ನಾಟ್ಯ ಸಂಗಾತಿ
ಗೊರೂರು ಅನಂತರಾಜು
ಭರತನಾಟ್ಯ ಯುವ ಪ್ರತಿಭೆ
‘ದೇವಿಕಾ ರಾಜಮಣಿ’
ಮೊನ್ನೆ ಹಾಸನ ತಾ. ಬೂದೇಶ್ವರ ಮಠದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇವಿಕಾ ಮತ್ತು ಮೇಘನಾ ಜೋಡಿಯ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯಿತು. ಕಾರ್ಯಕ್ರಮ ಮುಗಿದು ಇವರಿಗೆ ಹಾಸನದ ಶ್ರೀ ಶಾರದ ಕಲಾಸಂಘದ ಅಧ್ಯಕ್ಷರು ಸನ್ಮಾನಿಸಿದರು. ಕಾರ್ಯಕ್ರಮ ನಿರೂಪಕನಾಗಿ ನಾನು ಇವರ ಪರಿಚಯ ಪ್ರೇಕ್ಷಕರಿಗೆ ತಿಳಿಸಬೇಕಿತ್ತು. ಹಾಗೇ ಮಾತನಾಡುತ್ತಾ ಇವರ ನೃತ್ಯ ಸಾಧನೆಯ ಹೆಜ್ಜೆ ಗುರುತು ತಿಳಿಯಿತು. ನಿಮ್ಮ ಭರತನಾಟ್ಯ ಗುರುಗಳು ಯಾರೆಂದು ಕೇಳಿದೆ. ಶ್ರೀಮತಿ ವಿದುಷಿ ಅಂಬಳೆ ರಾಜೇಶ್ವರಿ ಎಂದರು. ಮೇಡಂ ಶಿಷ್ಯ ಬಳಗ ತುಂಬಾನೇ ಇದೆ. ಇವರಲ್ಲಿ ಕೆಲವರ ಕುರಿತ್ತಾಗಿ ನಾನು ಈ ಹಿಂದೆ ಬರೆದಿದ್ದೆ.
ಈ ದಿಶೆಯಲ್ಲಿ ನನ್ನ ಗಾನ ನಾಟ್ಯ ಎರಡೂ ರಮ್ಯ ಮತ್ತು ಸಂಗೀತ ನ್ಯತ್ಯ ಸಂಗಮ ಎಂಬ ಪುಸ್ತಕಗಳು ಹೊರಬಂದಿವೆ. ಈ ಎರಡು ಕಲಾಪ್ರತಿಭೆಗಳ ಪರಿಚಯ ಮಾಡಬಯಸಿ ಮೊದಲಿಗೆ ಸ್ಫಂದಿಸಿದವರು ಕು. ದೇವಿಕಾ ರಾಜಮಣಿ. ಹಾಸನದ ಇವರು ಇಲ್ಲಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಬಿಎ ಓದುತ್ತಿದ್ದಾರೆ. ಇವರ ತಂದೆ ಹೆಚ್.ಆರ್.ಗಿಡ್ಡೇಗೌಡರು ತಾಯಿ ರಾಜಮಣಿ ಎಸ್.ಆರ್. ತಾಯಿಯ ಪ್ರೋತ್ಸಾಹದಿಂದ ೫ನೇ ವಯಸ್ಸಿಗೆ ನೃತ್ಯ ಕಲಿಯಲು ಗೆಜ್ಜೆ ಕಟ್ಟಿ ಇಂದಿಗೂ ನೃತ್ಯದ ಹೆಜ್ಜೆ ಮುಂದುವರೆಸಿ ಈವರೆಗೆ ಸರಿಸುಮಾರು ೫೦೦ ಕಾರ್ಯಕ್ರಮ ನೀಡಿದ್ದಾರೆ. ೩ನೇ ತರಗತಿ ಓದುತ್ತಿರುವಾಗಲೇ ಹಾಸನದ ಹೊಯ್ಸಳ ರೈನ್ಬೊ ಸಂಸ್ಥೆಯ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಶ್ರೀಮತಿ ಪ್ರಭಾಮಣಿ ಮಂಜುನಾಥ್ ಅವರಲ್ಲಿ ಸಂಗೀತದಲ್ಲಿ ಜೂನಿಯರ್ ಗ್ರೇಡ್ ಮುಗಿಸಿದ್ದಾರೆ. ಶಾಸ್ತಿೃಯ ನೃತ್ಯದಲ್ಲಿ ಜೂನಿಯರ್, ಸೀನಿಯರ್ ನಂತರ ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿಯ ೨೦೨೪ನೇ ಸಾಲಿನ ಭರತನಾಟ್ಯ ವಿದ್ವತ್ ಪಡೆಯಲು ಅಂತಿಮ ದರ್ಜೆಗೆ ತಯಾರಿ ನಡೆಸಿದ್ದಾರೆ. ತಮ್ಮ ಗುರು ವಿದುಷಿ ಅಂಬಳೆ ರಾಜೇಶ್ವರಿಯವರ ಮಾರ್ಗದರ್ಶನದಲ್ಲಿ ಜಾವಗಲ್ನ ಮಾಡೆಲ್ ಇಂಗ್ಲೀಷ್ ಸ್ಕೂಲ್ನಲ್ಲಿ ಒಂದು ವರ್ಷದಿಂದ ಭರತನಾಟ್ಯ ಹಾಗೂ ಸಂಗೀತ ತರಬೇತಿ ನೀಡುತ್ತಿದ್ದು, ಈ ವರ್ಷ ಫೆಬ್ರುವರಿಯಿಂದ ಹಾಸನದ ಶಾಸ್ತ ಪಬ್ಲಿಕ್ ಶಾಲೆಯಲ್ಲಿ ಭರತನಾಟ್ಯ ತರಬೇತಿ ಪ್ರಾರಂಭಿಸಿದ್ದಾರೆ. ದೆಹಲಿ, ಹಂಪಿ, ಮೈಸೂರು, ಬೆಂಗಳೂರು, ಕಾರ್ಕಳ, ಬೇಲೂರು, ಹಳೇಬೀಡು, ಶಿವಮೊಗ್ಗ, ದಾವಣಗೆರೆ.. ಹೀಗೆ ನಾಡಿನಾದ್ಯಂತ ಸಮೂಹ ನೃತ್ಯ ಇಲ್ಲವೇ ಸೋಲೋ ನೃತ್ಯ ಪ್ರದರ್ಶನ ನೀಡಿದ್ದಾರೆ. ಹಾಸನದಲ್ಲಿಯೇ ಇವರ ಸುಮಾರು ೨೦೦ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. ಬೇಲೂರು ಚನ್ನಕೇಶವ ದೇವಸ್ಥಾನದ ನವರಂಗ ಆವರಣದಲ್ಲಿ ೨ ಬಾರಿ, ಹಾಸನ ಆದಿಚುಂಚನಗಿರಿ ಹುಣ್ಣಿಮ್ಮೆ ಉತ್ಸವದಲ್ಲಿ, ಕುಂದೂರು ಮಠದ ಜಾತ್ರೆಯಲ್ಲಿ ಇವರ ನೃತ್ಯ ಪ್ರದರ್ಶನ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ಭಾರತಿ ಕಾಲೇಜಿನಲ್ಲಿ ನಡೆದ ಅಂತರಕಾಲೇಜು ಭರತನಾಟ್ಯ ಸ್ಫರ್ಧೆಯಲ್ಲಿ ತಮ್ಮ ಕಾಲೇಜು ಪ್ರತಿನಿಧಿಸಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹಾಸನ ವಿಶ್ವವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಇವರ ನೃತ್ಯ ಮೆಚ್ಚುಗೆ ಪಡೆದಿದೆ. ಅಮ್ಮ ನಿನ್ನ ದೇವರಾಣೆ.. ಹಾಡಿಗೆ ಕೃಷ್ಣನ ಪಾತ್ರ ಗಮನ ಸೆಳೆದಿದೆ. ರಾಮಾಯಣ ನೃತ್ಯರೂಪಕದಲ್ಲಿ ಸೂರ್ಪನಖಿಯಾಗಿ ಲಕ್ಷ್ಮಣನನ್ನು ಕಾಡಿದ್ದಾರೆ. ೨೦೧೮ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕದಲ್ಲಿ ನನ್ನ ಗುರುಗಳ ನೇತೃತ್ವದಲ್ಲಿ ಭರತನಾಟ್ಯ ನೀಡಿದ ಕಾರ್ಯಕ್ರಮ ಖುಷಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
——————————–
ಗೊರೂರು ಅನಂತರಾಜು
Super