“ಜನರ ನಾಯಕ ಹೀಗಿರಲಿ” ಹನಿ ಬಿಂದು ಅವರ ಲೇಖನ

ಸೋತ ಪಕ್ಷ ಮತ್ತು ಗೆದ್ದ ಪಕ್ಷಗಳ ನಾಯಕರ  ನಡುವೆ ವೈರತ್ವ ಇರುತ್ತದೆ ಎಂದು ನೀವು ನಾವು ಅಂದುಕೊಳ್ಳುವುದು ತಪ್ಪು. ಸೋಲಲಿ, ಗೆಲ್ಲಲಿ ಅದು ನಾಲ್ಕಾರು ದಿನಕ್ಕೆ ಮಾತ್ರ. ಇತರರು ದ್ವೇಷ ಸಾಧಿಸುತ್ತಾ ಇರಬಹುದು. ಆದರೆ ಪ್ರತಿ ಪಕ್ಷಗಳ ನಾಯಕರು ಅವರು ಒಂದೇ. ನಿತ್ಯ ಗೆಳೆಯರೇ. ಆಟದಲ್ಲಿ ನೋಡಿ. ಒಂದು ತಂಡ ಮತ್ತೊಂದು ತಂಡದ ಜೊತೆ ಆಟ ಆಡುತ್ತಾರೆ. ಅವರೆಲ್ಲ ಗೆಳೆಯರೇ. ಆದರೆ ಆಡುವಾಗ ವೈರಿಗಳ ಹಾಗೆ ತಮ್ಮ ತಂಡ ಗೆಲ್ಲಲು ಹೋರಾಡುತ್ತಾರೆ. ಮತ್ತೆ ಗೆದ್ದ ತಂಡ ಬೀಗುತ್ತದೆ, ಸೋತ ತಂಡ ಬಾಗುತ್ತದೆ. ಮರುದಿನ ಅವರು ಮತ್ತೆ ಒಂದೇ. ಮತ್ತೆ ಒಟ್ಟಾಗಿ ಆಟ ಪ್ರಾರಂಭ ಆಗುತ್ತದೆ. ಇದೇ ಆಟದ ಗಮ್ಮತ್ತು. ನಮ್ಮ ನಾಯಕರಿಗೆ ಮಾತಾದಾನವೂ ಒಂದು ಆಟವೇ. ಅಲ್ಲೂ ಸೋಲು ಗೆಲುವು ನಿಶ್ಚಿತ. ಇಂದು ಗೆದ್ದವ ನಾಳೆ ಸೋಲುವ. ಅದಕ್ಕಾಗಿ ಏನೇನೋ ತಂತ್ರಗಳು, ಕಸರತ್ತುಗಳು ನಡೆಯುತ್ತಲೆ ಇರುತ್ತವೆ. ಇಲ್ಲಿ ಗೆದ್ದವರಿಗೆ ಸೀಟಿನ ಆಸೆ, ರುಚಿ ಇದೆಯಲ್ಲ, ನಾಯಕನ ಪಟ್ಟ, ಆಳುವ ಹೊಣೆಗಾರಿಕೆ, ಜೊತೆಗೆ ತನ್ನದೇ ದರ್ಬಾರು.. ಒಟ್ಟಿನಲ್ಲಿ ಬದುಕಿನ ಆಟದಲ್ಲಿ ಇದೊಂದು ದೊಡ್ಡಾಟ. ಆದರೆ ಸಾಮಾನ್ಯ ಜನರು ಗೆದ್ದ ಎತ್ತಿನ ಬಾಲ ಹಿಡಿದಂತೆ ಸಾಗುತ್ತಿರುತ್ತಾರೆ. ಕೆಲವರು ಅಮಾಯಕರಾದರೆ ಇನ್ನು ಕೆಲವರು ಗಾಳಿ ಬಂದ ಕಡೆ ಛತ್ರಿ ಹಿಡಿಯುವವರು. ನಾಯಕರ ಯಶಸ್ಸಿಗೆ ಸಹಕಾರ ನೀಡಲು ಹೋಗಿ ತಮ್ಮ ಬದುಕಿನ ಬಗ್ಗೆ ಯೋಚನೆ ಮಾಡದೆ ಇರುವವರು. ಊರಿಗೆ ಉಪಕಾರಿ, ಮನೆಗೆ ಮಾರಿ ಅಂತಾರಲ್ಲ ಹಾಗೆ.
ಇನ್ನು ಕೆಲವರು ಬುದ್ಧಿವಂತರು, ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂತ ದುಡ್ಡು ಮಾಡಿ ಬದುಕನ್ನು ಎಂಜಾಯ್ ಮಾಡುವವರು, ಕೆಲವರಿಗೆ ರಾಜಕೀಯ ಪಕ್ಷಗಳ ನಾಯಕರ ಹಿಂದೆ ಹಿಂದೆ ಹೋಗುವುದೇ ಗೀಳು, ಹೆಸರಿಗಾಗಿ. ಇನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ಮತ್ತೆ ಕೆಲವರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇಂದು ಇವನು, ನಾಳೆ ನಾನು, ಇವನ ಬಳಿ ರಾಜಕೀಯದ ತಂತ್ರಗಳನ್ನು ನೋಡಿ, ಕೇಳಿ,ಅರಿತು ಕಲಿತು ಪಕ್ವಗೊಳ್ಳುತ್ತೇನೆ ಎಂಬ ರಣತಂತ್ರ ಅವರದ್ದು. ಮತ್ತೆ ಕೆಲವರು ತಮ್ಮ ಕುಟುಂಬ ಸಾಕಲು ರಾಜಕೀಯ ನಾಯಕರನ್ನೇ ಅವಲಂಬಿಸಿ ಅವರಿಂದ ಸಿಗುವ ಹಣಕ್ಕೆ ಕಾಯುತ್ತಾ, ಬೇರೆ ಕೆಲಸ ಇಲ್ಲದೆ ಅದರಲ್ಲೇ ಬದುಕುವವರು, ಸಂಸಾರ ನಿಭಾಯಿಸುವವರು.
   ಮತ್ತೆ ಕೆಲವರು ಕಾರ್ಯಕರ್ತರು. ನಾಯಕ ಯಾರೇ ಬಂದರೂ ಯಮ ಪಕ್ಷ ಬಿಡದವರು. ಪಕ್ಷಕ್ಕಾಗಿಯೇ ಬದುಕಿ ಬಾಳುವವರು. ಇವರನ್ನು ದೂರ ತಳ್ಳಲು ಆಗದು. ಪಕ್ಷಕ್ಕೆ ತಮ್ಮ ಬದುಕನ್ನು ಮುಡಿಪಾಗಿ ಇಟ್ಟ ಇವರು ನಾಯಕರಿಗಿಂತಲೂ ಹಿರಿಯರು, ಅನುಭವಸ್ಥರು. ಇವರನ್ನು ಪಕ್ಷದಿಂದ ಹೊರ ತರಲು ಸಾಧ್ಯವೇ ಇಲ್ಲ. ಇಂತಹ ಹಲವಾರು ಜನರ ಗುಂಪೇ ಇದೆ. ಒಂದು ಪಕ್ಷಕ್ಕೆ ಮಾತ್ರ ಅಲ್ಲ, ಎಲ್ಲಾ ಪಕ್ಷಗಳಿಗೂ. ಇವರು ಇಲ್ಲದೆ ಹೋದರೆ ಪಕ್ಷ ಕಟ್ಟಲು ಸಾಧ್ಯವೇ ಇಲ್ಲ. ಪಕ್ಷ ಕಟ್ಟುವಲ್ಲಿ, ಒಂದು ಗೂಡಿಸುವಲ್ಲಿ, ಯಾವುದೇ ಪಕ್ಷವನ್ನು ಬಲಗೊಳಿಸುವಲ್ಲಿ, ನಾಯಕನಿಗೆ ಮೋಸ ಮಾಡದೆ ಅವನೊಡನೆ, ಅವನ ಬೆಂಗಾವಲಾಗಿ ಇದ್ದುಕೊಂಡು ಅವನಿಗೆ ಸಹಕರಿಸುವಲ್ಲಿ, ಅವನ ಗೆಲುವಲ್ಲಿ ಖುಷಿ ಕಾಣುವಲ್ಲಿ ಇವರು ಮೊದಲಿಗರು. ಯಾವುದೇ ನಾಯಕ ಗೆದ್ದರೆ ಆ ಗೆಲುವನ್ನು ಆಚರಿಸುವವರು, ಸಂಭ್ರಮಿಸುವವರು ಇವರ ಗುಂಪೇ. ಹಾಡಿ, ಕುಣಿದು, ನಲಿದು ತಮ್ಮ ಪ್ರಯತ್ನ ಸಫಲತೆ ಪಡೆಯಿತು ಎಂಬ ಸಂತಸದಲ್ಲಿ ತಾವು ಬೀಗುವ ಕಾರ್ಯಕರ್ತರು ಪ್ರತಿ ನಾಯಕನ ಬೆನ್ನೆಲುಬು ಮತ್ತು ಬೆಂಗಾವಲು. ಗೆಲುವಿಗೆ ಹಲವಾರು  ಕಾರ್ಯ ತಂತ್ರಗಳನ್ನು ರೂಪಿಸಿ ಅದನ್ನು ಜಾರಿಗೆ ತರುವ ಜನರೂ ಕಾರ್ಯಕರ್ತರೇ. ಈ ಕಾರ್ಯಕರ್ತರು ಪ್ರತಿ ಪಕ್ಷಕ್ಕೆ ದೇವರಿಗೆ ಭಕ್ತರು ಇದ್ದ ಹಾಗೆ. ಇವರು ಎಂದಿಗೂ ಯಾರಿಗೂ ಮೋಸ ಮಾಡುವವರಲ್ಲ. ಇವರು ಒಟ್ಟಾಗಿ ಸೇರಿ ಮೋಸ ಮಾಡಿದರೆ ಆಗ ನಾಯಕನಿಗೆ ಉಳಿಗಾಲವೂ ಇಲ್ಲ ಅಲ್ಲವೇ?
   ನಾಯಕನಾಗುವುದು ಹೇಗೆ ಎಂಬ ಹಲವಾರು ಪುಸ್ತಕಗಳು ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಇವೆ. ಅಲ್ಲಿ ನಾಯಕನಿಗೆ ಬೇಕಾದ ಗುಣಗಳ ಬಗ್ಗೆ ತಿಳಿಸಲಾಗಿದೆ. ನಮ್ಮ ನಾಯಕರಿಗೆ ಇಂತಹ ಗುಣಗಳು ಇವೆಯೇ ಎಂದು ನಾವು ಅವಲೋಕಿಸಿ ಬೇಕಾಗಿದೆ. ಸಾಮಾಜಿಕ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ, ನಿಜವಾಗಿಯೂ ಸಮಾಜದ ಬಗ್ಗೆ ಕಾಳಜಿ ಇರುವವ, ಸಮಾಜದ ಉದ್ಧಾರಕ್ಕಾಗಿ ದುಡಿಯುವ, ಸಮಾಜದ ಕಟ್ಟ ಕಡೆಯ ಮನುಜರನ್ನು ಕೂಡ ಬಲ್ಲವ, ಎಲ್ಲರ ಕಷ್ಟ ತಿಳಿದವ, ಬಡವರ ಉದ್ಧಾರ ಮಾಡುವ ಮನಸ್ಸಿದ್ದವ, ತಾನು ಅಧಿಕಾರದಲ್ಲಿ ಇಲ್ಲದ ಸಮಯದಲ್ಲೂ ಬಡವರಿಗೆ ಏನಾದರೂ ಸಿಗಬೇಕು, ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವವರು ಆಗಬೇಕು, ದುರ್ಬಲ ಜನರಿಗೆ, ವಯಸ್ಸಿನಲ್ಲಿ ಹಿರಿಯರಾದ ಕೆಳ ಸ್ಥಿತಿಯಲ್ಲಿ ಇರುವ ಜನರಿಗೆ ಇತರ ಸಮಯದಲ್ಲೂ ಸಹಾಯ ಸಿಕ್ಕಿ ಅವರ ಮುಂದಿನ ಬದುಕು ಉತ್ತಮವಾಗಿ ನಡೆಯಲು ಭದ್ರ ಬುನಾದಿ ಹಾಕು ಉತ್ತಮ ನಾಯಕನಾಗಬಲ್ಲ.
   ರಾಜ್ಯ, ರಾಷ್ಟ್ರದ ನಾಯಕ ಎಂದಾದರೆ ಎಲ್ಲರನ್ನೂ ಒಗ್ಗೂಡಿಸಿ, ಎಲ್ಲರ ಮನ ಅರಿತು, ಯಾರಿಗೂ ಅವಹೇಳನ ಮಾಡದೆ, ಯುವಕ, ಯುವತಿಯರಿಗೆ ಅವರ ಓದಿಗೆ ತಕ್ಕನಾದ ಉದ್ಯೋಗ ಕೊಟ್ಟು, ಅಥವಾ ಅವರು ಇರುವ ಜಾಗಗಳಲ್ಲಿಯೇ ತನ್ನ ಸ್ವಂತ ವ್ಯವಹಾರವನ್ನಾದರೂ ಪ್ರಾರಂಭಿಸಿ, ಅದರಲ್ಲಿ ಅವರಿಗೆ ದುಡಿಯಲು ಅವಕಾಶ ಕೊಟ್ಟು,  ಅವರ ಬದುಕಿಗೆ ಉರುಗೋಲಾಗಿ ನಿಲ್ಲಬೇಕು. ಜೀವನ ಪರ್ಯಂತ ಅವರ ದುಡಿಮೆ ಅಲ್ಲಿ ಆಗಬೇಕು. ಹೀಗೆ ಕೆಲಸ ಕೊಟ್ಟ ಬಾಸ್ ಅನ್ನು ಯಾರೂ ಮರೆಯಲಾರರು. ಕೈಲಾಗದ, ಗಂಡ ಸತ್ತು, ಬಿಟ್ಟು ಹೋದ ವಿಧವೆಯರಿಗೆ, ಒಬ್ಬನೇ ಬದುಕುತ್ತಿರುವ ಹಿರಿಯ ಜೀವಿಗಳಿಗೆ, ತಂದೆ ತಾಯಿ ಇಲ್ಲದ ಓದುತ್ತಿರುವ ಅನಾಥ ಮಕ್ಕಳಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರತಿ ತಿಂಗಳು ಹಣ ಸಿಗುವ ಹಾಗೆ ಆಗಬೇಕು. ದಿಕ್ಕಿಲ್ಲದ ಜನರಿಗೆ ದೇಶ,ರಾಜ್ಯಗಳ ಸರಕಾರಗಳೇ ದಿಕ್ಕಾಗಬೇಕು. ಇದಕ್ಕೆ ನಾಯಕರ ಸಹಕಾರ ಬೇಕು. ಇಂತಹ ಕಾರ್ಯ ಮಾಡಿದರೆ ಜನರೇ ಅವರಿಗೆ ನಾಯಕ ಪಟ್ಟ ಕಟ್ಟಿ ಬಿಡುತ್ತಾರೆ.
   ನಾಯಕ ಎಲ್ಲಾ ಸಮಯದಲ್ಲೂ ಎಲ್ಲರನ್ನೂ ಓಲೈಸಿ ತನ್ನತ್ತ ಸೆಳೆಯಲು ಸಾಧ್ಯ ಇಲ್ಲ, ಕಾರಣ ಮನಸ್ಸುಗಳು, ಆಲೋಚನೆಗಳು, ಆಸೆಗಳು, ಗುರಿಗಳು ಬೇರೆ ಬೇರೆ. ಎಲ್ಲಾರೂ ನಮ್ಮ ಗೆಳೆಯರೂ ಆಗಲು ಸಾಧ್ಯ ಇಲ್ಲ ಅಲ್ಲವೇ? ಒಂದೇ ಮನಸ್ಥಿತಿಯ , ಒಂದೇ ರೀತಿಯಲ್ಲಿ ಆಲೋಚನೆ ಮಾಡುವವರು ಗೆಳೆತನ ಮುಂದುವರೆಸುತ್ತಾರೆ. ಹಾಗೆಯೇ ನಾಯಕನ ಸಂಗಡಿಗರೂ ಕೂಡ. ಅಷ್ಟೊಂದು ದೇಶ ಭಕ್ತಿ ಉಕ್ಕಿ ಹರಿದು ಭಾರತ ಸ್ವಾತಂತ್ರ್ಯ ಹೋರಾಟ ಆಗುವ ಸಮಯದಲ್ಲೂ ಕೂಡಾ ಮಂದಗಾಮಿಗಳು ಮತ್ತು ಉಗ್ರಗಾಮಿಗಳು ಎಂಬ ಎರಡು ಗುಂಪಿನಲ್ಲಿ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಅಲ್ಲವೇ? ಅವೆರಡೂ ಗುಂಪಿನ ನಾಯಕರು ಬೇರೆಯೇ. ಆದರೆ ಗುರಿ ಒಂದೇ. ಹೀಗೆ ಮನಸ್ಸುಗಳ ಆಲೋಚನೆ ಬದಲಾಗುತ್ತದೆ. ಆಗ ಕಾರ್ಯ ಪ್ರವೃತ್ತಿ ಕೂಡಾ ಭಿನ್ನವಾಗಿ ಗೋಚರಿಸುತ್ತದೆ. ಆದರೆ ಟಾರ್ಗೆಟ್ ಒಂದೇ. ಇದು ಕೂಡ ನಾಯಕನ ದರ್ಬಾರ್.
   ಇಂದಿನ ಹೆಚ್ಚಿನ ನಾಯಕರಿಗೆ ನಾಯಕತ್ವದ ಗುಣಗಳ ಅವಶ್ಯಕತೆ ಇದೆ. ಹಣವಿದ್ದ ಮಾತ್ರಕ್ಕೆ ನಾಯಕತ್ವ ಬರಲಾರದು. ನಾಯಕತ್ವದ ಗುಣ ಇದ್ದರೆ ಪೆನ್ ಡ್ರೈವ್ ಕೇಸುಗಳಂತಹ ಘಟನೆ ನಡೆಯಲಾರದು. ಅತ್ಯಾಚಾರ, ಕೊಲೆ, ದಂಗೆ ಇವುಗಳನ್ನು ಒಂದೇ ಬಾರಿಗೆ ಮುಂದೆ ಎಲ್ಲರೂ ಆ ಕೆಲಸ ಮಾಡಲು ಹೆದರುವ ಹಾಗೆ ನಿಯಂತ್ರಣ ಮಾಡಬಹುದು. ಕಾನೂನು ಕಠಿಣವಾಗಿ ಅನುಪಾಲನೆ ಆಗಿ ಶಿಸ್ತುಬದ್ಧವಾಗಿ ನಡೆದರೆ ಜನ ಯಾಕೆ ಹೆದರುವುದಿಲ್ಲ? ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ನಾಯಕರು , ಸರಕಾರ ಹಿಂದೆ ಬಿದ್ದ ಕಾರಣ ಆದ ತಪ್ಪುಗಳೇ ಸಮಾಜದಲ್ಲಿ ಮತ್ತೆ ಮತ್ತೆ ಆಗುತ್ತಿವೆ ಅಲ್ಲವೇ?
  ಎಲ್ಲಾ ಜಾತಿ , ಜನಾಂಗ, ಮತ, ಧರ್ಮ ಅವರವರೇ ಮಾಡಿಕೊಂಡದ್ದು, ಅದು ಅವರವರ ಆಚರಣೆ, ನಂಬಿಕೆಗೆ ಬಿಟ್ಟಿರುವುದು. ಅದನ್ನು ಪಾಲನೆ ಮಾಡುವವರು ಮಾಡಿಕೊಳ್ಳಲಿ, ಇತರರನ್ನು ಅವರಿಗೆ ಇಷ್ಟ ಬಂದ ಹಾಗೆ ಬದುಕಲು ಎಲ್ಲರೂ ಅವಕಾಶ ಕೊಡಬೇಕು. ಅವರವರ ಜಾತಿ, ಧರ್ಮ, ಮತಗಳ, ನಂಬಿಕೆಗಳ ಪೂಜೆ, ರೀತಿ, ನೀತಿ ರಿವಾಜು ಅವರವರು ಆಚರಿಸಿಕೊಳ್ಳಲು ಅವಕಾಶ ಇದೆ ಅಲ್ಲವೇ? ಮತ್ತೆ ಉಳಿದವರು ಅಲ್ಲಿ ತಲೆ ತೂರಿಸದೆ ತಮ್ಮ ಬಗ್ಗೆ ತಾವು ಆಲೋಚನೆ ಮಾಡಬೇಕು. ನಾವು ಪರರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಹೆಚ್ಚಾಗಿದೆ. ಅದರ ಬದಲು ನನ್ನ ಬಗ್ಗೆ ಯೋಚನೆ ಮಾಡಬೇಕು. ಮತ ಕೇಳುವಾಗ ಬೇರೆ ಪಕ್ಷದವರು ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಅವರನ್ನು ದೂರುವ ಬದಲು, ನಮ್ಮ ಪಕ್ಷದಲ್ಲಿ ನಾವು ಏನೇನು ಜನತೆಗೆ ಒಳ್ಳೆಯದನ್ನು, ಸಹಾಯವನ್ನು ಮಾಡಿದ್ದೇವೆ, ನಮ್ಮ ಯಾವ ಘನ ಕಾರ್ಯಕ್ಕಾಗಿ ನಾವು ನಿಮ್ಮಲ್ಲಿ ಮತ ಕೇಳಲು ಬಂದಿದ್ದೇವೆ ಎಂಬುದನ್ನು ಒತ್ತಿ, ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯ ಇರಬೇಕು. ನಾನು ನಾಯಕನಾಗಿ  ಸಮಾಜಕ್ಕೆ ನನ್ನ ಆಡಳಿತದ ಸಮಯದಲ್ಲಿ ಇಷ್ಟು ಒಳ್ಳೆಯ ಕೆಲಸ ಮಾಡಿರುವೆ, ಇನ್ನು ಮುಂದೆಯೂ ಮಾಡುವೆ ಅದಕ್ಕಾಗಿ ನನ್ನನ್ನು ಬೆಂಬಲಿಸಿ ಎಂದು ಕೇಳುವ ಹಾಗೆ ಕೆಲಸ ಮಾಡಿದ್ದರೆ ಯಾವ ಜನರೂ ಕೂಡಾ ಮತ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ, ಅವರಿಗೆ ಆಗ ಯಾವ ಆಸೆ ಆಮಿಷಗಳೂ ಬೇಡ. ಪ್ರಾಕ್ಟಿಕಲ್ ಕೆಲಸ ಕಣ್ಣ ಮುಂದೆ ಇದ್ದರೆ ಆಯಿತು.
ತನ್ನ ಕಾರ್ಯವನ್ನು ಸಮರ್ಥಿಸಿಕೊಂಡು, ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮುಂದಿನ ಮತವನ್ನು  ಕೇಳುವ ನಾಯಕರು ನಮ್ಮ ದೇಶ, ರಾಜ್ಯಕ್ಕೆ ಇನ್ನು ಮುಂದೆಯಾದರೂ ಒದಗಿ ಬರಲಿ, ಬೇರೆ ಪಕ್ಷದವರನ್ನು ದೂರದೆ, ತನ್ನ ಸಾಧನೆಯಲ್ಲೇ ಜನಮನ ಗೆಲ್ಲುವಂತೆ ಆಗಲಿ, ಆಮಿಷಗಳು, ಉಚಿತ ಭರವಸೆಗಳು ಕಡಿಮೆಯಾಗಿ ಅರ್ಹರಿಗೆ ಮಾತ್ರ ಉಚಿತಗಳು ಸಿಗುವಂತೆ ಆಗಲಿ, ದುಡಿಯಲು ಶಕ್ತಿ ಇರುವ ಮನಗಳಿಗೆ ಕೆಲಸ ಸಿಕ್ಕಿ ಜೀವನ ಪೂರ್ತಿ ದುಡಿದು ಗಳಿಸುವ ಅವಕಾಶ ಸಿಗಲಿ ಅಲ್ಲವೇ? ನೀವೇನಂತೀರಿ?
ಹನಿಬಿಂದು


Leave a Reply

Back To Top