ಪ್ರೇಮಾ ಟಿಎಂಆರ್ ಅವರ ಕವಿತೆ-ನಾನು ಅತಿ ಕೆಟ್ಟ ಹೆಣ್ಣು

ಹಾಂ ನಾನು ಅತಿ ಕೆಟ್ಟ ಹೆಣ್ಣು
ನೀವೇ ಹೇಳಿದ ಮೇಲೆ ಸುಳ್ಳಾಗುವದು ಹೇಗೆ?
ಅದೆಷ್ಟು ಶಾಸನಗಳ ಬರೆದವರು

ನಿಮ್ಮ ಗಿಳಿ ಶಾಸ್ತ್ರಕ್ಕೆಲ್ಲ ಹೂಂ ಗುಟ್ಟು ಸಾಕಾಗಿದೆ
ನೋಡಿ ನೆತ್ತಿಯ ಒತ್ತುಗೂದಲ ಮರೆಯಲ್ಲಿ
ಕೂದಲು ಬೆಳ್ಳಿಯಾಗಿದೆ
ಈಗಾದರೂ ಒಂಚೂರು ನನಗಾಗಿ
ನಾ ಬದುಕಬೇಕೆಂದುಕೊಂಡೆ

ನಿನ್ನೆ ಮೊನ್ನೆ ಅಷ್ಟೇಕೆ ಈ ಕ್ಷಣದವರೆಗೆ
ನಾಳೆ ನನ್ನದು ಅನ್ನುತ್ತಲೇ ಬದುಕಿದ್ದಾಯ್ತು
ಕುರಿಕೊಬ್ಬಿದಷ್ಟು ಕಟುಕನಿಗೆ ಲಾಭ
ಎಂದುಕೊಂಡು ಅದೆಷ್ಟು ಉಬ್ಬಿಸಿದಿರಿ
ಈಗೆನಗೆ ಭಾವ ವೈರಾಗ್ಯ
ಏನಾದರೂ ಹೇಳಿ ನನ್ನ ಹೂ ಎನ್ನಬೇಡಿ
ಬೆಳ್ಳಂಬೆಳಗೆ ಅರಳಿ ಅವರಿವರ ತಣಿಸಿ
ಇರುಳು ನಿಮ್ಮ ಮೆತ್ತನೆಯ
ಪಲ್ಲಂಗವಾಗುರುಳಿ ಇಲ್ಲವಾಗಿವದು
ಬೇಕಿಲ್ಲ ನನಗೆ


ನಾನು ಅತಿ ಕೆಟ್ಟ ಹೆಣ್ಣು
ನಮ್ಮ  ಉದ್ಧಾರ ಮಾಡುವ ನಿಮ್ಮ ಹುಕ್ಕಿಗೂ
ಒಂದು ಟಾಂಗು ಕೊಡಬೇಂದಿದ್ದೇನೆ
ನಿಮ್ಮ ನಡುಮನೆಯಲ್ಲಿ ಉಯ್ಯಾಲೆಯಾಗಿ
ತೂಗಿದವಳು ನಾನು
ದೇವರ ಗುಡಿಯೊಳಗೆ ನಂದಾದೀಪವಾಗಿ
ಉರಿದವಳು ನಾನೇನೆ
ನಿಮ್ಮ ತಾಪದ ಸುಡು ಹಣೆಗೆ
ತಂಪು ತುಟಿಯೂರಿ ಹಗಲು
ಇರುಳು ಕಾದ ನಾನು ಕೆಟ್ಟ ಹೆಣ್ಣು
ನೀವು ತಲೆಮೇಲಿಟ್ಟುಕೊಂಡು
ಮೆರೆಸುವ ಪಂಚಕನ್ನೆಯರನ್ನು
ನನ್ನ ಕಣ್ಣೀರಲ್ಲದ್ದಿ ಕೊಲ್ಲಬೇಕೆಂದಿದ್ದೇನೆ
ನಾನು ಅತಿಕೆಟ್ಟ ಹೆಣ್ಣು
ಅದೋ ಆ ರಂಗೋಲಿಯಲ್ಲಿ ನಗುತ್ತೇನೆ
ಯಾರದೋ ದಾಹ ತಣಿಸುತ್ತ
ಇನ್ನ್ಯಾರದೋ ದೇಹ ತಣಿಸುತ್ತ…


Leave a Reply

Back To Top