ಶ್ವೇತಾ ಮಂಡ್ಯ ಅವರ ಕವಿತೆ-ಆಕೃತಿ


ಹೆಣ್ಣೆಂದರೆ
ಹಸಿ ಮಣ್ಣಿನಿಂದ
ಇಷ್ಟಿಷ್ಟೇ ಹದ
ಮಾಡಿದ ನಿಮ್ಮಿಷ್ಟದ ಆಕೃತಿ

ಒಮ್ಮೆ ಬದುಕೆಂಬ ಬೆಂಕಿಯಲಿ ಬೆಂದು
ನಿಮ್ಮ ಕೈಚಳಕಕ್ಕೆ
ಅಗತ್ಯಕ್ಕೆ ತಕ್ಕ ಹಾಗೆ ರೂಪುಗೊಂಡರೆ ಮುಗಿಯಿತು
ಎಷ್ಟು ಬೇಕಾದರೂ
ಹೇಗೆ ಬೇಕಾದರೂ ಬಳಸಿ…..
ನೀವೇ ಕೈ ತಪ್ಪಿ ಬೀಳಿಸಿ ಒಡೆಯುವ ತನಕ
ಹಾಗೆ ನಿಮ್ಮಿಷ್ಟದಂತೆ
ಇಷ್ಟವಾಗುವಂತೆ ಇರುವಳು.

ಬಿದ್ದರು ಒಡೆದರು ಚುಚ್ಚಿ ಚೂರಾದರೂ
ಮರು ಮಾತಿಲ್ಲ
ಕಾರಣ ಆಕೆಗೆ ಬಾಯಿಯಿಲ್ಲ
ಹೋರಾಡಲು ಕೈಗಳಿಲ್ಲ

ಒಂದೊಮ್ಮೆ ಇದ್ದರೂ
ಅವುಗಳನ್ನೆಲ್ಲ ಮಣ್ಣಿನಲ್ಲಿ ತುಳಿದು ತಾನೇ
ನೀವು ಮಡಿಕೆ ಮಾಡಿದ್ದು!
ಪ್ರತಿಮೆ ಮಾಡಿದ್ದು ?!


9 thoughts on “ಶ್ವೇತಾ ಮಂಡ್ಯ ಅವರ ಕವಿತೆ-ಆಕೃತಿ

  1. ಶ್ವೇತ ಮೇಡಂ ಕವಿತೆ ತುಂಬಾ ತುಂಬಾ ಅರ್ಥಪೂರ್ಣವಾಗಿದೆ.ಹೆಣ್ಣಿನ ಭಾವನೆಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ ವಂದನೆಗಳು

  2. ವಾಹ್ ವಾಹ್… !! ಸೊಗಸಾದ ಅಷ್ಟೇ ಅರ್ಥಪೂರ್ಣ, ಪ್ರಬುದ್ಧ ಕವಿತೆ…ಅಭಿನಂದನೆಗಳು

  3. ಎಲ್ಲಾ ಪ್ರತಿಮೆಗಳು ನಿಮ್ಮ ಕವಿತೆ ಯಂತೆ ರೂಪು ಗೊಳ್ಳುದಿಲ್ಲ ಎಂಬುದನ್ನ ಮರೆತ ರಚನೆ ಇದಾಗಿದೆ….. ಪ್ರೀತಿ ಎಂಬ ಬಿಸಿ ಶಾಖದಲ್ಲಿ ಸಾಮರಸ್ಯ ವೆಂಬ ಹದ ಬೆರೆತ ಮಣ್ಣಿನಲ್ಲಿ ಬಿದ್ದರೂ ಒಡೆಯಲಾರದ ಬಾಂದವ್ಯದಲಿ ಬಹುತೇಕ ಆಕೃತಿ ನಿರ್ಮಾಣವಾಗಿದೆ ಎಂಬುದು ನೀವು ಮರೆತಿರುವಿರಿ!!!!!

  4. ಹೆಣ್ಣಿನ ಕುರಿತು ಚಂದದ ಕವಿತೆ
    ಹೆಣ್ಣೆಂದರೆ ನಿಮ್ಮಂದದ ಹದಮಾಡಿದ ಚಂದದ ಆಕೃತಿ

Leave a Reply

Back To Top