ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
‘ಹೃದಯ ಕಾದಿದೆ ಓಡಲು ನಿನ್ನೊಂದಿಗೆ’
[7:09 pm, 19/06/2024] JAYASHREE ABBIGERI: ಒಲವಿನ ರಾಧೆ,
ನಾ ಮುಚ್ಚಿರುವ ಕಣ್ಣಲ್ಲಿ ಅದು ಹೇಗೆ ಚಿತ್ರವಾಗಿ ಬರುತ್ತಿಯಾ ? ರಾತ್ರಿ ಕತ್ತಲಲ್ಲಿ ನನ್ನೆದೆಯ ಗೂಡಲ್ಲಿ ಅದು ಹೇಗೆ ಸೇರಿ ಕೊಳ್ಳುತ್ತಿಯಾ? ಎಂದು ಅದೆಷ್ಟೋ ಸಲ ಯೋಚಿಸಿದ್ದೇನೆ. ನಿನ್ನ ಕಣ್ಣ ಬಣ್ಣವೇ ತಣ್ಣನೆಯ ಬೆಳದಿಂಗಳು. ಹೀಗಾಗಿ ಕಣ್ರೆಪ್ಪೆ ಸೇರೋದು ನಿನಗೆ ಸಲೀಸು. ಮುಂಜಾನೆ ಕಣ್ಣು ತೆರೆಯುವುದರಲ್ಲಿ ಮರೆಯಾಗಿರುತ್ತಿಯಾ.ನನ್ನ ಕಣ್ರಪ್ಪೆಯಲ್ಲಿಯೇ ನಿನ್ನ ವಾಸ ಇರಬಹುದು ಅಂದೆನಿಸುತ್ತದೆ.
ನೀ ಯಾವ ಊರ ಚೆಲುವೆಯೋ ಗೊತ್ತಿಲ್ಲ. ಬೇಲೂರು ಶಿಲಾ ಬಾಲೆಗೆ ಜೀವ ತುಂಬಿದಂತಿರುವೆ. ಚೆಲುವ ಮೈ ತುಂಬ ಹೊದ್ದಿರುವ ಚೆಲುವೆ. ಅದಾವ ಜನುಮದ ಫಲವೋ ಈ ಜನುಮದಲಿ ನನಗೆ ನೀ ಜೊತೆಯಾಗಿರುವೆ. ಹರೆಯದ ಹೈಕಳು ಯಾವ ಲೆಕ್ಕ ಕಲ್ಲಿನ ಮೂರ್ತಿಯೂ ನಿನ್ನೆಡೆ ನೋಡಿ ಕಣ್ಣು ಹೊಡೆಯುತ್ತದೆ ಅಂಥ ಅಭಿಸಾರಿಕೆ ನೀನು.
ಈ ಜೀವ ನಿನ್ನದೇ ಕಣೆ. ಹೃದಯದ ಕನಸಿಗೆ ಬಣ್ಣ ತುಂಬಿದವಳು ನೀನು. ಮನದ ಬಳಿ ಬಂದು ನಿಂತಿದ್ದೂ ಗೊತ್ತಾಗಲಿಲ್ಲ. ಅದಾವ ಗಳಿಗೆಯಲ್ಲಿ ನನ್ನ ಪುಟ್ಟ ಹೃದಯ ಕದ್ದೆ ಎಂಬುದಂತೂ ತಿಳಿಯಲೇ ಇಲ್ಲ. ನಿನ್ನ ಹೆಸರು ಕೇಳಿದರೆ ಸಾಕು ಮಿಂಚೊಂದು ಮೈಯಲ್ಲಿ ಸಂಚರಿಸಿದಂತಾಗುತ್ತದೆ. ಮಿನುಗುವ ತಾರೆ ತಾನೇ ನನ್ನ ಬಳಿ ಬಂದು ಮಾತನಾಡಿಸಿದಂತೆ ಭಾಸವಾಗುತ್ತದೆ.
ನಿನ್ನ ಸ್ನೇಹವಾದಾಗಿನಿಂದ ನಾನಾರು ಎಂಬುದನ್ನೇ ಮರೆತಿರುವೆ. ನಿನ್ನ ಮುದ್ದು ಮುದ್ದು ಮೃದು ಗಲ್ಲವನು ಸೋಕಿದಾಗಲೇ ಹೃದಯ ಪ್ರೀತಿಯಲ್ಲಿ ಜಾರಿ ಬಿತ್ತು. ನನ್ನ ಪಿಸು ಮಾತುಗಳೆಲ್ಲವೂ ಮೌನದಲ್ಲಿ ಹುದುಗಿಕೊಂಡಿವೆ. ಇವೆಲ್ಲ ನನಗೆ ಹೊಸದು. ಈ ರೀತಿಯ ಪ್ರೀತಿ ಜೀವನದಲ್ಲಿ ಮೊದಲ ಸಲದ ಅನುಭವ.
ಹಾಕುವ ಹೆಜ್ಜೆ ಲಯ ತಪ್ಪಿದೆ. ಮನೆಯ ದಾರಿ ಮರೆತು ಹಾಗಿದೆ. ಬೀಸೋ ಗಾಳಿಯೂ ನಿನ್ನ ಹೆಸರನೇ ಉಸುರುತಿದೆ. ನಯನಗಳು ಹೃದಯಗಳು ಕಲೆತಾಗಿದೆ. ನಿನ್ನ ಮರೆತರೆ ಅರೆಗಳಿಗೆ ಬಾಳಲಾರೆ ನಾ.. ನೀನಿಲ್ಲದೇ ಅಪೂರ್ಣ ನಾನು ಎದೆಯಲ್ಲಿರೋ ಬಿರುಗಾಳಿ ನಿನ್ನ ಪ್ರೀತಿಯ ಮತ್ತಲ್ಲಿ ನರ್ತಿಸುತಿದೆ. ಒಲವು ತರಂಗ ನೀರಾಗಿ ಹರಿಯುತಿದೆ. ನಿನ್ನ ಹಿಂದೆ ಮುಂದೆ ಸುತ್ತುತ್ತಿದೆ. ಹೀಗೆ ಒಂದಕ್ಕೊಙದು ಸುತ್ತಿಕೊಳ್ಳುವ ಬಯಕೆಗಳ ಸಾಲು ಮನದಲ್ಲಿ ಸಾಲು ಸಾಲಾಗಿ ನಿಂತಿವೆ.
ಎದೆಯ ಅಂಗಡಿಯಲ್ಲಿ ನಿನ್ನೊಬ್ಬಳದೇ ವಹಿವಾಟು. ಎದೆಯಲ್ಲಿ ಬಲಗಾಲಿಟ್ಟು ನೀನು ಒಳ ಬಂದಾಗಿನಿಂದ ಹೃದಯದ ದಿನಚರಿ ಬದಲಾಗಿ ಹೋಗಿದೆ. ಕ್ಷಣ ಕೂಡ ವಿಶ್ರಾಂತಿ ತೆಗೆದುಕೊಳ್ಳದೇ ನಿನ್ನೊಂದಿಗೆ ಕಳೆದ ಸಿಹಿ ನೆನಪುಗಳ ವಿಪರೀತ ಮೆಲಕು ಹಾಕುತ್ತಿದೆ. ಕಾರಣವಿಲ್ಲದೇ ನೀ ತೋರುತ್ತಿದ್ದ ಹುಸಿಮುನಿಸು, ಕಣ್ಣಿನ
ಭಾಷೆಯಲ್ಲಿ ನೀ ಎಲ್ಲವನ್ನೂ ಹೇಳುತ್ತಿದ್ದ ರೀತಿಗೆ ಕಪ್ಪು ಮೋಡಗಳು ಖುಷಿಯಿಂದ ಹನಿ ಸುರಿಸಿ ನಿನ್ನ ಅಂದದ ಮೈಯನ್ನು ಎದೆಯ ಸೀಳನ್ನು ಮುತ್ತುತ್ತಿದ್ದವು.
ಸುರಿಯುವ ಮಳೆಯ ಹನಿಯಲ್ಲಿ ಆ ಸಂಜೆಯಲ್ಲಿ ನಿನ್ನೊಲುಮೆಯ ಮಕರಂದ ಹೀರಲು ನನ್ನ ಮನ ಹಟ ಹಿಡಿಯಿತು.ನಿನ್ನತ್ತ ಒಂದಡಿ ಇಟ್ಟು ತೋಳು ಚಾಚಿದೆ. ತಿದ್ದಿ ತೀಡಿ ಮಾಡಿದ ಬೊಂಬೆಯಂತಿರುವ ನೀನು, ನನ್ನತ್ತ ಸಕ್ಕರೆಯ ನಗೆ ಬೀರಿದೆ. ಅಂಗಾಂಗಳೆಲ್ಲವೂ ಪುಳಕಗೊಳ್ಳುವಂತೆ ನಿನ್ನ ನೀಳವಾದ ತೋಳುಗಳಿಂದ ಕೊರಳನು ಸುತ್ತಿದೆ.ಎದೆಗೆ ಎದೆ ತಾಕಿದಾಗ ಸ್ವರ್ಗವೇ ಕಣ್ಮುಂದೆ ನಿಂತಂತಾಯಿತು. ನನ್ನನ್ನೇ ನಾನು ನಂಬದಾದೆ ಕನಸೋ ನನಸೋ ತಿಳಿಯದೇ ಎರಡ್ಮೂರು ಸಲ ನೀ ನನ್ನ ತೋಳಲ್ಲಿ ಸೆರೆಯಾಗಿರುವುದು ನಿಜ ತಾನೆ ಎಂದು ಖಾತ್ರಿ ಪಡಿಸಿಕೊಂಡೆ.
ಸಣ್ಣಗೆ ಕಂಪಿಸುತ್ತಿದ್ದ ನಿನ್ನ ಕಂಡು ಹೌಹಾರಿದೆ. ಕೈ ಬಳೆಗಳ ಸದ್ದು ಹೆಚ್ಚುತ್ತಿದ್ದಂತೆ ಬಡಪಾಯಿ ಹೃದಯದ ತಾಳವೂ ಏರತೊಡಗಿತು. ಆತುರದಿಂದ ಸೀರೆಯ ಮರೆಯ ಸಿರಿಗೆ ಕೈ ಹಾಕಿದೆ. ಹೇ ತುಂಟ! ಏನಿದು ನಿನ್ನ ತುಂಟಾಟ? ಪ್ರಣಯದ ಬಲೆಯಲ್ಲಿ ಈಗ ಬೀಳುವುದು ಸರಿಯಲ್ಲ. ಅದೆಲ್ಲ ಕೊರಳಿಗೆ ಮೂರು ಗಂಟು ಬಿದ್ದ ಮೇಲೆ ಎಂದು ಕಿವಿಯಲ್ಲಿ ಪಿಸುಮಾತು ನುಡಿದು ನನ್ನೆದೆಯ ಎಳೆಯ ಕೂದಲು ಮೆಲ್ಲನೇ ಸೋಕುತ್ತ ನಸು ನಗುತ್ತ ಕೆನ್ನೆ ಕಚ್ಚಿ ಓಡಿದೆ.
ಆ ಒಲವಿನ ಪರಿಗೆ ಪ್ರೀತಿಯ ಜ್ಚರದಲ್ಲಿ ಬಿದ್ದೆ. ನಿದ್ದೆ ಬರದೆ ಒದ್ದಾಡಿದೆ. ಸ್ವರ್ಗದ ಸವಿಯ ಕಂಡ ಕ್ಷಣಗಳ ಮರೆಯುವುದಾದರೂ ಹೇಗೆ ಹೇಳು ಗೆಳತಿ?
ನೆನಪಿನ ಅಲೆಗಳು ಎದೆಯಾಳದಲ್ಲಿ ಹೆಚ್ಷೆಚ್ಚು ಸದ್ದು ಮಾಡುತ್ತಿವೆ. ಆ ಸದ್ದು ನನ್ನ ಗೆಳೆಯರಿಗೂ ಗೊತ್ತಾಗಿ ಹೋಗಿದೆ. ಎದೆಗೆ ಅಂಟಿದ ಒಲವಿನ ನಂಟು ನಿನ್ನೊಂದಿಗೆ ಗಂಟು ಹಾಕಿಕೊಂಡಿದ್ದು ಹೆತ್ತವರಿಗೂ ಹೇಗೋ ತಿಳಿದಿದೆ. ತುಂಟಾಟದ ಕನಸಲ್ಲಿ ನನ್ನ ನಾ ಸಂಭಾಳಿಸಲು ಆಗದೆ ಕಣ್ರೆಪ್ಪೆ ಮುಚ್ಚದೇ ನಿನಗಾಗಿ ಕಾಯುತಿರುವೆ. ಒಂಟಿಯಾಗಿ ಕೊರಗುತಿರುವೆ. ಪ್ರೀತಿಯ ಮಂಪರು ಅರಿಯದೇ ಹುಚ್ಚಾಗಿದ್ದೇನೆ.
ಹೃದಯವಿದು ಕಾದಿದೆ ಓಡಲು ನಿನ್ನೊಂದಿಗೆ ಮೈಗೆ ಮೈ ತಾಗಿಸುವ ಆಟ ನೆನೆದು ತುಟಿಯಲಿ ಜೇನು ಜಿನುಗುತಿದೆ. ನಖಶಿಖ ಸುಖ ಬಯಸುವ ವಯಸ್ಸು ಮೀರಿ ಹೋಗುವ ಮೊದಲೇ ನೀನು ಬಂದು ಜೊತೆಯಾಗು.ಹೊತ್ತು ಗೊತ್ತು ಗೊತ್ತಿಲ್ಲದೇ ಕಾಡುವ ಬಿಸಿ ಬಿಸಿ ಕಾಮನೆಗಳ ತೀರಿಸಲು. ಹರೆಯ ಹೊರೆಯ ಇಳಿಸಲು ಬೇಗ ಬಂದು ಬಿಡು. ನೀ ಹೇಳಿದಂತೆ ಮದುವೆ ಚಪ್ಪರ ಹಾಕಿ ಸಪ್ತ ಪದಿ ತುಳಿಯಲು ನಿಂತಿರುವೆ. ಮದುವೆ ಮೊದಲು ಪ್ರಣಯದಲಿ ಜಾರುವುದು ತಪ್ಪು ಎಂದು ನೀ ಹೇಳಿ ಕೊಟ್ಟ ಪಾಠಕೆ ನೂರೊಂದು ಸಲಾಂ ಗೆಳತಿ.
ಪ್ರಣಯಕೆ ಸೋತು ಎಡವಟ್ಟು ಮಾಡಿಕೊಂಡ ಎಷ್ಟೊ ಯುವ ಪ್ರೇಮಿಗಳು ಬಾಳಿನ ಪಯಣವನ್ನೇ ಮುಗಿಸಿದ್ದಾರೆ. ಪ್ರೀತಿಯ ಮೊದಲ ಅಧ್ಯಾಯದಲ್ಲೇ ಭಗ್ನ ಪ್ರೇಮಿಗಳಾಗಿ ಜೀವ ಕಳೆದುಕೊಳ್ಳುವುದು ತರವಲ್ಲ. ತಾಳಿ ಕಟ್ಟುವವರೆಗೂ ತಾಳಿಕೊಳ್ಳುವುದೇ ನಿಜ ಪ್ರೀತಿ. ಒಲವಿನ ಅಮೃತ ಧಾರೆಯ ಸವಿಯಲು ಅನುವು ಮಾಡಿ ಕೊಡುವ ನಿನಗೆ ಧನ್ಯವಾದ ಹೇಳುವುದಾದರೂ ಹೇಗೆ? ಅದಕೆ ಒಂದು ಉಪಾಯದ ದಾರಿ ಹುಡುಕಿರುವೆ.
ಬಿಡದೇ ನೀಡುವೆ ಹಿತವಾದ ನೋವ ಪ್ರಣಯದ ಬಲೆಯಲಿ ಪ್ರತಿ ಇರುಳಲಿ ಒಪ್ಪಿಗೆಯಾ ಗೆಳತಿ ನಿನಗೆ? ನಿನ್ನೆದೆಯೂ ತುಂಟಾಟಕೆ ಕಾಯುತಿದೆ ಅಂತ ನನಗೆ ಚೆನ್ನಾಗಿ ಗೊತ್ತು. ತುಂಟಾಟದಲಿ ಒಂದಾಗಿ ಮೈ ಮರೆಯೋಣ. ಜಗದ ನೀತಿಯಂತೆ ಜೀವಿಸಿ ಆದರ್ಶ ಮೆರೆಯೋಣ.
ಸದಾ ನಿನ್ನ ತುಂಟಾಟ ಬಯಸುವ
ಸದಾನಂದ
ಜಯಶ್ರೀ.ಜೆ. ಅಬ್ಬಿಗೇರಿ