ಅನ್ನಪೂರ್ಣ ಪದ್ಮಶಾಲಿ ಅವರ ಕೃತಿ :ಗುರುತಿನ ಕೊರತೆಗಳು” (ಕವನಸಂಕಲನ) ಒಂದು ಅವಲೋಕನ ನಾರಾಯಣಸ್ವಾಮಿ (ನಾನಿ)

ಕೃತಿ: ಗುರುತಿನ ಕೊರತೆಗಳು (ಕವನಸಂಕಲನ)
ಲೇಖಕರು: ಅನ್ನಪೂರ್ಣ ಪದ್ಮಶಾಲಿ
ಪ್ರಕಾಶನ: ಲಿಖಿತ್ ಲಿನಾ ಪ್ರಕಾಶನ
ಬೆಲೆ: 100 ರೂಪಾಯಿಗಳು

ಕನ್ನಡ ಸಾಹಿತ್ಯದ ಬರವಣಿಯು ಸೆಳೆತ, ಇಂದು ಕನ್ನಡ ಸಾಹಿತ್ಯ ಬಹಳಷ್ಟು ಜನರನ್ನು ಸೆಳೆಯುತ್ತಿದೆ. ಅಂಥದೊಂದು ಶಕ್ತಿ  ಈ ನಮ್ಮ ಕನ್ನಡ ಸಾಲುಗಳಿಗೆ ಇದೆ. ನೂರಾರು ಜನರು ಬರಹಗಾರರಾಗಬಹುದು. ಅದರೆ ಆ ಬರಹವು ಕಲಾತ್ಮಕವಾಗಿ ಓದುಗರ ಮನಸ್ಸನ್ನು ಸೆಳೆಯಬೇಕು. ಆ ಬರಹವು ಬದುಕಿನ ಅಸ್ಮಿತೆಯಿಂದ ರೂಪಗೊಂಡು, ಎದೆಯ ಭಾವದಿಂದ ಹೊರಬರಬೇಕು ಆ ಬರಹವನ್ನು ಮಾತ್ರ  ಓದುಗರು ಕನ್ನಡ ಸಾಹಿತ್ಯ ಲೋಕ ಗುರುತಿಸುತ್ತದೆ.

ನವ್ಯ ಸಾಹಿತ್ಯ ಲೋಕದಲ್ಲಿ ಇತ್ತೀಚೆಗೆ ಬಹಳಷ್ಟು ಕವಯಿತ್ರಿಯರು ಲೇಖನ ಕಥೆ ಕವನ ಬರೆಯುತ್ತಾ ಗುರುತಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗುತ್ತಿದ್ದಾರೆ. ತಮ್ಮ ಚೊಚ್ಚಲ ಕೃತಿಯ ಹಸ್ತ ಪ್ರತಿಗೆ ಕಾವ್ಯ ಪ್ರಶಸ್ತಿಯನ್ನು ಪಡೆದು ಉತ್ತಮ ಕವಯಿತ್ರಿಯಾಗಿ ಗುರುತಿಸಿಕೊಂಡವರು ಶ್ರೀಮತಿ ಅನ್ನಪೂರ್ಣ ಪದ್ಮಶಾಲಿ ರವರು

ಅನ್ನಪೂರ್ಣ ಪದ್ಮಶಾಲಿ ರವರು ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಕವಯಿತ್ರಿಯಾಗಿ ಗುರುತಿಸಿಕೊಂಡವರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಾವು ಬೆಳೆಯುತ್ತಾ ಇತರ ಬರಹಗಾರರ ಬರಹವನ್ನು ಓದುತ್ತಾ ಅವರವನ್ನು ಪ್ರೋತ್ಸಾಹಿಸುವ ಗುಣವನ್ನು ಹೊಂದಿದ್ದಾರೆ ಇವರು ಇತ್ತೀಚೆಗೆ ಹೊರತಂದಿರುವ ಕೃತಿಯೇ ಜೈಸಿಂಗರಾವ್ ಅಪ್ಪಾ ಸಾಹೇಬ ಬರ್ಗೆ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ಗುರುತಿನ ಕೊರತೆಗಳು ಕವನಸಂಕಲನ.

ಈ ಗುರುತಿನ ಕೊರತೆಗಳು ಕವನಸಂಕಲನಕ್ಕೆ ಮಹೇಶ ಬಳ್ಳಾರಿ ಕೊಪ್ಪಳ ಇವರು ಮನ್ನುಡಿಯನ್ನು ಬರೆದಿದ್ದು ಕವಯಿತ್ರಿ ಅನ್ನಪೂರ್ಣ ಪದ್ಮಶಾಲಿಯವರು ಕಾವ್ಯದ ಒಳ _ ಹೊರಗಿನ ದೀರ್ಘಕ್ಕೆ ಹೋದಂತೆಲ್ಲಾ  ಇವರ ಕಾವ್ಯ ಖಂಡಿತ ವಿಸ್ಕೃತ ರೂಪ ಹೊಂದಬಲ್ಲದು. ಕೊಪ್ಪಳದ ಮಹಿಳಾ ಬರಹಗಾರರ ತಂಡಕ್ಕೆ ಈ ಕೃತಿಯ ಮೂಲಕ ಕವಯಿತ್ರಿಯೊಬ್ಬರು ಜೊತೆಯಾಗಿದ್ದಾರೆ. ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆಯೆಂದು ಹೇಳಿ ಶುಭ ಹಾರೈಸಿದ್ದಾರೆ.

ಆಶಯ ನುಡಿಗಳನ್ನು ಬರೆದಿರುವ ಭೀಮರಾಶಿ ಹನುಮಪ್ಪ ಹೂಗಾರ ಜನಪದ ಕಲಾವಿದರು ಮೊರಬ ಇವರು ಬರವಣಿಗೆಯ ಮೆರವಣಿಗೆಯಲ್ಲಿ ಕವಿಯ ಕನಸಿಗೆ ರೆಕ್ಕೆ ಹಚ್ಚಿದ ಕವಿತೆಗಳಿವು ಎಂಬ ಶೀರ್ಷಿಕೆಯಲ್ಲಿ ಸೊಗಸಾಗಿ ಆಶಯ ನುಡಿ ಬರೆದು ಕವಯಿತ್ರಿಗೆ ಹಾರೈಸಿದ್ದಾರೆ.

ಗುರುತಿನ ಕೊರತೆಗಳು ಈ ಕವನಸಂಕಲನದಲ್ಲಿ ಸುಮಾರು ನಲವತ್ತು ಕವಿತೆಗಳಿವೆ. ಪುಸ್ತಕದ ವಿನ್ಯಾಸ ಮುದ್ರಣವೂ ಕೂಡ ಓದುಗರ ಗಮನವನ್ನು ಸೆಳೆಯುತ್ತದೆ.


ಗಂಟನು ಕಟ್ಟೇನಿ..
ತಲೆಮ್ಯಾಲೆ ಇಂಟೇನಿ
ಹೊರಟ ಬಿಟ್ಟೇನಿ…
ನಾ ಹೊರಟ ಬಿಟ್ಟೇನಿ….

ಈ ಕವಿತೆಯ ಸಾಲುಗಳು  ತವರು ತಲುಪಲು ಶೀರ್ಷಿಕೆಯ ಈ ಕವಿತೆಯಲ್ಲಿ  ಬರುವ ಸಾಲುಗಳು. ಒಬ್ಬ ಹೆಣ್ಣು ಮಗಳು ತವರಿಗೆ ಹೋಗಬೇಕೆಂಬ ಕಾರಣದಿಂದ ಬೆಳಗ್ಗೆಯಿಂದ ಸಂಜೆಯ ವರೆಗೆ ಹೇಗಲ್ಲಾ ಮಾತನಾಡುತ್ತಾ, ಗಂಡನ ಜೊತೆಯಲ್ಲಿ ಹೇಗೇಲ್ಲಾ ಮುನಿಕೊಳ್ಳುತ್ತಾರೆ. ಆ ಮುನಿಸು ಗಂಡ ಹೆಂಡತಿಯ ಮಧ್ಯದಲ್ಲಿ ಹೇಗೆ ನೆಡೆಯುತ್ತದೆ ಎಂಬುದನ್ನು ಉತ್ತರ ಕನ್ನಡದ ಭಾಷೆಯಲ್ಲಿ ಬಹು ಸೊಗಸಾಗಿ ಬಣ್ಣಿಸಿದ್ದಾರೆ.

ಮುಂಜಾನೆಯೇ ಎದ್ದ ಗಂಡ ತನ್ನ ಹೆಂಡತಿಯನ್ನು ಕುರಿತು ಊರಿನ ಗುಡಿಯೊಳಗೆ ಪೂಜಾರಿ ಬಂದು ದೇವರ ಪೂಜೆಗೆ ರೆಡಿ ಮಾಡಿ ಘಂಟೆಯನ್ನು ಬಡಿಯುತ್ತಿದ್ದಾನೆ.. ನೀನು ಬೇಗ ಎದ್ದು ಗುಡಿಗೆ ಹೋಗು ಅಂದಾಗ ಆ ಗುಡಿಯ ಪೂಜಾರಿ ಸಾಯಲಿ ಇಲ್ಲ ಆ ದೇವಸ್ಥಾನದ ಘಂಟೆಯು ಮುರಿದು ಹೋಗಲಿ ನಾನು ಹೋಗಲ್ಲ ಅಂದರೆ ಹೋಗಲ್ಲ ಅಷ್ಟೇ ಎಂದು ಹಠವನ್ನು ಮಾಡುತ್ತಾಳೆ. ತಿಂಡಿಗೆ ದೋಸೆ ಮಾಡಿ ಚಟ್ನಿಯನ್ನು ರುಬ್ಬಿ ಇಟ್ಟಿದ್ದೇನೆ ತಿನ್ನು ಎದ್ದೇಳು  ಮಧ್ಯಾಹ್ನದ ಸಮಯವಾದಾಗ  ಅನ್ನ ಸಾರು ಮಾಡಿದ್ದೇನೆ ಸ್ವಲ್ಪನಾದರೂ ತಿನ್ನು ಎಂದು ಪ್ರೀತಿಯಿಂದ ಹೇಳಿದರೂ ಕೂಡ ತನ್ನ ಹಠವನ್ನೆ ಸಾಧಿಸುತ್ತಾಳೆ. ಸಾಯಂಕಾಲದ ಹೊತ್ತಿಗೆ ಹೆಂಡತಿಯ ಹತ್ತಿರ ಬಂದ ಗಂಡ  ನಿಮ್ಮ ತವರಿಗೆ ಹೋಗು ಗಾಡಿ ಬಂದು ಹಾರನ್ ಮಾಡುತಿದೆ ನಿನ್ನ ತವರಿಗಾದರೂ ಹೋಗಿ ಬಾ ಅಂದಾಗ ಹೆಂಡತಿ ಖುಷಿಯಿಂದ ಹೇಳುತ್ತಾಳೆ ತವರಿಗೆ ಹೋಗಲು ಆದಾಗಲೇ ನಾನು ಗಂಟು ಕಟ್ಟಿ ಇಟ್ಟಿರುವೆ ಹೊರಡಲು ಅಂದಾಗ ಗಂಡನಿಗೆ ತನ್ನ ಹೆಂಡತಿ ಯಾತಕ್ಕಾಗಿ ಮುನಿಸಿಕೊಂಡಿದ್ದಾಳೆ ಎಂಬುದು ಅರ್ಥವಾಗುತ್ತದೆ. ತವರು ಮನೆಗೆ ಹೋಗಲು ಯಾವ ತರಹ ನಾಟಕವಾಡುತ್ತಿದ್ದಾಳೆ ಎಂಬ ಅರಿವಾಗುತ್ತದೆ. ಬಹಳಷ್ಟು ಸೊಗಸಾಗಿ ಈ ಕವಿತೆಯಲ್ಲಿ ಗಂಡ ಹೆಂಡತಿಯ ಸಂಭಾಷಣೆಯನ್ನು ಸಾಲುಗಳಾಗಿ ರೂಪಿಸಿದ್ದಾರೆ ಕವಯಿತ್ರಿ.

ಅಳಿಸಿದ ಅಂಗೈಗೆರೆ ಶೀರ್ಷಿಕೆ ಕವನದಲ್ಲಿ ಈ ದೇಶದ ಬೆನ್ನೆಲುಬಾದ ಅನ್ನದಾತ ಬಗ್ಗೆ ಬರೆದಿದ್ದಾರೆ.


ಅನ್ನದಾತನ ಒಡಲಿನ ಬಿಸಿಯ
ತಾಪಕೆ ಮಾತಿಲ್ಲ
ನಿಲ್ಲದ ದಾಹಕೆ ಗೆಲುವಿಲ್ಲ
ದು:ಖ ಪೀಡಿತ ಧಾತ್ರಿ ….

ಭಾರತ ದೇಶದಲ್ಲಿ ರೈತನ ಜೀವನ ಒಂದು ದುಸ್ತರವಾದ ಬದುಕಾಗಿದೆ. ಮಳೆಯಿಲ್ಲ ಬೆಳೆಯಿಲ್ಲ ರಾಸುಗಳಿಗೆ ಮೇವು ಸಿಗುತ್ತಿಲ್ಲ ಅಸಾಯಕತೆಗೆ ಒಳಗಾಗಿದ್ದಾನೆ ಕೃಷಿಯ ಹೊಲದೊಳಗೆ ಅವನಿಗೆ ಬೇಕಾದಂತಹ ಜೀವಧಾರೆಯು ಸಿಗುತ್ತಿಲ್ಲ.. ಕೃಷಿಗಾಗಿ ರೈತ ಮಾಡಿದ ಸಾಲ ಅವನ ಜೀವನವನ್ನೇ ಹಿಂಡಿ ಹಿಪ್ಪೆಯಾಗಿಸಿ ಶೂಲವಾಗಿ ಅವನ ದೇಹವನ್ನೇ ತಿವಿಯುತಿದೆ. ರೈತನು ನರಕದಂತಹ ಬದುಕನ್ನು ಅನುಭವಿಸಿ ತನ್ನ ನೋವನ್ನು ಬಿತ್ತಿ ಅನ್ನವನ್ನು ಬೆಳೆಯುತ್ತಿದ್ದಾನೆ.  ಎಂದು ಬಹಳಷ್ಟು ಸೊಗಸಾಗಿ ರೈತರ ಬವಣೆಯನ್ನು ಸಾಲುಗಳಲ್ಲಿ ರೂಪಿಸಿದ್ದಾರೆ.

ಸಿಡಿಲುಗಳ ನಡುವೆ ಕವನದ ಶೀರ್ಷಿಕೆಯಲ್ಲಿ ಹೇಳುತ್ತಾರೆ
ಲಕ್ಷೋಪಲಕ್ಷ ಜತನದ ಜತೆ
ಸಂತ್ಸರಗಳ ಮಾತು
ಕ್ರಿಸ್ತನ ಸಿಲುಬೆಯ ಮೇಲೆ
ರಕ್ತಪಾತ
ಗಾಂಧಿ ಎದೆಯ ಮೇಲೆ
ಗುಂಡಿನ ಗುರುತು

ಈ ಕವಿತೆಯಲ್ಲಿ ಕವಯಿತ್ರಿ ಅನ್ನಪೂರ್ಣ ಪದ್ಮಶಾಲಿರವರು ಪ್ರಸ್ತುತ ದಿನಗಳಲ್ಲಿ ಮನುಜನ ವ್ಯಕ್ತಿತ್ವ ಹೇಗಿದೆ? ಕಾಡಿನಲ್ಲಿ ಯಾವುದೇ ಜಾತಿ ಮತ ಕುಲಗಳಿಲ್ಲ ಅಲ್ಲಿ ಸಕಲ ಜೀವಿಗಳು ಸ್ವಾಮ್ಯತೆಯಿಂದ ವಾಸಿಸುತ್ತವೆ ಅದರೆ ಮನುಜನು ಕುಲವಾದಿಯಾಗಿ ರಾಕ್ಷಸರಂತೆ ಘೋರವಾದ ಬೆದರಿಕೆಯನ್ನು ಹಾಕುತ್ತಾ ಬದುಕಿದ್ದಾನೆ. ನರಲೋಕದಲ್ಲಿ ಕಪ್ಪು ಅಧ್ಯಾಯವನ್ನು ಸೃಷ್ಟಿಸಿ ಕಾಲದ ಬೆಳಕು ಕೂಡ ಕಪ್ಪಾಗಿದೆ ಹಿಂದಿನ ಚರಿತ್ರೆಯು ಕೂಡ ತನ್ನ ಆಯುಷ್ಯವನ್ನು ಮುಗಿಸುತ್ತಾ ಮುಪ್ಪಾಗುತ್ತಿದೆ. ಲಕ್ಷಾಂತರ ಜನರ ಜಾಗೃತಿಯ ನಡುವೆಯೂ ಕೂಡ ಕ್ರಿಸ್ತನ ಶಿಲುಭೆಯ ಮೇಲೆ ರಕ್ತಪಾತವಾಗುತ್ತಲಿತ್ತು ಮತ್ತು ಗಾಂಧಿಯ ಎದೆಗೆ ಗುಂಡಿನ ಗುರುತುಗಳನ್ನು ನೀಡಿದ ಧರ್ಮದ ಅಮಲಿನಲ್ಲಿ ತೇಲುತ್ತಿದ್ದ ಮನುಷ್ಯ. ಇಂತಹ ಅಪಾರವಾದ ಸಿಡಿಲುಗಳ ಹೊಡೆತವನ್ನು ಒಡವೆಯಾಗಿ ತೊಟ್ಟ ಭೂಮಾತೆಯ ನೆಲದಲ್ಲಿ ಹಿಂಸೆಯು ತಾಂಡವಾಡುತಿದೆ. ಅಧಿಕಾರಕ್ಕಾಗಿ ಅಂತಸ್ತುಗಳಿಗಾಗಿ, ಅಸೆಯನ್ನು ಪಡುತ್ತಿರುವ ಮನುಜನಲ್ಲಿ ದುರಾಸೆಯ ಹಣವು ಚಿಗುರುತಿದೆ ಶರವೇಗದಲ್ಲಿ ಎಂದು ಸೂಕ್ಷ್ಮ ಮನಸ್ಥಿತಿಯಿಂದ ಯೋಚಿಸಿ ಸಾಲುಗಳನ್ನು ಕಟ್ಟಿದ್ದಾರೆ ಕವಯತ್ರಿ.

ಅನ್ಯಾಯದ ಆಯುಸ್ಸು ತೀರಿ ಶೀರ್ಷಿಕೆ ಕವಿತೆಯಲ್ಲಿ ಪ್ರತಿಭಟನೆಯ ಕಾವು ಗೋಚರಿಸುತ್ತಿದೆ. ರಾಜಕೀಯದ ದಳ್ಳುರಿಯ ವಿರುದ್ದ, ದೇಶದಲ್ಲಿ ನೆಲೆಗೊಂಡಿರುವ ಸಾಮಾಜಿಕ ಸಮಸ್ಯೆಗಳ ವಿರುದ್ದ ಬರೆದ ಕವಿತೆಯು ಇದಾಗಿದ್ದು, ಅನ್ಯಾಯಕ್ಕೆ ಒಳಪಟ್ಟ, ಶೋಷಣೆಗೆ ಒಳಪಟ್ಟ ನೊಂದ ಜೀವಗಳು ಸುರಿದ ಕಣ್ಣೀರಿನ ಹನಿಗಳಿಂದ ಈ ಭೂಮಿಯು ನೆಂದು ಹದಗೊಂಡಿದೆ ಹೋರಾಟದ ಕಿಚ್ಚು ಬೀಜವಾಗಿ ಗಿಡವಾಗಿ ಮರವಾಗಿ ಚಿಗುರುತಿದೆ. ಪ್ರಜಾಪ್ರಭುತ್ವದ ಅಮಲನ್ನು ಹೇರಿಸಿಕೊಂಡವರು ಸತ್ಯಗಳನ್ನು ಕೊಲ್ಲಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾ ಧರ್ಮದ ಅಮಲನ್ನು ಹೇರಿಕೊಂಡ ನೀವು ಸತ್ಯವನ್ನು ಅಷ್ಟೇ ಅಲ್ಲ ನಿಮ್ಮ ಆತ್ಮ ಸಾಕ್ಷಿಯ ಕೊಲೆ ನಿಮ್ಮಿಂದಾಗಿದೆ. ದ್ವೇಷ ದಳ್ಳುರಿಯನ್ನು ಮನದಲ್ಲಿ ತುಂಬಿಕೊಂಡು ನಿಮ್ಮ ಮನಸ್ಸು ಸತ್ತ ಪ್ರಾಣಿಯಂತೆ ಗಬ್ಬು ವಾಸನೆ ಬರುತ್ತಿರುವಾಗ ಅದನ್ನು ಮರೆಮಾಚಲು ಹೊರಗೆ ಹೃದಯವಂತರಂತೆ ನಟಿಸಿ ಗಂಧದ ಗಮಲನ್ನು ಮೈಯಿಗೆ ಸಿಂಪಡಿಸಿಕೊಂಡು ಪಯಣಿಸುತ್ತಿದ್ದಿರಿ. ಜ್ವಲಂತ ಜ್ವಾಲಾಮುಖಿ ಆಸ್ಪೋಟಗೊಂಡು ಧಗಿಧಗಿಸುವ ಉರಿ ಜ್ವಾಲೆ ಕೆನ್ನಾಲಿಗೆ ಚಾಚುವ ಕಾಲ ಹತ್ತಿರವಾಗಿದೆ ಅನ್ಯಾಯ ಆಯುಷ್ಯ ಮುಗಿಯುತಿದೆ ಸತ್ಯವು ದಿನಗಳು ಗೆಲವುವನ್ನು ಹೊಂದುತ್ತದೆ ಎಂದು ಸೊಗಸಾಗಿ ಕವಿತೆಯನ್ನು ರಚನೆ ಮಾಡಿದ್ದಾರೆ.

ವಾಸ್ತು ತೊರೆದ ವಾಸ್ತವ ಕವನದ ಶೀರ್ಷಿಕೆಯಲ್ಲಿ ಮನುಷ್ಯ ತಾನು ವಾಸ್ತವವನ್ನು ಮರೆತು ವಾಸ್ತುವಿನ ಮೊರೆ ಹೋಗಿದ್ದಾನೆ ಎಂಬುದರ ಬಗ್ಗೆ ತಿಳಿಸುತ್ತಾರೆ


ತಂದುಕೊಳ್ಳದಿರು ನೀ
ಮೌಢ್ಯತೆಯ ಮಾರಿಯನು
ಮನೆಯೊಳಗೆ
ಮನದೊಳಗೆ…..

ಇಂದಿನ ಯುಗವು ವೈಜ್ಞಾನಿಕವಾಗಿ ಯಾಂತ್ರಿಕವಾಗಿ ಮುಂದುವರಿದೆ. ಹಿಂದಿನ ಕಾಲಕ್ಕಿಂತಲೂ ಜನರು ಹೆಚ್ಚು ವಿದ್ಯಾವಂತರಾಗಿದ್ದಾರೆ. ಇಂದಿನ ಅಧುನಿಕ ಜಗತ್ತಿನಲ್ಲಿಯೂ ಕೂಡ ಮನುಜ ಮೂಢನಂಬಿಕೆಗಳಿಗೆ ಅಂಟಿಕೊಂಡೇ ಬದುಕುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಬಹಳಷ್ಟು ಜನ ವಾಸ್ತುವಿನ ಮೋಡಿಯಲ್ಲಿ ಸಿಲುಕಿದ್ದಾರೆ. ಯಾರೋ ಒಬ್ನ ಪೂಜಾರಿಯೋ, ಮಂತ್ರವಾದಿಯೋ, ಜ್ಯೋತಿಷಿಯೋ ಬಂದು  ಮನೆಯಲ್ಲಿ ಆಡುಗೆ ಈ ಕಡೆ ಮಾಡಬೇಕು, ಸ್ನಾನ ಈ ಕಡೆ ಮಾಡಬೇಕು, ಈ ಕಡೆ ಮಲಗಬೇಕು ಎಂದಾಗ ಅದೇ ರೀತಿಯಲ್ಲಿ ಜನರು ಆಚರಣೆ ಮಾಡುತ್ತಾರೆ. ಅದರೆ ಹಿಂದಿನ ಕಾಲದಲ್ಲಿ ಒಂದು ಸಣ್ಣ ಮನೆ ಇಲ್ಲ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹತ್ತಾರು ಜನರು ಆರೋಗ್ಯವಾಗಿದ್ದರು. ನೂರು ಕಾಲ ಬದುಕುತ್ತಿದ್ದರು ಅವರಿಗೆ ಯಾವುದೇ ರೀತಿಯಲ್ಲಿ ವಾಸ್ತು ಗೊತ್ತಿರಲಿಲ್ಲ. ನೆಲವೇ ಒಂದು ವಾಸ್ತುವಾಗಿದೆ ನೀನು ನೀನು ಯಾವುದೇ ರೀತಿಯ ಭಯವನ್ನು ಪಡಬೇಡ. ನೀನು ಮೌಢ್ಯವನು ನಿನ್ನ ಮನೆಯೊಳಗೆ ಮನದೊಳಗೆ ತಂದುಕೊಳ್ಳಬೇಡ ಮನುಜನೇ, ಈ ವಾಸ್ತುವಿನ ಸಹವಾಸವನ್ನು ನೀನು ವಾಸ್ತವವನ್ನು ಅರಿತುಕೊಂಡು ಮನುಷ್ಯನಾಗಿ ಬದುಕು ಎಂಬ ಉತ್ತಮ ಸಂದೇಶವನ್ನು ಈ ಕವಿತೆಯು ಸಾರುತ್ತದೆ

ತಂಗಾಳಿ ಬೆಂಕಿಯನೆ ಬೀಸಿ ಬಿಸಿಯುಸಿರು ಜಗಕೆ
ಗಿಡಮರಗಳು ಬಾಡಿವೆ ತಾಳಲಾರದೇ ಸೆಖೆ
ಹೊಲಗದ್ದೆಗಳಲ್ಲಿ ಉಳುವ ಹೊತ್ತು
ಮನುಜನ ಗುಣ ಮುಂಗಾರಿಗೆ ಮುನಿಸು….

ಸುರಿಯುತ್ತಿರುವ ಮುಂಗಾರು ಮಳೆ ಶೀರ್ಷಿಕೆಯ ಕವಿತೆಯಲ್ಲಿ ಮಳೆಗಾಲ ಬಂದರೂ ಕೂಡ ಮಳೆ ಸುರಿಯುತ್ತಿಲ್ಲ, ಭೂಮಿ ಬೆಂದು ಬೆಂಗಾಡಾಗಿದೆ. ಈ ಉರಿವ ಬಿಸಿಲಿನಲ್ಲಿ ಬೆಳೆದ ಬೆಳೆಗಳೆಲ್ಲಾ ಕಮರಿ ಹೋಗುತ್ತಿವೆ. ಸ್ವರ್ಗದಂತೆ ಇದ್ದ ನಿಸರ್ಗ ಸೊರಗಿ ಹೋಗುತ್ತಿದೆ. ದೇಹಕ್ಕೆ ತಂಪು ಇಲ್ಲ ಸೊಂಪು ಇಲ್ಲ ಮುಂಗಾರಿನ ಮಳೆಯು ಬರುತ್ತಲಿಲ್ಲ ಇದಕ್ಕೆ ಕಾರಣ ಮನುಜ ಅವನ ಅತಿಯಾಸೆಯಿಂದ ಇಂದು ಪ್ರಕ್ರತಿಯು ಮುನಿಸಿಕೊಂಡಿದೆ ಈಗೆ ಪ್ರಕೃತಿಯ ವಿಕೋಪ ಮುಂದುವರಿದರೆ ಮನುಜನ ಬದುಕೇ ವಿನಾಶವಾಗುತ್ತದೆ ಉಸಿರಾಗು ಮುಂಗಾರು ಮಳೆಯೇ ಎಂದು ಕವಯಿತ್ರಿ ಕವಿತೆಯನ್ನು ಕಟ್ಟುವ ರೀತಿ ಸೊಗಸಾಗಿದೆ.

ತುಂಗಾ ಭದ್ರಾ ಕವಿತೆಯ ಶೀರ್ಷಿಕೆಯ ಸುದೀರ್ಘವಾದ ಕವಿತೆಯಲ್ಲಿ ತುಂಗಭದ್ರಾ ನದಿಯ ಉಗಮ ಹರಿವಿನ ಬಗ್ಗೆ ಮಕ್ಕಳಿಗೆ ಹೇಳುವ ಪರಿ, ಸ್ತ್ರೀ ಸ್ಥಿತಿ ಎಂಬ ದೀರ್ಘವಾದ ಕವಿತೆಯಲ್ಲಿ ಶತಮಾನಗಳಿಂದಲೂ  ಹೆಣ್ಣುಮಕ್ಕಳು ಅನುಭವಿಸುತ್ತಿರುವ ಶೋಷಣೆ ಅವಮಾನ ದೌರ್ಜನ್ಯಗಳ ಸರಮಾಲೆಯನ್ನು ಸಾಲುಗಳ ರೀತಿಯಲ್ಲಿ ಪೋಣಿಸಿರುವದು, ವರಕವಿ ದ ರಾ ಬೇಂದ್ರೆಯವರ ಬಗ್ಗೆ ಬರೆದ ದೀರ್ಘ ಕವಿತೆ,  ಕತ್ತಲೆಯ ಬೆಳದಿಂಗಳು, ಉಳ್ಳವರ ಬತ್ತಳಿಕೆ, ಸ್ತ್ರೀ_ಸ್ಥಿತಿ, ಪ್ರಕೃತಿ , ಹೊಂಬಿಸಿಲು ಮುಂತಾದ ಕವಿತೆಗಳು ಸುಂದರ ರಸ ಭರಿತವಾಗಿ ಮೂಡಿಬಂದಿವೆ.

ನಾನು ಕಂಡಂತೆ ಚೊಚ್ಚಲ ಕವನಸಂಕಲನವನ್ನು ಹೊರತರುವ ಕವಿ/ಕವಯಿತ್ರಿರು ತಮ್ಮ ಸಂಕಲನದಲ್ಲಿ ಬಹಳಷ್ಟು ಪ್ರೇಮ ಕವಿತೆಗಳನ್ನೆ ಬರೆದಿರುತ್ತಾರೆ. ಅದರೆ ಅನ್ನಪೂರ್ಣ ಪದ್ಮಶಾಲಿಯವರ ಚೊಚ್ಚಲ ಕವನಸಂಕಲನ ವಿಭಿನ್ನವಾಗಿದೆ. ಇವರು ಪ್ರೀತಿ ಪ್ರೇಮದ ಕವಿತೆಗಳಿಗೆ ಜೋತು ಬೀಳಲಿಲ್ಲ. ಬದಲಾಗಿ ಈ ಸಮಾಜದಲ್ಲಿ ಹೆಣ್ಣಿನ ಶೋಷಣೆ, ರೈತರ ಶೋಷಣೆ ಮನುಜ ಮತ್ತು ಪ್ರಕೃತಿಯ ಸಂಬಂಧ, ಜಾತಿ ಮತಗಳ ವಿಜೃಂಭಣೆಯಿಂದ ಸಮಾಜದಲ್ಲಿ ಹೇಗೆ ಸ್ವಾಸ್ಥ್ಯ ಹೆದೆಗೆಡುತ್ತಿದೆ. ಮನುಜನು ವಿದ್ಯಾವಂತನಾದರೂ  ಈ ಅಧುನಿಕ ಯುಗದಲ್ಲಿ ಹೇಗೆ ಮೌಢ್ಯಚಾರಣೆಗೆ ಬಲಿಯಾಗಿ ಮೂಢನಂಬಿಕೆಗಳ ದಾಸನಾಗಿ ಬರುತ್ತಿದ್ದಾನೆ ಇನ್ನೂ ಮುಂತಾದ ವಿಷಯಗಳ ಮೇಲೆ ಮನಸ್ಸು ಕೃೂಢಿಕರಿಸಿ ಕವಿತೆಗಳನ್ನು ರಚಿಸಿದ್ದಾರೆ. ಉತ್ತಮ  ಕವನಸಂಕಲನವಾದ ಗುರುತಿನ ಕೊರತೆಗಳು ಕೃತಿಯನ್ನು  ಪ್ರತಿಯೊಬ್ಬರು ಓದಿ ಕವಯಿತ್ರಿಯನ್ನು ಪ್ರೋತ್ಸಾಹಿಸಬೇಕಾಗಿದೆ.

ಶ್ರೀಮತಿ ಅನ್ನಪೂರ್ಣ ಪದ್ಮಶಾಲಿ ರವರು ತಮ್ಮ ವೃತಿಯ  ಜೊತೆಗೆ ಕನ್ನಡ ಸಾಹಿತ್ಯದ ಬರವಣಿಗೆಯನ್ನು ಮುಂದುವರಿಸಲಿ ಇವರು ಮುಂದೆ ಹಲವಾರು ಕೃತಿಗಳನ್ನು ಹೊರತರಲಿ ಸಮಾಜ ಸರಕಾರ ಇವರ ಪ್ರತಿಭೆಯನ್ನು ಗುರುತಿಸಲಿ ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಹಾರೈಸುವೆ..

Leave a Reply

Back To Top