ಕಿವಿಮೊರೆತ (Tinnitus),ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ಟಿನಿಟಸ್ ಅಥವ ಕಿವಿಮೊರೆತ ಎಂದರೆ, ಒಂದು ಅಥವ ಎರಡೂ ಕಿವಗಳೊಳಗೆ ಗುಂಯ್ಗುಡುವಂಥ ಮೊರೆತದ ಶಬ್ದ ಅನುಭವವಿಸುವುದು. ಆ ರೀತಿಯ ಶಬ್ದ ಹೊರಗಿನ ಉತ್ಪತ್ತಿಯಲ್ಲ, ಮತ್ತು ಅದು ಇತರರಿಗೆ ಕೇಳಿಸುವುದಿಲ್ಲ. ಕಿವಮೊರೆತ ವಯೋವೃದ್ಧರಲ್ಲಿ ಸಾಮಾನ್ಯ ಮತ್ತು ಶೇಕಡ ಹದಿನೈದರಿಂದ ಇಪ್ಪತ್ತರಷ್ಟು ಜನರಲ್ಲಿ ಕಂಡುಬರುತ್ತದೆ. ಅಲ್ಲದೆ, ಇದು ಸಾಧಾರಣವಾಗಿ ವ್ಯಕ್ತಿಯ ಯಾವುದಾದರೊಂದು ಬೇರೆ ತೊಂದರೆಯಿಂದ, ಉದಾಹರಣೆಗೆ ವಯೋಸಹಜ ಕಿವುಡುತನ, ಕಿವಿಗೆ ಬಿದ್ದ ಪೆಟ್ಟು ಅಥವ ರಕ್ತಪರಿಚಲನೆ ತೊಂದರೆ ಮುಂತಾದುವುಗಳಿಂದ ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಅನೇಕ ರೋಗಿಗಳಿಗೆ, ಕಿವಿಮೊರೆತ ಇಂತಹ ಕಾಯಿಲೆಗಳ ಚಿಕಿತ್ಸೆಯಿಂದ ಉತ್ತಮವಾಗುವುದು.

ರೋಗಲಕ್ಷಣಗಳು:
ಕಿವಿಮೊರೆತವನ್ನು ಅನೇಕವೇಳೆ, ಹೊರಗೆ ಯಾವ ರೀತಿಯ ಶಬ್ದ ಇಲ್ಲದಿದ್ದರೂ, ವ್ಯಕ್ತಿಯು ತನ್ನ ಕಿವಿಯಲ್ಲಿ ಮೊಳಗುವಿಕೆ ಥರದ ಸದ್ದು ಉಂಟಾಗುತ್ತದೆ ಎಂದು ಹೇಳಬಹುದು. ಅಷ್ಟಲ್ಲದೆ, ಕಿವಿಮೊರೆತ ಇನ್ನಿತರ ಸದ್ದುಗಳನ್ನು ಉಂಟುಮಾಡುವ ಸಾಧ್ಯತೆ ಇದೆ —
… ಝೇಂಕಾರ
… ಗರ್ಜನೆ
… ಚಿಟಕಿ ಹೊಡೆದ ಸದ್ದು
… ಭುಸುಗುಡುವ ಶಬ್ದ
… ಗುಂಯ್ಗುಡುವ ಸದ್ದು

ಬಹುತೇಕ ಜನರು ಅನುಭವಿಸುವ ಕಿವಿಮೊರೆತ ವ್ಯಕ್ತಿಗತವಾದದ್ದು (Subjective tinnitus/ವ್ಯಕ್ತಿಗತ ಕಿವಿಮೊರೆತ) ಅಂದರೆ ಆ ಸದ್ದನ್ನು ಅನುಭವಿಸುವವರು ಮಾತ್ರ ಕೇಳಬಹುದಾದ್ದು. ಕಿವಿಮೊರೆತದ ಸದ್ದು ಒಂದೇ ಕಿವಿ ಅಥವ ಎರಡರಲ್ಲೂ ಕೇಳಿಸಬಹುದು. ಸದ್ದಿನ ಮಟ್ಟ ಕೂಡ ಕಡಿಮೆ ಅಬ್ಬರದಿಂದ, ಅಧಿಕ ಕೀರಲು ಶಬ್ದದವರೆಗು ಬದಲಾಗಬಹುದು. ಕೆಲವರಲ್ಲಿ ಶಬ್ದವು ಅತಿ ಹೆಚ್ಚು ಮಟ್ಟದ್ದಾಗಿದ್ದು, ಅದರಿಂದ ವ್ಯಕ್ತಿಯ ಏಕಾಗ್ರತೆಗೆ ಮತ್ತು ಹೊರಗಿನ ಶಬ್ದ ಕೇಳುವುದಕ್ಕೆ ಧಕ್ಕೆ ಆಗಬಹುದು. ಅಲ್ಲದೆ, ಕಿವಿಮೊರೆತವು ಎಲ್ಲ ಸಮಯದಲ್ಲೂ ಇರಬಹುದು ಅಥವ ಆಗಾಗ ಬಂದು ಹೋಗುತ್ತಿರಬಹುದು.

ಅಪರೂಪವಾಗಿ ಕೆಲವರಲ್ಲಿ ಲಯಬದ್ಧ ನಾಡಿಮಿಡಿತದಂತೆ ಅಥವ ರಭಸವಾಗಿ ಹರಿದುಹೋದಂತೆ, ಹೃದಯದ ಬಡಿತದ ಸಮಯಕ್ಕೆ ಸರಿಯಾಗಿ ಹೊಂದಿಕೊಂಡು ಇರಬಹುದು. ಇದನ್ನು “ನಾಡಿಮಿಡಿತದ ಕಿವಿಮೊರೆತ” (Pulsatile tinnitus) ಎನ್ನುವರು. ಇಂಥ ಮೊರೆತ ಇದ್ದಾಗ, ಆ ವ್ಯಕ್ತಿಯನ್ನು ಪರೀಕ್ಷಿಸುವ ವೈದ್ಯರಿಗೆ ಆ ಶಬ್ದ ಕೇಳಿಸಬಹುದು. (Objective tinnitus/ವಸ್ತುನಿಷ್ಠ ಕಿವಿಮೊರೆತ).

ಕೆಲವರು ಕಿವಿಮೊರೆತದ ಬಗ್ಗೆ ಅಸಡ್ಡೆ ತೋರುವರು. ಇನ್ನುಳಿದವರಿಗೆ ಅವರ ದೈನಂದಿನ ಬದುಕಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಮಾನ್ಯ ನೆಗಡಿ ಮತ್ತು ಕೆಮ್ಮಿಂದ ವ್ಯಕ್ತಿಗೆ ಕಿವಿಮೊರೆತವಾಗಿ, ಅದು ಒಂದು ವಾರದಲ್ಲಿ ಗುಣವಾಗದಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು. ಅಲ್ಲದೆ —

… ಕಿವಿಮೊರೆತದಿಂದಾಗಿ ಕೇಳುವುದು ಕಷ್ಟಕರ ಆದಾಗ ಅಥವ ತಲೆಸುತ್ತು ಸಹ ಇದ್ದಾಗ

… ಕಿವಿಮೊರೆತದಿಂದಾಗಿ ಆತಂಕ ಮತ್ತು ಖಿನ್ನತೆ ಇದ್ದಾಗ ತಕ್ಷಣ ವೈದ್ಯರ ಸಲಹೆ ಬೇಕಾಗುವುದು.

ರೋಗಕಾರಕಗಳು:
ಅನೇಕ ಪ್ರಕರಣಗಳಲ್ಲಿ ಕಿವಿಮೊರೆತಕ್ಕೆ ನಿಖರವಾದ ಕಾರಣವೇ ಕಂಡುಬರುರುವುದಿಲ್ಲ. ಹಾಗೆಯೆ, ಅನೇಕ ಇತರ ಆರೋಗ್ಯ ಸಮಸ್ಯೆಗಳು ಕಿವಿಮೊರೆತವನ್ನು ಉಂಟುಮಾಡಬಹುದು ಅಥವ ಅಧಿಕ ಮಾಡಬಹುದು. ಕಿವಿಮೊರೆತದ ಸಾಮಾನ್ಯ ಕಾರಣಗಳೆಂದರೆ —

… ಕಿವುಡುತನ – ತೀರ ಚಿಕ್ಕ ಗಾತ್ರದ ಹಾಗು ಸೂಕ್ಷ್ಮವಾದ ಕೂದಲ ಕೋಶಗಳು ಒಳ ಕಿವಿಯ ಕರ್ಣಶಂಖದಲ್ಲಿ (Cochlea/ಕಾಕ್ಲಿಯ) ಇರುತ್ತವೆ. ಕಿವಿಯು ಶಬ್ದವನ್ನು ಗ್ರಹಿಸಿದಾಗ, ಈ ಕೂದಲ ಕೋಶಗಳಲ್ಲಿ ಆ ಶಬ್ದದ ತರಂಗಗಳಿಂದ ಚಲನೆ ಉಂಟಾಗುತ್ತದೆ. ಈ ಚಲನೆಯು ವಿದ್ಯುತ್ ಸಂಕೇತಗಳನ್ನು ಪ್ರಚೋದಿಸಿ, ಆ ಸಂಕೇತಗಳು ಶ್ರವಣ ನರದ (Auditory nerve) ಮೂಲಕ ಮೆದುಳಿಗೆ ತಲಪುತ್ತವೆ. ಮೆದುಳು ಆ ಸಂಕೇತಗಳನ್ನು ಶಬ್ದವನ್ನಾಗಿ ಅರ್ಥೈಸಿಕೊಳ್ಳುತ್ತದೆ.
ವಯಸ್ಸಿನ ಕಾರಣದಿಂದ ಅಥವ ಅತಿಯಾದ ಶಬ್ದಕ್ಕೆ ಕಿವಿಯು ಸದಾಕಾಲ ಗುರಿಯಾಗುತ್ತಿರುವ ಕಾರಣದಿಂದ, ಒಳಕಿವಿಯ ಆ ಸಣ್ಣ ಕೂದಲುಗಳು ಬಾಗಿದ್ದರೆ ಅಥವ ಮುರಿದಿದ್ದರೆ, ಅಂತಹ ಸಂದರ್ಭಗಳಲ್ಲಿ, ಶಬ್ದದ ಸಂಕೇತಗಳು ಮೆದುಳಿಗೆ ಸರಿಯಾದ ರೀತಿಯಲ್ಲಿ ತಲುಪದೆ ಇದ್ದಾಗ, ಕಿವಿಮೊರೆತ ಉಂಟಾಗುತ್ತದೆ.

… ಕಿವಿಯ ಸೋಂಕು ಅಥವ ಒಳಕಿವಿ ಮುಚ್ಚಿದಂತಾದಾಗ – ಕಿವಿಯ ಗುಗ್ಗೆಯಿಂದ, ಹೊರಗಿನ ಪದಾರ್ಥದಿಂದ, ದ್ರವದಿಂದ (ಕಿವಿಯ ಸೋಂಕಿನ ಕಾರಣ) ಅಥವ ಕೊಳೆಯಿಂದ ಮುಚ್ಚಿದಹಾಗಾದಾಗ, ಕಿವಿ ಒಳಗಿನ ಒತ್ತಡದಲ್ಲಿ ಬದಲಾವಣೆಯಾಗಿ, ಕಿವಿಮೊರೆತ ಉಂಟಾಗುವುದು ಸಾಧ್ಯ.

… ತಲೆ ಮತ್ತು ಕುತ್ತಿಗೆ ಪೆಟ್ಟು – ಕಿವಿ ಕೇಳುವುದಕ್ಕೆ ಸಂಬಂಧಿಸಿದ ಒಳಕಿವಿ, ನರಗಳು ಅಥವ ಮೆದುಳು ಮುಂತಾದ ಭಾಗಗಳ ಮೇಲೆ, ತಲೆ ಮತ್ತು ಕುತ್ತಿಗೆಗೆ ಆದ ಪೆಟ್ಟಿನಿಂದ ಪರಿಣಾಮವಾಗುತ್ತದೆ.
ಅಂತಹ ಘಾತ ಸಾಮಾನ್ಯವಾಗಿ ಕಿವಿಮೊರೆತ ಉಂಟುಮಾಡುತ್ತದೆ.

… ಔಷಧಗಳು – ಅನೇಕ ಔಷಧಗಳು ಕಿವಿಮೊರೆತಕ್ಕೆ ಕಾರಣವಾಗಬಹುದು ಅಥವ ಹೆಚ್ಚಿಸಬಹುದು. ಔಷಧದ ಪ್ರಮಾಣ (dose) ಹೆಚ್ಚಾದಂತೆ ಕಿವಿಮೊರೆತ ಸಹ ಹೆಚ್ಚಾಗುವುದು. ಅಂಥ ಔಷಧ ಸೇವನೆ ನಿಲ್ಲಿಸಿದ ಕೂಡಲೆ, ಸಾಮಾನ್ಯವಾಗಿ ಕಿವಿಮೊರೆತ ಸಹ ನಿಲ್ಲುತ್ತದೆ. ಅಂತಹ ಯಾವೆಲ್ಲ ಔಷಧಗಳೆಂದರೆ, ನೋವುನಿವಾರಕ (NSAIDs), ಕೆಲವು ಪ್ರತಿಜೀವಕ (antibiotics), ಕ್ಯಾನ್ಸರ್, ಮಲೇರಿಯ ಮತ್ತು ಖಿನ್ನತೆ-ಶಮನಕಾರಕ ಔಷಧಗಳು.                    

ಕಿವಿಮೊರೆತದ ಅಪರೂಪದ ಕಾರಣಗಳೆಂದರೆ ಕಿವಿಯ ಇನ್ನಿತರ ತೊಂದರೆಗಳು,  ದೀರ್ಘಕಾಲಿಕ ಆರೋಗ್ಯ ಪರಿಸ್ಥಿತಿಗಳು ಮತ್ತು ಕಿವಿಯ ನರಗಳು ಅಥವ ಮೆದುಳಿನ ಶ್ರವಣ ಕೇಂದ್ರದ (hearing center in the brain) ಮೇಲೆ  ಪರಿಣಮಿಸುವ ಪೆಟ್ಟುಗಳು.

… ಮೆನ್ಯಾರ್ಸ್ ಕಾಯಿಲೆ (Meniere’s disease) – ಒಳಕಿವಿಯೊಳಗಿನ ಅಸಹಜ ದ್ರವದ ಒತ್ತಡದಿಂದ, ಒಳಕಿವಿಯ ಅಸ್ವಸ್ಥತೆ ಉಂಟಾಗುವ ಕಾಯಿಲೆಗೆ ‘ಮನ್ಯಾಸ್ ರೋಗ’ ಎಂದು ಹೆಸರು. ಅದರ ಆರಂಭಿಕ ಲಕ್ಷಣವು ಕಿವಿಮೊರೆತವಾಗಿರಬಹುದು. (ಪ್ರಾಸ್ಪರ್ ಮೆನ್ಯಾರ್ ಒಬ್ಬ  ಫ್ರಾನ್ಸ್ ದೇಶದ ವೈದ್ಯ)

… ಶ್ರವಣೇಂದ್ರಿಯ ನಳಿಕೆ (Eustachian tube) ಅಥವ ಯೂಸ್ಟೇಕಿಯನ್ ಟ್ಯೂಬ್ ತೊಂದರೆ –
ಈ ತೊಂದರೆಯಲ್ಲಿ, ಮಧ್ಯಕಿವಿ ಹಾಗು ಮೇಲಿನ ಗಂಟಲಿನ ನಡುವೆ ಸಂಪರ್ಕ ಕಲ್ಪಿಸುವ ಕೊಳವೆಯು ಎಲ್ಲ ಸಮಯದಲ್ಲೂ ಉಬ್ಬಿರುವ ಕಾರಣ, ಕಿವಿಯು ಸದಾಕಾಲ ತುಂಬಿರುವ ಹಾಗೆ ಅನ್ನಿಸಿ ಮೊರೆತವಾಗಬಹುದು.

… ಒಳಕಿವಿಯ ಸ್ನಾಯುಸೆಳೆತ – ಒಳಕಿವಿಯ ಸ್ನಾಯು ಬಿಗಿತದಿಂದ (spasm) ಕಿವಿಮೊರೆತ, ಕಿವುಡುತನ ಮತ್ತು ಕಿವಿ ತುಂಬಿದಂತೆ ಆಗಬಹುದು. ನರಸಂಬಂಧಿ ಕಾರಣಗಳಿಂದ ಹೀಗಾಗುವುದು ಸಾಧ್ಯ. ಅಲ್ಲದೆ ಸ್ನಾಯು ಸೆಳೆತಕ್ಕೆ ಕಾರಣವೆ ಇಲ್ಲದಿರಬಹುದು.

… ಟೆಂಪೊರೊಮ್ಯಾಂಡಿಬ್ಯುಲಾರ್ ಕೀಲಿನ ತೊಂದರೆಗಳು – ಕಿವಿಯ ಮುಂದೆ ಮುಖದ ಎರಡೂ ಬದಿ ಇರುವ, ದವಡೆಯನ್ನು ತಲೆಬುರುಡೆಗೆ ಸೇರಿಸುವುದೆ ಟೆಂಪೊರೊಮ್ಯಾಂಡಿಬ್ಯುಲಾರ್ ಕೀಲು (temporomandibular joint). ಈ ಕೀಲುಗಳ ತೊಂದರೆಯಿಂದ ಕೂಡ ಕಿವಿಮೊರೆತ ಸಾಧ್ಯ.

… ಕಿವಿ ಮೂಳೆಗಳ ಬದಲಾವಣೆ – ಮಧ್ಯಕಿವಿಯ ಮೂಳೆಗಳು ಗಟ್ಟಿಯಾಗಿ ಬಿಗಿದುಕೊಂಡು (otosclerosis) ಕಿವಿಮೊರೆತ ಮಾಡಬಹುದು. ಮೂಳೆಯ ಅಸಾಮಾನ್ಯ ಬೆಳವಣಿಗೆಯಿಂದ ಹೀಗಾಗುತ್ತದೆ ಮತ್ತು ಈ ತೊಂದರೆಯು ವಂಶಪಾರಂಪರ್ಯ.

… ಶ್ರವಣೇಂದ್ರಿಯ ನರಗಂತಿ (Acoustic neuroma) ಮುಂತಾಗಿ –
ಒಳ ಕಿವಿಗೆ ಮೆದುಳಿನಿಂದ ಬರುವ ಕಪೋಲ ನರದ (cranial nerve) ಮೇಲಿನ ಕ್ಯಾನ್ಸರ್ ಅಲ್ಲದ ಗೆಡ್ಡೆ (benign tumor) ಕಿವಿಮೊರೆತಕ್ಕೆ ಕಾರಣವಾಗಬಹುದು. ಆ ನರವು ಸಮತೋಲನ ಮತ್ತು ಶ್ರವಣಗಳ ಹತೋಟಿಗೆ ಮುಖ್ಯ. ತಲೆ ಮತ್ತು ಕುತ್ತಿಗೆಯ ಇನ್ನಿತರ ಗೆಡ್ದೆಗಳೂ ಸಹ ಕಿವಿಮೊರೆತ ಉಂಟುಮಾಡಬಹುದು.

… ರಕ್ತನಾಳದ ತೊಂದರೆ – ರಕ್ತದೊತ್ತಡ, ತಿರುಚಿದ ಅಥವ ದೋಷಪೂರಿತ ರಕ್ತನಾಳ, ಅಪಧಮನಿಕಾಠಿಣ್ಯ (atherosclerosis) ಮುಂತಾದ ಕಾರಣಗಳಿಂದ, ಧಮನಿಗಳ ರಕ್ತ ಚಲನೆಯ ಸೆಳೆವು ಹೆಚ್ಚಾಗಿ, ಕಿವಿಮೊರೆತ ಉಂಟುಮಾಡಬಹುದು.

… ಇನ್ನುಳಿದಂತೆ ಮಧುಮೇಹ, ಥೈರಾಯ್ಡ್ ಗ್ರಂಥಿಯ ತೊಂದರೆ, ಮೈಗ್ರೇನ್ ತಲೆನೋವು, ರಕ್ತಹೀನತೆ ಮುಂತಾದ ಕಾಯಿಲೆಗಳಿಂದ ಕೂಡ ಕಿವಿಮೊರೆತ ಸಾಧ್ಯ.

ಅಪಾಯಕಾರಿ ಅಂಶಗಳು:
ಕಿವಿಮೊರೆತವು ಯಾರಿಗೇ ಆದರೂ ಅನುಭವವಾಗಬಹುದು. ಆದರೆ, ಕೆಲವಾರು ಅಂಶಗಳು ಅದರ ಅಪಾಯ ಹೆಚ್ಚಿಸಬಹುದು —

… ಅತಿ ಶಬ್ದ ಕೇಳುವುದು – ಪಟಾಕಿ, ಭಾರಿ ಸಾಧನಸಲಕರಣೆಗಳು, ವಿದ್ಯುತ್ ಗರಗಸ ಮುಂತಾದುವುಗಳಿಂದ ಹೊರಹೊಮ್ಮುವ ಅಬ್ಬರದ ಶಬ್ದಗಳು ಕಿವುಡುತನಕ್ಕೆ ಸಾಮಾನ್ಯ ಮೂಲಗಳು. ಅತಿ ಸದ್ದಿನ ಸಂಗೀತ ಸಾಧನಗಳಿಂದ ಬಹಳ ಕಾಲ ಹೊರಡುವ ಶಬ್ದ ಕೂಡ ಕಾರಣ. ಕಾರ್ಖಾನೆ ಮತ್ತು ನಿರ್ಮಾಣ ಕಾರ್ಮಿಕರು, ಸಂಗೀತಗಾರರು ಹಾಗು ಸೈನಿಕರು ಮುಂತಾದವರಿಗೆ ಅತಿ ಶಬ್ದದ ಅಪಾಯ ಹೆಚ್ಚು.

… ವಯಸ್ಸು – ವಯಸ್ಸು ಹೆಚ್ಚಾದ ಹಾಗೆ, ಕಿವಿಯ ನರ ನಾರುಗಳ (nerve fibers) ಕಾರ್ಯಕ್ಷಮತೆ ಅವನತಿ ಹೊಂದುತ್ತ, ಶ್ರವಣ ದೋಷ ಮತ್ತು ಕಿವಿಮೊರೆತ ಅನುಭವಿಸುತ್ತಾರೆ.

… ಲಿಂಗ – ಪುರುಷರು ಹೆಚ್ಚಾಗಿ ಕಿವಿಮೊರೆತ ಅನುಭವಿಸುವ ಸಾಧ್ಯತೆ ಹೆಚ್ಚು.

… ಕೆಲವು ಆರೋಗ್ಯ ಸಮಸ್ಯೆಗಳು – ಬೊಜ್ಜು, ಹೃದಯಸಂಬಂಧಿ ಹಾಗು ಹೃದಯದ ರಕ್ತನಾಳಗಳ ತೊಂದರೆಗಳು, ಅಧಿಕ ರಕ್ತದೊತ್ತಡ ಮತ್ತು ತಲೆಗೆ ಬಿದ್ದಿದ್ದ ಪೆಟ್ಟು, ಸಂಧಿವಾತಗಳು ಆಗಿದ್ದ ಮಾಹಿತಿ ಇದ್ದಾಗ ಕಿವಿಮೊರೆತದ ಅಪಾಯ ಹೆಚ್ಚು.

… ಹೊಗೆಸೊಪ್ಪು ಮತ್ತು ಮದ್ಯ – ಧೂಮಪಾನಿಗಳು ಮತ್ತು ಮದ್ಯ ಸೇವನೆ ಮಾಡುವವರಲ್ಲಿ ಕಿವಿಮೊರೆತದ ಸಮಸ್ಯೆ ಹೆಚ್ಚು.

ತೊಡಕುಗಳು (Complications):
ಕಿವಿಮೊರೆತವು ಜನರಿಗೆ ಬೇರೆಬೇರೆ ರೀತಿಯ ಪರಿಣಾಮ ಬೀರುತ್ತದೆ. ಕೆಲವರ ಜೀವನಶೈಲಿಯ ಮೇಲೆ ಕೂಡ ಗಮನಾರ್ಹವಾಗಿ ಪರಿಣಮಿಸುವುದು ಸಾಧ್ಯ. ಕಿವಿಮೊರೆತದ ತೊಂದರೆ ಇದ್ದವರಿಗೆ —

… ಆಯಾಸ
… ಒತ್ತಡ
… ನಿದ್ದೆಯ ತೊಂದರೆಗಳು
… ನೆನಪಿನ ತೊಂದರೆಗಳು
… ಏಕಾಗ್ರತೆಯ ಕಷ್ಟ
… ಖಿನ್ನತೆ
… ಆತಂಕ ಮತ್ತು ಖಿನ್ನತೆ
… ತಲೆನೋವು
… ಕೆಲಸ ಹಾಗು ಕುಟುಂಬದಲ್ಲಿ ತೊಂದರೆಗಳು ಉಂಟಾಗಬಹುದು.

ತಡೆಗಟ್ಟುವಿಕೆ:
ಅನೇಕ ಬಾರಿ ಕಿವಿಮೊರೆತದ ಕಾರಣ ತಡೆಗಟ್ಟಲು ಅಸಾಧ್ಯವಾದುದು. ಆದಾಗ್ಯೂ, ಕೆಲವು ಮುನ್ನೆಚ್ಚರಿಕೆಗಳಿಂದ ಕೆಲವನ್ನು ತಡೆಯಬಹುದು.

… ಕಿವಿಯ ರಕ್ಷಣೆ – ಅಧಿಕ ಶಬ್ದಗಳಿಂದ ಆದಷ್ಟು ದೂರ ಇರುವುದು ಅಥವ ಅಂತಹ ಪರಿಸರ ಅನಿವಾರ್ಯವಾದಾಗ, ಅದಕ್ಕೊಂದು ಮಿತಿ ಹಾಕಬೇಕು. ಏಕೆಂದರೆ, ದೀರ್ಘಕಾಲಿಕ ಏರುಗತಿ ಶಬ್ದ ಕೇಳುವುದರಿಂದ ಕಿವಿಯ ನರಗಳಿಗೆ ಹಾನಿಯಾಗುವುದು ಸಾಧ್ಯ. ಅಧಿಕ ಶಬ್ದದಿಂದ ದೂರ ಇರಲು ಅಸಾಧ್ಯವಾದಾಗ, ಕಿವಿಯ ರಕ್ಷಣೆಗೆ ಕಿವಿಬಿರಡೆಗಳನ್ನು (ear plugs) ಉಪಯೋಗ ಮಾಡಬೇಕು.

… ಕಡಿಮೆ ಶಬ್ದ ಪರಿಮಾಣ – ಸಂಗೀತ ಕೇಳುವಾಗ ಅದರ ಶಬ್ದದ ಪರಿಮಾಣ ಕಡಿಮೆಗೊಳಿಸಬೇಕು.

… ಬೊಜ್ಜು – ಬೊಜ್ಜಿನಿಂದಾಗುವ ಕಿವಿಮೊರೆತ ತಡೆಗಟ್ಟಲು, ನಿಯಮಿತ ವ್ಯಾಯಾಮ ಮಾಡುವುದು, ಮಿತ ಆಹಾರ ಸೇರಿಸುವ ಅಭ್ಯಾಸಗಳಿಂದ ರಕ್ತನಾಳಗಳ ಆರೋಗ್ಯ ಉತ್ತಮವಾಗಿ, ಕಿವಿಮೊರೆತದ ತೊಂದರೆ ಉತ್ತಮವಾಗುವುದು.

… ಮದ್ಯ ಮುಂತಾಗಿ – ಮದ್ಯ, ಹೊಗೆಸೊಪ್ಪು ಮತ್ತು ಕಾಫಿ ಸೇವನೆಯಲ್ಲಿ ಸಹ ಮಿತಿ ಇದ್ದರೆ ಉತ್ತಮ.

ರೋಗನಿರ್ಣಯ:
ಕೇವಲ ರೋಗಲಕ್ಷಣಗಳಿಂದಲೆ ವೈದ್ಯರು
ರೋಗನಿರ್ಣಯ ಮಾಡಬಹುದು. ಆದರೆ, ಚಿಕಿತ್ಸೆಗಾಗಿ ಕಿವಿಮೊರೆತ ಬೇರೆ ತೊಂದರೆಗಳಿಂದ ಬಂದಿರುವ ಸಾಧ್ಯತೆ ತಿಳಿಯಬೇಕಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ ಸರಿಯಾದ ಕಾರಣ ತಿಳಿಯುವುದೇ ಇಲ್ಲ.
ಆದ್ದರಿಂದ, ವೈದ್ಯರು ರೋಗದ ಬಗ್ಗೆ ಕೇಳಿ ತಿಳಿದ ನಂತರ, ಕೀವಿ ಪರೀಕ್ಷೆ ಮಾಡಿ, ಕೆಲವು ಸಾಮಾನ್ಯ ಪರೀಕ್ಷೆ ಮಾಡಿಸಬಹುದು —

… ಶ್ರವಣ ಪರೀಕ್ಷೆ (Audiological test) –
ಈ ಪರೀಕ್ಷೆಯಲ್ಲಿ, ರೋಗಿಯನ್ನು ಧ್ವನಿ ನಿರೋಧಕ ಕೊಠಡಿಯಲ್ಲಿ ಕೂರಿಸಿ, ಕರ್ಣವಾಣಿಗಳನ್ನು (earphones) ತೊಡಿಸಿ, ನಿರ್ದಿಷ್ಟ ಧ್ವನಿಯನ್ನು ಪ್ರತಿಯಾಗಿ ಒಂದೊಂದೆ ಕಿವಿ ಕೇಳುವಂತೆ ಮಾಡಿದಾಗ, ರೋಗಿಯು ಶಬ್ದ ಕೇಳಿದ್ದನ್ನು ಸೂಚಿಸುತ್ತಾನೆ. ಒಟ್ಟು ಫಲಿತಾಂಶವನ್ನು, ಆತನ ವಯಸ್ಸಿಗೆ ಸಮನಾಗಿದುದಕ್ಕೆ ಹೋಲಿಸಿದಾಗ, ಕಿವಿಮೊರೆತದ ಸಂಭವನೀಯ ಕಾರಣ ತಿಳಿಯುವರು.

… ಚಲನೆ – ರೋಗಿಯ ಕಣ್ಣು, ಕುತ್ತಿಗೆ, ಕೈ ಮತ್ತು ಕಾಲುಗಳನ್ನು ಚಲಿಸುವಂತೆ ಮಾಡಿ ಕಾರಣ ತಿಳಿಯಲು ಪ್ರಯತ್ನ ಮಾಡುವರು.

… ಸ್ಕ್ಯಾನ್ – ಕಿವಿಮೊರೆತಕ್ಕೆ ಶಂಕಿತ ಕಾರಣ ತಿಳಯಲು, ಸಿ.ಟಿ. ಅಥವ ಎಂ.ಆರ್.ಐ. ಸ್ಕ್ಯಾನ್ ಮಾಡಿಸಬಹುದು.

… ಪ್ರಯೋಗಾಲಯ ಪರೀಕ್ಷೆ – ರಕ್ತಹೀನತೆ, ಥೈರಾಯ್ಡ್, ವಿಟಮಿನ್ ಕೊರತೆಗಳು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಿಳಿಯಲು ಪ್ರಯೋಗಾಲಯದ ಪರೀಕ್ಷೆಗಳನ್ನು ಮಾಡಿಸುವರು.

ವೈದ್ಯರು ಕಿವಿಮೊರೆತದ ಶಬ್ದ ಯಾವ ರೀತಿಯದು ಎಂದು ತಿಳಯಲು, ರೋಗಿಗೆ ಶಬ್ದದ ಮಾದರಿ ವಿವರಣೆ ಕೇಳಿ, ರೋಗನಿರ್ಣಯ ಮಾಡುವರು.

… ಚಿಟಕಿ ಹೊಡೆವ ಸದ್ದು (clicking) –
ಈ ರೀತಿಯ ಸದ್ದು, ಕಿವಿಯ ಒಳಗೆ ಮತ್ತು ಸುತ್ತಮುತ್ತ ಸ್ನಾಯು ಬಿಗಿತದಿಂದ ಎಂದು ಸೂಚಿಸುತ್ತದೆ.

… ಮಿಡಿತ, ಅವಸರದ ಅಥವ ಗುಂಯ್ಗುಡುವ ಶಬ್ದ- ಇಂಥ ಸದ್ದುಗಳು ಸಾಮಾನ್ಯವಾಗಿ ರಕ್ತನಾಳದ, ಉದಾಹರಣೆಗೆ ರಕ್ತದೊತ್ತಡದಂತಹ ತೊಂದರೆಯಿಂದ ಸಾಧ್ಯ.

… ಕಡಿಮೆ ಸದ್ದಿನ ಮೊಳಗುವಿಕೆ – ಇದು ಕಿವಿ ಕೊಳವೆಯ ತಡೆಗಟ್ಟುವಿಕೆಯಿಂದ, ಉದಾಹರಣೆಗೆ ಮೆನ್ಯಾರ್ಸ್ ಅಥವ ಘಟ್ಟಿಯಾದ ಒಳಕಿವಿ ಮೂಳೆಗಳಿಂದ (otosclerosis) ಸಾಧ್ಯ.

… ಅತಿ ಸದ್ದಿನ ಮೊಳಗುವಿಕೆ – ಇದು ಕಿವಿಮೊರೆತದಲ್ಲಿ ಅತ್ಯಂತ ಸಾಮಾನ್ಯ.
ಅತಿ ದೊಡ್ಡ ಶಬ್ದ, ಕೆಲವು ಔಷಧಗಳು, ನ್ಯೂರೋಮ ಗೆಡ್ಡೆ ಮುಂತಾಗಿ ಕಾರಣ.

ಚಿಕಿತ್ಸೆ:
ಕಿವಿಮೊರೆತದ ಚಿಕಿತ್ಸೆಯು ಅದು ಯಾವ ಇತರ ರೋಗಗಳಿಂದ ಉಂಟಾದುದು, ಎಂಬುದರ ಮೇಲೆ ಅವಲಂಬಿತ. ಹಾಗಾಗಿ ಮೂಲ ಕಾರಣದ ಚಿಕಿತ್ಸೆಯಿಂದ ಕಿವಿಮೊರೆತ ಕುಗ್ಗುವುದು ಸಾಧ್ಯ —

… ಕಿವಿಯೊಳಗಿನ ಗುಗ್ಗೆ ತೆಗೆಯುವುದು

… ರಕ್ತನಾಳದ ತೊಂದರೆಯ ಚಿಕಿತ್ಸೆ

… ವಯೋಸಹಜ ಕಾರಣದಿಂದ ಕಿವುಡುತನ ಅಥವ ಅಧಿಕ ಶಬ್ದಗಳಿಂದಾದ ಕಿವಿಮೊರೆತಕ್ಕೆ, ಶ್ರವಣಯಂತ್ರದ ಉಪಯೋಗ

… ಕಿವಿಮೊರೆತ ಉಂಟುಮಾಡುವ ಔಷಧ ಬದಲಾವಣೆ
ಈ ಕ್ರಮಗಳಿಂದ ಕಿವಿಮೊರೆತ ಕಡಿಮೆ ಮಾಡಬಹುದು. ಇನ್ನು ಔಷಧಗಳಿಂದ ಕಿವಿಮೊರೆತವನ್ನು ಗುಣವಾಗುವುದಿಲ್ಲ; ಆದರೆ ಮೊರೆತವನ್ನು ಕಮ್ಮಿ ಮಾಡಲು ಸಾಧ್ಯ. ಅಂತಿಮವಾಗಿ ಶಸ್ತ್ರಚಿಕಿತ್ಸೆ ಸಹ ಸಾಧ್ಯ.


Leave a Reply

Back To Top