೆಗಾರಿಕೆಯನ್ನು ಧಿಕ್ಕರಿಸಿ ಎಂದೂ ಸಾಗಳೂ, ವಿವಾಹದ ಮೂಲಕ ಪವಿತ್ರ ದಾಂಪತ್ಯದ ಬದುಕಿನ ಬಂಡಿಯ ನೊಗಕ್ಕೆ ಅವಳು ಮನಸಾ ಹೆಗಲು ನೀಡುತ್ತಾಳೆ. ದಣಿವರಿಯದೇ ದುಡಿವ ಎತ್ತಾಗುತ್ತಾಳೆ, ಸತ್ತೆಂದು, ತೊತ್ತೆಂದು ಭಾವಿಸದಿರಿ… ಸುದೀರ್ಘ ಬಾಳ ಪಯಣದಲ್ಲಿ ಸಹಚಾರಿಣಿಯಾಗಿ ಸಾಗುತ್ತಾಳೇ ವಿನಃ ಯಾರೊಬ್ಬಳ ಸ್ವತ್ತಾಗಲೊಲ್ಲಳು. ಅಂತೆಯೇ ಹೆಣ್ಣೆಂದರೆ..? ಪೆರರ್ ಬಡವೆ ಎಂಬ ಮಹರ್ಷಿ ವಾಲ್ಮೀಯ ಮಾತಿಗೆ ತಲೆಬಾಗಿ ತನ್ನತನವನ್ನು ಬಲಿ ಕೊಡದೇ. ತನ್ನ ಬದುಕನ್ನು ತನ್ನಂತೆಯೇ ಅನುಭವಿಸುವ ಭಾವಜೀವಿಯವಳು, ನಿತ್ಯ ನಿರಂತರವಾಗಿ, ಸ್ವಚ್ಚಂದವಾಗಿ ಪ್ರವಹಿಸುವ ಜೀವಗಂಗೆಯವಳು, ಸೀಮಾತೀತಳು ಈ ಹೆಣ್ಣು.


Leave a Reply

Back To Top