ನಿದ್ರಾಭಂಗ ಶ್ವಾಸಸ್ತಂಭನ(Obstructive sleep apnea)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ನಿದ್ರಾಭಂಗ ಶ್ವಾಸಸ್ತಂಭನ ಅಥವ ನಿದ್ರಾವಿಘ್ನ ಶ್ವಾಸಸ್ತಂಭನ (ನಿದ್ದೆಯಲ್ಲಿ ಉಸಿರಗಟ್ಟಿ ಎಚ್ಚರಗೊಳ್ಳುವುದು) ಎಂಬುದು ನಿದ್ರೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು. ಇಂಥ ತೊಂದರೆ ಇರುವವರು ತಮ್ಮ ನಿದ್ದೆಯಲ್ಲಿ ಪದೇ ಪದೇ ಉಸಿರುಗಟ್ಟಿದಂತೆ ಕ್ಷಣಹೊತ್ತು ಉಸಿರಾಟ ನಿಲ್ಲಿಸಿ ಮತ್ತೆ ಪ್ರಾರಂಭ ಮಾಡುವರು. ವ್ಯಕ್ತಿಯ ಗಂಟಲಿನ ಸ್ನಾಯುಗಳು ಸಡಿಲಗೊಂಡು (relax) ಉಸಿರಾಟದ ಮಾರ್ಗವನ್ನು ತಡೆಗಟ್ಟುವುದರಿಂದ ಹೀಗಾಗುವುದು. ನಿದ್ದೆಯ ಹೊತ್ತಿನಲ್ಲಿ ಇದು ಆಗಾಗ ಆಗುತ್ತಿರುವುದು (repetition). ಹೀಗೆ ಉಸಿರಿಗೆ ತಡೆಯಾಗುವ ಈ ರೋಗದ ಒಂದು ಲಕ್ಷಣ ಗೊರಕೆ.

ರೋಗಲಕ್ಷಣಗಳು:
ನಿದ್ರಾಭಂಗ ಶ್ವಾಸಸ್ತಂಭನದ ಲಕ್ಷಣಗಳೆಂದರೆ —
… ಹಗಲು ಹೊತ್ತಿನ ಅತಿಯಾದ ನಿದ್ದೆ.
… ಗಟ್ಟಿ ಧ್ವನಿಯ ಗೊರಕೆ.
… ರಾತ್ರಿ ನಿದ್ದೆಯಲ್ಲಿ ಉಸಿರುಗಟ್ಟಿಸಿದ ಹಾಗೆ ಏದುಸಿರು ಬರುವುದು.
… ರೋಗಿಯ ಉಸಿರು ನಿಲ್ಲುವುದು ಮತ್ತು ಪುನಃ ಪ್ರಾರಂಭ ಆಗುವುದನ್ನು ಬೇರೆಯವರು ಗಮನಿಸಬಹುದು.
… ಬೆಳಿಗ್ಗೆ ಒಣಗಿದ ಬಾಯಿ ಮತ್ತು ಗಂಟಲು ನೋವಿನಿಂದ ಎಚ್ಚರಗೊಳ್ಳುವುದು.
… ಹಗಲು ಹೊತ್ತಿನ ತಲೆನೋವು
… ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಕಷ್ಟಕರವಾಗುವುದು.
… ಮನಸ್ಥಿತಿಯಲ್ಲಿ ಬದಲಾವಣೆಗಳು – ಖಿನ್ನತೆ ಮತ್ತು ಬಹುಬೇಗ ಅಸಮಾಧಾನ ಆಗುವುದು.
… ರಕ್ತದೊತ್ತಡ ಹೆಚ್ಟಾಗುವುದು.
… ಲೈಂಗಿಕ ಕ್ರಿಯೆಯಲ್ಲಿ ಕುಗ್ಗಿದ ಉತ್ಸಾಹ.

ವೈದ್ಯರ ಸಲಹೆ ಯಾವಾಗ:
ವ್ಯಕ್ತಿ ಅಥವ ಆತನ ಸಹಭಾಗಿಯು ಈ ಕೆಳಗಿನ ಯಾವುದಾದರು ಲಕ್ಷಣಗಳು ಇರುವುದನ್ನು ಗಮನಿಸಿದಾಗ ಕೂಡಲೆ ವೈದ್ಯರ ಸಲಹೆ ಪಡೆಯಬೇಕು —
… ತನ್ನ ಅಥವ ಇತರರ ನಿದ್ದೆಗೆ ತೊಂದರೆಯಾಗುವ ಹಾಗೆ ಸಾಕಷ್ಟು ಸದ್ದಿನಿಂದ ಗೊರಕೆ ಹೊಡೆಯುತ್ತಿದ್ದರೆ.
… ಉಸಿರುಗಟ್ಟಿದ ಹಾಗೆ ಏದುಸಿರಿನಿಂದ ಏಳುತ್ತಿದ್ದರೆ.
… ನಿದ್ದೆಯಲ್ಲಿ ಉಸಿರು ನಿಲ್ಲುತ್ತಿದ್ದರೆ.
… ಹಗಲು ಹೊತ್ತು ಹೆಚ್ಚು ತೂಕಡಿಸುತ್ತಿದ್ದು, ಕೆಲಸದ ಸಮಯದಲ್ಲಿ, ಟಿ.ವಿ. ನೋಡುವಾಗ, ವಾಹನ ಚಲಾಯಿಸುವ ಸಮಯದಲ್ಲಿ ನಿದ್ದೆ ಮಾಡುವಂತಾದಾಗ.

ಗೊರಕೆ ಮಾತ್ರ ಈ ಗಂಭೀರತೆಯ ಸೂಚನೆಯಲ್ಲ; ಅಲ್ಲದೆ, ಗೊರಕೆ ಹೊಡೆಯುವವರೆಲ್ಲರೂ ನಿದ್ರಾಭಂಗ ಶ್ವಾಸಸ್ತಂಭನದ ರೋಗಿಗಳೂ ಅಲ್ಲ. ಆದರೆ, ಗೊರಕೆ ಬಹಳ ಶಬ್ದದಿಂದ ಉತ್ಪತ್ತಿಯಾಗುತ್ತಿದ್ದು, ನಡುನಡುವೆ ನಿಶಬ್ದತೆ ಗೊರಕೆಗೆ ತಡೆಯಾಗುತ್ತಿದ್ದರೆ, ವೈದ್ಯರ ಸಲಹೆ ಪಡೆಯುವುದು ಉತ್ತಮ. ವ್ಯಕ್ತಿಯು ತನ್ನ ಬೆನ್ನಿನಮೇಲೆ ಮಲಗಿದಾಗ, ಗೊರಕೆಯು ಅತಿ ಶಬ್ದದಿಂದ ಹೊರಬರಬಹುದು ಮತ್ತು ಉಸಿರು ಸಹ ನಡುನಡುವೆ (ಆಪ್ನಿಯಾ ಥರ) ನಿಲ್ಲುವುದು ಸಾಮಾನ್ಯ. ಆತನಿಗೆ ನಿದ್ದೆಯ ತೊಂದರೆಯಾಗುತ್ತಿದ್ದು, ವ್ಯವಸ್ಥಿತವಾಗಿ ಆಯಾಸವಾಗುತ್ತಿದ್ದರೆ, ತೂಕಡಿಕೆಯಾಗುತ್ತಿದ್ದರೆ, ಸಿಡುಕುಗೊಳ್ಳುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಹಗಲಿನ ಅತಿ ತೂಕಡಿಕೆ, ನಾರ್ಕೊಲೆಪ್ಸಿ (ಅತಿನಿದ್ರಾರೋಗ) ತೊಂದರೆಯಿಂದ ಕೂಡ ಆಗಬಹುದು.

ರೋಗಕಾರಕಗಳು:                

ಗಂಟಲಿನ ಹಿಂಭಾಗದ ಸ್ನಾಯುಗಳು ಅತಿಯಾಗಿ ಸಡಿಲಗೊಂಡು (relax) ಸಮರ್ಪಕ ಉಸಿರಾಟಕ್ಕೆ ಅಡಚಣೆ ಆದಾಗ ನಿದ್ರಾಭಂಗ ಶ್ವಾಸಸ್ತಂಭನ ಉಂಟಾಗುವುದು. ಮೃದು ಅಂಗುಳು (soft palate)  ಎಂಬ ಬಾಯಿಯ ಹಿಂಭಾಗದ ಛಾವಣಿ (ಒಳನೆತ್ತಿ) ಪ್ರದೇಶಕ್ಕೆ ಈ ಸ್ನಾಯುಗಳು ಆಧಾರ ನೀಡುತ್ತವೆ. ಅದೇ ಸ್ನಾಯುಗಳು ನಾಲಿಗೆ ಮತ್ತು ಗಂಟಲಿನ ಅಕ್ಕಪಕ್ಕದ ಭಿತ್ತಿಗಳಿಗೂ (side walls of the throat) ರಕ್ಷಣೆ ಒದಗಿಸುತ್ತವೆ.
ಹಾಗಾಗಿ, ಈ ಸ್ನಾಯುಗಳು ಸಡಿಲಗೊಂಡಾಗ ಗಾಳಿಪಥ/ಉಸಿರಪಥ (airway) ಕಿರಿದಾಗುವುದು ಅಥವ ಮುಚ್ಚುವುದು. ಇದರಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟ ಕಮ್ಮಿಯಾಗಿ, ಇಂಗಾಲದ ಡೈಯಾಕ್ಸೈಡ್ ಮಟ್ಟ ಹೆಚ್ಚುವುದು. ಅಂತಹ ಸಂದರ್ಭದಲ್ಲಿ, ದುರ್ಬಲವಾದ ಉಸಿರಾಟ ಮೆದುಳಿಗೆ ಅರಿವಾಗಿ, ವ್ಯಕ್ತಿಯನ್ನು ಅಲ್ಪಕಾಲಕ್ಕೆ ಎಚ್ಚರಿಸಿ, ಗಾಳಿಪಥವನ್ನು ಮತ್ತೆ ತೆರೆಯುವಂತೆ ಮಾಡುತ್ತದೆ. ಹಾಗೆ ಎಚ್ಚರಗೊಳ್ಳುವುದು ಎಷ್ಟು ಅತ್ಯಲ್ಪ ಕಾಲವೆಂದರೆ, ವ್ಯಕ್ತಿಗೆ ಅದು ನೆನಪೂ ಇರುವುದಿಲ್ಲ. ಉಸಿರುಸಿಕ್ಕ ಹಾಗೆ ಕೂಡ ಏಳಬಹುದು; ಆಗ ಒಂದೆರಡು ಆಳವಾದ ಉಸಿರಾಟಗಳಿಂದ ಅದು ತನಗೆ ತಾನೆ ಸರಿಯಾಗುತ್ತದೆ. ಮತ್ತು ಏದುಸಿರಿನ ಅಥವ ಗೊರಕೆ ಅಥವ ಉಸಿರಗಟ್ಟಿದ ಶಬ್ದ ಹೊರಟು ಸರಿಯಾಗಬಹುದು.
ಇಂಥ ಪ್ರಕ್ರಿಯೆ ಘಂಟೆಯಲ್ಲಿ ಐದರಿಂದ ಮೂವತ್ತು ಅಥವ ಇನ್ನೂ ಅಧಿಕ ಬಾರಿ ಇಡೀ ರಾತ್ರಿ ಮರುಕಳಿಸಬಹುದು. ಈ ರೀತಿ ಆಗುವಾಗ, ವ್ಯಕ್ತಿಯ ಆಳವಾದ ಮತ್ತು ವಿಶ್ರಾಂತ ನಿದ್ದೆಗೆ ಭಂಗವಾಗಿ, ಹಗಲು ಹೊತ್ತಿನ ನಿದ್ದೆಯ ತೊಂದರೆ ಕಾಡಬಹುದು. ನಿದ್ರಾಭಂಗ ಶ್ವಾಸಸ್ತಂಭನದ ತೊಂದರೆ ಇರುವವರಿಗೆ ತಮ್ಮ ನಿದ್ದೆಯ ಅಡಚಣೆಯ ಬಗ್ಗೆ ಜ್ಞಾಪಕ ಇಲ್ಲದಿರಬಹುದು. ಅವರ ರಾತ್ರಿ ನಿದ್ದೆಯು ಚೆನ್ನಾಗಿ ಆಗಿಲ್ಲದ ಬಗೆಗೆ ಕೂಡ ಅವರಿಗೆ ಅರಿವಿಲ್ಲದೆಯೂ ಇರಬಹುದು.

ಅಪಾಯದ ಅಂಶಗಳು:
ನಿದ್ರಾಭಂಗ ಶ್ವಾಸಸ್ತಂಭನ ತೊಂದರೆ ಯಾರಿಗಾದರೂ ಬರಬಹುದು. ಆದರೆ, ಕೆಲವು ಅಂಶಗಳು ಕೆಲವರಿಗೆ ಅಪಾಯದ ಸೂಚಕಗಳಾಗಬಹುದು —

… ಎಲ್ಲ ಬೊಜ್ಜಿನ ಜನರಲ್ಲು ಅಲ್ಲದೆ ಇದ್ದರೂ, ಹೆಚ್ಚಾಗಿ ಬೊಜ್ಜಿನ ವ್ಯಕ್ತಿಗಳಲ್ಲಿ ಈ ತೊಂದರೆ ಅಧಿಕ. ಮೇಲಿನ ಗಾಳಿಪಥದ/ಉಸಿರಪಥದ (upper airways) ಸುತ್ತ ಕೊಬ್ಬು ಶೇಖರಿಸುವುದರಿಂದ ಉಸಿರಾಟಕ್ಕೆ ಅಡಚಣೆ ಉಂಟಾಗುತ್ತದೆ. ‘ಹೈಪೊಥೈರಾಯ್ಡಿಸಂ’, ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಂ’ ಮುಂತಾದ ತೊಂದರೆಗಳಿಂದ ಕೂಡ ಬೊಜ್ಜು ಅಧಿಕವಾಗುವುದರಿಂದ, ಅಂತಹವರಲ್ಲಿ ಸಹ ನಿದ್ರಾಭಂಗ ಶ್ವಾಸಸ್ತಂಭನದ ಸಂಭವ ಸಾಧ್ಯ.
… ವಯಸ್ಸಾದ ಹಾಗೆ ಈ ತೊಂದರೆಯ ಅಪಾಯ ಹೆಚ್ಚಾಗುತ್ತ ಹೋಗುವುದಾದರೂ, 60 ಮತ್ತು 70 ವಯಸ್ಸಿನ ಹತ್ತಿರದಲ್ಲಿ ಸ್ಥಗಿತವಾಗಬಹುದು.
… ಅಧಿಕ ರಕ್ತದೊತ್ತಡ ಇರುವವರಲ್ಲಿ ಈ ಕಾಯಿಲೆ ಸಾಮಾನ್ಯ.
… ರಾತ್ರಿಯ ಹೊತ್ತಿನಲ್ಲಿ ಮೂಗು ಕಟ್ಟುವ ತೊಂದರೆ ಯಾವ ಕಾರಣದಿಂದಲೆ ಆದರು ಇರುವವರಲ್ಲಿ, ನಿದ್ರಾಭಂಗ ಶ್ವಾಸಸ್ತಂಭನ ಎರಡು ಪಟ್ಟು ಅಧಿಕ.
… ಸ್ವಾಭಾವಿಕವಾಗಿ ಗಾಳಿಪಥವು ಕಿರಿದಾಗಿರುವುದು (narrow airway) ವಂಶಪಾರಂಪರ್ಯವಾಗಿ ಬಂದಂಥ ಬಳುವಳಿ. ಅಲ್ಲದೆ, ಟಾನ್ಸಿಲ್ಸ್ ಅಥವ ಅಡಿನಾಯ್ಡ್ ಗ್ರಂಥಿಗಳು ದೊಡ್ಡದಾದಾಗ ಸಹ ಉಸಿರಪಥವು ಕಿರಿದಾಗಬಹುದು. ಈ ತೊಂದರೆ ಇದ್ದವರಲ್ಲಿ ಕೂಡ ನಿದ್ರಾಭಂಗ ಶ್ವಾಸಸ್ತಂಭನ ಕಂಡುಬರುವ ಸಂಭವವಿದೆ.
… ಧೂಮಪಾನ ಮಾಡುವವರಲ್ಲಿ ಈ ತೊಂದರೆಯು ಸಾಧ್ಯ.
… ಮಧುಮೇಹ ಇರುವವರಲ್ಲಿ ಇದು ಅತ್ಯಂತ ಸಾಮಾನ್ಯ.
… ಉಬ್ಬಸ ಅಥವ ಗೂರಲು ಕಾಯಿಲೆ ಇದ್ದವರಲ್ಲಿ ನಿದ್ರಾಭಂಗ ಶ್ವಾಸಸ್ತಂಭನದ ಅಪಾಯ ಹೆಚ್ಚು.
… ನಿದ್ರಾಭಂಗ ಶ್ವಾಸಸ್ತಂಭನದ ರೋಗ ಕುಟುಂಬದಲ್ಲಿ ಬೇರೆಯವರಿಗೆ ಇದ್ದಾಗ, ಆ ಕುಟುಂಬದ ಇತರರಿಗೆ ಈ ಅಪಾಯ ಹೆಚ್ಚು.
… ನಿದ್ರಾಭಂಗ ಶ್ವಾಸಸ್ತಂಭನದ ತೊಂದರೆಯು ರುತುಬಂಧ  (menopause) ಆಗಿರದ ಮಹಿಳೆಯರಿಗಿಂತ 2 ರಿಂದ 3 ಪಟ್ಟು ಹೆಚ್ಚು ಪುರುಷರಲ್ಲಿ ಕಂಡುಬರುತ್ತದೆ. ಆದಾಗ್ಯೂ, ರುತುಬಂಧ ಆದ ನಂತರ ಮಹಿಳೆಯರಲ್ಲಿ ಕೂಡ ಇದರ ಅಪಾಯ ಹೆಚ್ಚಾಗುತ್ತದೆ.

ತೊಡಕುಗಳು (Complications):
ನಿದ್ರಾಭಂಗ ಶ್ವಾಸಸ್ತಂಭನ ತೊಂದರೆಯನ್ನು ಒಂದು ಗಂಭೀರ ಕಾಯಿಲೆ ಎಂಬುದಾಗಿ ಪರಿಗಣಿಸಲಾಗಿದೆ. ಅದರಿಂದ ಆಗುವ ತೊಡಕುಗಳೆಂದರೆ —

… ಹಗಲು ನಿದ್ದೆ ಮತ್ತು ಆಯಾಸ– ನೆಮ್ಮದಿಯ ನಿದ್ದೆ ಇಲ್ಲದ ಕಾರಣ, ನಿದ್ರಾಭಂಗ ಶ್ವಾಸಸ್ತಂಭನ ತೊಂದರೆ ಇರುವವರು ತೀವ್ರತರದ ಹಗಲು ನಿದ್ದೆ, ಕಿರಿಕಿರಿ ಮತ್ತು ಆಯಾಸ ಅನುಭವಿಸುತ್ತಾರೆ. ಅಂಥವರಿಗೆ ಏಕಾಗ್ರತೆಯ ತೊಂದರೆಯಾಗಿ, ಕೆಲಸದ ಸಮಯದಲ್ಲಿ, ಟಿ.ವಿ. ನೋಡುವಾಗ ಅಥವ ವಾಹನ ಚಲಾಯಿಸುವಾಗ ಕೂಡ ನಿದ್ದೆ ಕಾಡುತ್ತದೆ. ಹಾಗಾಗಿ, ಕೆಲಸ ಸಂಬಂಧ ಆಘಾತಗಳ ಅಪಾಯಗಳು ಅಂಥವರಿಗೆ ಅಧಿಕ. ನಿದ್ರಾಭಂಗ ಶ್ವಾಸಸ್ತಂಭನದ ತೊಂದರೆಯು ಮಕ್ಕಳು ಮತ್ತು ಯುವ ಜನತೆಯಲ್ಲಿದ್ದಾಗ, ಶಾಲೆಗಳಲ್ಲಿ ಅವರು ಅಸಮರ್ಥರಾಗುತ್ತಾರೆ ಮತ್ತು ಅವರಲ್ಲಿ ಗಮನದ ಮತ್ತು ವರ್ತನೆಯ ತೊಂದರೆಗಳೂ ಎದ್ದು ಕಾಣಬಹುದು.

… ಹೃದಯ ಸಂಬಂಧಿ ತೊಂದರೆಗಳು–
ನಿದ್ರಾಭಂಗ ಶ್ವಾಸಸ್ತಂಭನದ ಸಮಯದಲ್ಲಿ ರೋಗಿಯ ರಕ್ತದಲ್ಲಿನ ಆಮ್ಲಜನಕದ ಹಠಾತ್ ಕೊರತೆಯಿಂದ ಆತನ ರಕ್ತದೊತ್ತಡ ಹೆಚ್ಚಿಸಿ, ಹೃದಯ ಮತ್ತು ರಕ್ತನಾಳಗಳಿಗೆ ಪ್ರಯಾಸ (strain) ಉಂಟುಮಾಡುತ್ತದೆ. ಹಾಗಾಗಿ ಈ ತೊಂದರೆ ಇರುವ ಅನೇಕರು ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ರೋಗಕ್ಕೆ ತೂತ್ತಾಗುತ್ತಾರೆ.
ನಿದ್ರಾಭಂಗ ಶ್ವಾಸಸ್ತಂಭನದ ತೊಂದರೆ ಅಧಿಕವಾದಾಗ, ಹೃದಯದ ರಕ್ತನಾಳಗಳ ರೋಗ, ಹೃದಯಾಘಾತ, ಹೃದಯದ ಸೋಲು (heart failure) ಮತ್ತು ಪಾರ್ಶ್ವವಾಯು (stroke) ಮುಂತಾದುವುಗಳ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಹೃದಯದ ಲಯಬದ್ಧತೆಯ (heart rhythm) ತೊಂದರೆ (ಹೃದಯ ಬಡಿತದಲ್ಲಿ ಏರುಪೇರು), ಅಂದರೆ ಅರಿದ್ಮಿಯಾಸ್ (arrhythmias) ಉಂಟಾಗುವ ಸಂಭವ ಹೆಚ್ಚು. ಅರಿದ್ಮಿಯಾಗಳೂ ರಕ್ತದೊತ್ತಡ ಕಮ್ಮಿ ಮಾಡಬಹುದು. ಹೃದಯ ಸಂಬಂಧಿ ರೋಗವಿದ್ದವರಲ್ಲಿ ಇಂತಹ ಅರಿದ್ಮಿಯಾಗಳು ಹಠಾತ್ತಾದ ಸಾವಿಗೂ ಕಾರಣವಾಗಬಹುದು.

… ಔಷಧಗಳಿಂದ ಮತ್ತು ಶಸ್ತ್ರಚಿಕಿತ್ಸೆಗಳಿಂದ ಆದ ತೊಡಕುಗಳು–
ಕೆಲವು ನೋವುನಿವಾರಕ, ನಿದ್ರಾಜನಕ ಔಷಧಗಳು, ಮತ್ತು ಅರಿವಳಿಕೆಗಳು ಮೇಲಿನ ಗಾಳಿಪಥವನ್ನು (upper airways) ಸಡಿಲಗೊಳಿಸಿ ಅದರಿಂದ ನಿದ್ರಾಭಂಗ ಶ್ವಾಸಸ್ತಂಭನ ಉಂಟುಮಾಡುವುದು ಸಾಧ್ಯ. ಅಲ್ಲದೆ, ಈ ಕಾಯಿಲೆ ಇರುವವರು ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅಂತಹವರ ಉಸಿರಾಟದ ತೊಂದರೆಯು ಇನ್ನೂ ಹೆಚ್ಚಾಗಬಹುದು; ಪ್ರಮುಖವಾಗಿ ನಿದ್ದೆಗಾಗಿ ಔಷಧ ಸೇವಿಸಿ ಬೆನ್ನಿನ ಮೇಲೆ ಮಲಗಿದ್ದಾಗ ಕೂಡ ಈ ಸಾಧ್ಯತೆ ಹೆಚ್ಚು. ಆದ್ದರಿಂದ ನಿದ್ರಾಭಂಗ ಶ್ವಾಸಸ್ತಂಭನದ ಕಾಯಿಲೆಯವರು ಶಸ್ತ್ರಚಿಕಿತ್ಸೆಯ ನಂತರ ಹೆಚ್ಚು ತೊಡಕುಗಳನ್ನು ಅನುಭವಿಸಬಹುದು.

… ಕಣ್ಣಿನ ತೊಂದರೆಗಳು–
ಸಂಶೋಧನೆಯ ಪ್ರಕಾರ ನಿದ್ರಾಭಂಗ ಶ್ವಾಸಸ್ತಂಭನ ಮತ್ತು ಕಣ್ಣಿನ ಕಾಯಿಲೆ ಗ್ಲಾಕೋಮಾ ಎರಡಕ್ಕೂ ಸಂಬಂಧ ಇದೆಯಂತೆ. ಆದರೆ ಅದರ ಚಿಕಿತ್ಸೆ ಸಾಧ್ಯವಿದೆ.

… ನಿದ್ದೆಗೆ ಧಕ್ಕೆಯಾದ ಸಹಭಾಗಿ–
ಅತಿ ಶಬ್ದದ ಗೊರಕೆಯಿಂದ ಗಂಡ ಅಥವ ಹೆಂಡತಿಯ ಸುಖನಿದ್ದೆ ಮತ್ತು ವಿಶ್ರಾಂತಿಗೆ ಭಂಗವಾಗಿ, ಬಾಂಧವ್ಯಕ್ಕೆ ಅಡಚಣೆ ಆಗಲೂಬಹುದು. ಕೆಲವರು ಬೇರೆ ಕೊಠಡಿಯಲ್ಲಿ ಮಲಗಬಹುದು.

ನಿದ್ರಾಭಂಗ ಶ್ವಾಸಸ್ತಂಭನ ತೊಂದರೆ ಇರುವವರು, ಜ್ಞಾಪಕಶಕ್ತಿಯ ತೊಂದರೆ, ಬೆಳಗಿನ ತಲೆನೋವು, ಖಿನ್ನತೆ ಮತ್ತು ಏರುಪೇರಿನ ಮನಸ್ಥಿತಿ ಮುಂತಾದ ಲಕ್ಷಣಗಳನ್ನು ಹೇಳಿಕೊಳ್ಳಬಹುದು. ಅಲ್ಲದೆ, ಅಂತಹವರು ರಾತ್ರಿಯಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡಬಹುದು; ಮತ್ತು, ನಿದ್ರಾಭಂಗ ಶ್ವಾಸಸ್ತಂಭನ ರೋಗಿಗಳಿಗೆ ಕೋವಿಡ್ – 19 ತೀವ್ರತರವಾಗುವ ಸಂಭವವಿರುತ್ತದೆ. ಅಂಥವರರಿಗೆ ಆಸ್ಪತ್ರೆ ಚಿಕಿತ್ಸೆಯು ಅವಶ್ಯಕ.

ರೋಗನಿರ್ಣಯ:
ವೈದ್ಯರು ರೋಗಿಯ ಲಕ್ಷಣಗಳನ್ನು ಕೇಳಿ, ಪರೀಕ್ಷೆ ಮಾಡಿ, ಕೆಲವು ಇತರ ಪರೀಕ್ಷೆಗಳನ್ನು ಮಾಡಿಸಿದ ನಂತರ, ಆತನನ್ನು ನಿದ್ರಾತಜ್ಞರಲ್ಲಿಗೆ ಮುಂದಿನ ತಜ್ಞನಿರ್ಣಯಕ್ಕಾಗಿ ಕಳಿಸುವರು.
ದೈಹಿಕ ಪರೀಕ್ಷೆಯಲ್ಲಿ, ರೋಗಿಯ ಗಂಟಲಿನ ಮತ್ತು ಬಾಯಿಯ ಹಿಂಭಾಗ ಹಾಗು ಮೂಗನ್ನು ಪರೀಕ್ಷಿಸುವರು. ಕುತ್ತಿಗೆ ಮತ್ತು ಸೊಂಟದ ಸುತ್ತಳತೆ ಅಳೆಯುವರು; ರಕ್ತದೊತ್ತಡ ಪರೀಕ್ಷೆ ಮಾಡುವರು. ತಜ್ಞರು ಆತನ ರೋಗದ ಹಂತವನ್ನು ನಿರ್ಧರಿಸುವರು. ಹಾಗೆಯೆ, ಚಿಕಿತ್ಸೆಯ ಬಗ್ಗೆ ಕೂಡ ಯೋಜಿಸುವರು. ಅದಕ್ಕಾಗಿ ನಿದ್ರಾಕೇಂದ್ರದಲ್ಲಿ ಇರಿಸಿ, ಉಸಿರಾಟ, ಶರೀರದ ಇತರೆ ಕಾರ್ಯಗಳನ್ನು ನಿದ್ದೆಯಲ್ಲಿದ್ದಾಗ ಕೈಗೊಳ್ಳುವರು.

ಪರೀಕ್ಷೆಗಳು —
… ಪಾಲಿಸಾಮ್ನೊಗ್ರಫಿ – ಈ ಪರೀಕ್ಷೆಯಲ್ಲಿ ರೋಗಿಯು ನಿದ್ದೆಯಲ್ಲಿದ್ದಾಗ, ಆತನನ್ನು ಪರೀಕ್ಷೆಯ ಉಪಕರಣಕ್ಕೆ ಸಂಯೋಗಿಸಿ, ಆತನ ಹೃದಯದ, ಶ್ವಾಸಗಳ ಮತ್ತು ಮೆದುಳಿನ ಕಾರ್ಯಕ್ಷಮತೆ ಮತ್ತು ಉಸಿರಾಟದ ರೀತಿಗಳನ್ನು ತಿಳಿಯುವರು. ಆ ಉಪಕರಣವು ರೋಗಿಯ ಕೈಗಳು ಮತ್ತು ಕಾಲುಗಳ ಚಲನೆಗಳನ್ನು ಮತ್ತು ರಕ್ತದ ಆಮ್ಲಜನಕದ ಹಂತಗಳನ್ನು ಸಹ ಅಳತೆ ಮಾಡುವುದು. ರಾತ್ರಿಯಿಡೀ ಅಥವ ರಾತ್ರಿಯ ಸ್ವಲ್ಪ ಭಾಗ ಹೀಗೆ ಪರೀಕ್ಷಿಸಬಹುದು – ಇದಕ್ಕೆ ‘ಸ್ಪ್ಲಿಟ್ ನೈಟ್ ಸ್ಟಡಿ’ ಎನ್ನುವರು. ಸಾಮಾನ್ಯವಾಗಿ ಇದು ಮೊದಲ ಅರ್ಧ ರಾತ್ರಿಯ ಪರೀಕ್ಷೆ. ಅಷ್ಟರಲ್ಲಿ ತೊಂದರೆಯ ಬಗ್ಗೆ ತಿಳಿದುಬಂದರೆ, ರೋಗೀಯನ್ನು ಎಚ್ಚರಿಸಿ, ಉಳಿದರ್ಧ ರಾತ್ರಿ, ರೋಗಿಗೆ ‘ಕಂಟಿನ್ಯೂಯಸ್ ಪಾಸಿಟಿವ್ ಏರ್ ವೇ ಪ್ರಷರ್’ ನೀಡುತ್ತಾರೆ.

ಈ ರೀತಿಯ ಸ್ಲೀಪ್ ಸ್ಟಡಿ ಅಥವ ನಿದ್ರಾಧ್ಯಯನದಿಂದ, ಹಗಲು ನಿದ್ದೆಗೆ ಕಾರಣವಾಗುವ ಇನ್ನಿತರ ನಿದ್ದೆಯ ತೊಂದರೆಗಳನ್ನೂ ಸಹ ಕಂಡುಹಿಡಿದು ಅವುಗಳಿಗೆ ಬೇರೆ ಬೇರೆ ರೀತಿಯ ಚಿಕಿತ್ಸೆ ನೀಡಬಹುದು. ಉದಾಹರಣೆಗೆ, ಹಗಲಿನಲ್ಲಿ ಆಗಾಗ ನಿದ್ದೆಗೆ ಜಾರುವ ಅತಿನಿದ್ರಾರೋಗ (Narcolepsy), ಮತ್ತು ನಿದ್ದೆಯಲ್ಲಿ ಕಾಲುಗಳನ್ನು ಚಲಿಸುವ, ‘ನಿಯತಕಾಲಿಕ ಅಂಗಚಲನಾ ಅಸ್ವಸ್ಥತೆ’ (Periodic limb movement disorder) ಎಂಬ ರೋಗಗಳನ್ನು ಪತ್ತೆಮಾಡಬಹುದು.

… ಮನೆಯಲ್ಲಿಯ ನಿದ್ದೆ ಪರೀಕ್ಷೆ —      
ಕೆಲವು ಸಂದರ್ಭಗಳಲ್ಲಿ, ನಿದ್ರಾಭಂಗ ಶ್ವಾಸಸ್ತಂಭನ ತೊಂದರೆ ಕಂಡುಹಿಡಿಯಲು ವ್ಯಕ್ತಿಯ ಮನೆಯಲ್ಲಿ ಕೂಡ ಪಾಲಿಸಾಮ್ನೊಗ್ರಫಿ ಪರೀಕ್ಷೆಯನ್ನು ಮಾಡಬಹುದು. ಈ ಪರೀಕ್ಷೆಯಲ್ಲಿ ರೋಗಿಯ ನಿದ್ದೆಯಲ್ಲಿ ಉಸಿರಾಟದ ಭಂಗಗಳನ್ನು ವೀಕ್ಷಿಸಲಾಗುತ್ತದೆ.

ಚಿಕಿತ್ಸೆ:
ನಿರಂತರ ಧನಾತ್ಮಕ ಗಾಳಿಪಥದ ಒತ್ತಡ (Continuous positive airway pressure) —
ನಿದ್ರಾಭಂಗ ಶ್ವಾಸಸ್ತಂಭನದ ತೊಂದರೆ ಇದ್ದವರಿಗೆ ಧನಾತ್ಮಕ ಗಾಳಿಪಥದ ಒತ್ತಡದ ಚಿಕಿತ್ಸೆಯಿಂದ ಸಹಾಯವಾಗುತ್ತದೆ. ಇದರಲ್ಲಿ ರೋಗಿಯ ಬಾಯಿಗೆ ಹೊಂದಿಕೊಳ್ಳುವ ಒಂದು ಸಣ್ಣ ಮುಖವಾಡದ ಮೂಲಕ ಅಥವ ರೋಗಿ ಮಲಗಿದ್ದಾಗ ಅದನ್ನು ಆತನ ಮೂಗು ಮತ್ತು ಬಾಯಿಯ ಮೇಲಿಡುವ ಮೂಲಕ ಒತ್ತಡದಲ್ಲಿ ಗಾಳಿಯನ್ನು ಹರಿಸಲಾಗುವುದು.
ಇದಕ್ಕಾಗಿ ಅತ್ಯಂತ ಸಾಮಾನ್ಯವಾಗಿ ಉಪಯೋಗಿಸುವುದು ಸೀ-ಪ್ಯಾಪ್ (CPAP). ಈ ಚಿಕಿತ್ಸೆಯಲ್ಲಿ ಗಾಳಿಯನ್ನು ತಡೆ ಇಲ್ಲದೆ, ನಿರಂತರ ಮತ್ತು ಸ್ವಲ್ಪಮಟ್ಟಿಗೆ ಸುತ್ತಮುತ್ತಲಿಗಿಂತ ಹೆಚ್ಚಿನ ಒತ್ತಡದಿಂದ ಉಸಿರಾಡಿಸಲಾಗುತ್ತದೆ. ಈ ಒತ್ತಡದಲ್ಲಿ ರೋಗಿಯ ಗಾಳಿಪಥವನ್ನು ತೆರೆದಿರುವಷ್ಟು ಬಲವಿರುತ್ತದೆ. ಹಾಗಾಗಿ ನಿದ್ರಾಭಂಗ ಶ್ವಾಸಸ್ತಂಭನ ಹಾಗು ಗೊರಕೆಗೆ ತಡೆಯಾಗುವುದು.

ಕೆಲವರಿಗೆ ಸಿ-ಪ್ಯಾಪ್ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಮುಖವಾಡ ಅನಾನುಕೂಲ ಅಥವ ಹೆಚ್ಚು ಶಬ್ದಕಾರಕ ಅನ್ನಿಸಬಹುದು. ಅಂಥವರಿಗೆ ಹೊಸ ಬಗೆಯ ಚಿಕ್ಕ ಮತ್ತು ಕಡಿಮೆ ಸದ್ದಿನ ಯಂತ್ರಗಳು ಹಾಗು ಬಗೆಬಗೆ ಮಾದರಿಯ ವೈಯಕ್ತಿಕ, ಆರಾಮದಾಯಕ ಮುಖವಾಡಗಳೂ ಸಹ ಬಂದಿವೆ. ಅಲ್ಲದೆ, ಅಭ್ಯಾಸದಿಂದ ಹೆಚ್ಚಿನವರು ಈ ಚಿಕಿತ್ಸೆಗೆ ಹೊಂದಿಕೊಳ್ಳುತ್ತಾ ಆರಾಮ ಕಂಡುಕೊಳ್ಳುವರು. ಆದಾಗ್ಯೂ, ಸಿ-ಪ್ಯಾಪ್ ಕಷ್ಟ ಅನ್ನಿಸಿದವರಿಗೆ, ಬಿ-ಪ್ಯಾಪ್ ಅಥವ ಎ-ಪ್ಯಾಪ್ ವಿಧಾನದಿಂದ ಪ್ರಯತ್ನಿಸಬಹುದು.
ಅಂತಿಮವಾಗಿ ಶಸ್ತ್ರಚಿಕಿತ್ಸೆ ಕೂಡ ಸಾಧ್ಯ.


4 thoughts on “ನಿದ್ರಾಭಂಗ ಶ್ವಾಸಸ್ತಂಭನ(Obstructive sleep apnea)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

    1. Good to see such articles which helps and creates awareness.
      Many feel it’s normal but it can take patient to ICU.

      1. Many thanks for the comments to both Jagadeesh Kumar TN and the other anonymous person.

      2. Thanks to the kind comments to Mr. Jagadish Kumar TN and the other anonymous person.

Leave a Reply

Back To Top