ಮಾಲಾ ಹೆಗಡೆ ಅವರ ಗಜಲ್

ಜೀವನ ಜೋಳಿಗೆಯೊಳು ನಿರೀಕ್ಷೆಗಳ ನೂರೆಂಟು ಬುತ್ತಿಯಿರುವುದೇ ಮನುಜ
ಜಗದೊಡೆಯನೇ ಎತ್ತಿ ಕೈಗೀಯುವ ತನಕ ತಾಳುವುದೇ ಮನುಜ

ಹಿಡಿತವಿರದೆ ಓಡುವುದು ಮನವೆಂಬ ಮದಗಜ ಬಲು ಸಹಜ
ಹೊತ್ತೊತ್ತಿಗೆ ಹದವಾದ ಹಿತನುಡಿಯೌಷಧ ಹೊಯ್ಯುವುದೇ ಮನುಜ

ಆಸೆಯ ಕೂಸಿನ ಹಸಿವು ಹಠವ ಹತ್ತಿಕ್ಕುವುದು ಅನಿವಾರ್ಯ ಅನುಜ
ತೀರದ ತೃಷ್ಣೆಗೆ ಮಣೆಹಾಕದೆ ಪ್ರಾಪ್ತಿಯಲಿ ತೃಪ್ತಿ ಕಾಣುವುದೇ ಮನುಜ

ಸದ್ಭಾವವಿದ್ದಲ್ಲಿ ಕ್ಷೇಮಕ್ಕೆ ಕ್ಷಯವೆಂದಿಗೂ ಬಾರದು ನಿಜ
ಸುಕೃತ  ಘೃತ ಸ್ವಾದಿಸೋ ಮುನ್ನ ಸಂಕಷ್ಟದ ಬಿಸಿ ಸೋಕುವುದೇ ಮನುಜ

ಎದೆಯುಪ್ಪರಿಗೆಯ ಕೊಪ್ಪರಿಗೆಯಲ್ಲಿದೆ ಕನಸುಗಳ ಕಣಜ
ಕಾಠಿಣ್ಯ ನನಸಿನ ಫಲ ದಕ್ಕಲು ಶ್ರಮವಿಡುವುದೇ ಮನುಜ

ಸೋತ ಭಾವದೊಡಲಲ್ಲೂ ಬಿತ್ತುತ್ತಿರು ‘ಮಾಲಾ’, ಭರವಸೆಯ ಬೀಜ
ಪ್ರೀತಿ ಪ್ರಣತಿ ಉರಿಯಲು ದ್ವೇಷ ದವಾನಲವನಾಗಾಗ ಆರಿಸುವುದೇ ಮನುಜ


Leave a Reply

Back To Top