ಲಹರಿ ಸಂಗಾತಿ
ಪ್ರೇಮಾ ಟಿಎಂಆರ್
“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ”
ಎಷ್ಟೊಂದು ಸೆಕೆ ತುಟುತುಟು ಇಳಿವ ಬೆವರಲ್ಲಿ ಬಸವಳಿದ ಮೈ, ಮನಸ್ಸೂ ಖಾಲಿ ಗೋಡೆಗಳೊಳಗಿನ ಉಗಿ ತಾಳಲಾಗದೇ ಬೆಳಗಿನ ನಡಿಗೆಯನ್ನ ಮುಸ್ಸಂಜೆಗೂ ಜೋಡಿಸಿಕೊಂಡೆ. ಉಹುಂ ಎಷ್ಟುದೂರ ಸಾಗಿದರೂ ತಿರಗಿ ಬರಲೇಬೇಕು. ಕಡಲದಂಡೆಯಲ್ಲೇ ಹಾಯಾಗಿ ಮೈಚಾಚಿ ಮಲಗಿ ಇರುಳು ಕಳೆವಂತಿದ್ದರೆ ಅಂದುಕೊಂಡಿದ್ದು ಅದೆಷ್ಟು ಬಾರಿಯೋ? ಶಾಲೆಗೆ ರಜ ಬಂದರೂ ನಡು ಹಗಲು ಶಾಲೆ ಏರಿನಲ್ಲಿ ನಿಲ್ಲುವ ಆಯ್ಸಕೇಂಡಿ ಮಾರುವ ಅಪ್ಪನದೇ ಏಜಿನ ದತ್ತ ಕಣ್ಮುಂದೆ ಬಂದು ಕೂರುತ್ತಾನೆ. ಮೇಲಿನೂರಿನಿಂದ ಬರುವ ಅಪ್ಪ ಕೈಹಿಡಿದು ನಡೆಸಿಕೊಂಡು ಹೋಗಿ ಎರಡುಕೈಲಿ ಎರಡು ಕೇಂಡಿ ಕೊಡಿಸುತ್ತಿದ್ದ ನೆನಪು. ಒಮ್ಮೊಮ್ಮೆ ….. ಒಮ್ಮೊಮ್ಮೆಯೇನು ಹೆಚ್ಚಿನದಿನಗಳಲ್ಲಿ ಆಸೆಗಣ್ಣುಗಳಲ್ಲಿ ದತ್ತನ ಐಸುಪೆಟ್ಟಿಗೆ ತಿರುತಿರುಗಿ ನೋಡುತ್ತ ಜೋಲುಮೋರೆ ಹಾಕಿ ಬೆನ್ನಾಗಿ ನಡೆಯುತ್ತಿದ್ದೆವಲ್ಲ, ಅಪ್ಪ ಊರಲ್ಲಿರದ ದಿನಗಳಲ್ಲಿ . ಕಿಸೆಯಲ್ಲಿ ದುಡ್ಡಿದ್ದಾಗ ಬಡ್ಡಿಸಹಿತ ತೀರಿಸುವ ಆಗಸ ಅಪ್ಪ. ಆಗ ನಮಗೆ ಒಂದು ದೂದ್ ಕೇಂಡಿ ಒಂದು ಸಾದಾ ಕೇಂಡಿಯ ಮಜಾ. ಹುಲ್ಲು ಭತ್ತ ಮಾರಾಟವಾದ ಹೊತ್ತು ಒಂಚೂರು ಉಬ್ಬಿಕೊಳ್ಳುವ ಅಪ್ಪನ ಕಿಸೆ. ಇದ್ದಾಗ ಇನಿತು ವಂಚನೆ ಮಾಡದೇ ಬೇಕಾದ್ದು ತಿನ್ನಿಸುವ ಅಪ್ಪ. ಕರಿಇಷಾಡು ತಂದು ತಾನೇ ಕೊರೆದು ಲೆಕ್ಕಮಾಡಿ ಒಂದು ಹೋಳೂ ಹೆಚ್ಚು ಕಡಿಮೆಯಾಗದ ಹಾಗೆ ಮೂವರಿಗೂ ಹಂಚುವ ಅಪ್ಪ ತಾನು ರುಚಿನೋಡಲೆಂದು ಇಟ್ಟುಕೊಂಡ ಒಂದೇ ಒಂದು ಹೋಳು ತಿಂದಂತೆ ಮಾಡಿ ನನ್ನ ತಟ್ಟೆಗೆ ರವಾನಿಸುತ್ತಿದ್ದ. ಕಲ್ಲಂಗಡಿ ಹಣ್ಣು ಹೊತ್ತುಬಂದು ನೆಲದಲ್ಲಿ ಜಾಡಿಸಿಕೂತು ಮುಕ್ಕುವ ಮಕ್ಕಳನ್ನು ಕಣ್ತುಂಬಿಕೊಳ್ಳುವ ಅಪ್ಪ, ಕಣ್ಣ ಕೊನೆಯಲ್ಲಿ ನಿಂತು ಜೀಕುತ್ತದೆ ದೊಡ್ಡದೊಂದು ಬಿಂದು. ಉರುಳಕೂಡದೆಂದು ಹರಸಾಹಸಮಾಡುತ್ತೇನೆ. ಆದರೂ ಒಮ್ಮೊಮ್ಮೆ ಬೆಲೆನ್ಸು ತಪ್ಪುತ್ತದೆ. “ಅಪ್ಪಂದಿರ ದಿನಾಚರಣೆಯೂ ಹತ್ತಿರವಿಲ್ಲ ಈಗ್ಯಾಕೆ ಅಪ್ಪನ ಪುರಾಣ ಅಂತೀರಾ? ” ಅಪ್ಪನ ಅಮ್ಮನ ನೆನೆಯೋಕೆ ಅವರ ಬಗ್ಗೆ ಬರೆಯೋಕೆ ವಾರ ತಿಂಗಳು ದಿನಾಂಕಗಳ ಹಂಗು ಹರಿದುಕೊಂಡವಳು ನಾನು . ಅವರದೇ ದೇಹ ಅವರೇ ಬಸಿದಿಟ್ಟ ಜೀವ ಇರೊತನಕ ಬದುಕಲ್ಲಿ ಬರುವ ಒಟ್ಟೂ ದಿನಗಳೂ ಅವರದೇ.
ರಸ್ತೆಮೇಲೆ ತಳ್ಳೋಗಾಡಿ ನೂಕಿಕೊಂಡು ಬಾಳೆಹಣ್ಣು ಮಾರೋ ಅಜ್ಜ, ಉರಿಬಿಸಿಲಲ್ಲಿ ದುಸುಬುಸು ಅಂತ ಅಲ್ಲಲ್ಲಿ ನಿಲ್ಲುತ್ತ ಹೆಗಲ ಮೇಲಿನ ಜಿಗುಟುಗಟ್ಟಿದ ಟವಲ್ಲಿನಿಂದ ಮೈಬೆವರು ಒರೆಸುತ್ತ ನಿಂತುನಿಂತು ಸಾಗುತ್ತಾನೆ. ಮನೆಮುಂದಿನ ಮಾವಿನ ಮರದ ನೆರಳಲ್ಲಿ ನಿಂತು ದಣಿವಾರಿಸಿಕೊಳ್ಳುತ್ತಿದ್ದವ ಅಡಿಗೆಮನೆ ಕಿಡಕಿಯಲ್ಲಿ ಮುಖತೂರಿ ಇಣುಕಿದ ನನ್ನ ಕಂಡು ಕೂಗು ಹಾಕಿದ “ಅವ್ವ ಬಾಳೆಹಣ್ಣು ಬೇಕಾ? ” “ನಿಲ್ಲಪ್ಪಾ ಬಂದೆ” ಮಾರುತ್ತರಿಸಿ ರಸ್ತೆಗೋಡಿದೆ. ಗಾಡಿತುಂಬಾ ಸಕ್ಕರೆ ಮಿಟಗದ ಹಣ್ಣು . “ಓ ಬೇಡಪ್ಪಾ , ನನಗೆ ಮಿಟ್ಗ ಸೇರಲ್ಲ, ಕರಿಬಾಳೆ ಬೇಕಿತ್ತು” ಎಂದೆ. ಎದೆಯಲ್ಲಿ ನೆನಪುಗಳ ತಾಕಲಾಟಕ್ಕೆ ಮುಖ ಸೊಪ್ಪಾಯಿತು. ಸರಸರ ಹಣ್ಷುಗಳ ಸರಿಸಾಡಿ ಒಂದು ಚಿಪ್ಪು ಕರಿಬಾಳೆ ಹುಡುಕಿದ.” ಅರೇ ಅದೂ ಇದ್ಯಾ?” ಕಣ್ಣರಳಿಸಿದೆ. “ಇಲ್ಲವ್ವ ಇದು ನನ್ನ ಮನೆ ಖರ್ಚಿಗೆ ಅಂತ ಇಟ್ಕೊಂಡಿದ್ದೆ. ಸಿರ್ಸಿಯಿಂದ ಬಂದಿದ್ದು , ಕರಿಬಾಳೆ ಬಾಳತಂಪು, ಬೇಸ್ಗೇಲಿ ಎಲ್ಲಕ್ಕಿಂತ ಒಳ್ಳೆಯದು” ಅಂದ . “ಗೊತ್ತು ,ನಮ್ಮಮ್ಮನ ಊರಲ್ಲಿ ಬೆಳಿತಾರೆ. ಅಪ್ಪ ಒಂದ್ರಾಶಿ ಹೊತ್ಕೊಂಡು ಬರ್ತಿದ್ದರು. ಈಗವ್ರಿಲ್ಲ” ಕಣ್ಣಂಚಲ್ಲಿ ದೊಡ್ಡ ಹನಿ ಜೋಕಾಲಿಯಾಡಿತು. ಕೆನ್ನೆಗಿಳಿಯದಂತೆ ಹಿಡಿದಿಡುವಲ್ಲಿ ಹೆಣಗಿ ಯಶಸ್ವಿಯಾದೆ. “ಇರ್ಲಿ ನೀವು ತಕ್ಕೊಳ್ಳಿ “ತಕ್ಕಡಿಗಿಟ್ಟ. ಕೇಜಿಯ ಮೇಲೆ ಬರೋಬ್ಬರಿ ನಾಲ್ಕು ಹಣ್ಣು ಹೆಚ್ಚಿಗೆ ಇತ್ತು . ಎಲ್ಲ ಸೇರಿಸಿ ಪೇಪರಲ್ಲಿ ಸುತ್ತಿ ಕೈಗಿಟ್ಟ. ದುಡ್ಡು ಒಂದೇ ಕೇಜಿಗೆ ಇಟ್ಕೊಂಡು ಚಿಲ್ಲರೆ ಕೊಟ್ಟ. “ಅಯ್ಯೋ ಜಾಸ್ತಿ ಇತ್ತಲ್ಲ…..” ರಾಗ ಎಳೆದೆ. “ಇರ್ಲಿ ನಿಮ್ಮ ವಯಸ್ಸಿನ ಮಗ್ಳಿದ್ದಾಳೆ ನನ್ಗೆ” ತೀರ ಮಾಮೂಲೆಂಬತೆ ನುಡಿದ. ಅಪ್ಪನೊಡಲ ವಾತ್ಸಲ್ಯದ ಹೊಕ್ಕುಳಬಳ್ಳಿ ಆ ಹಣ್ಣ ಮಾರುವವನ ಕಣ್ಗಳಲ್ಲಿ ತೊಟ್ಡಿಲು ಬಳ್ಳಿಯಾಗಿ ತೂಗುತ್ತಿತ್ತು. ಬೆರಳಿಂದ ಬೆವರಿದ ಹಣೆ ಹಿಂಡಿದ ಥೇಟ್ ಅಪ್ಪನಂತೆ. “ತುಂಬ ಬಿಸ್ಲು ಬನ್ನಿ ಒಳ್ಗೆ ಪಾನಕ ಕೊಡ್ತೇನೆ ” ಅಂದೆ . “ಅಯ್ಯೋ ನಾನು ಅದ್ಕಂತ ಹೆಚ್ಚಿಗೆ ಕೊಟ್ಟಿದ್ದಲ್ಲ” ಮುಜುಗರಗೊಂಡ. ನಾನೂ ಅದಕ್ಕಂತ (ಆ ಋಣ ತೀರಿಸಲು )ಕರೆದದ್ದಲ್ಲ. ಗಾಡಿ ತಳ್ಳಿಕೊಂಡು ಹೊರಟ. ನಾನು ಅಲ್ಲೇ ನಿಂತೆ ಸರಿದುಹೋದ ಅವನ ಬೆನ್ನು ನೋಡುತ್ತ….
ಅಪ್ಪನೂ ಹೀಗೇ…..ಮಕ್ಕಳು ಅವರವರ ಅನ್ನ ಕಂಡುಕೊಂಡಮೇಲೆ ಮೇಲಿನೂರಿನ ರೈತಾಬಿ ಕಸುಬಿಗೆ ವಿದಾಯ ಹೇಳಿ ಕೆಳಗಿಳಿದು ಬಂದಿದ್ದ. ಹಾಗೆಂದು ಕಾಲಿ ಕುಳ್ಳುವವನಲ್ಲ ಮನೆಮೇಲೊಂದು ಪುಟ್ಟ ಕಿರಾಣಿ ಅಂಗಡಿ. ತೋಟಕ್ಕೆ ನೀರು ಗೊಬ್ಬರ ಮಣ್ಣು ಎಂದು ಕೆಲಸ ಕಚ್ಚಿಕೊಂಡೇ ಬದುಕಿದ್ದು. ಮೆಟ್ಟಿಲು ಕಡಿದಿದ್ದರೆ ಬರೋಬ್ಬರಿ ನೂರಾಗುವಂತಿದ್ದ ತೋಟಕ್ಕೂ ಅಂಗಡಿಗೂ ದಿನಕ್ಕೆ ಹತ್ತುಸಾರೆಯಾದರೂ ಎಡತಾಕುತ್ತಿದ್ದ . ಸಣ್ಣಪುಟ್ಟ ಸಾಮಾನಿಗೆ ಚಿಕ್ಕ ಮಕ್ಕಳು ಬಂದರೆ ಕೈಮೇಲೊಂದೆರಡು ಚಾಕಲೇಟು ಪೆಪ್ಪರಮೆಂಟು ಪುಕ್ಷಟೆ ಇಟ್ಟು ಕಳಿಸಲು ಮರೆಯಲಿಕ್ಕಿಲ್ಲ. ಹೆಂಗಸರು ಬಂದರೆ ಒಂದ್ಸಾರೆ ನನ್ನ ನೆನಪಿಸಿಕೊಂಡು,” ಹಿಡಿ ಮಗಾ ನಿಮ್ಮ ಪ್ರೇಮಕ್ಕಂಗೆ ಬಾಳಪ್ರೀತಿ ಹುರಿದ ಶೇಂಗಾ ಕಡ್ಲೆ ಅಂದ್ರೆ ” ಎಂದು ಒಂದು ಮುಷ್ಠಿ ಬಾಚಿ ಬೊಗಸೆಗೆ ಸುರಿವ ಅಪ್ಪನದು ಮಹಾನ್ ಸಾಧನೆಯೇನೂ ಅಲ್ಲವಾದರೂ ಅದಕ್ಕೂ ಮೀರಿದ ಅಂತಃಕ್ಕರಣ. ನಿತ್ಯ ಸರಿರಾತ್ರಿ ಹನ್ನೊಂದಾದರೂ ಒಮ್ಮೆ ಕರೆಮಾಡದೇ ನಿದ್ದೆಗಿಳಿಯದ ಮಗ “ಇವತ್ತೇನು ತಿಂದೆ ?” ಊಟದ ಲಿಸ್ಟು ಕೇಳುತ್ತಾನೆ. “ಉಹೂಂ ಸಾಕಾಗೋದಿಲ್ಲ. ನಿತ್ಯ ಮೊಳಕೆ ಕಾಳು ತಿನ್ನು . ಮೊಟ್ಟೆ ಯಾಕೆ ತಿನ್ನಲ್ಲ ನೀನು? ಹಾಲು ಕುಡೀತಿದ್ದೀಯಾ? ” ಪ್ರಶ್ನೆಯ ಮೇಲೆ ಪ್ರಶ್ನೆಯಿಟ್ಟು ಅದೂ ಇದೂ ಸಲಹೆಮಾಡಿ…… ಅರೇ ನನ್ನದೇ ಕರುಳ ತುಂಡು ಇವನು. ಇವನ ಮಗ್ಗುಲುಬಟ್ಟೆ ಇಂದಿಗೂ ಕೆನ್ನೆಗೊತ್ತಿಕೊಂಡು, ಅಟ್ಟದಮೇಲೆ ಜೋಪಾನವಾಗಿಟ್ಟ ಇವನ ತೊಟ್ಟಿಲು ಮತ್ತೆ ಮತ್ತೆ ನೋಡಿ ಮೈಮರೆಯುತ್ತೇನೆ. ಇವನ ಮೈಯ್ಯುಜ್ಜಿದ ಜೊನಸನ್ ಸೋಪು ಬೇಬಿ ಪೌಡರಿನ ಘಮ್ಮ ಕೈಯ್ಯಲ್ಲಿ ಇನ್ನೂ ಇದೆಯೆನ್ನುವಂತೆ ಮರೆತು ಮೂಗಿಗೆ ಹಿಡಿಯುತ್ತೇನೆ. ಅವನ ಆಟದ ಕುದುರೆ ಡ್ರೆಸ್ಸಿಂಗ್ ಟೇಬಲ್ಲಿನಮೇಲೆ ನಿಂತು ನಿತ್ಯ ನನ್ನ ಕಂಡು ಕಣ್ಣು ಪಿಳುಕಿಸುತ್ತದೆ. ನಿದ್ದೆಗಣ್ಣಲ್ಲಿ ತಪ್ಪುಹೆಜ್ಜೆ ಇಡುವ ಇವನು ತೊಡರಿಬಿದ್ದಂತೆ ಭೃಮೆಯಾಗಿ ಎದ್ದುಕೂತಿದ್ದಿದೆ. ನಿನ್ನೆಮೊನ್ನೆಯತನಕ ಅವನ ಗಿಲಗಂಚಿ ನಡುಮನೆಯಲ್ಲೆಲೋ ಬಿದ್ದುಕೊಂಡು ಕಾಲಿಗೆ ತೊಡರಿದ ಹಾಗಿದೆ. ಮೆತ್ತನೆದೆಗೆ ಚಿಗುರು ಪಾದದ ಒದೆತ ಒಸರಿದ ಕ್ಷಣಗಳು ಬರೋಬ್ಬರಿ ಲೆಕ್ಕಕ್ಕೆ ಸಿಗುತ್ತವೆ…. ಇವನ್ಯಾವಾಗ ಅಪ್ಪನಾದ ನನಗೆ ಅಚ್ಚರಿಯಾಗುತ್ತದೆ. ಮಗನೆದೆಯಲ್ಲಿ ಅಪ್ಪ ಕೂತು ಜೀಕುತ್ತಾನೆ.
ಏನಿದು ಇದ್ದಕ್ಕಿದ್ದಂತೆ ಅಡ್ಡಮಳೆ ಹೊಡ್ದಂಗೆ ಅಪ್ಪನ ಪುರಾಣ ಬಿಟ್ಟು ಮಗನ ಪುರಾಣ ಅಂತೀರಾ? ಅಪ್ಪನೇ ಅಮ್ಮನಾದ ಬಗೆಯ ಬರೆದಿದ್ದೆನಲ್ಲ. ಅಪ್ಪನಿಲ್ಲದ ಈ ವೇಳೆ ಮಗನೇ ಅಪ್ಪನೂ ಅಮ್ಮನೂ ತಾನಾಗಿ ಜತನ ಮಾಡುವ ರೀತಿಯೇ ವಿಸ್ಮಯ. ಯಾರು ಹೇಳಿದ್ದು ನಿಮಗೆ ಗಂಡುಮಕ್ಕಳಿಗೆ ಅಂತಃಕ್ಕರಣವಿಲ್ಲ ಎಂದು ನಾನು ನಂಬುವದಿಲ್ಲ ಆ ಅಪ್ಪ ಈ ಮಗ ಎಷ್ಟೊಂದು ಮುಚ್ಚಟೆ ಇವರೆದೆಯಲ್ಲಿ…ನಡು ರಸ್ತೆಯ ಕೂಡುದಾರಿಯಲ್ಲೆಲ್ಲೋ ಮುಖಾಮಖಿಯಾದಾಗ “ತಂಗಿಗೆ ಮೊದಲ್ನೇ ಡೆಲಿವರಿ ಮೇಡಮ್, ಕೊಂಪ್ಲಿಕೇಟೆಡ್ ಆಗಿ ದೊಡ್ಡಾಸ್ಪತ್ರೆಗೆ ಎಡ್ಮಿಟ್ ಮಾಡ್ಬೇಕಾಯ್ತು, ಬರೋಬ್ಬರಿ ಒಂದು ಲಕ್ಷ ಮೇಡಮ್ ,ಮತ್ತೀಗ ಹೆಸರಿಡೋದು ಉಡುಗೊರೆ….ಏನಿಲ್ಲಂದ್ರೂ ಮತ್ತೊಂದು ಲಕ್ಷ ಬೇಕು, ಹೋಗ್ಲಿಬಿಡಿ ನನ್ನ ತಂಗಿಗಾಗಿ ನಾನು ಏನ್ಬೇಕಾದ್ರೂ ಮಾಡ್ತೇನೆ, ನನ್ನ ಸೊಸೆ ಅಂಗೈಗೆ ಬಂದಾಗಿನ ಸುಖ ಹೇಂಗೆ ಹೇಳ್ಲಿ ನಿಮ್ಗೆ , ನಾ ಎಲ್ಲದ್ದೇನೆ ಅಂತ್ಲೇ ಮರ್ತೋಯ್ತು ನಂಗೆ.” ಅಂದಿದ್ದ ಒಬ್ಬ ತಂಗಿಯ ಅಣ್ಣ . ಇವ್ಳು ಬಂದ್ಮೇಲೆ ನಾನು ಮನುಷ್ಯ ಅಂತ ಆಗಿದ್ದು , ಮೊದ್ಲೆಲ್ಲ ನಾ ಹೀಗಿರ್ಲಿಲ್ಲ ಎಂದ ಒಂದು ಹೆಣ್ಣಿನ ಸಂಗಾತಿ……. ಎಷ್ಟೊಂದು ಸುಂದರ ಭಾವಗಳು ನಾವು ಕಲ್ಲೆಂದುಕೊಂಡವರ ಎದೆಗಳಲ್ಲೂ . ಅದನ್ನ ಹಿತವಾಗಿ ಬಳುಕಿಸಿಕೊಳ್ಳುವ ಹದನು ಅರಿತಿರಬೇಕು.
ನಾ ಹೋಗ್ತೇನ್ರಿ ಓಟ್ ಹಾಕೋಕೆ ಅಂತ ಮಗ ಬರ್ತಿದ್ದಾನೆ. ಏನಾದ್ರೂ ತಯಾರಿ ಮಾಡ್ಕೋಬೇಕು. “ಅಲ್ಲೇ ಆರಾಂ ಆಗಿ ಕೂತು ಮತದಾನ ಮಾಡೋದು ಬಿಟ್ಟು ಯಾಕೋ ಒಂದಿನಕ್ಕಾಗಿ ಬಂದು ಕಷ್ಟ ಬಿಡ್ತೀಯಾ ?” ಅಂದೆ. “ಇಲ್ಲಮ್ಮಾ , ನಾನು ನೀನು ಅಪ್ಪ ನಡ್ಕೊಂಡು ಮತಗಟ್ಟೆಗೆ ಹೋಗಿ ಮತಚಲಾಯಿಸುವಾಗ ಸಿಗುವ ಸುಖ ಈ ಒನ್ಲೈನ್ ಮತಚಲಾವಣೆಯಲ್ಲಿ ಸಿಗುತ್ತಾ? ” ಎಂದು ಕೇಳುವ ಮಗನ ಅಂತಃಕ್ಕರಣ ಯಾವ ಮಗಳಿಗೆ ಕಡಿಮೆ ಹೇಳಿ. ಸರಿ ಮತದಾನ ನಮಗೆ ಸಂವಿಧಾನ ನೀಡಿದ ಶ್ರೇಷ್ಠ ಹಕ್ಕು ಅದನ್ನ ಚಲಾಯಿಸಲೇ ಬೇಕಾದದ್ದು ನಮ್ಮ ಕರ್ತವ್ಯ ಹೋಗೋಣ ಅಲ್ಲಾ ಮತಗಟ್ಟೆಗೆ….
ಪ್ರೇಮಾ ಟಿಎಂಆರ್