ಕಥಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಅಜ್ಞಾನದ ಆರ್ಭಟ ಮತ್ತು ಜ್ಞಾನದ ಮೌನ”
ಅದೊಂದು ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಯುವಕರದೊಂದು ಸಂಘವಿತ್ತು. ಆಗಾಗ ನಾಟಕ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಊರಿನ ಜಾತ್ರೆ,ಹಬ್ಬ,ಹುಣ್ಣಿಮೆಗಳಲ್ಲಿ ಎಲ್ಲರನ್ನು ಹುರಿದುಂಬಿಸಿ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಜಯಣ್ಣ ಉಳಿದೆಲ್ಲ ಯುವಕರಿಗಿಂತ ತುಸು ದೊಡ್ಡವನಾಗಿದ್ದ.ಆತನ ಮುಂದಾಳತ್ವದಲ್ಲಿಯೇ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿದ್ದವು.
ಒಂದು ಗುಂಪು ಎಂದ ಮೇಲೆ ಅಲ್ಲಿ ಎಲ್ಲ ತರಹದ ಜನರೂ ಇರಬೇಕಲ್ಲವೇ? ಅಂತೆಯೇ ಅ ಗುಂಪಿನಲ್ಲಿ ಚಂದ್ರ ಎಂಬ ಅಂದದ ಅಹಂಕಾರಿ ಯುವಕನು ಇದ್ದ. ಸೋಮು ಎಂಬ ಒಳ್ಳೆಯ ಆದರೆ ಅಷ್ಟೇ ಸ್ವಾಭಿಮಾನಿಯಾದ ಯುವಕ ಆ ಗುಂಪಿನ ಭಾಗವಾಗಿದ್ದು ಜಯಣ್ಣನ ಬಲಗೈಯಂತೆ ಕೆಲಸ ಮಾಡಿ ಊರಿನವರ ಮೆಚ್ಚುಗೆಗೆ ಪಾತ್ರನಾಗಿದ್ದ.
ಒಂದು ಬಿಡುವಿನ ದಿನ ಊರ ಹೊರಗಿನ ಆಲದ ಮರದಡಿಯಲ್ಲಿ ಎಲ್ಲ ಸ್ನೇಹಿತರು ಕುಳಿತು ಹರಟೆ ಹೊಡೆಯುತ್ತಿದ್ದಾಗ ಚಂದ್ರ ದೂರ ದಿಗಂತವನ್ನು ದಿಟ್ಟಿಸಿ ನೋಡುತ್ತಿದ್ದ. ಅದನ್ನು ನೋಡಿದ ಸೋಮು ಮತ್ತಿತರ ಸ್ನೇಹಿತರು ಚಂದ್ರನಿಗೆ ಏನನ್ನು ನೋಡುತ್ತಿರುವೆ? ಎಂದು ಕೇಳಿದರು. ಅದಕ್ಕುತ್ತರವಾಗಿ ಚಂದ್ರ ಭೂಮಿ ಬಾನುಗಳು ಒಂದಾಗುವ ಆ ಜಾಗವನ್ನು ನೋಡುತ್ತಿರುವೆ ಎಂದು ಹೇಳಿದ. ಜೋರಾಗಿ ನಕ್ಕ ಸೋಮು ಭೂಮಿ ಬಾನು ಎಂದಾದರೂ ಒಂದಾಗುತ್ತವೆಯೇ??ಇದು ನಿನ್ನ ಭ್ರಮೆ! ಎಂದು ಹೇಳಿದ. ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತೆ ಇದ್ದ ಚಂದ್ರನ ಅಹಂಭಾವಕ್ಕೆ ಪೆಟ್ಟು ಬಿದ್ದು ಖಂಡಿತವಾಗಿಯೂ ಜಗತ್ತಿನ ಯಾವುದೋ ಒಂದು ಅಂಚಿನಲ್ಲಿ ಭೂಮಿ ಬಾನು ಒಂದಾಗುತ್ತದೆ ಎಂದು ವಾದಿಸಿದ. ಸೋಮು ತನ್ನ ಪಟ್ಟು ಬಿಡಲಿಲ್ಲ,ಅತ್ತ ಚಂದ್ರನೂ ಒಪ್ಪಿಕೊಳ್ಳಲು ತಯಾರಿಲ್ಲ…. ವಾದ ಹೀಗೆಯೇ ಮುಂದುವರೆದು ಊಟದ ಹೊತ್ತಾಯಿತು ಎಲ್ಲಾ ಸ್ನೇಹಿತರು ಅದೆಷ್ಟೇ ಹೇಳಿದರೂ ಇವರು ತಮ್ಮ ವಾದವನ್ನು ಮುಂದುವರಿಸಿದರು. ಬೇಸತ್ತ ಎಲ್ಲರೂ ಜಾಗ ಖಾಲಿ ಮಾಡುವ ಹೊತ್ತಿಗೆ ಜಯಣ್ಣ ಅಲ್ಲಿಗೆ ಬಂದನು.
ವಾದ ವಿವಾದಗಳು ತಾರಕಕ್ಕೇರಿ ವಾತಾವರಣ ಕೊಂಚ ಬಿಗುವಾಗಿದ್ದನ್ನು ಗಮನಿಸಿದ ಜಯಣ್ಣ ಎಲ್ಲವನ್ನು ಕೇಳಿ ತಿಳಿದುಕೊಂಡನು.
ಸೋಮುವಿನ ಪರವಾಗಿ ಕೆಲವರು ಮಾತನಾಡಿದರೆ, ಮತ್ತೆ ಒಂದಿಬ್ಬರು ಚಂದ್ರ ಹೇಳಿದ್ದೆ ಸರಿ ಎಂದು ವಾದಿಸಿದರು. ಎಲ್ಲರೂ ಅಂತಿಮವಾಗಿ ಜಯಣ್ಣ ನೀನೇ ಹೇಳು ಎಂದು ಒಕ್ಕೊರಳಿನಿಂದ ಕೇಳಿದರು.
ನಸುನಕ್ಕ ಜಯಣ್ಣ ಚಂದ್ರ ಹೇಳಿದ್ದು ಸರಿಯಾಗಿದೆ ಎಂದನು. ಇದರಿಂದ ಬಹಳ ಖುಷಿಯಾದ ಚಂದ್ರ “ನೋಡಿದಿಯಾ ನಾನು ಹೇಳಿದ್ದೇ ಕರೆಕ್ಟ್…. ಯಾವುದೋ ಒಂದು ಅಂಚಿನಲ್ಲಿ ಭೂಮಿ ಮತ್ತು ಬಾನು ಒಂದಾಗುತ್ತವೆ” ಎಂದು ಪದೇ ಪದೇ ಹೇಳಿ ಸೋಮುವನ್ನು ಗೇಲಿ ಮಾಡಿ ನಕ್ಕು ಹೊರಟು ಹೋದನು.
ಈಗಾಗಲೇ ಚಂದ್ರನ ನಡತೆಯಿಂದ ತಲೆ ಬಿಸಿ ಮಾಡಿಕೊಂಡಿದ್ದ ಸೋಮು,ಚಂದ್ರು ಅತ್ತ ಹೋಗುತ್ತಲೇ, ಇದೇನು ಜಯಣ್ಣ ನೀವು ಹೀಗೆ ಹೇಳಿಬಿಟ್ರೀ… ಆಕಾಶ ಭೂಮಿ ಎಂದಾದರೂ ಒಂದಾಗೋಕೆ ಸಾಧ್ಯನಾ? ಅಂತ ಕೇಳಿದ.
ಮತ್ತದೇ ನಸುನಗೆಯನ್ನು ಸೂಸುತ್ತಾ ಜಯಣ್ಣ ಹೇಳಿದ “ಆಕಾಶ ಮತ್ತು ಭೂಮಿ ಎಂದೂ ಒಂದಾಗೋಕ್ಕೆ ಸಾಧ್ಯ ಇಲ್ಲ” ಅಂತ.
“ಮತ್ತೆ ಈ ಮಾತನ್ನ ಚಂದ್ರನ ಮುಂದೆ ಯಾಕೆ ಹೇಳಲಿಲ್ಲ ಜಯಣ್ಣ ನೀವು” ಅಂತ ತುಸು ಮುನಿಸಿನಿಂದಲೇ ಸೋಮು ಕೇಳಿದ.
ಉತ್ತರವಾಗಿ ಜಯಣ್ಣ “ತಪ್ಪು ನಿನ್ನದೇ ಸೋಮು, ನಿನ್ನಂತಹ ಒಳ್ಳೆಯ ಹುಡುಗ ಚಂದ್ರುವಿನಂತಹ ಹುಡುಗನೊಂದಿಗೆ ಸವಾಲು ಹಾಕಿದ್ದು. ನೀತಿ ನಿಜಾಯಿತಿ ಇರುವ ಮನುಷ್ಯ ಮೂರ್ಖರೊಂದಿಗೆ ವಾದ ಮಾಡಿ ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವುದಿಲ್ಲ, ಇದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎಂಬಂತಹ ಚಂದ್ರ ನಿಜವಾದ ಸತ್ಯವನ್ನು ಅರಿವು ಮಾಡಿಕೊಳ್ಳುವುದಿಲ್ಲ.. ಭೂಮಿ ಮತ್ತು ಬಾನು ಎಲ್ಲೂ ಒಂದಾಗುವುದಿಲ್ಲ ಎಂಬ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಭೂಮಿ ಬಾನುಗಳು ಒಂದಾದಂತೆ ಕಾಣುತ್ತವೆಯಷ್ಟೇ! ಆ ಭ್ರಮೆಯನ್ನೇ ವಾಸ್ತವ ಎಂದು ವಾದಿಸುವ ಚಂದ್ರನಂತಹವರು ಶತಾಯಗತಾಯ ತಾನೇ ಸರಿ ಎಂದು ಹೇಳುತ್ತಾರೆ.ಸುಳ್ಳನ್ನು ಸತ್ಯವೆಂದೇ ನಂಬಿ ಹಾಗೆಯೇ ಹೇಳಿ ವಾದಿಸಿ ಗೆಲ್ಲುತ್ತಾನೆಯೇ ಹೊರತು ನಿಜದಲ್ಲಿ ಅಲ್ಲ. ತಮ್ಮದೇ ಸರಿ ಎಂಬ ಅಹಮ್ಮಿನ ಕೋಟೆಯೊಳಗೆ ಬಂಧಿಯಾದವರು
ಅವರು. ಅಂತಹವರೊಂದಿಗೆ ವಾದ ಮಾಡುವುದರಿಂದ ನಿನ್ನ ಶಕ್ತಿ ಮತ್ತು ಸಮಯ ಎರಡೂ ವ್ಯರ್ಥವಾಗುತ್ತದೆ.
ಮೊಂಡುತನ ಮತ್ತು ಅಜ್ಞಾನ ಆರ್ಭಟ ಮಾಡುವಾಗ ಜ್ಞಾನ ಸುಮ್ಮನೆ ಇರಬೇಕು… ಅದುವೇ ನಿಜವಾದ ಜಾಣ್ಮೆ ಎಂದು ಹೇಳಿದಾಗ, ಸೋಮು ಮತ್ತು ಇತರ ಸ್ನೇಹಿತರು
ಜಯಣ್ಣನ ಮಾತಿನಲ್ಲಿನ ಸತ್ಯವನ್ನು ಅರಿತು ಹೌದು ಎನ್ನುವಂತೆ ತಲೆ ಆಡಿಸಿದರು.
ವೀಣಾ ಹೇಮಂತ್ ಗೌಡ ಪಾಟೀಲ್