ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ

ಹೇಗೆ ಮರೆಯಾಗುವೆ ಚಣಚಣದ ಸಡಗರವೆ/
ಸದ್ದಿಲ್ಲದೆ ಕೈ ಜಾರುವ ಮುಸ್ಸಂಜೆಯ ಚಲುವೆ/
ಕಣಕಣದಿ ಬೆರೆತ ತನಿರಸದ ವರವೆ/
ನೋಡುವ ನೋಟದಲಿ ನೆಲೆನಿಲ್ಲುವ ಸಾರವೆ/

ಕಬ್ಬಿಗರ ಎದೆಯೊಳಗೆ ನಲಿದಾಡುವ ಒಲವೆ/
ಅಕ್ಕರದ ರೂಪದಲಿ ಕವಿತೆ ನೀನಾಗುವೆ/
ಮನದ ತಳಮಳ ನೀಗೊ ಸೊಬಗಿನಾಗರವೆ/
ಕಣ್ಣಂಚ ಮಿಂಚಾಗಿ ಆನಂದ ನೀಡುವೆ/

ಆಗಸದ ನಸುಗೆಂಪು ಕುರುಹಾಗಿ ತೋರುವುದು/
ಮೊಗ್ಗು ಅರೆಬಿರಿದು ಕಂಪು ಸೂಸುವುದು/
ತಡವಾದರೆ ಮಬ್ಬು ನಭವ ಕವಿಯುವುದು/
ಒಂಟಿ ವಿರಹದೆದೆ ಜೊತೆಯ ಬಯಸುವುದು/

ಇಂದು ನಾಳೆಗಳ ಮೇಳೈಸಿದ ಶುಭಗಳಿಗೆ/
ಹಸಿರು ಶೋಭಿಸಿದೆ ಶಾಂತ ಭೂರಮೆಗೆ/
ಕಾದಿಹುದು ಹಾದಿ ಒಲವಿನ ಹೆಜ್ಜೆಗೆ/
ಭರವಸೆ ತುಂಬುತ ನಾಳೆಯ ಕನಸಿಗೆ/

ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//


Leave a Reply

Back To Top