ಪುನರ್ಮಿಲನ (ಕವಲೊಡೆದ ದಾರಿ) ಕಥೆಯಮುಂದಿನ ಭಾಗ ವೀಣಾ ಹೇಮಂತ್ ಪಾಟೀಲ್ ಗೌಡ

ಬದುಕು ನಿಂತ ನೀರಲ್ಲ… ಹರಿಯುವ ನದಿಯಂತೆ. ಹೀಗೆಯೇ ಎರಡು ವರ್ಷ ಕಳೆಯಿತು. ಮಕ್ಕಳಿಬ್ಬರು ತಮ್ಮ ಮುಂದಿನ ಓದಿಗಾಗಿ ಬೇರೆ ಬೇರೆ ಊರುಗಳಿಗೆ ಹೊರಟು ಹೋದರು. ಈಗ ಮನೆಯಲ್ಲಿ ಸುಮಾ ಮತ್ತು ವಿಜಯ್ ಇಬ್ಬರೇ ಇದ್ದು ಸದಾ ಮೌನ ತಾಂಡವವಾಡುತ್ತಿತ್ತು .

ಈಗ ಮಗಳ ಕೋಣೆಯನ್ನೇ ತನ್ನ ಕೋಣೆಯನ್ನಾಗಿಸಿಕೊಂಡಿದ್ದಳು ಸುಮ. ಪ್ರತಿದಿನ ಮುಂಜಾನೆ ಬೇಗನೆ ಎದ್ದು ಮನೆ ಕೆಲಸವನ್ನೆಲ್ಲ ಪೂರೈಸಿ ಸ್ನಾನ ಮಾಡಿ ದೇವರ ಪೂಜೆಗೈದು, ತಿಂಡಿ ತಿಂದು ಮಧ್ಯಾಹ್ನದ ಊಟವನ್ನು ಕೂಡ ತಯಾರಿಸಿ ಇಟ್ಟು ಶಾಲೆಯ ಸಮಯಕ್ಕೆ ಸರಿಯಾಗಿ ಹೊರಟುಬಿಡುತ್ತಿದ್ದಳು. ಮನೆ ಕೆಲಸ ಮತ್ತು ಶಾಲೆಯ ಮಕ್ಕಳ ಒಡನಾಟದಲ್ಲಿ ಆಕೆ ಸಂತೋಷವಾಗಿದ್ದಳು ನಿಜ… ಆದರೆ ಮನಸ್ಸಿನ ಮೂಲೆ ಪ್ರೀತಿಯ ಸೆಲೆಯಿಲ್ಲದೆ ಖಾಲಿಯಾಗಿತ್ತು.

ಇತ್ತ ವಿಜಯ್ ಕೂಡ ಎದ್ದು ತನ್ನ ನಿತ್ಯವಿಧಿಗಳನ್ನು ಪೂರೈಸಿ ಆಕೆ ಮಾಡಿದ ತಿಂಡಿಯನ್ನು ಬಡಿಸಿಕೊಂಡು ತಿಂದು
ತಯಾರಾಗಿ ಆಫೀಸಿಗೆ ಹೊರಟು ಹೋಗುತ್ತಿದ್ದನು. ಆಫೀಸಿನಲ್ಲಿ 3 ಗಂಟೆಗಳ ಓವರ್ ಟೈಮ್ ಮಾಡುತ್ತಿದ್ದ ಅವನಿಗೆ ಆತ್ಮೀಯ ಸ್ನೇಹಿತರೆನ್ನುವವರು ಕೂಡ ಇರಲಿಲ್ಲ. ಸಂಜೆ ಶಾಲೆಯಿಂದ ಬಂದ ಸುಮಾ ಮನೆಯ ಉಳಿದ ಕೆಲಸಗಳನ್ನು ಪೂರೈಸಿ ಚಹಾ ಮಾಡಿಕೊಂಡು ಒಂದೊಳ್ಳೆಯ ಸಂಗೀತವನ್ನು ಕೇಳುತ್ತಾ ತನ್ನ ಸಮಯವನ್ನು ಕಳೆಯುತ್ತಿದ್ದಳು. ಇನ್ನೇನು ವಿಜಯ ಮನೆಗೆ ಬರುತ್ತಾನೆ ಎನ್ನುವ ಹೊತ್ತಿಗೆ ಅಡುಗೆ ತಯಾರಿಸಿ ಟೇಬಲ್ ಮೇಲೆ ಅಣಿ ಮಾಡುತ್ತಿದ್ದಳು. ಅವನು ಆಫೀಸಿನಿಂದ ಬಂದ ಕೂಡಲೇ ಕೈ ಕಾಲು ಮುಖ ತೊಳೆದು ಊಟಕ್ಕೆ ಬರುತ್ತಿದ್ದನು. ಇಬ್ಬರು ಜೊತೆಯಾಗಿ ಊಟ ಮಾಡುತ್ತಿದ್ದರಷ್ಟೇ, ಆದರೆ ಮಾತುಗಳಿಗೆ ಬರ. ಮೊದಲಾದರೆ ಮಕ್ಕಳೊಂದಿಗೆ ಕುಳಿತು ಮಾತನಾಡುತ್ತಾ ಸಮಯ ಕಳೆಯುತ್ತಿದ್ದ ಅವರಿಬ್ಬರು ಮಕ್ಕಳಿಬ್ಬರು ಮುಂದೆ ಓದಲು ಪರವೂರಿಗೆ ಹೋದ ನಂತರ ಮತ್ತಷ್ಟು ಮೌನದ ಮೊರೆ ಹೊಕ್ಕರು.

ಹೀಗೆ ಒಂದೆರಡು ತಿಂಗಳು ಕಳೆಯುವುದರೋಳಗಾಗಿ ಅವರಿಬ್ಬರ ವಿವಾಹದ 20ನೇ ವಾರ್ಷಿಕೋತ್ಸವ ಬಂದಿತ್ತು. ಹಿಂದಿನ ದಿನ ತುಸು ಬೇಗನೆ ಬಂದ ವಿಜಯ್ ಸುಮಾಳಿಗೆ ನಾಳೆ ದೇವಸ್ಥಾನಕ್ಕೆ ಹೋಗಿ ಬರುವ, ಬೇಗನೆ ಎದ್ದು ತಯಾರಾಗು ಎಂದು ಹೇಳಿ ತನ್ನ ಕೋಣೆಗೆ ಹೋದನು. ಸುಮ್ಮನೆ ತಲೆ ಆಡಿಸಿದ ಸುಮಾ ಮರುದಿನ ಮುಂಜಾನೆ ಎಂದಿನಂತೆ ಬೇಗನೆ ತನ್ನೆಲ್ಲ ಕೆಲಸಗಳನ್ನು ಪೂರೈಸಿ ತಯಾರಾದಳು. ನಿಗದಿತ ಸಮಯಕ್ಕೆ ಇಬ್ಬರು ಮನೆಯಿಂದ ಹೊರ ಬಿದ್ದರು. ನಗರದ ಗಡಿಬಿಡಿಯಿಂದ ತುಸು ದೂರದಲ್ಲಿರುವ ಪ್ರಶಾಂತವಾದ ನದಿ ದಡದಲ್ಲಿರುವ ಮನೆ ದೇವರ ದೇವಸ್ಥಾನಕ್ಕೆ ಅವರಿಬ್ಬರೂ ಬಂದು ತಲುಪಿದರು. ಸಣ್ಣ ಹಳ್ಳಿಯ ಆ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮಾಡಿದ ಪೂಜಾರಿಗಳು ಹೊರಟುಹೋಗಿದ್ದರು. ದೇವಸ್ಥಾನದ ಬಳಿಯಲ್ಲಿ ಹರಿಯುತ್ತಿದ್ದ ನದಿಯಲ್ಲಿ ಕೈಕಾಲು ತೊಳೆದ ದಂಪತಿಗಳು ನಿಧಾನವಾಗಿ ದೇವಸ್ಥಾನದ ಒಳ ಆವರಣಕ್ಕೆ ಬಂದು ಸೇರಿದರು. ಪ್ರಶಾಂತವಾದ ದೇಗುಲದ ಒಳಗೆ ಪ್ರವೇಶಿಸಿ ದೇವರನ್ನು ದರ್ಶಿಸಿ ನಮಸ್ಕರಿಸಿ ಹೊರಗೆ ಬಂದು ಕುಳಿತರು.

ಜನವಸತಿ ವಿರಳವಿದ್ದ ಆ ದೇವಸ್ಥಾನದ ಆವರಣ ಪ್ರಶಾಂತವಾಗಿತ್ತು. ನಿಧಾನವಾಗಿ ವಿಜಯ್ ಮಾತನಾಡಲು ಆರಂಭಿಸಿದ…. ಸುಮಾ, ಕಳೆದ ಈ ಎರಡು ವರ್ಷಗಳಲ್ಲಿ ನನಗೆ ನಿಜವಾದ ಬದುಕಿನ ಅರಿವಾಗಿದೆ. ನನ್ನಿಂದಲೇ ನೀನು ಮಕ್ಕಳು ಎಂದುಕೊಂಡಿದ್ದ ನನಗೆ ನೀವಿಲ್ಲದೇ ನಾನಿಲ್ಲ ಎಂಬ ಸತ್ಯ ಗೊತ್ತಾಗಿದೆ. ಅರಿಯದೆ ತಪ್ಪು ಮಾಡಿದೆ ಎಂದು ಹೇಳುವುದಿಲ್ಲ…ಆದರೆ ಆ ತಪ್ಪನ್ನು ಮುಂದುವರಿಸಿಕೊಂಡು ಹೋಗಿದ್ದು ನನ್ನದೇ ತಪ್ಪು. ಈ ಎರಡು ವರ್ಷಗಳ ಒಂಟಿತನದ ಬೇಗೆಯಲ್ಲಿ ನಿನ್ನ ಒಳ್ಳೆಯತನ ನನಗೆ ಅರಿವಾಯಿತು. ನೀನು ನನ್ನ ತಂದೆ ತಾಯಿಗಳ ಎಲ್ಲ ಬೇಕು ಬೇಡಗಳನ್ನು ನೋಡಿಕೊಂಡೆ. ನನ್ನ ಮನೆ ಬೆಳಗಿದ ಮಹಾಲಕ್ಷ್ಮಿಯಾದೆ. ಪ್ರೀತಿ ವಾತ್ಸಲ್ಯಗಳ ಪ್ರತಿ ಮೂರ್ತಿಯಾಗಿ ನನ್ನ ಮಕ್ಕಳನ್ನು ಪಾಲಿಸಿದೆ, ಅವರಲ್ಲಿ ಶಿಸ್ತು ಸಂಸ್ಕಾರಗಳನ್ನು ರೂಢಿಸಿದೆ. ಬಂಧು ಬಾಂಧವರಲ್ಲಿ ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದೆ.ಸದ್ಗುಣಗಳ ಗಣಿ ನೀನು. ಆದರೆ ನಿನ್ನ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಾನು ವಿಫಲನಾದೆ… ಅದಕ್ಕೆ ತಕ್ಕ ಪ್ರಾಯಶ್ಚಿತವನ್ನು ಪಡುತ್ತಿರುವೆ. ಈಗಲಾದರೂ ನನ್ನ ತಪ್ಪನ್ನು ಮನ್ನಿಸುವಿಯಾ ಎಂದು ದೈನ್ಯದಿಂದ ಕೇಳಿದನು.
ಒಂದೆರಡು ನಿಮಿಷಗಳ ಕಾಲ ಸುಮ್ಮನೆ ಇದ್ದ
ಸುಮಾ….. ನೀವು ಎಸಗಿದ ತಪ್ಪು ಕ್ಷಮಾರ್ಹವಲ್ಲ ನಿಜ…. ಆದರೆ ಬದುಕು ಅತಿ ದೊಡ್ಡದು. ಒಂದು ಕಹಿ ಘಟನೆಯನ್ನು ಪದೇಪದೇ ನೆನಪಿಸಿಕೊಳ್ಳುತ್ತಾ ಮುಂಬರುವ ಬದುಕಿನ ಸಾವಿರಾರು ಸವಿ ಕ್ಷಣಗಳನ್ನು ಕಳೆದುಕೊಳ್ಳಲು ನಾನೊಲ್ಲೆ. ನಿಮಗೆ ಶಿಕ್ಷೆ ನೀಡುವ ನೆಪದಲ್ಲಿ ನಾನು ಕೂಡ ನಿಮ್ಮ ಪ್ರೀತಿ, ಕಾಳಜಿಯಿಂದ ವಂಚಿತಳಾಗಿದ್ದೆ. ಬದುಕಿನಲ್ಲಿ ಭಾವನೆಗಳಿರಬೇಕೇ ಹೊರತು ಭಾವನೆಗಳೇ ಬದುಕಲ್ಲ ಎಂಬುದರ ಅರಿವು ನನಗಿದೆ. ನಮ್ಮ ಮತ್ತು ನಮ್ಮ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ನಾವಿಬ್ಬರೂ ಒಂದಾಗುವ ಈ ನಿರ್ಣಯಕ್ಕೆ ಬದ್ಧರಾಗೋಣ. ಆದರೆ…ಮುಂದಿನ ಜೀವಿತಕಾಲದಲ್ಲಿ ನಿಮ್ಮಿಂದ ಮತ್ತೆ ಮೋಸವಾಗುವುದಿಲ್ಲ ಎಂಬ ಭರವಸೆ ನನಗೆ ನಿಮ್ಮಲ್ಲಿ ಮೂಡಬೇಕು ಎಂದು ತುಸು ಆತಂಕದಿಂದ ನುಡಿದಾಗ ವಿಜಯ ತಟ್ಟನೆ ಆಕೆಯ ಕೈ ಹಿಡಿದು ಆಕೆಯ ಎರಡು ಕೈಗಳನ್ನು ತೆಗೆದುಕೊಂಡು ತನ್ನ ಕಣ್ಣಿಗೆ ಒತ್ತಿಕೊಂಡನು. ಉಹೂಂ ಅಂತಹ ಯಾವ ಕೃತ್ಯಕ್ಕೂ ನಾನು ಎಳಸುವುದಿಲ್ಲ, ನನ್ನನ್ನು ನಂಬು ಎಂದು ಗದ್ಗದಿತನಾಗಿ ಕೇಳಿದ. ನಿಧಾನವಾಗಿ ತನ್ನ ಕೈಯಿಂದ ಗಂಡನ ತಲೆ ಕೂದಲನ್ನು ಸವರಿದ ಆಕೆಯನ್ನು ಅತ್ಯಂತ ಗಾಢವಾಗಿ ತಬ್ಬಿಕೊಂಡನು ವಿಜಯ್. ಆ ತಬ್ಬುಗೆಯಲ್ಲಿ ಕಳೆದುಕೊಂಡ ನಿಷ್ಕಾಮ ಪ್ರೇಮ ಮರಳಿ ದೊರೆತ ತೃಪ್ತಿ, ಆನಂದದ ಜೊತೆಗೆ ಅಮೂಲ್ಯ ನಿಧಿಯನ್ನು ಪಡೆದುಕೊಂಡ ಧನ್ಯತೆಯ ಭಾವ ಅವನಲ್ಲಿತ್ತು.ಇವರಿಬ್ಬರ ಪುನರ್ಮಿಲನಕ್ಕೆ ಸಾಕ್ಷಿಯಾದ ನೇಸರ ಪಡುವಣದಲ್ಲಿ ಪಯಣಮುಗಿಸಲಣಿಯಾದ.


Leave a Reply

Back To Top