ದೈನಂದಿನ ಸಂಗಾತಿ
ವೀಣಾ ಹೇಮಂತ ಗೌಡ ಪಾಟೀಲ್
ಸತತ ಪ್ರಯತ್ನ,
ನಿಶ್ಚಿತ ಗುರಿ ಮತ್ತು
ಸಾಧನೆಯ ಹಾದಿ
ಚಾರಣಿಗರ ಗುಂಪೊಂದು ಪರ್ವತವನ್ನು ಏರುತ್ತಿತ್ತು. ಅತ್ಯಂತ ಉತ್ಸಾಹಿಯಾಗಿದ್ದ ಆ ಯುವಕನು ಗುಂಪಿನ ಎಲ್ಲ ಸದಸ್ಯರನ್ನು ಹಿಂದಕ್ಕೆ ಹಾಕಿ ಎಲ್ಲರಿಗಿಂತ ಮುಂಚೆಯೇ ಪರ್ವತವನ್ನು ಏರಬೇಕೆಂಬ ಆಸೆಯಿಂದ ಬೇಗನೇ ಪರ್ವತವನ್ನು ಹತ್ತಲಾರಂಭಿಸಿದ. ಇನ್ನೇನು ಪರ್ವತದ ತುದಿಯನ್ನು ತಲುಪಲು ಕೆಲವೇ ಮೀಟರುಗಳಷ್ಟು ಹಾದಿ ಬಾಕಿ ಇದೆ ಎನ್ನುವಾಗ ಆತನಿಗೆ ಸಾಕಾಯ್ತು. ಅಯ್ಯೋ! ಇನ್ನು ಅಷ್ಟು ದೂರ ನಡೆಯಬೇಕಲ್ಲ ಎಂಬ ಭಯದಿಂದ ಆತ ಕೆಳಗೆ ಇಳಿಯತೊಡಗಿದ. ಮಾರ್ಗ ಮಧ್ಯದಲ್ಲಿ ದೊರೆತ ಅದೆಷ್ಟೋ ಸ್ನೇಹಿತರು ಆತನ ಮನವೊಲಿಸಲು ಪ್ರಯತ್ನಿಸಿದರೂ ಅಪ್ರತಿಭನಾದ ಆತ ಯಾರ ಮಾತಿಗೂ ಕಿವಿಗೊಡದೆ ಕೆಳಗೆ ಇಳಿದುಬಿಟ್ಟ. ಹಾಗೆ ಇಳಿದ ಆತನಿಗೆ ಪರ್ವತದ ತುದಿಯನ್ನು ಮುಟ್ಟಲು ಕೇವಲ ಐವತ್ತು ಮೀಟರ್ ದೂರದಲ್ಲಿ ತಾನಿದ್ದೆ ಎಂದು ಅರಿವಾದಾಗ ತನ್ನ ಆತುರದ ನಿರ್ಧಾರಕ್ಕೆ ತಾನೇ ಪಶ್ಚಾತಾಪ ಪಟ್ಟನು.
ಎಷ್ಟೋ ಬಾರಿ ಹೀಗೆ ಆಗುವುದಲ್ಲವೇ ಸ್ನೇಹಿತರೆ! ಹಾಲನ್ನು ಕಾಯಿಸಲು ಇಟ್ಟ ನಾವು ಅದು ಉಕ್ಕು ಬರುವವರೆಗೆ ತಡೆಯುವುದಿಲ್ಲ.. ಇನ್ನೇನು ಕಾರ್ಯಸಿದ್ಧಿಯಾಯಿತು ಎಂಬ ಹೊತ್ತಿಗೆ ಹತಾಶರಾಗಿ ಪ್ರಯತ್ನವನ್ನು ಕೈಬಿಡುತ್ತೇವೆ. ಒಂದೇ ಬಾರಿ ಹಲವಾರು ಗುರಿಗಳನ್ನು ಇಟ್ಟುಕೊಂಡು ಯಾವೊಂದ ರಲ್ಲಿಯೂ ಏಕಾಗ್ರತೆಯನ್ನು ಸಾಧಿಸುವಲ್ಲಿ ವಿಫಲರಾಗಿ ಹತಾಶರಾಗುತ್ತೇವೆ.
ಇದನ್ನೇ 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮನೆಯ ಮುಂದೆ ಹಲವಾರು ಗುಂಡಿಗಳನ್ನು ತೆರೆದು ನೀರನ್ನು ಹುಡುಕುವ ಬದಲಾಗಿ ಒಂದೇ ಗುಂಡಿಯನ್ನು ಆಳವಾಗಿ ಕೊರೆದು ನೀರಿನ ಸೆಲೆಯುಕ್ಕಲು ಕಾಯಬೇಕು ಎಂದು ದೃಷ್ಟಾಂತವನ್ನು ತೋರಿ ಹೇಳಿ ಹಲವಾರು ದೇವರನ್ನು ಪೂಜಿಸುವ ಬದಲು ಏಕದೇವೋಪಾಸನೆ ವಿಹಿತವೆಂದು ಸಾರಿದರು.
ಇಂತದ್ದೇ ಒಂದು ಗುರಿಯನ್ನು ತನ್ನ ಜೀವನದ ಧ್ಯೇಯವಾಗಿ ಇಟ್ಟುಕೊಂಡು ನಿರಂತರ ಪ್ರಯತ್ನ ಮತ್ತು ಶ್ರದ್ಧೆಯಿಂದ ಸಾಗಿರುವ ವ್ಯಕ್ತಿ ಕಾಂಚನಮಾಲಾ ಪಾಂಡೆ.
ಕಾಂಚನ ಮಾಲ ಪಾಂಡೆ ಎಂಬ ಹೆಸರನ್ನು ಕೇಳುತ್ತಲೇ ಉತ್ಸಾಹದ ಅಲೆಯೊಂದು ನಮ್ಮ ಹೃದಯವನ್ನು ಹೊಕ್ಕು ನಮ್ಮನ್ನು ತೇಲುವಂತೆ ಮಾಡುತ್ತದೆ. ಕಠಿಣ ಪರಿಶ್ರಮ, ಬದ್ಧತೆ ಮತ್ತು ನಿರಂತರ ತರಬೇತಿಯ ಪರಿಣಾಮವಾಗಿ ಆಕೆ ಇಂದು ತನ್ನ ಗುರಿಯನ್ನು ತಲುಪಿದ್ದು ಜಾಗತಿಕ ಪ್ಯಾರಾಲಂಪಿಕ್ ನಲ್ಲಿ 200 ಮೀಟರ್ ಸ್ವಿಮ್ಮಿಂಗ್
ಕೂಟದಲ್ಲಿ ಎಸ್ 11 ಕೆಟಗರಿಯಲ್ಲಿ ಈಜಿ ಇತಿಹಾಸವನ್ನು ಸೃಷ್ಟಿಸಿದ್ದಾಳೆ. ಆ ಮೂಲಕ ನಿರಂತರವಾಗಿ ಪ್ರಯತ್ನ ಮಾಡುವ ವ್ಯಕ್ತಿಯ ಪರಿಶ್ರಮಕ್ಕೆ ಯಾವುದೇ ಸವಾಲುಗಳು ಅಡ್ಡಿ ಯಾಗುವುದಿಲ್ಲ ಎಂದು ಆಕೆ ಸಾಬೀತುಪಡಿಸಿದ್ದಾಳೆ.
ಇಂದಿನ ಮಹಾರಾಷ್ಟ್ರದ ಅಮರಾವತಿಯಲ್ಲಿ ಹುಟ್ಟಿರುವ ಕಾಂಚನಮಾಲಾ ಪಾಂಡೆ ವರ್ಲ್ಡ್ ಚಾಂಪಿಯನ್ ಶಿಪ್ ಸೇರಿದಂತೆ 17ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮೆಡಲುಗಳನ್ನು ಪಡೆದಿರುವ ಅಂಧ ಕ್ರೀಡಾಪಟುವಾಗಿದ್ದಾಳೆ.
ಕಾಮನ್ವೆಲ್ ಕ್ರೀಡೆಗಳಲ್ಲಿ ಭಾಗವಹಿಸಿರುವ ಈಕೆ 2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಎಫ್ ಇ ಎಸ್ ಪಿ ಐ ಸಿ ಗೇಮ್ಸ್ ನಲ್ಲಿ 2006 ರಲ್ಲಿ ಮಲೇಶಿಯಾ ದಲ್ಲಿ ನಡೆದ ಪ್ಯಾರಾ ಏಷಿಯನ್ ಗೇಮ್ಸ್ 2010ರಲ್ಲಿ ಚೀನಾದಲ್ಲಿ ನಡೆದ ಇತರ ಟೂರ್ನಮೆಂಟ್ ಗಳಲ್ಲಿ ಒಟ್ಟು ಏಳು ಗೋಲ್ಡ್ ಮೆಡಲುಗಳನ್ನು ಪಡೆದಿರುವ ಆಕೆ ತನ್ನ ಮದುವೆಯ ನಂತರ ಹೆರಿಗೆ ರಜೆ ಪಡೆದುಕೊಂಡಿದ್ದು ರಾಷ್ಟ್ರೀಯ ಚಾಂಪಿಯನ್ಶಿಪ್ ನಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಅದ್ಭುತವಾಗಿ ಈಜು ಕ್ರೀಡೆಗೆ ಮರು ಪ್ರವೇಶ ಮಾಡಿದಳು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕ್ಲಾಸ್ ಒನ್ ಆಫೀಸರ್ ಆಗಿ ನಿಯತ್ತಳಾಗಿರುವ ಕಾಂಚನ ಮಾಲ ಸಾಧನೆ ಅಸಾಮಾನ್ಯ.
ಜಾಗತಿಕ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ಕಾಂಚನಮಾಲಾಳ ಜೀವನದ ಕಥೆ ಅತ್ಯದ್ಭುತ 120ಕ್ಕೂ ಹೆಚ್ಚು ಮೆಡಲುಗಳನ್ನು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಗಳಿಸಿರುವ ಆಕೆಯ ಪದಕಗಳಲ್ಲಿ 115 ಚಿನ್ನ ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳನ್ನು ಒಳಗೊಂಡಿವೆ. ಅದೆಷ್ಟೇ ದೈಹಿಕ ತೊಂದರೆಗಳು ಒದಗಿದರೂ ಸಾಧಿಸುವ ಛಲ ಮತ್ತು ಮಹತ್ವಕಾಂಕ್ಷೆಯೊಂದಿದ್ದರೆ ಎಲ್ಲರೂ ಋಣಾತ್ಮಕ ವಿಷಯಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂಬುದನ್ನು ಕಾಂಚನ ಮಾಲಾಳ ಕಥೆಯಿಂದ ನಾವು ಅರಿಯಬೇಕಾಗಿದೆ.
ನಾಗಪುರದ ಅಮರಾವತಿಯ ನಿವಾಸಿಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು ಅಕ್ವಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಿರಂತರವಾಗಿ ತರಬೇತಿ ಪಡೆಯುತ್ತಿದ್ದಾರೆ.
ಆಕೆಯ ಕೋಚ್ ಆಗಿರುವ ಪ್ರವೀಣ್ ಲಂಕಾಡೆ ಮತ್ತು ಸಹ ಕೋಚ ಆಗಿರುವ ಶಶಿಕಾಂತ್ ಚಂದೆ ಅತ್ಯದ್ಭುತವಾಗಿ ಆಕೆಯನ್ನು ತರಬೇತಿಗೊಳಿಸಿದ್ದು ಇದೀಗ ಅದರ ಪ್ರತಿಫಲವನ್ನು ನಾವು ಕಾಣುತ್ತಿದ್ದೇವೆ
100 ಮೀಟರ್ ನ ಫ್ರೀ ಸ್ಟೈಲ್ ಈಜು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಐದನೇ ಸ್ಥಾನವನ್ನು ಆಕೆ ಪಡೆದಿದ್ದಾಳೆ. ಕಣ್ಣು ಕಾಣದ ಆಕೆ ಹಿಮ್ಮುಖ ಈಜುಗಾರಿಕೆಯನ್ನು ಕೂಡ ಅತ್ಯಂತ ಲೀಲಾಜಾಲವಾಗಿ ನಿರ್ವಹಿಸಿ ಮೆಡಲುಗಳಿಸಿದ್ದು ಕಡಿಮೆ ಸಾಧನೆಯೇನಲ್ಲ. ಕಾಂಚನ ಮಾಲಾಳ ಈಜು ಪಯಣ ಕಠಿಣ ಹೋರಾಟ ಮತ್ತು ಯಶಸ್ಸನ್ನು ಒಳಗೊಂಡಿದ್ದು ಈ ಕುರಿತು ಆಕೆ ಹೇಳಿದ್ದು ಹೀಗೆ… ತಾನು ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು
ಇಚ್ಚಿಸಿದ್ದು ಅಲ್ಲಿ ಅತ್ಯುತ್ತಮ ಫಲಿತಾಂಶವನ್ನು ನೀಡಲು ಎಲ್ಲ ತಯಾರಿ ಮಾಡಿಕೊಂಡಿದ್ದೇನೆ ಎಂದು ಹೇಳುವ ಕಾಂಚನಮಾಲಾಳ ಜೀವನದ ಈ ಪಯಣ ಸರಳ ಹಾದಿಯಾಗಿರದೇ ಅಪಾರ ಏರಿಳಿತಗಳು ಮತ್ತು ಸಂಘರ್ಷಗಳಿಂದ ಕೂಡಿತ್ತು
ಕಾಂಚನ ಮಾಲಾಳ ಈ ಕಥೆ ನಮಗೆ ಮಹತ್ವಾಕಾಂಕ್ಷೆಗೆ ತಕ್ಕಂತಹ ಪರಿಶ್ರಮ ಮತ್ತು ಬದ್ಧತೆಯ ಪಾಠವನ್ನು ಕಲಿಸಿಕೊಡುತ್ತದೆ.
ವೀಣಾ ಹೇಮಂತ್ ಗೌಡ ಪಾಟೀಲ್