‘ಹೆಣ್ಣೆಂದೂ ಅಬಲೆಯಲ್ಲ….ಸಣ್ಣಕಥೆ-ಲೋಹಿತೇಶ್ವರಿ ಎಸ್ ಪಿ

ಕೋಟೆನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಸಮೀಪದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಗ್ರಾಮವಿದೆ. ಅಲ್ಲಿ ೩೮ ವರ್ಷದ ಮಹಿಳೆಯೊಬ್ಬಳು ಏಕಾಂಗಿಯಾಗಿ, ಹೋರಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ. ಅವಳಿಗೆ ಮೂರು ಜನ ಹೆಣ್ಣುಮಕ್ಕಳು. ಗಂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಊರಿನ ನಾಯಕರಲ್ಲಿ ರಾಮನೂ ಒಬ್ಬ. ಇವನಿಗೆ ಆ ಮಹಿಳೆಯ ಮೇಲೆ ಕಣ್ಣು. ದಿನನಿತ್ಯ ಅವಳ ಚಲನವಲನಗಳನ್ನ ಬಕಪಕ್ಷಿಯಂತೆ ಕಾಯುತ್ತಾ ವಿಕ್ಷಿಸುತ್ತಿರುತ್ತಾನೆ. ಅದರೊಂದಿಗೆ ಅವಳ ಕಿರಿಯ ಮಗಳಾದ ಸಾಗರಿಯ ಮೇಲೂ……

ನುಡಿ ಸ್ವಾಭಿಮಾನದ ಹೆಣ್ಣು. ಯಾರ ಹಂಗಲ್ಲೂ ಇರಲು ಬಯಸದೆ ಜೀವನವನ್ನು ರೂಪಿಸಿಕೊಳ್ಳುವ ಛಲವನ್ನು ಹೊಂದಿರುವವಳು. ಹಲವು ಬಾರಿ ಅವಳಿಗೆ ಊರಿನ ಗಂಡಸರಿಂದ ತೊಂದರೆ ಎದುರಾದರೂ ಎದುರಿಸುವ ಛಾತಿ ಅವಳಲ್ಲಿತ್ತು. ನುಡಿಗೆ ಸಾಗರಿಯೊಂದಿಗೆ ರಜನಿ, ಶಿವಾನಿ ಎಂಬ ಇನ್ನಿಬ್ಬರು ಹೆಣ್ಣುಮಕ್ಕಳಿದ್ದರು. ರಜನಿ ನುಡಿಗೆ ಹಿರಿಯ ಮಗಳು. ಅವಳು ತಿಳಿವಳಿಕೆಯಲ್ಲೂ ಹಿರಿಯಳಾಗಿದ್ದಳು. ರಾಮ ಒಂದು ದಿನ ರಜನಿ ಬಳಿ ಬಂದು ‘ನಿಮ್ಮಮ್ಮ ಎಲ್ಲಿ ಮಗು’ ಎಂದಾಗ ‘ಎರಡು ಜತೆ ಚಪ್ಪಲಿ ತರೋಕೆ ಹೋಗಿದ್ದಾರೆ. ಈ ಹಿಂದೆ ತಂದಿರೋವು ಕಿತ್ತುಹೋಗ್ತಿದ್ದು, ಅದಕ್ಕೆ ತುಂಬಾ ಗಟ್ಟಿ ಇರುವ, ಬಾಳಿಕೆ ಬರುವ ಚರ್ಮದ ಚಪ್ಪಲಿ ತರೋಕೆ ಹೇಳಿ ನಾವೇ ಕಳ್ಸಿವಿ. ಯಾಕೆ ಏನಾಗೇಕಿತ್ತು’. ಎಂದಳು. ರಜನಿಯ ಮಾತಿನ ಒಳಾರ್ಥ ತಿಳಿದ ರಾಮ ಮರುಮಾತಾಡದೇ ಅಲ್ಲಿಂದ ಕಾಲುಕಿತ್ತ. ರಜನಿ ನಿಜವಾಗಿಯೂ ನುಡಿಗೆ ಮತ್ತೊಬ್ಬ ತಾಯಿಯಾಗಿದ್ದಳು. ರಾಮ ಅಲ್ಲಿಂದ ಹೊರಟಮೇಲೆ ಶಿವಾನಿ ಮತ್ತು ಸಾಗರಿಯನ್ನು ಹತ್ತಿರಕ್ಕೆ ಕರೆದು ಕುರಿಸಿಕೊಂಡು ರಜನಿ ಹಿಂದಿನ ನೆನಪುಗಳನ್ನೆಲ್ಲಾ ಮೆಲುಕು ಹಾಕುತ್ತಾ ಅಳುತೊಡಗಿದಳು. ನುಡಿಯ ಗಂಡ ಅಭಿರಾಮ. ಚಳ್ಳಕೆರೆಯ ತಾಲೂಕು ಆಫೀಸಿನಲ್ಲಿ ಕಾಂಟ್ರ್ಯಾಕ್ಟ್ ಮೇಲೆ ಕೆಲಸ ಮಾಡುತ್ತಿದ್ದ. ತಿಂಗಳಿಗೆ ೧೨ ಸಾವಿರ ಸಂಬಳ. ಯಾವುದೇ ಅಡೆತಡೆ ಇಲ್ಲದೆ ಇರುವಷ್ಟರಲ್ಲಿಯೇ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಕಾಂಟ್ರ್ಯಾಕ್ಟ್ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಇದ್ದಷ್ಟು ಕಾಲ ಸ್ವಲ್ಪ ಹಣ ಕೂಡಿಕೊಂಡು ಏನಾದರೂ ವ್ಯಾಪಾರ ಮಾಡಬೇಕು ಎಂಬ ಆಲೋಚನೆ ಅಭಿರಾಮನದಾಗಿತ್ತು. ಕೆಲದಿನ ಕಳೆದ ನಂತರ ಕೆಲಸದ ಅವಧಿ ಮುಗಿಯಿತು. ಅವನ ಆಲೋಚನೆಯಂತೆಯೇ ಹೋಟೆಲ್ ಒಂದನ್ನು ಆರಂಭಿಸಿದ. ಗಂಡನಿಗೆ ಸಹಾಯ ಮಾಡುವ ಸಲುವಾಗಿ ನುಡಿಯೂ ಕೈಜೋಡಿಸಿದಳು. ಒಟ್ಟಿನಲ್ಲಿ ಆ ಕುಟುಂಬ ಇರುವಷ್ಟರಲ್ಲಿ ಸುಖವಾಗಿಯೂ, ನೆಮ್ಮದಿಯಿಂದಲೂ ಜೀವನ ಸಾಗಿಸುತ್ತಿತ್ತು. ಹೀಗಿರುವಾಗ ಬಿರುಗಾಳಿ ರೂಪದಲ್ಲಿ ಆಪತ್ತೊಂದು ಬಂದೊದಗಿತ್ತು. ಅಭಿರಾಮ ಕೆಲಸದ ಮೇಲೆ ಚಿತ್ರದುರ್ಗಕ್ಕೆ ಹೋಗುತ್ತಿರುವ ವೇಳೆ ಅಪಘಾತವಾಯಿತು. ಬೈಕಿನೊಂದಿಗೆ ಅವನು ಸಹ…..

ಅಪಘಾತಮಾಡಿದ ವ್ಯಕ್ತಿ ಪ್ರಬಲನೂ, ದಯಾಹೀನನೂ ಆಗಿದ್ದನು. ಆ ಅವಘಡ ನಡೆದ ಕೆಲಸಮಯದಲ್ಲೇ ಊರಿನ ಮುಖಂಡರೆಲ್ಲರೂ ಸೇರಿ ಅವನನ್ನು ಪೋಲೀಸರಿಗೆ ಒಪ್ಪಿಸಿ ಸರಿಯಾಗಿ ಪಾಠ ಕಲಿಸಬೇಕು ಎಂದುಕೊಂಡಿದ್ದರು. ಆದರೆ, ಅವನಲ್ಲಿದ್ದ ಹಣದಿಂದ ಊರಿನ ಮುಖಂಡರ ಜೇಬನ್ನು ತುಂಬಿಸುವ ಮೂಲಕ ಬಾಯಿಮುಚ್ಚಿಸಿ ಮೆಲ್ಲನೆ ಪರಾರಿಯಾದ. ಆ ಸಮಯದಲ್ಲಿ ನುಡಿ ಪ್ರತಿಕ್ರಿಯಿಸದ ಸ್ಥಿತಿಯಲ್ಲಿ, ಮಕ್ಕಳು ಏನೂ ಅರಿಯದ ಮನಸ್ಥಿತಿಯಲ್ಲಿದ್ದರು. ಕಣ್ಣುಮುಚ್ಚಿ ತೆರೆಯುವುದರೊಳಗೆ ಎಲ್ಲವೂ ಮಣ್ಣಾಗಿತ್ತು. ಅಲ್ಲಿ ಮಣ್ಣಾಗಿದ್ದು, ಅಭಿರಾಮನ ದೇಹಮಾತ್ರವಲ್ಲ, ನುಡಿಯ ಆಸೆ ಆಕಾಂಕ್ಷೆ ಜೀವನ ಎಲ್ಲವೂ.

ಅಭಿರಾಮನ ಅಗಲಿಕೆಯ ನಂತರ ಅನ್ನಕೊಡುತ್ತಿದ್ದ ಹೋಟೆಲ್ ಸಹ ಮುಚ್ಚಿಹೋಯಿತು. ಮನೆಯಲ್ಲಿ ಒಂದು ಹೊತ್ತು ಊಟವಿಲ್ಲದೆ ಮಕ್ಕಳು ನರಳುವ ಸ್ಥಿತಿಗೆ ತಲುಪಿದ್ದರು. ಮಕ್ಕಳ ಸ್ಥಿತಿಯನ್ನು ಕಂಡು ನುಡಿ ಆಗಿಹೋಗಿರುವುದನ್ನು ನೆನೆದು ನರಳುವ ಬದಲು, ಮುಂದೆ ನಡೆಯಬೇಕಾದುದರ ಕಡೆಗೆ ಗಮನ ಕೊಡಬೇಕು ಎಂಬ ನಿರ್ಧಾರ ಮಾಡಿದಳು. ಮನಸ್ಸನ್ನು ಹತೋಟಿಗೆ ತೆಗೆದುಕೊಂಡು ಅಭಿರಾಮನನ್ನು ಕಳೆದುಕೊಂಡ ನೋವಿದ್ದರೂ ಜೀವನ ಸಾಗಿಸಲೆಂದು ಮಕ್ಕಳಿಗಾಗಿ ದುಡಿಮೆಗೆ ನಿಂತಳು. ಆರಂಭದಲ್ಲಿ ಓದು ಬರೆಹ ಬಲ್ಲಂತಹ ನುಡಿ ಯಾವುದಾದರೂ ಆಫೀಸ್ ವರ್ಕ್ ಸಿಗುತ್ತಾ…..? ಎಂದು ಅಲೆದಳು. ಕೆಲಸ ಹುಡುಕಲಾಂಭಿಸಿ ಒಂದು ವಾರವಾದರೂ ಯಾವುದೇ ಕೆಲಸ ಸಿಗಲಿಲ್ಲ. ನೆರೆಹೊರೆಯವರ ಬಳಿ ದಿನಸಿ ಸಾಲ ಪಡೆದಾಗಿತ್ತು. ಮತ್ತೆ ಕೇಳಲು ಆಗದ ಸ್ಥಿತಿಗೆ ತಲುಪಿದ್ದಳು. ನುಡಿಯ ಪರಿಸ್ಥಿತಿಯನ್ನು ಚೆನ್ನಾಗಿ ಅರಿತ ಗೀತಮ್ಮ ‘ಅಕ್ಕ ಶೇಂಗಗಿಡ ಕೀಳುವ, ಶೇಂಗ ಬಿಡಿಸುವ, ರಾಶಿ ಮಾಡುವ ಕೆಲಸ ಇದೆ ಬರ್ತಿಯಾ..?’ ಎಂದು ಸಂದೇಹದಲ್ಲಿಯೇ ಕೇಳಿದಳು. ಅಭ್ಯಾಸವಿಲ್ಲದಿದ್ದರೂ ಮಕ್ಕಳಿಗಾಗಿ ಒಪ್ಪಿ ನುಡಿ ಗೀತಾಳೊಂದಿಗೆ ಕೆಲಸಕ್ಕೆ ಹೊರಟಳು. ಅದು ಅವಳಿಗೆ ಹೊಸ ಕೆಲಸವಾದರೂ ಕಷ್ಟಪಟ್ಟು ಕೆಲಸಮಾಡಿ ಸಂಜೆ ಕೂಲಿ ಕೇಳಿ ಪಡೆದು ಮಕ್ಕಳಿಗೆ ಎರಡು ಹೊತ್ತು ಊಟಕ್ಕೆ ಬೇಕಾಗುವ ದಿನಸಿ ತೆಗೆದುಕೊಂಡು ಹೋಗಿ ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಿದಳು. ಮಕ್ಕಳು ಆ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡುವುದನ್ನೇ ನೋಡುತ ನುಡಿ ಅವಳ ಹೊಟ್ಟೆ ತುಂಬಿಸಿಕೊಂಡಳು. ತಾಯಿಯೆಂದರೆ ಹಾಗೆ ಅಲ್ಲವೇ?. ಮರುದಿನದಿಂದ ಗೀತಾಳೊಂದಿಗೆ ನಿತ್ಯ ಕೆಲಸಕ್ಕೆ ಹೋಗಲು ನಿರ್ಧರಿಸಿದಳು. ಮಕ್ಕಳು ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಿದ್ದನ್ನು ಕಂಡ ಅವಳ ಮನಸ್ಸು ಎಲ್ಲಿಲ್ಲದ ಉತ್ಸಾಹದಿಂದ ನನ್ನ ದುಡಿಮೆಯೇ ನನ್ನ ಮಕ್ಕಳಿಗೆ ಆಧಾರವೆಂದು ತಿಳಿದು ಖುಷಿಯಿಂದಲೇ ಕೆಲಸ ಮಾಡತೊಡಗಿದಳು. ವಾರಾಂತ್ಯದ ವೇಳೆಗೆ ಅವಳು ಯಾವುದೇ ಕೂಲಿಯ ಹಣ ಉಳಿಯದಂತೆ ಅಂದಿನ ಕೂಲಿ ಹಣ ಅಂದಂದೆ ಕೇಳಿ ಪಡೆದಿದ್ದಳು. ಆದರೆ, ಆ ಹೊಲದ ಮಾಲೀಕ ಕೂಲಿಕೆಲಸದವರಿಗೆ ಭಟ್ವಾಡಿ ಮಾಡುವ ವೇಳೆ ನುಡಿಯನ್ನು ಕರೆದು ೫೦೦ ರೂಪಾಯಿ ಅವಳ ಕೈಯಲ್ಲಿ ಬಲವಂತವಾಗಿ ಇಟ್ಟು ಕೈಹಿಡಿದು.! ತಕ್ಷಣ ಆ ಹಣವನ್ನು ಅವನ ಮುಖದ ಮೇಲೆ ಎಸೆದು ‘ಮಾನ್ಗೆಟ್ಟ ಬೇವರ್ಸಿ’ ಎಂದು ಬೈದು ಮುಖದ ಮೇಲೆ ಥೂ ಎಂದು ಉಗಿದು ಮನೆಗೆ ಓಡಿದಳು. ಮನೆಯ ಮೂಲೆಲಿ ಅಳುತ್ತಾ ಕೂತಿದ್ದಳು. ಅದನ್ನು ಕಂಡ ರಜನಿ ಏನಾಯಿತಮ್ಮ ಎಂದು ಕೇಳಿದ ಕೂಡಲೆ ಮಗುವಿನಂತೆ ಅವಳ ಮಡಿಲಲ್ಲಿ ಮಲಗಿ ಅಳುತ್ತಾ ಎಲ್ಲವನ್ನು ಹೇಳಿದಳು.

ತನ್ನ ತಾಯಿ ಹಾಗೂ ಮನೆಯ ಪರಿಸ್ಥಿತಿಯ ಅರಿವಿದ್ದ ರಜನಿ ತನ್ನ ತಂದೆಯನ್ನು ನೆನೆದು ಅಳಲು ಆರಂಭಿಸಿದಳು. ಅದನ್ನು ಕಂಡ ನುಡಿ ತಾನು ಸಮಾಧಾನ ಮಾಡಿಕೊಂಡು ಮಗಳನ್ನು ಸಮಾಧಾನ ಮಾಡಿದಳು. ಆದರೆ ಮನಸ್ಸಲ್ಲಿ ನಾಳೆ ಏನು? ಹೇಗೆ? ಎಂಬ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡವು. ಎರಡು ದಿನದ ಬಳಿಕ ನುಡಿ ಅನಿವಾರ್ಯವಾಗಿ ಬೇರೆ ಕಡೆ ಕೆಲಸ ಹುಡುಕಲು ಹೊರಟಿರುವಾಗ ಅವಳ ಪರಿಸ್ಥಿತಿಯನ್ನು ತಿಳಿದ ಸಂಬಂಧಿಕರೊಬ್ಬರು ‘ಹಾಲು ಉತ್ಪಾದಕರ ಸಂಘದಲ್ಲಿ ದಿನ ಡೈರಿಗೆ ಹಾಲು ಹಾಕಿಸಿಕೊಂಡು ಲೆಕ್ಕ ಬರೆದುಕೊಳ್ಳುವ ಕೆಲಸವಿದೆ. ಸರ್ಕಾರದಿಂದ ನೇಮಕಾತಿಯಾಗುವವರೆಗೆ ಅಲ್ಲಿ ಕೆಲಸಕ್ಕೆ ಸೇರಿಕೊಳ್ಳಮ್ಮ’ ಎಂದು ಹೇಳಿದ್ದನ್ನು ಕೇಳಿ ಖುಷಿಯಿಂದ ಆ ಕೆಲಸ ಮಾಡಲು ಒಪ್ಪಿಕೊಂಡಳು. ತಿಂಗಳಿಗೆ ಆರು ಸಾವಿರ ಸಂಬಳವೆಂದು ಮಾತನಾಡಿ ಕೆಲಸಕ್ಕೆ ದಿನ ಹೋಗಿಬರತೊಡಗಿದಳು. ಕೆಲಕಾಲ ಏನು ತೊಂದರೆ ಇಲ್ಲದೆ ಜೀವನ ಸಾಗುತ್ತಿತ್ತು. ಆದರೆ, ಊರಿನ ಮುಖಂಡನೂ, ದುಷ್ಟನೂ, ಮಾನಹೀನನೂ ಆದ ರಾಮ ಪದೇಪದೇ ತಿಗಣೆಯಂತೆ ಕಾಡುತ್ತಿದ್ದ. ಕಷ್ಟವಾದರೂ ಮಕ್ಕಳಿಗಾಗಿ ಏನು ಮಾತನಾಡದೆ ಅವಳಪಾಡಿಗೆ ಅವಳಿದ್ದು, ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆದರೆ, ಅವನ ಕಣ್ಣು ಸಾಗರಿಯ ಮೇಲೂ ಬಿದ್ದಿದೆ ಎಂಬ ವಿಷಯ ತಿಳಿದ ಮೇಲೆ ಅದನ್ನು ಸಹಿಸಿಕೊಳ್ಳುವ ಮನಸ್ಸು ಅವಳದಾಗಿರಲಿಲ್ಲ. ಜೊತೆಗೆ ಕೆಲಸ ಮಾಡುವ ಜಾಗದಲ್ಲಿ ಕೆಲವು ಗಂಡಸರ ಕಾಟವು ಶುರುವಾಗಿತ್ತು. ಅವರನ್ನೆಲ್ಲಾ ನುಡಿ ತಿರಸ್ಕಾರದ ಮನೋಭಾವದಿಂದ ನೋಡುವುದು ಸಹಿಸಿಕೊಳ್ಳಾರದೇ, ಅವರೇ ಇಲ್ಲಸಲ್ಲದ ಸುದ್ದಿಯನ್ನು ಹರಡಲಾರಂಭಿಸಿದರು. ಆದರೂ ಮಕ್ಕಳನ್ನು ನೆನೆದು ಈ ಯಾವ ವಿಷಯವೂ ನುಡಿಗೆ ಗೊತ್ತೇ ಇಲ್ಲವೆಂಬಂತೆ ಇದ್ದಳು. ಎಲ್ಲವೂ ತಿಳಿದು ಮೂಕಳಾಗಿ ಮೌನವಾಗಿರುವುದು ಸುಲಭದ ವಿಷಯವಲ್ಲ. ಆದರೆ, ಈ ಜಗತ್ತಿನಲ್ಲಿ ಬಹುತೇಕ ಹೆಣ್ಣುಮಕ್ಕಳು ಹಾಗೆಯೇ ಇದ್ದಾರೆ. ಅದಕ್ಕೆ ಅಲ್ಲವೇ ಹೆಣ್ಣನ್ನು ಸಹನಾಮಯೀ ಎಂದು ಕರೆಯುವುದು.

ಒಂದು ದಿನ ತಿಗಣೆಯಂತೆ ರಕ್ತಹಿರುವ ಗಂಡಸರೆಲ್ಲರೂ ಒಟ್ಟಾಗಿ ಸೇರಿ ಅವಳ ಸುತ್ತ ನೆರೆದು ‘ಅವರಷ್ಟೇ …..ವನ್ನು ಕೊಡುತ್ತಾರ? ಅವರಿಗಿಂತ ಹೆಚ್ಚು…ವನ್ನು ನಾವು ಕೊಡುತ್ತೇವೆ. ಬರ್ತಿಯಾ…?’ ಎಂದು ಕೇಳುತ್ತಾ ಗೇಲಿ ಮಾಡಲಾರಂಭಿಸಿದರು. ಅಭಿರಾಮನ ಅಗಲಿಕೆಯಿಂದ ನೋವಿನಲ್ಲಿ ಬೆಂದುಹೋಗಿದ್ದ ನುಡಿ ಮೌನಿಯಾಗಿದ್ದಳು. ಆದರೆ, ಈ ಮಾತನ್ನು ಕೇಳಿದ ತಕ್ಷಣ ಎಡಗಾಲಿನ ಚಪ್ಪಲಿ ತೆಗೆದು ಗೋವಿಂದನ ಕೆನ್ನೆ ಮೇಲೆ ಗುರುತು ಮೂಡಿಸಿದಳು. ಇದನ್ನು ನೋಡಿದ ಅನೇಕರು ಬುದ್ದಿಕಲೆತು ದೂರವಾದರು. ಜಾಣನಿಗೆ ಮಾತಿನಪೆಟ್ಟು ದಡ್ಡನಿಗೆ ದೊಣ್ಣೆಪೆಟ್ಟು ಎಂಬ ಮಾತು ಇಂತಹ ಸಂದರ್ಭದಲ್ಲಿ ಮೊದಲ ಸಾಲಿನಲ್ಲಿ ಬಂದು ನಿಲ್ಲುತ್ತದೆ. ಇಷ್ಟಾದರೂ ರಾಮ ಮಾತ್ರ ಅವಳನ್ನು ಬಿಡುವಂತೆ ಕಾಣುತ್ತಿರಲಿಲ್ಲ. ರಾಮನ ಹೆಂಡತಿಯನ್ನು ಒಮ್ಮೆ ಕರೆದು ಇರುವ ವಾಸ್ತವ ವಿವರಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ನುಡಿ ತಾನೇ ರಾಮನಿಗೆ ಬುದ್ದಿಕಲಿಸಬೇಕೆಂದು ನಿರ್ಧರಿಸಿದಳು. ಆ ಹೊತ್ತಿಗಾಗಲೇ ರಾಮ ಮನೆಗೆ ಬಂದು ಹೋಗಿದ್ದ. ರಜನಿಯಿಂದ ವಿಷಯತಿಳಿದ ನುಡಿ ಮತ್ತೊಂದು ಅವಕಾಶಕ್ಕಾಗಿ ಕಾಯದೆ ಮಾರನೇ ದಿನವೇ ಡೈರಿಗೆ ಹಾಲು ಹಾಕಲು ಬಂದಿದ್ದ ರಾಮನನ್ನು ಥಳಿಸಿಯೇ ಬಿಟ್ಟಳು. ರಾಮ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಅಲ್ಲಿಂದ ಜಾಗಖಾಲಿಮಾಡಿದ.

ಆ ದಿನ ರಾತ್ರಿ ನುಡಿಯ ಮನೆಯ ಮೇಲೆ ಕಲ್ಲು ತೂರಾಡಿ ಊರಿನ ಜನರಿಗೆಲ್ಲಾ ಕೇಳುವಂತೆ ಸೂ…. ಎಂದು ಕೂಗತೊಡಗಿದ. ಗಂಡು ಜಾತಿಯೇ ಹೀಗೆ ಒಲ್ಲೆ ಎಂದ ಹೆಣ್ಣಿಗೆ ಸೂ…. ಎಂಬ ಪಟ್ಟವನ್ನು ಕ್ಷಣಾರ್ಧದಲ್ಲಿಯೇ ಕಟ್ಟಿಬಿಡುತ್ತದೆ. ಈ ಮಾತನ್ನು ಕೇಳಿಸಿಕೊಂಡ ರಜನಿ, ಶಿವಾನಿ, ಸಾಗರಿ ಎಲ್ಲರೂ ಸೇರಿ ರಾಮನನ್ನು ಹೊಡೆಯಲು ಹೋದಾಗ ಸಾಗರಿಯನ್ನು ಒಮ್ಮೆಲೆಗೆ ತಳ್ಳಿಬಿಟ್ಟ. ತಳ್ಳಿದ ರಭಸಕ್ಕೆ ಪಕ್ಕದಲ್ಲೇ ಬಿದ್ದಿದ್ದ ಗುಂಡುಕಲ್ಲಿನ ಮೇಲೆ ಬಿದ್ದು ಸಾಗರಿಯ ತಲೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ರಕ್ತನಿಲ್ಲದೆ ಸಾಗರಿ ಒದ್ದಾಡತೊಡಗಿದಳು. ಅದನ್ನು ಕಂಡ ನೆರೆಹೊರೆಯವರು ರಾಮನಿಗೆ ಬುದ್ದಿಕಲಿಸಿ ಸಾಗರಿಯ ತಲೆಗೆ ಬಟ್ಟೆಕಟ್ಟಿ ಆಸ್ಪತ್ರೆಗೆ ಕರೆದೊಯ್ದರು. ನಡೆದ ಘಟನೆಗಳಿಂದ ನೊಂದ ನುಡಿ ಊರು ಬಿಡಲು ನಿರ್ಧರಿಸಿದಳು. ಕೆಲಸಕ್ಕೆ ರಾಜೀನಾಮೆ ನೀಡಿ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಹೋದಳು. ಆರಂಭದಲ್ಲಿ ಗಾರೆಕೆಲಸ ಮಾಡಿ ಜಾಗದಕ್ಕಿಸಿಕೊಂಡಳು. ನಂತರ ಅಭಿರಾಮನಿಂದ ಕಲೆತ ಹೋಟೆಲ್ ಉದ್ಯಮಕ್ಕೆ ಕೈಹಾಕಿದಳು. ತಾಯಿಯ ಸಹಾಯಕ್ಕೆ ರಜನಿ ನಿಂತಳು. ದುಡಿಮೆ ಮಾಡಿ ಮಕ್ಕಳನ್ನೆಲಾ ಓದಿಸಿದಳು. ರಜನಿ ಹೋಟೆಲಿನ ಅನುಭವದೊಂದಿಗೆ ‘ಎಂಬಿಎ ಪದವಿ ಪಡೆದು ಬದುಕಿನ ದಾರಿ ಕಂಡುಕೊಂಡಳು. ಎರಡನೇ ಮಗಳಿಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ . ಅವಳ ನಿರೀಕ್ಷೆಯಂತೆ ಓದಲಿಲ್ಲ. ಕೊನೆಗೆ ಒಳ್ಳೆಯ ಗಂಡು ನೋಡಿ ಮದುವೆ ಮಾಡಿಕೊಟ್ಟಳು. ಸಾಗರಿ ಮುದ್ದಿನ ಮಗಳೂ ಹೌದು. ಹಾಗೆ ತುಂಬಾ ಜಾಣೆಯೂ ಆಗಿದ್ದಳು. ಪದವಿ ಪಡೆದಿದ್ದರೂ. ತಂದೆಯ ಗುರುತಾದ. ತಾಯಿ ಆರಂಭಿಸಿದ, ಬದುಕಿಗೆ ನೆರವಾದ ಹೋಟೆಲನ್ನು ನಡೆಸಿಕೊಂಡು ಅಭಿವೃದ್ಧಿಪಡಿಸಿದಳು. ತಂದೆಯ ಆಲೋಚನೆಯ ಪ್ರತಿಬಿಂಬದಂತೆ ಹೋಟೆಲ್ ಅನ್ನು ರೂಪಿಸಿದಳು.

ಪರಿಚಿತ ಮತ್ತು ಅಪರಿಚಿತ ಎರಡು ಪದಗಳಿಗೆ ಒಂದೇ ಅಕ್ಷರದ ವ್ಯತ್ಯಾಸ. ಆದರೆ, ವಾಸ್ತವದಲ್ಲಿ ನಿಂತು ನೋಡಿದಾಗ ಅದು ಜನನಕೂ ಮರಣಕೂ ಇರುವ ವ್ಯತ್ಯಾಸವನ್ನೇ ಪ್ರತಿನಿಧಿಸುತ್ತದೆ. ನನ್ನ ಕಥೆಯ ನಾಯಕಿಯ ಬಾಳಿನಲ್ಲಿ ಈ ಒಂದು ಅಕ್ಷರದ ಪಾತ್ರ ಬಹಳ ಹಿರಿದು. ಪರಿಚಿತ ಪ್ರದೇಶಕ್ಕಿಂತ ಅಪರಿಚಿತ ಪ್ರದೇಶವೇ ಬದುಕು ರೂಪಿಸಿಕೊಳ್ಳಲು ಅನುವಾಗುತ್ತದೆ. ಪರಿಚಿತರ ನಡುವೆ ಅವಮಾನ, ಅಪವಾದ, ನಿಂದನೆಗಳನ್ನೇ ಎದುರಿಸಿದ ನಾಯಕಿ ಅಪರಿಚಿತ ಪ್ರದೇಶದಲ್ಲಿ ಸಾಧಿಸಿ ತೋರಿದಳು. ಸಮಾಜದಲ್ಲಿ ಸ್ಥಾನಮಾನ ಕಂಡುಕೊಂಡಳು. ಗಂಡಿನ ಸಹಾಯವಿಲ್ಲದ ಹೆಣ್ಣು ಅಬಲೆ, ಅಬಲೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದೆಂಬ ಸಮಾಜದಲ್ಲಿ ಹೆಣ್ಣು ಏನನ್ನಾದರೂ ಸಾಧಿಸಬಲ್ಲಳು ಎಂಬ ನಿಲುವನ್ನು ನಿರೂಪಿಸಿದಳು.

ಈ ನುಡಿಯ ಚಹರೆ ಸಾಧನೆಗೆ ಯಾರ ಹಂಗು ಇಲ್ಲ. ಜೊತೆಗೆ ವಯಸ್ಸಿನ ಅಡ್ಡಿಯೂ ಇಲ್ಲ ಎಂಬುದನ್ನು ನಿರೂಪಿಸುತ್ತದೆ. ನಿಮ್ಮಲ್ಲೂ ನುಡಿಯಂತಹ ಹೆಣ್ಣುಮಗಳಿದ್ದರೆ ನುಡಿಯ ಬದುಕಿನ ಈ ಪುಟ್ಟ ಪುಟವೊಂದನ್ನು ತೆರೆದಿಡಿ. ಹಾಗೆಯೇ ಓದು ಬಾರದಿರುವವರಿಗೆ ಓದಿ ‘ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡಿದಾಗಲೇ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಇಲ್ಲವಾದರೆ ನಾಲ್ಕು ಗೋಡೆಯ ನಡುವೆ ಕಸವಾಗಬೇಕಾಗುತ್ತದೆ’ ಎಂಬ ತಿಳಿವನ್ನು ನೀಡಿ. ನೀಡುತ್ತೀರಾ ಎಂಬ ಆಶಯದಲ್ಲಿ………..


Leave a Reply

Back To Top