“ಅಂದು ಮುಂಗಾರಿನ ತುಂತುರು…ಮಳೆಯಲಿ”ಮಾಲಾ ಚೆಲುವನಹಳ್ಳಿ ಅವರ ಅನುಭವ ಕಥನ

ಮುಂಗಾರು ಎಂಬ ಪದವೇ ರೋಮಾಂಚನಕಾರಿ ಚಳಿಗಾಲ ಮುಗಿದು, ವಸಂತ ಕಳೆದು ಪ್ರಕೃತಿ ಹೊಸ ಮನ್ವಂತರಕ್ಕಾಗಿ ಬಹು ಕಾತುರವಾಗಿ ನಿರೀಕ್ಷಿಸುವ ಉನ್ಮಾದದ ಕ್ಷಣಗಳವು.

     ಅಪ್ಪಟ ಮಲೆನಾಡು ಪ್ರದೇಶವಾದ ಮೂಡಿಗೆರೆಯಲ್ಲಿ ಹುಟ್ಟಿ ಬೆಳೆದ ನಮಗೆ ಮುಂಗಾರಿನ ಅಭಿಷೇಕದಲ್ಲಿ ಮಿಂದ ಅನುಭವ ಅವಿಸ್ಮರಣೀಯವೆಂದೇ ಹೇಳಬೇಕು.ಬಾಲ್ಯದ ದಿನಗಳಲ್ಲಿ ಮುಂಗಾರು ಬಂತೆಂದರೆ ಸಾಕು ಓಡಿ ಹೋಗಿ ಎರಡೂ ಕೈಗಳನ್ನೂ ಚಾಚಿಕೊಂಡು ತುಂತುರುವಿನಲ್ಲಿ ನೆನೆಯುವ ಸಂತಸ ಯಾವ ಹಣ ಐಶ್ವರ್ಯದಿಂದಲೂ ಅಳೆಯಲು ಸಾಧ್ಯವಿಲ್ಲ, ಮಳೆಯಲಿ ನೆನೆಯುತ್ತಾ “ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ…..ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ””   ಎನ್ನುತ್ತಾ ಕುಣಿದು ಕುಪ್ಪಳಿಸುತ್ತಿದ್ದೆವು. ಅಲ್ಲದೇ ಆಲಿಕಲ್ಲುಗಳನ್ನು ಆರಿಸಿ ತಿನ್ನುವುದು, ಮಣ್ಣಿನ ಘಮವನ್ನು ಮುಗರಳಿಸಿ ಆಘ್ರಣಿಸುವುದು  ಮುಂತಾದ ಚಟುವಟಿಕೆಗಳನ್ನು ಮನಸಾರೆ ಆಡಿ ಅನುಭವಿಸಿ ಅನಿರ್ವಚನೀಯ ಆನಂದ ಪಟ್ಟವರು ನಾವು.

        ಬಿಡದಂತೆ ಆರೇಳು ತಿಂಗಳುಗಳ ಕಾಲ ಸುರಿಯುತ್ತಿದ್ದ ಜಡಿಮಳೆಯಲ್ಲಿ ಶಾಲೆಗೆ ಹೋಗುವ ಸನ್ನಿವೇಶಗಳು ಇನ್ನೊಂದು ತೆರನಾಗಿರುತಿದ್ದವು. ಮನೆಯಿಂದ ಹತ್ತಾರು ಮೀಟರ್ ದೂರ ಹೋಗುವ ವೇಳೆಗೆ ಕೈಯಲ್ಲಿ ಕೊಡೆ ಇದ್ದರೂ ಸಂಪೂರ್ಣ ನೆನೆದು ಒದ್ದೆಯಾಗಿ ಹೋಗಿರುತ್ತಿದ್ದೆವು. ವಿಪರೀತವಾಗಿ ಬೀಸುತ್ತಿದ್ದ ಗಾಳಿಗೆ ಕೊಡೆಗಳು ಮಗುಚಿಕೊಂಡು ಕೈ  ಬಿಡಿಸಿಕೊಂಡು ಎತ್ತೆತ್ತಲೋ ಹಾರಿಕೊಂಡು ಹೋಗುತ್ತಿದ್ದವು ಅವುಗಳನ್ನು ಮತ್ತೆ ತರುವುದೇ ಹರಸಾಹಸವಾಗಿ ಬಿಡುತಿತ್ತು.ಶಾಲೆಯ ಸಮೀಪವೇ ಇರುತ್ತಿದ್ದ ನಾಲ್ಕೈದು ಗಾಳಿ ಮರಗಳು ಇಂದಿಗೂ ಸಾಕ್ಷಿಯಾಗಿ ಅಲ್ಲೇ ಇರುವುದು ನಮ್ಮ ನೆನಪುಗಳಿಗೆ ಇಂಬು ನೀಡಿ ಮತ್ತೊಮ್ಮೆ ಆ ಬಾಲ್ಯದ ದಿನಗಳಿಗೆ ಕೊಂಡೊಯ್ದು ಮತ್ತೆ ಮನಸ್ಸನ್ನು ಚೆತೋಹಾರಿಯಾಗಿಸುತ್ತವೆ.

        ನಾವು ಅಕ್ಕ ತಂಗಿಯರು, ಮಾವನ ಮಕ್ಕಳು ಮೂವರು ಎಲ್ಲರೂ ಒಟ್ಟಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಧಾರಾಕಾರ ಮಳೆಗೆ ಕಾಲಿನ ಚಪ್ಪಲಿಗಳೆಲ್ಲ ಕೊಚ್ಚಿಕೊಂಡು ಹೋಗಿದ್ದವು.. ನಮ್ಮ ಮಾವನ ಮಗ ಆ ನೀರಿನ ರಭಸದೊಡನೆ ದೂರದವರೆಗೂ ಓಡುತ್ತಾ ಹೋಗಿ ಆ ಗೊಚ್ಚೆಯಲ್ಲಿ ಬಿದ್ದೆದ್ದು ನಮ್ಮ ಚಪ್ಪಲಿಗಳನ್ನು ತಂದುಕೊಟ್ಟಿದ್ದ.

     ಮತ್ತೊಮ್ಮೆ ಎರಡನೇ ತರಗತಿಯಲ್ಲಿದ್ದಾಗ ಪೂರ್ತಿ ನೆಂದು ನಡುಗುತ್ತಾ ತರಗತಿಗೆ ಹೋದಾಗ ಸ್ನೇಹಿತರು ನನ್ನ ಬಟ್ಟೆಗಳನ್ನು ಕಳಚಿ  ಚೆನ್ನಾಗಿ ಹಿಂಡಿ ನಂತರ ನನಗೆ ತೊಡಿಸಿ ಕೈ ಕಾಲು ಉಜ್ಜಿದ್ದರು. ಇದೊಂತರ ಅನುಭವವಾದರೆ.. ಮಳೆಗಾಲದಲ್ಲಿ ನೀರುಕಡ್ಡಿ ಎಂಬ ಸಸ್ಯ ಬೆಳೆದಿರುತ್ತಿತ್ತು ಅದರ ಒಂದೊಂದು ಕಡ್ಡಿಯಲ್ಲೂ ತುಂಬಾ ನೀರು ತುಂಬಿದ್ದು ಸ್ಲೇಟ್ ಗಳನ್ನು ಒರೆಸಲು ತುಂಬಾ ಉಪಯುಕ್ತವಾಗಿರುತ್ತಿತ್ತು. ದಾರಿಯಲ್ಲಿ ಸಿಗುತ್ತಿದ್ದ ಆ ಕಡ್ಡಿಗಳನ್ನು ಸಂಗ್ರಹಿಸಿಟ್ಟುಕೊಂಡು ನಾಲ್ಕು ಐದನೇ ತರಗತಿಯವರೆಗೂ ಬರೆಯಲು ಸ್ಲೇಟ್ ಗಳನ್ನೇ ಬಳಸುತ್ತಿದ್ದ ನಾವು ಬೇಡದ್ದನ್ನು ಅಳಿಸಲು ಉಪಯೋಗಿಸುತ್ತಿದ್ದೆವು.

       ಇಬ್ಬನಿಯ ಕಡ್ಡಿ ಎಂಬ ಇನ್ನೊಂದು ಪುಟ್ಟ ಸಸ್ಯದಲ್ಲಿ ತೆಳುವಾದ ಕಡ್ಡಿಗಳು ನೆಲದಲ್ಲಿ ಹರಡಿಕೊಂಡು ತುದಿಯಲ್ಲಿ ನೀರ ಬಿಂದುವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತಿದ್ದವು. ಆ ಹನಿಗಳು ಪರಿಶುಭ್ರವಾಗಿದ್ದು ಅದನ್ನು ನಾವು ಕಣ್ಣಿಗೆ ಬಿಟ್ಟುಕೊಂಡಾಗ ಕಣ್ಣುಗಳು ತಂಪಾಗಿ ಹಿತವೆನಿಸುತ್ತಿತ್ತು. ಇಂತಹ ನಿಸರ್ಗ ನಿರ್ಮಿತ ಹಲವಾರು ಸಸ್ಯ ಸಂಕುಲಗಳ ಉಪಯುಕ್ತತೆ, ಗಾಳಿ, ಮಳೆ, ಚಳಿ ಎಲ್ಲವನ್ನು ಮನಸಾರೆ ಅನುಭವಿಸಿರುವ ನಾವೇ ಧನ್ಯರೆನ್ನಬೇಕು.

    ಈಗಿನoತೆ ಗ್ಯಾಸ್ ಬಳಸದ ಆ ದಿನಗಳಲ್ಲಿ ಸೌದೆ ಒಲೆಯಿಂದಲೇ ಅಡುಗೆ ಮಾಡುತ್ತಿದ್ದುದ್ದು. ಬೆಳಗ್ಗೆ ಏಳುವ ವೇಳೆಗೆ ಒಲೆಯ ಮುಂದೆ ಬಿಸಿ ಬಿಸಿ ಕಾಫಿ ತಪ್ಪಲೆ ನಮಗಾಗಿ ಕಾಯುತ್ತಿದ್ದು ಒಲೆಯ ಮುಂದೆ ಬೆಂಕಿ ಕಾಯಿಸಿಕೊಳ್ಳುತ್ತಾ ಕಾಫಿ ಹೀರಿದ ಬಿಸಿಯಾದ ಲೋಟವನ್ನು ಕೆನ್ನೆಗೆ ಒತ್ತಿಕೊಳ್ಳುತ್ತಿದ್ದೆವು ಆಗ ತುಂಬಾ ಹಿತವೆನಿಸುತ್ತಿತ್ತು ಅಲ್ಲದೇ ಎರಡೂ ಕೈಗಳನ್ನೂ ಉರಿಯುತ್ತಿದ್ದ ಬೆಂಕಿಯ ಮುಂದೆ ಹಿಡಿದು ಬಿಸಿಯಾದ ಕೈಗಳಿಂದ ಕೆನ್ನೆ, ಕುತ್ತಿಗೆಗೆ ಸೋಕಿಸಿಕೊಂಡಾಗ ತಣ್ಣಗೆ ಕಂಪಿಸುತ್ತಿದ್ದ ಶರೀರ ಬೆಚ್ಚಗಾಗುತ್ತಿತ್ತು ಇವೆಲ್ಲಾ ಅದೆಂತಹ ಸುಂದರ ಸುಸ್ಮರಣೀಯ ಅನುಭವಗಳು.

     ರೈತರಾದ ಕಾರಣ ನಮ್ಮ ಅಪ್ಪಾಜಿ ಬೆಳಿಗ್ಗೆ ನಾವು ಏಳುವ ಮೊದಲೇ ಎದ್ದು ಗದ್ದೆಗೆ ನೇಗಿಲಿನೊಂದಿಗೆ ಎತ್ತುಗಳನ್ನು ಹೊಡೆದುಕೊಂಡು ಹೋಗಿ ಬೇಸಾಯ ಹೂಡಿರುತ್ತಿದ್ದರು. ಚಳಿ, ಮಳೆ ಗಾಳಿಯ ಆ ಮುಂಗಾರಿನ ದಿನಗಳಲ್ಲಿ ಗದ್ದೆಯ ಕೆಸರಿನಲ್ಲಿ ಮಂಡಿಯವರೆಗೂ ಹೂತು ಹೋಗಿರುತ್ತಿದ್ದ ಕಾಲುಗಳನ್ನು ಬಲವಂತವಾಗಿ ಎತ್ತಿಟ್ಟು ಮುಂದೆ ಮುಂದೆ ಹೆಜ್ಜೆ ಇಡುತ್ತಿದ್ದ ದ್ರಶ್ಯ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಅಪ್ಪಾಜಿಯ ಆ ಶ್ರಮದ ಬದುಕು ನಮ್ಮನ್ನು ವರ್ಷವಿಡೀ ಹೊಟ್ಟೆ ತುಂಬಿಸಿ ಹಸಿವನ್ನು ನೀಗಿಸುತ್ತಿತ್ತು. ಬೆಳಿಗ್ಗೆ ಸಂಜೆ ಅಪ್ಪಾಜಿಗೆ ಕಾಫಿ, ತಿಂಡಿ ಕೊಟ್ಟು ಬರುವುದು ನಮ್ಮ ಕೆಲಸವಾಗಿರುತ್ತಿತ್ತು

    ತಿಂಡಿ ಗಂಟಿಗೆ ಕಟ್ಟಿಕೊಂಡು ಹೋದ ತೆಳುವಾದ ಪಂಚೆಯನ್ನು ಗದ್ದೆಯ ಮದ್ಯದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಹಾಸಿ ಅದರೊಳಗೆ ಹರಿದು ಬಂದ ವಿವಿಧ ಜಾತಿಯ ಮೀನುಗಳನ್ನು ಹಿಡಿಯುವುದೆಂದರೆ ಎಲ್ಲಿಲ್ಲದ ಖುಷಿ, ಆನಂದ ಸಸ್ಯಾಹಾರಿಗಳಾದ ನಾವು ಆ ಮೀನುಗಳನ್ನು ಕಣ್ತುಂಬ ನೋಡಿ ನಂತರ ಕೆರೆಯೊಳಗೆ ಬಿಟ್ಟು ಬಿಡುತ್ತಿದ್ದೆವು, ಕಂತೆ ಕಂತೆ ಭತ್ತದ ಸಸಿಗಳನ್ನು ಕೈಲಿ ಹಿಡಿದು ಆಳುಗಳೊಂದಿಗೆ ನಾವೂ ನಾಟಿ ಮಾಡುತ್ತಿದ್ದೆವು ಅಲ್ಲದೇ ಗದ್ದೆಯಲ್ಲಿ ಸಿಗುತ್ತಿದ್ದ ಏಡಿಗಳನ್ನು ಕಾಲು ಕೊಂಡಿ ಮುರಿದು ನಾಟಿ ಮಾಡುವ ಹೆಂಗಸರು ಸೀರೆಯ ಗಂಟಿನಲ್ಲಿ ತುರುಕಿ ಸಿಕ್ಕಿಸಿಕೊಂಡು ಹೋಗುತ್ತಿದ್ದುದು ಎಲ್ಲವೂ ಎಂದೂ ಮರೆಯಲಾಗದ ನೆನೆಪುಗಳು.

   ಇಂತಹ ಒಂದು ಮುಂಗಾರಿನ ಗದ್ದೆ ನಾಟಿಯ ಸಂದರ್ಭದಲ್ಲಿ ಒಂದು ಭಾನುವಾರದ ದಿನ ನಾನು ಅಕ್ಕ ಗದ್ದೆಯಲ್ಲಿ ಕಳೆ ಕೀಳಲು ಬಂದ ಆಳುಗಳಿಗೆ ಕಾಫಿ ತಿಂಡಿ ಕೊಟ್ಟು ಹಿಂದಿರುಗುವಾಗ ದಾರಿಯಲ್ಲೇ ಇದ್ದ ಸಾಮಿಲ್ ನ ಬಳಿ ಬರುವ ವೇಳೆಗೆ ವಿಪರೀತ ಮಳೆ ಶುರುವಾಗಿತ್ತು. ನಮ್ಮ ಮನೆಯಿಂದ ಹೊರಟು ಗದ್ದೆಗೆ ಹೋಗುವ ದಾರಿಯಲ್ಲಿ ಒಂದು ಸಾಮಿಲ್ ಮತ್ತು ಅದರಿಂದ ನೂರು ಮೀಟರ್ ದೂರದಲ್ಲಿ ಅಲ್ಲಿ ಕೆಲಸ ಮಾಡುವವರಿಗಾಗಿ ನಿರ್ಮಿಸಿದ್ದ ಎರಡು ಚಿಕ್ಕ ಮನೆಗಳು ಪಕ್ಕದಲ್ಲಿ ಒಂದು ಬಾವಿ ಇತ್ತು ಅದು ಬಿಟ್ಟರೆ ಮತ್ತೆ ತಗ್ಗು ಪ್ರದೇಶ ಇನ್ನು ಸಲ್ಪ ಮುಂದೆ ಹೋದರೆ ನಮ್ಮ ಗದ್ದೆಗಳು ಸಿಗುತ್ತಿದ್ದವು.



    ಹೀಗಿದ್ದಾಗ ಆ ಜಡಿ ಮಳೆಗೆ ಹೆದರಿ ನಾನು ಅಕ್ಕ ಆ ಪುಟ್ಟ ಮನೆಯ ಸೂರಿನ ಕೆಳಗೆ ಗಂಟೆಗಟ್ಟಲೆ ನಿಂತುಕೊಂಡೆವು. ಮಳೆ ನಿಂತ ಮೇಲೆ ಮನೆಗೆ ಬಂದು ಕಾಫಿ ಕುಡಿದು ಆಟವಾಡಲೆಂದು ಹೊರಗೆ ಹೋದವರಿಗೆ  *ಸಾಮಿಲ್ ಬಾವಿಯಲ್ಲಿ ಒಂದು ಮಗು  ಮತ್ತು ಹೆಂಗಸಿನ ಹೆಣ ತೇಲುತ್ತಿದೆಯಂತೆ ಎಂದು ಬೀದಿಯಲ್ಲಿ ಜನರು ಮಾತನಾಡಿಕೊಳ್ಳುವುದು ತಿಳಿದು ಭಯಭೀತರಾಗಿ ಹೋದೆವು ಒಂದು ಗಂಟೆಯ ಮುಂಚೆ ಅದೇ ಬಾವಿಯ ಪಕ್ಕದಲ್ಲೇ ಅಕ್ಕ ನಾನು ಗಂಟೆ ಗಟ್ಟಲೇ ನಿಂತಿದ್ದೆವು.

   ಮಕ್ಕಳಾದ ನಮಗೆ ಕುತೂಹಲ, ಭಯ ಎಲ್ಲವೂ ಒಟ್ಟಿಗೇ ಆಗಿ ಅಲ್ಲಿಗೆ ಹೋಗುತ್ತಿದ್ದ ಜನರೊಟ್ಟಿಗೆ ಅಲ್ಲಿಗೆ ದೌಡಾಯಿಸಿ ನೋಡಿದಾಗ ಬಾವಿಯಲ್ಲಿ  ಸ್ವಟರ್ ಟೋಪಿ ಹಾಕಿಕೊಂಡ ಏಳು ಎಂಟು ತಿಂಗಳ ಮಗು ತೇಲಾಡುತ್ತಿತ್ತು. ಅಲ್ಲೇ ಪಕ್ಕದಲ್ಲಿ ಇದ್ದ ಕೋಣೆಗಳಲ್ಲಿ ಒಡೆದ ಗಾಜಿನ ಬಳೆಯ ಚೂರುಗಳು ಅಲ್ಲಿ ಹೆಣ್ಣಿನ ಮೇಲೆ ನಡೆದ ದೌರ್ಜನ್ಯದ ಕಥೆಯನ್ನು ಸಾರಿ ಸಾರಿ ಹೇಳುತ್ತಿದ್ದವು ಚಿಕ್ಕ ಮಕ್ಕಳಾದರೂ ನಮಗೆ ಎಲ್ಲವೂ ಅರ್ಥವಾಗಿ ಸಹಿಸಲಸಾಧ್ಯವಾದ ವೇದನೆಯಾಗಿತ್ತು.

  ನಂತರ ಹಲವಾರು ವರ್ಷಗಳವರೆಗೂ ಆ ದಾರಿಯಲ್ಲಿ ಗದ್ದೆಗೆ ಹೋಗುವಾಗ ಭಯದಿಂದ ಕೈ ಕಾಲು ನಡುಗುತ್ತಿದ್ದವು ಆದರೂ ವಿಧಿಯಿಲ್ಲದೇ  ಓಡಾಡಲೇ ಬೇಕಿತ್ತು.

     ವಿವಿಧ ಜಾತಿಯ ಹೂವಿನ ಗಿಡಗಳು ಚಿಗುರಿ ನಳನಳಿಸಿ
ಗಿಡದ ತುಂಬಾ ಅರಳಿ ಕಂಗೊಳಿಸುತ್ತಿದ್ದ ಹೂಗಳು ಮೈ ಮನ ಸೂರೆಗೊಳ್ಳುತ್ತಿದ್ದವು. ಮಲ್ಲಿಗೆ ಬಳ್ಳಿ ಹಬ್ಬಿ, ಕಾಫಿ ಗಿಡಗಳು ಹೂ ಬಿಟ್ಟು ಮನೆಯ ಅಂಗಳ, ಹಿತ್ತಲು ಎಲ್ಲೆಡೆಯೂ ಸುವಾಸನೆ ಬೀರುತ್ತಿತ್ತು.ಘಮಗುಡುವ ಕಾಫಿ ಹೂವಿನ ಗೊಂಚಲನ್ನು ಉದ್ದ ಜಡೆ ಇದ್ದ ನಾವು ಎರಡೂ ಜಡೆಗೂ ಮುಡಿದುಕೊಂಡು ಹೋದಾಗ ಶಾಲೆಯಲ್ಲಿ ಶಿಕ್ಷಕರು ಈ ಹೂ ಮುಡಿದರೆ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ ಎಂದು ಹೆದರಿಸುತ್ತಿದ್ದರು, ಆದರೂ ನಮಗೆ ಕಾಫಿ ಹೂ ಎಂದರೆ ಎಲ್ಲಿಲ್ಲದ ಪ್ರೀತಿ  ಮನೆ ಹಿತ್ತಲ ನಮ್ಮದೇ ತೋಟದ ಹೂವನ್ನು ಸ್ವತಂತ್ರವಾಗಿ ಕಿತ್ತು ಸಂತೋಷದಿಂದ ಜಡೆಗೇರಿಸಿಕೊಂಡು ಬೀಗುತ್ತಿದ್ದೆವು. ಇನ್ನು ಡೈಲಿಯ ಹೂಗಳಂತು ಕೇಳುವುದೇ ಬೇಡ…. ನಮ್ಮ ತಲೆಗಿಂತ ದೊಡ್ಡ ಗಾತ್ರದ ಬಣ್ಣ ಬಣ್ಣದ ಹೂಗಳನ್ನು ಎರಡೂ ಕಡೆಗೂ ಸಿಕ್ಕಿಸಿಕೊಂಡರೆ ಆ ಡೈಲಿಯ ಹೂಗಳೇ ತಾವು ನಮ್ಮ ಮನೆಯ ಅಂಗಳದಲ್ಲಿ ಅರಳಿ ಸಾರ್ಥಕ್ಯ ಪಡೆದಂತೆ ಬೀಗುತ್ತಿದ್ದವು..

     ಹೀಗೇ ಹತ್ತು ಹಲವಾರು ವಿಚಾರಗಳು ಮುಂಗಾರು ಬಂತೆಂದರೆ ಮನಃ ಪಠಲದಲ್ಲಿ ಹಾದು ಹೋಗುತ್ತವೆ. ಬರೆದಷ್ಟು ಮುಗಿಯದು.


Leave a Reply

Back To Top