ಬದುಕು ಭಾರವಾದಾಗ ನಾಲ್ಕು ಹನಿ ಕಣ್ಣೀರು ಹಾಕಿಬಿಡಿ.ಓರೇನೋಟ -ರಮೇಶ ಸಿ ಬನ್ನಿಕೊಪ್ಪ

ಯಾಕೋ ಮನಸ್ಸು ಒದ್ದಾಡುತೀದೆ…ತುಂಬಾ ನೋವಿನಿಂದ ಹೊಯ್ದಾಡುವ ಈ ಮನಸ್ಸಿಗೆ ಏನಾಗಿದೆ…? ಎಂದು ಆಲೋಚಿಸುವುದೂ ಕಷ್ಟವಾಗಿದೆ.   ಒಂದು ರೀತಿಯ ತಳಮಳ, ಯಾವ ಸಂಗತಿಯ  ಮೇಲೆಯೂ ಮನಸ್ಸು ಮೂಡುತ್ತಿಲ್ಲ, ಒಂದೊಂದು ಸಲ ಏನೋ ಕಳೆದುಕೊಂಡ ಯಾತನೆ, ಇನ್ನೂ ಏನೇನೋ ಪಡೆದುಕೊಂಡ ಸಂತೋಷ..!  ಕ್ಷಣ ಕಾಲವಾದ ತಕ್ಷಣ ಪಡೆದುಕೊಂಡಿದ್ದಕ್ಕಿಂತಲೂ ಕಳೆದುಕೊಂಡಿದ್ದೆ ಹೆಚ್ಚೆಂದು ಹಪಾಹಪಿಸುತ್ತಿದೆ..!!

ಯಾಕೋ ನಿನ್ನೆಯಿಂದ ಬದುಕು ಭಾರವಾಗಿ, ಯಾರ ಸಂಪರ್ಕವಿಲ್ಲದೆ ಒಬ್ಬಂಟಿಯಾಗಿರಬೇಕು, ಎಲ್ಲಿಯಾದರೂ ದೂರ ಹೋಗಿ ಮನಸ್ಸೋ ಇಚ್ಚೆ
 ಅತ್ತು ಬಿಡಬೇಕು,  ಬಿದ್ದ ಮೋಡಗಳಾಟವನ್ನು ಕಣ್ಣ ತುಂಬಾ ನೋಡಬೇಕು, ಅಲ್ಲೆಲ್ಲೋ ನೀರಿನ ತೊರೆಗಳ ದೃಶ್ಯಗಳನ್ನು ಮನದೊಳಗೆ ತುಂಬಿಕೊಳ್ಳಬೇಕು, ಅಬ್ಬಾ ಎಷ್ಟೊಂದು ಸುಂದರವಾಗಿ ಬಗೆ ಬಗೆಯ ಹೂಗಳು ಅರಳಿ ನಿಂತಿವೆ..!  ಅವುಗಳ ಸೌಂದರ್ಯವನ್ನು ಕಣ್ಮನವನ್ನು ತುಂಬಿಕೊಂಡು ಬಿಡಬೇಕು… ಹೀಗೆ ಅನಿಸುವಾಗಲೇ ಮತ್ತೆ ಕ್ಷಣಕಾಲ ಮೌನ.. ಅದೇ ಯಾತನೆ ಎಂದು ಆಲೋಚಿಸುವಾಗಲೇ ಮತ್ತೆ ಬದುಕು ಭಾರವಾಗುತ್ತಿದೆ.

ಇಂತಹ ವಿಲಕ್ಷಣ ಮನಸ್ಸಿನ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ  ಇರುವುದನ್ನು ನೋಡುತ್ತೇವೆ.  ಅವರು ನಮ್ಮ ಗೆಳೆಯರಾಗಿರಬಹುದು, ಸಂಬಂಧಿಗಳಾಗಿರಬಹುದು, ಇಲ್ಲವೇ ನಮ್ಮ ವೃತ್ತಿಬಾಂಧವರಾಗಿರಬಹುದು, ಸದಾ ಅವರು  ಏನನ್ನೋ ಕಳೆದುಕೊಂಡು  ಸಂಕಟವನ್ನು ಅನುಭವಿಸುತ್ತಿರುತ್ತಾರೆ. ತಮ್ಮ ಬದುಕಿನ ನೋವು ನಲಿವುಗಳನ್ನು ಯಾರ  ಜೊತೆಗೂ ಹಂಚಿಕೊಳ್ಳಲಾರರು.

 ಆದರೂ….

 ಅವರು ಸದಾ ಒಂಟಿಯಾಗಿರಲು ಬಯಸುತ್ತಾರೆ. ಮಾತನಾಡಿಸಿದರೆ ಕೋಪಗೊಳ್ಳುತ್ತಾರೆ. ಏನೋ ಹೇಳಬೇಕೆಂದುಕೊಂಡು ಹಾಗೆ ಮಾತುಗಳನ್ನು ಹಿಂದಕ್ಕೆ ತೆಗೆದುಕೊಂಡು ಮೌನವಾಗಿ ಬಿಡುತ್ತಾರೆ. ಜನಸಂದಣಿಯ ಸಂತೆಯೊಳಗಿದ್ದರೂ,  ಜನನಿಬೀಡ ಜಾತ್ರೆಯೊಳಗಿದ್ದರೂ ಇಂತಹ ಹಲವು ವ್ಯಕ್ತಿಗಳು ಒಂಟಿತನವನ್ನು ಸದಾ ಅನುಭವಿಸುತ್ತಿರುತ್ತಾರೆ.

 ಮನಶಾಸ್ತ್ರಜ್ಞರ ಪ್ರಕಾರ, ಇವರನ್ನು ಏಕಾಂಗಿಗಳು ಇಲ್ಲವೆ  ಅಂತರ್ಮುಖಿಗಳು ಎಂದು ಕರೆಯುತ್ತಾರೆ. ಇವರು ಸಣ್ಣ ಸಣ್ಣ ಸಮಸ್ಯೆಗಳನ್ನು ಕೂಡ ದೊಡ್ಡದನ್ನಾಗಿ ಮಾಡಿಕೊಂಡು, “ಬದುಕು ಮುಗಿದು ಹೋಯಿತು, ನನ್ನಿಂದ ಏನೂ ಆಗುವುದಿಲ್ಲ,  ನಾನು ಯಾರಿಗೂ ಬೇಡವಾದ ವ್ಯಕ್ತಿ” ಎಂದು ತಮ್ಮಷ್ಟಕ್ಕೆ ತಾವೇ ಸದಾ ಕೊರಗುತ್ತಿರುತ್ತಾರೆ. ಇಂತಹ ವ್ಯಕ್ತಿಗಳೇ ಆತ್ಮಹತ್ಯೆಯಂತಹ ಬದುಕಿನ ಅಂತಿಮ ಘಟ್ಟಕ್ಕೆ ಕೆಲವು ಸಲ ಕೊರಳೊಡ್ಡಿಬಿಡುತ್ತಾರೆ. ಸಾಮಾನ್ಯ ಜನರಿಗೆ ಇವರ ಆತ್ಮಹತ್ಯೆ ಮಾಡಿಕೊಂಡ ಕಾರಣಗಳನ್ನು ಕೇಳಿ ಶಾಕ್ ಅಗುತ್ತಾರೆ.  ಅವರನ್ನು ಬೈಯುತ್ತಾ, ಹೀಯಾಳಿಸುತ್ತಲೂ ಅಂತಹ ಮಹಾ ದೊಡ್ಡ ಸಮಸ್ಯೆಯಾ..? ಎಂದು ಮೂಗು ಮುರಿಯುತ್ತಾರೆ. ನಿಜ,  ಸಾಮಾನ್ಯ ವ್ಯಕ್ತಿಗಳಿಗೆ ಹಾಗೇನಿಸುವುದು ಸಹಜ.

ಆದರೆ ಅಂತರ್ಮುಖಿಗಳು ಯಾವಾಗಲೂ ವಿಭಿನ್ನ ಆಲೋಚನೆಯುಳ್ಳವರು. ವಿಭಿನ್ನವಾದ ನಡೆತನೆಗಳನ್ನು ರೂಡಿಸಿಕೊಂಡಿರುತ್ತಾರೆ. ಕಾರಣಗಳು ತೀರಾ ಚಿಕ್ಕದಾಗಿರಬಹುದು ಇಲ್ಲವೇ ದೊಡ್ಡದಾಗಿರಲುಬಹುದು. ಕಾರಣವಿಲ್ಲದೆ ಇರಬಹುದು..!!

ಶಾಲೆಗೆ ಹೋಗಲಾರದಕ್ಕೆ ಅಪ್ಪ ಬೈದಿರುವುದನ್ನು ನೆನಪಿಸಿಕೊಂಡು ಅಳುವ ಮಗುವಾಗಿಬಹುದು.  ಪೆನ್ನು ಪುಸ್ತಕ ಕೊಡಿಸಿಲ್ಲವೆಂದು ಅಳುವ ಹಠಮಾರಿ ಮಗುವೇ ಇರಬಹುದು. “ಅಯ್ಯೋ ಅಕ್ಕನಷ್ಟು ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೆನ್ನುವ ತಂಗಿಯಾದರೂ ಆದೀತು.  “ಒಂದೇ ಮನೆಯಲ್ಲಿ ನನ್ನನ್ನು ಬೇರೆಯಾಗಿಯೇ ನೋಡುತ್ತಾರೆ  ; ಅವನಂತೆ ನನ್ನನ್ನು ಸರಿಯಾಗಿ ಗಮನಿಸುವುದಿಲ್ಲ”  ಎನ್ನುವ ಸಹೋದರನಾಗಿರಬಹುದು. “ಎಲ್ಲರನ್ನು ಬಿಟ್ಟು ನಿನ್ನನ್ನೇ ನಂಬಿಕೊಂಡು ಬಂದಿದ್ದರೂ ನನ್ನನ್ನು ಸದಾ ನೀನು ಗಮನಿಸುವುದಿಲ್ಲವೆಂದು” ಸದಾ ಹಠ ಮಾಡುವ ಹೆಂಡತಿಯಾಗಿರಬಹುದು. “ಮನೆಗಾಗಿ ನಾನಿಷ್ಟೆಲ್ಲಾ ತ್ಯಾಗ ಮಾಡಿದರೂ ಕುಟುಂಬದ ಸದಸ್ಯರು ನನ್ನನ್ನು ಕೀಳು ದೃಷ್ಟಿಯಿಂದ ನೋಡುತ್ತಾರೆನ್ನುವ”  ತಂದೆ ಅಥವಾ ಕುಟುಂಬದ ಯಜಮಾನನಾಗಿರಬಹುದು. “ನನ್ನನ್ನು ಅಡ್ಡ ಹೆಸರಿನಿಂದ ಅವಮಾನಿಸುತ್ತ ಕರೆಯುತ್ತಾರೆ, ಎಲ್ಲಿಗಾದರೂ ಹೋದರೂ ಅವರೊಂದಿಗೆ ನನ್ನನ್ನು ಕರೆದುಕೊಂಡು ಹೋಗುವುದಿಲ್ಲ, ಸದಾ ನನ್ನನ್ನು ಮೂದಲಿಸುತ್ತಾರೆ” ಎಂದು ಗೆಳೆಯರ ಬಗ್ಗೆ ಕೋಪಗೊಳ್ಳುವ ವ್ಯಕ್ತಿಗಳಾಗಿರಬಹುದು.

ಸಮಾಜದಲ್ಲಿ ಇಂತಹ ಅನೇಕ ವ್ಯಕ್ತಿಗಳಿಗೆ ಬದುಕು ಭಾರವಾಗಿ ಕಾಣುತ್ತದೆ. ಅಂತಹವರು ಮೊದಲು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕು.  ಬೇರೆ ಬೇರೆ ಸ್ಥಳಗಳನ್ನು ಸಂದರ್ಶಿಸುವ, ಸಮಾಜದಲ್ಲಿರುವ ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವ, ಮನಸ್ಸನ್ನು ಸಂತೃಪ್ತಿಗೊಳಿಸುವ ಪುಸ್ತಕಗಳನ್ನು ಓದುವ, ನಮಗಿಂತಲೂ ಪ್ರಗತಿಯಲ್ಲಿ, ವಾಸ್ತವದಲ್ಲಿ ಕೆಳಹಂತದಲ್ಲಿರುವ ವ್ಯಕ್ತಿಗಳನ್ನು ಗಮನಿಸಲು ತಿಳಿಸಿ, “ಅವರಿಗಿಂತಲೂ ನೀನೆನೋ ಕಡಿಮೆ ಇಲ್ಲ” ಎನ್ನುವ ಧನಾತ್ಮಕ ಭಾವನೆಗಳನ್ನು ಆ ವ್ಯಕ್ತಿಗಳಲ್ಲಿ ಬಿತ್ತಬೇಕು. ಸಾಧ್ಯವಾದಷ್ಟು ಅವರನ್ನು ಒಂಟಿಯಾಗದಂತೆ ನೋಡಿಕೊಳ್ಳಬೇಕು. ಅವರಿಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶಗಳನ್ನು ನೀಡಬೇಕು. “ಅದೇನೇ ಇರಲಿ ನಿನ್ನೊಂದಿಗೆ ನಾನಿದ್ದೇನೆ /  ನಾವಿದ್ದೇವೆ” ಎನ್ನುವ  ಪ್ರೇರಣಾತ್ಮಕ ಬೆಂಬಲದ ಮಾತುಗಳು ಅವರಲ್ಲಿರುವ ಹತಾಶಯವನ್ನು ಹೋಗಲಾಡಿಸಿ, ರಮಿಸುವಂತಿರಲಿ.  ನಿಮಗೆ ಬದುಕು ಬೇಸರವಾದರೇ ನಾಲ್ಕು ಹನಿ ಕಣ್ಣೀರು ಹಾಕಿಬಿಡಿ..!  ಅತ್ತು ಹಗುರಾಗಿಬಿಡಿ..!! ಎಲ್ಲವನ್ನು ಮನಸ್ಸಿನೊಳಗೆ ತುರುಕಿಕೊಂಡು ಕೊರಗದಿರಿ. ಅಂತರ್ಮುಖಿಗಳು ಸಹಿತ ಎಲ್ಲರೊಂದಿಗೆ ಸದಾ ಬೇರೆಯುವಂತಾಗಲೆಂದು ಬಯಸೋಣ.


Leave a Reply

Back To Top