“ಪುಸ್ತಕ ಎಂಬ ಆತ್ಮಸಖ”ವೀಣಾ ಹೇಮಂತ್ ಗೌಡ ಪಾಟೀಲ್” ಅವರ ಲೇಖನ

ನನ್ನ ತಂದೆಯನ್ನು ನೆನಪಿಸಿಕೊಂಡರೆ ಯಾವಾಗಲೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತಿರುವ ದೃಶ್ಯವೇ ಕಣ್ಣ ಮುಂದೆ ಬರುತ್ತದೆ. ನಾನು ನನ್ನ ಕೋಣೆಯಲ್ಲಿ ಓದುತ್ತಾ ಬರೆಯುತ್ತಾ ಕುಳಿತಾಗಲು ಕೂಡ ನನ್ನ ಪಕ್ಕದ ಮಂಚದಲ್ಲಿ ತುಸು ಓರೆಯಾಗಿ ಮಲಗಿ/ಕುಳಿತು ಪುಸ್ತಕವನ್ನು ಓದುತ್ತಿದ್ದರು ನನ್ನ ತಂದೆ. ಜೊತೆ ಜೊತೆಗೆ ಒಳ್ಳೆಯ ಪುಸ್ತಕಗಳನ್ನು ಲೇಖನಗಳನ್ನು ತೋರಿಸಿ ಓದಲು ಪ್ರೋತ್ಸಾಹಿಸುತ್ತಿದ್ದರು.ಅವರ ಈ ಹವ್ಯಾಸಗಳನ್ನು ನೋಡುತ್ತಲೇ ಬೆಳೆದ ನಮಗೆ ಪುಸ್ತಕ ಸಂಗಾತಿಯಾಗಿದ್ದು ಆಶ್ಚರ್ಯವೇನಲ್ಲ.

ಬಾಗಲಕೋಟೆಯ ನನ್ನ ದೊಡ್ಡಮ್ಮನ ಮನೆಯಲ್ಲಿ 1900ರ ಆದಿಯಲ್ಲಿ ಪ್ರಕಟವಾದ ಬಾಲಮಿತ್ರ ಪತ್ರಿಕೆಗಳನ್ನು ಗಂಟೊಂದರಲ್ಲಿ ಕಟ್ಟಿ ಅಟ್ಟದ ಮೇಲೆ ಇಟ್ಟಿದ್ದರು. ಪ್ರತಿ ಬಾರಿ ಬೇಸಿಗೆ ರಜೆಗೆ ಹೋದಾಗ ಅತ್ಯಂತ ಮಜಬೂತಾದ ಕಟ್ಟಿಗೆಯ ಹಲಗೆಗಳನ್ನು ಜೋಡಿಸಿ ಮಾಡಿದ ಆ ಸುವಿಶಾಲ ಅಟ್ಟದಲ್ಲಿ ಕುಳಿತುಕೊಂಡು ನಾನು ಮತ್ತು ನನ್ನಣ್ಣ ಒಂದೊಂದೇ ಪುಸ್ತಕಗಳನ್ನು ತೆಗೆದು ಕಥೆ ಓದುತ್ತಿದ್ದರೆ ಊಟ ನಿದ್ರೆಗಳ ಪರಿವೆಯೂ ಇರುತ್ತಿರಲಿಲ್ಲ. ಊಟದ ಸಮಯವಾದರೂ ಕೆಳಗಿಳಿದು ಬರದ ನಮ್ಮನ್ನು ನೋಡಿ ಮನೆಯವರೆಲ್ಲ ಹುಸಿ ಮುನಿಸು ತೋರುತ್ತಿದ್ದರು. ವೀಣಾ, ವಿಶ್ವ ಎಲ್ಲಿದ್ದಾರೆ ಎಂದು ಕೇಳಿದರೆ ಅಟ್ಟದ ಮೇಲೆ ಎಂಬಂತಹ ಸಿದ್ದ ಉತ್ತರಗಳು ದೊರೆಯುತ್ತಿದ್ದವು.

ಒಂದನೇ ತರಗತಿಯಲ್ಲಿ ಇದ್ದಾಗ ಅ. ನ ಕೃಷ್ಣರಾಯರು ಬರೆದ ಕಣ್ಣೀರು ಕಾದಂಬರಿಯನ್ನು ಸಂಪೂರ್ಣವಾಗಿ ಓದಿದ್ದೆ. ಕೌಟುಂಬಿಕ ಕಾದಂಬರಿಯಾಗಿದ್ದ ಕಣ್ಣೀರು ಕಾದಂಬರಿಯ ಕಥೆ ಇಂದಿಗೂ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ. ಮುಂದೆ ಎಂ.ಕೆ.ಇಂದಿರಾ ಅವರ ಚಿದ್ವಿಲಾಸ ಕಾದಂಬರಿಯನ್ನು ಮೂರನೇ ತರಗತಿಯ ಸುಮಾರಿಗೆ ಓದಿದ್ದೆ.
ಆ ಕಾದಂಬರಿಯ
“ಮಾನವನ ಜೀವನ ಕಲ್ಪನಾ ವಿಲಾಸ ನಿಸರ್ಗದ ಪ್ರತಿಕ್ರಿಯೆ ಚಿದ್ವಿಲಾಸ ” ಎಂಬ ನುಡಿಗಳು ಇಂದಿಗೂ ಬಾಯಿಪಾಠವಾಗಿವೆ.

ನನ್ನೆಲ್ಲಾ ಓದುಗಳಿಗೆ ಸಂಗಾತಿ ನನ್ನ ಸೋದರಿಗಿಂತಲೂ ಹೆಚ್ಚಾದ ಸ್ನೇಹಿತೆ ಸುನಂದ. ನನಗಿಂತ ಕೇವಲ ಒಂದೆರಡು ವರ್ಷ ಹಿರಿಯಳಾದ ಸುನ್ನಕ್ಕ ಮತ್ತು ನಾನು ಆ ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಳ ಕುರಿತು ಚರ್ಚಿಸುತ್ತಿದ್ದೆವು ಎಂದರೆ ನಮ್ಮ ಓದಿನ ಹುಚ್ಚು ಎಷ್ಟಿತ್ತು ಎಂಬುದರ ಅಂದಾಜು ದೊರೆಯಬಹುದು. ರಜಾ ದಿನಗಳಲ್ಲಿ ಇಬ್ಬರೂ ಕುಳಿತು ಇಲ್ಲವೇ ಮಂಚದ ಮೇಲೆ ಮಲಗಿಕೊಂಡು ಒಂದೇ ಪುಸ್ತಕವನ್ನು ಜೊತೆಯಾಗಿ ಓದುತ್ತಿದ್ದ ನೆನಪು ಇನ್ನೂ ಹಚ್ಚ ಹಸಿರಾಗಿದೆ.

ಮುಂದೆ ಶಾಲೆಗೆ ಹೋದಾಗಲೂ ಶಾಲೆಯ ಪುಸ್ತಕಗಳ ಜೊತೆ ಜೊತೆಗೆ ಕಥೆ ಪುಸ್ತಕಗಳು ಗಳನ್ನು ಕೂಡ ಕೊಂಡೊಯ್ದು ವಿರಾಮದ ಅವಧಿಯಲ್ಲಿ ಓದುತ್ತಿದ್ದೆ. ಚಂದಮಾಮ, ಬಾಲಮಿತ್ರ, ಚಂಪಕ ಪುಸ್ತಕಗಳು ನಮ್ಮ ಬಾಲ್ಯದ ನೆಚ್ಚಿನ ಸಂಗಾತಿಗಳಾಗಿದ್ದವು.
ಮನೆಯಲ್ಲಿ ನನ್ನ ತಂದೆ ತರಂಗ, ಸುಧಾ ವಾರಪತ್ರಿಕೆಗಳನ್ನು, ಮಯೂರ ಮತ್ತು ತುಷಾರ ಮಾಸ ಪತ್ರಿಕೆಗಳನ್ನು, ಪ್ರಜಾವಾಣಿ ದಿನಪತ್ರಿಕೆಯನ್ನು ಕಡ್ಡಾಯವಾಗಿ ತರಿಸುತ್ತಿದ್ದರು. ಆಗಿನ ಸಮಯದಲ್ಲಿ ಮನೆಯಲ್ಲಿ ಕರೆಂಟ್ ಹೋಗಿ ವಿದ್ಯುತ್ ದೀಪ ಕೈ ಕೊಟ್ಟಾಗ ನಾನು ಮತ್ತು ನನ್ನಪ್ಪ ಕಂದೀಲಿನ ದೀಪ, ಇಲ್ಲವೇ ಮೇಣದ ದೀಪದ ಅಡಿಯಲ್ಲಿ ಕುಳಿತು ಮಯೂರ ಮತ್ತು ತುಷಾರ ಪುಸ್ತಕಗಳನ್ನು ಓದುತ್ತಿದ್ದೆವು. ಕರೆಂಟ್ ಹೋಗುವುದು ನಮ್ಮ ಪಾಲಿಗೆ ಶಾಲಾ ಓದು ಬರಹಗಳ ನಡುವೆ ವಿರಾಮದ ಸಮಯದಂತೆ ತೋರುತ್ತಿತ್ತು.

ಮುಂದೆ 7ನೇ ತರಗತಿಯ ರಜಾ ದಿನಗಳಲ್ಲಿ ಪಕ್ಕದ ಮನೆಯ ಹಿರಿಯ ಸ್ನೇಹಿತೆಯೊಂದಿಗೆ ಲೈಬ್ರರಿಯಲ್ಲಿ ಮೆಂಬರ್ಶಿಪ್ ಮಾಡಿಸಿ ಪುಸ್ತಕಗಳನ್ನು ತಂದು ಓದಲು ಆರಂಭಿಸಿದೆ. ಆ ಸಮಯದಲ್ಲಿ ಓದಿದ ಕಾದಂಬರಿಗಳಲ್ಲಿ ಸಾಮಾಜಿಕ, ಪತ್ತೆದಾರಿ, ಥ್ರಿಲ್ಲರ್, ಪೌರಾಣಿಕ ಕಾದಂಬರಿಗಳು ಹೆಚ್ಚು. ಇದರ ಜೊತೆ ಜೊತೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳನ್ನು ಓದುವ ಮೂಲಕ ನಮ್ಮ ಓದಿನ ಚಪಲವನ್ನು ತೀರಿಸಿಕೊಳ್ಳುತ್ತಿದ್ದೆವು. ಅದೊಂದು ತೀರದ ದಾಹ. ದಣಿವರಿಯದ ಕಾರ್ಯ ಚಟುವಟಿಕೆ ನಮ್ಮ ಪಾಲಿಗೆ. ನನ್ನನ್ನು ರಜೆಗೆ ತಮ್ಮ ಊರಿಗೆ ಕರೆದುಕೊಂಡು ಹೋಗಬೇಕಾದರೆ ನನ್ನ (ದೊಡ್ಡಮ್ಮನ ಸೊಸೆ) ಅತ್ತಿಗೆ ತಾವು ವಾಸಿಸುತ್ತಿದ್ದ ಹೊಸಪೇಟೆಯಲ್ಲಿ ಲೈಬ್ರರಿಗೆ ಮೆಂಬರ್ಶಿಪ್ ಮಾಡಿಸಿ ಕೊಡುವುದಾಗಿ ಆಮಿಷ ಒಡ್ಡಿ ಕರೆದೊಯ್ಯುತ್ತಿದ್ದರು! ಮತ್ತು ಮಾಡಿಸಿ ಕೊಡುತ್ತಿದ್ದರು ಕೂಡ(ಇಲ್ಲದಿದ್ದರೆ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿರಲಿಲ್ಲ ಎಂಬ ಭಯದಿಂದ!).ಯಾರಾದರೂ ಸಂಬಂಧಿಗಳ ಮನೆಗೆ ಹೋದಾಗ ಅಲ್ಲಿ ನಾನು ನೋಡುತ್ತಿದ್ದದ್ದು ಪುಸ್ತಕಗಳನ್ನೇ. ಹಾಗೇನಾದರೂ ಪುಸ್ತಕ ದೊರಕಿದಲ್ಲಿ ಯಾರೂ ನನ್ನ ಏಕಾಂತ ಓದಿಗೆ ಧಕ್ಕೆ ಬರದಂತಹ ಆ ಮನೆಯ ಒಂದು ನಿಶ್ಯಬ್ದ ಮೂಲೆ, ಇಲ್ಲವೇ ಅಟ್ಟ ಇಲ್ಲವೇ ತಾರಸಿಯ ಮೆಟ್ಟಿಲುಗಳ ಮೇಲೆ ಕುಳಿತು ಪುಸ್ತಕಗಳನ್ನು ಓದಿ ಮುಗಿಸುತ್ತಿದ್ದೆ. ನನ್ನ ರೀಡೆಬಲಿಟಿ ಕೂಡ ಬಹಳ ಉತ್ತಮವಾಗಿತ್ತು. ಸುಮಾರು ನಾನೂರಕ್ಕೂ ಹೆಚ್ಚು ಪುಟಗಳ ಒಂದು ಪುಸ್ತಕವನ್ನು ಕೇವಲ ಕೆಲವೇ ಗಂಟೆಗಳ ಓದುವಿಕೆಯಲ್ಲಿ ಮುಗಿಸಿರುತ್ತಿದ್ದೆ. ಯಾವುದೇ ಗುರುತರ ಜವಾಬ್ದಾರಿಗಳಿಲ್ಲದ ಆ ದಿನಗಳ ಓದುವಿಕೆಯ ಶೇಕಡಾ 25ರಷ್ಟು ಕೂಡ ಈಗ ಓದಲು ಸಾಧ್ಯವಾಗುತ್ತಿಲ್ಲ! ಎಂಬುದು ವಿಷಾದನೀಯ. ಆದರೆ ಅದೆಷ್ಟೇ ಕೆಲಸದ ಒತ್ತಡಗಳ ನಡುವೆಯೂ ಓದುವುದನ್ನು ಬಿಡುವುದಿಲ್ಲ ಎಂಬುದು ಅಷ್ಟೇ ಖುಷಿ ತರುವ ವಿಷಯ.

ಅಷ್ಟೇನೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಹಾವಳಿ ಇಲ್ಲದ ಕಾಲದಲ್ಲಿ ನಾವು ಓದುತ್ತಿದ್ದ ಪುಸ್ತಕಗಳಲ್ಲಿನ ಇಷ್ಟವಾದ ವಾಕ್ಯಗಳನ್ನು, ಕೊಟೇಶನ್ ಗಳನ್ನು ಶಾಯರಿಗಳನ್ನು ಬೇರೊಂದು ಪುಸ್ತಕದಲ್ಲಿ ಬರೆದು ಎತ್ತಿಟ್ಟು ಕೊಳ್ಳುತ್ತಿದ್ದ ನನ್ನ ಬಳಿ ಇಂದಿಗೂ 15ಕ್ಕೂ ಹೆಚ್ಚು ಡೈರಿಗಳು ಹಾಗೆಯೇ ಇವೆ. ಯಾವಾಗಲಾದರೂ ಪುರುಸೊತ್ತಾದಾಗ ಅವುಗಳನ್ನು ತಿರುವಿ ಹಾಕುವಾಗ ಬಾಲ್ಯದ ಸವಿ ನೆನಪುಗಳು,ಓದಿನ ಕುರಿತಾದ ನನ್ನ ಅಗಾಧ ಹಂಬಲ ನೆನಪಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅದೆಷ್ಟು ಆಸಕ್ತಿ ಇತ್ತು ಎಂದು ಯೋಚಿಸಿದರೆ ಖುದ್ದು ನನಗೆ ಆಶ್ಚರ್ಯ ವಾಗುವುದಲ್ಲದೆ ಹೆಮ್ಮೆ ಕೂಡ ಎನ್ನಿಸುತ್ತದೆ.

ಕೆ.ಎಸ್. ನಾರಾಯಣ ಆಚಾರ್ಯರ ಪೌರಾಣಿಕ ಕಥೆಗಳ ಧಾರಾವಾಹಿಗಳು, ಸುದರ್ಶನ ದೇಸಾಯಿ, ಯಂಡಮೂರಿ ವೀರೇಂದ್ರನಾಥ, ರಾಜಾ ಚೆಲ್ಲೂರು, ಸಾಯಿಸುತೆ, ಅನುಪಮಾ ನಿರಂಜನ್, ಎಮ್ ಕೆ ಇಂದಿರಾ, ವಿದ್ಯುಲ್ಲತ, ಡಾ ಕೆ. ಎ.ಅಶೋಕ್ ಪೈ ಅವರ ಮನೋವೈಜ್ಞಾನಿಕ ಧಾರಾವಾಹಿಗಳು ಮತ್ತು ಪುಸ್ತಕಗಳು ಹೀಗೆ ಹತ್ತು ಹಲವು ಜನರ ಪುಸ್ತಕಗಳನ್ನು ಧಾರಾವಾಹಿ ರೂಪದಲ್ಲಿ ವರ್ಷಾನುಗಟ್ಟಲೆ ಓದಿದ್ದು ನನ್ನ ಉಳಿದೆಲ್ಲ ಓದದ ಸ್ನೇಹಿತರಿಗೆ ಹೋಲಿಸಿದರೆ ನಮಗೆ ತುಸು ಪ್ರಪಂಚಜ್ಞಾನ ಹೆಚ್ಚು ಇತ್ತು ಎಂದರೆ ತಪ್ಪಿಲ್ಲ. ಜಾತಿ, ಧರ್ಮ, ಪಂಥ, ಸಾಮಾಜಿಕ ಆಚರಣೆಗಳು, ಹೆಣ್ಣೊಬ್ಬಳ ಮಾನಸಿಕ ತಳಮಳಗಳು, ಆಸೆ ಆಕಾಂಕ್ಷೆಗಳು, ತುಡಿತ ಮಿಡಿತಗಳು, ಪ್ರೀತಿ ಪ್ರೇಮ ಪ್ರಣಯ, ಕೌಟುಂಬಿಕ ತೊಂದರೆಗಳು ನೋವು ಸುಖ ಸಂಸಾರದ ಸಿದ್ಧಮಾದರಿಗಳು ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಹೀಗೆ ಬದುಕಿನ ಎಲ್ಲ ಮಜಲುಗಳ ಪರಿಚಯವಾಗುತ್ತಿತ್ತು ಪ್ರೀತಿ ಪ್ರೇಮ ಭಗ್ನವಾದಾಗ ಉಂಟಾಗುವ ನೋವು, ನಿರಾಶೆ ಹೊಂದಿದಾಗ ತಮ್ಮನ್ನು ತಾವು ಸಂಭಾಳಿಸಿಕೊಂಡು ಮತ್ತೆ ಜೀವನ್ಮುಖಿಯಾಗಿ ಬದುಕು ನಡೆಸುವ ವಿವಿಧ ಜನರ ಚಿತ್ರಣಗಳು, ಆತ್ಮಹತ್ಯೆ ಮತ್ತು ಆಕಸ್ಮಿಕ ಸಾವುಗಳು ಒಂದು ಮನೆ, ಒಂದು ಸಮುದಾಯ, ಒಂದು ಊರಿನ ಮೇಲೆ ಬೀರುವ ಪರಿಣಾಮಗಳು ಹೀಗೆ ನೂರಾರು ವಿಷಯಗಳನ್ನು ಒಳಗೊಂಡಿರುತ್ತಿದ್ದ ವೈವಿಧ್ಯಮಯ ಪುಸ್ತಕಗಳನ್ನು, ಕಾದಂಬರಿಗಳನ್ನು ಧಾರಾವಾಹಿಗಳನ್ನು ಓದುವುದರ ಮೂಲಕ ವಿವಿಧ ಜನರ ವಿವಿಧ ಭಾವಗಳ ಅಭಿವ್ಯಕ್ತಿಯ ಅರಿವಾಗುತ್ತಿತ್ತು.

ಯಂಡಮೂರಿ ವೀರೇಂದ್ರನಾಥರ ದುಡ್ಡು ವರ್ಸಸ್ ದುಡ್ಡು, ಕಪ್ಪಂಚು ಬಿಳಿ ಸೀರೆ, ಸ್ಟುವರ್ಟುಪುರಂ ಪೊಲೀಸ್ ಸ್ಟೇಷನ್, ತ್ರಿನೇತ್ರ ಮುಂತಾದ ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ನಮಗೆ ದೊರೆತಿದ್ದವು. ಆಧುನಿಕ ವ್ಯಾಪಾರಿ ಜಗತ್ತು ಅಲ್ಲಿ ಹೂಡುವ ತಂತ್ರ ಪ್ರತಿ ತಂತ್ರಗಳು, ಜೀವನದಲ್ಲಿ ದುಡ್ಡಿನ ಮಹತ್ವ, ಭಾವನಾತ್ಮಕ ವಿಷಯಗಳ ಜೊತೆ ಜೊತೆಗೆ ಲೌಕಿಕ ವಾಸ್ತವ ವಿಷಯಗಳು ಮೇಳಯಿಸುವಿಕೆಯನ್ನು ನಮಗೆ ಪರಿಚಯಿಸಿದ್ದು ಯಂಡಮೂರಿ ವೀರೇಂದ್ರನಾಥ್. ಶೋಭಾ ಡೇ ಎಂಬ ಇಂಗ್ಲಿಷ್ ಮತ್ತು ಹಿಂದಿಯ ಲೇಖಕಿ ಪರಿಚಯವಾಗಿದ್ದು ತರಂಗ ಪತ್ರಿಕೆಯ ಮೂಲಕ. ತುಸು ಬೋಲ್ಡ್ ಎನಿಸುವ ಆಧುನಿಕ ಜಗತ್ತಿನ ಕುರಿತ ಧಾರಾವಾಹಿಗಳು, ಸಂತೋಷ್ ಕುಮಾರ್ ಗುಲ್ವಾಡಿಯವರ ಅಂತರಂಗ ಬಹಿರಂಗ, ಹಾ.ಮಾ. ನಾಯಕ್ ಅವರ ಅಂಕಣ ಬರಹಗಳು. ಸುನಂದನಮ್ಮನವರ ರಾಶಿಯವರ ಹಾಸ್ಯ ರಸಾಯನಗಳು ಹೀಗೆ ಹತ್ತು ಹಲವು ವಿಷಯಗಳನ್ನು ಓದಿದ ಅನುಭವಗಳು ಕಟ್ಟಿಕೊಟ್ಟ ಬುತ್ತಿ ಜೀವನದ ಕೊನೆಯವರೆಗೂ ಇರುತ್ತವೆ….ಒಂದೇ ಎರಡೇ ಈ ಕಥೆ, ಕವನ,ಕಾದಂಬರಿಗಳು ನಮಗೆ ವಿಭಿನ್ನ ಸಂಸ್ಕೃತಿಯ ವೈವಿಧ್ಯಮಯ ವಿಷಯಗಳನ್ನು, ಬದುಕಿನ ಹಲವಾರು ಪಾಠಗಳನ್ನು ಕಲಿಸಿಕೊಟ್ಟವು ಎಂದರೆ ತಪ್ಪಿಲ್ಲ.

ಬದುಕು ಮಗ್ಗಲು ಹೊರಳಿಸಿದಂತೆಯೇ ಆಸಕ್ತಿಗಳು ಭಿನ್ನವಾಗಿ ಪ್ರೀತಿ ಪ್ರೇಮ ಪ್ರಣಯದ ಕಾದಂಬರಿಗಳಿಗಿಂತ ಹೆಚ್ಚು ಆಪ್ತವಾದದ್ದು ರವಿ ಬೆಳಗೆರೆಯವರ ಪುಸ್ತಕಗಳು. ನಾವು ನೋಡದ, ಕೇಳದ ಹತ್ತು ಹಲವಾರು ವಿಭಿನ್ನ, ಕುತೂಹಲಕಾರಿ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಮೂಲಕ ನಮ್ಮ ಜ್ಞಾನದ ಜಗತ್ತಿನ ವಿಕಾಸಕ್ಕೆ ಕಾರಣವಾದವರು. ಇದೇ ಸಮಯದಲ್ಲಿ ಓದಿದ ಯಂಡಮೂರಿ ವೀರೇಂದ್ರನಾಥ ಅವರ ವಿಜಯಕ್ಕೆ 5 ಮೆಟ್ಟಿಲು ಪುಸ್ತಕ ನನ್ನ ಕೈಗೆ ದೊರೆತು ನನ್ನ ಬದುಕನ್ನು ವಿಶಿಷ್ಟವಾಗಿ ರೂಪಿಸಿಕೊಳ್ಳಲು, ವಿಶೇಷ ಕಾರ್ಯ ಸೂಚಿಗಳನ್ನು ಹಾಕಿಕೊಳ್ಳಲು ಅನುಕೂಲವಾಗಿತ್ತು ಈ ಪುಸ್ತಕ ನೀಡಿದ ಜ್ಞಾನದಿಂದ. ಮುಂದೆ ನಾನ್ ಫಿಕ್ಷನ್ ಗಳತ್ತ ನನ್ನ ಒಲವು ಹರಿಯಿತು.

ಮದುವೆಯಾಗಿ ಬಂದ ಮೇಲಂತೂ ನನ್ನ ಆಸಕ್ತಿಯನ್ನು ಗಮನಿಸಿದ ನನ್ನ ಮಾವನವರು ಕರ್ಮವೀರ, ತರಂಗ, ಜೀವನಾಡಿ ಮುಂತಾದ ಪತ್ರಿಕೆಗಳನ್ನು ತರಿಸಲಾರಂಭಿಸಿದರು. ಇದರ ಜೊತೆಗೆ ಮನೆಗೆ ಬರುತ್ತಿದ್ದ ಐದಾರು ಪತ್ರಿಕೆಗಳನ್ನು ಓದಲೇಬೇಕೆಂಬ ಹಠದಿಂದ ಓದಲಾರಂಭಿಸಿದೆ. ಪತ್ರಿಕೆಯ ಸಂಪಾದಕೀಯ, ಒಳ ಪುಟಗಳಲ್ಲಿನ ವಿವಿಧ ಬಗೆಯ ಲೇಖನಗಳು, ವ್ಯಕ್ತಿ ಚಿತ್ರಗಳು, ಸ್ವಾರಸ್ಯಕರ ವಿಷಯಗಳು ಮುಂತಾದ ಹತ್ತು ಹಲವು ವಿಷಯಗಳನ್ನು ಎಷ್ಟೋ ಬಾರಿ ಬೇಸರವಾದರೂ ಅರಿತುಕೊಳ್ಳಲೇಬೇಕು ಎಂಬ ಆಸಕ್ತಿಯಿಂದ ಓದಿದ್ದನ್ನು ನೆನೆದರೆ ಇಂದು ಮುಖದಲ್ಲಿ ಮುಗುಳ್ನಗೆ ಮೂಡುತ್ತದೆ.
ಆತ್ಮಕಥನಗಳಲ್ಲಿ ಮೂಡಿ ಬರುವ ಬಾಲ್ಯ, ಯೌವನ, ಸಾಧನೆ, ಸಾಧನೆಯ ಹಿಂದಿರುವ ಬಡತನದ,ನೋವಿನ, ಸಂತಸದ ಕ್ಷಣಗಳು ಆಯಾ ತಲೆಮಾರಿನ ವಿವಿಧ ಚಿತ್ರಣಗಳು, ಬದುಕಿನ ರೀತಿ ನೀತಿಗಳು, ಭಾಷೆ ಶೈಲಿ ಮನದ ಮೂಲೆಯಲ್ಲಿ ಶಾಶ್ವತವಾಗಿ ನೆಲೆಯೂರುತ್ತವೆ. ವ್ಯಾಸರಾಯ ಬಲ್ಲಾಳರ ಕಾದಂಬರಿಗಳಂತೂ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಭಾರತವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ಇಂದಿಗೂ ನೋಡಿರದ ಕಾಣದ ಮುಂಬೈ ಶಹರವನ್ನು ವ್ಯಾಸರಾಯ ಬಲ್ಲಾಳರು ಮತ್ತು ಜಯಂತ್ ಕಾಯ್ಕಿಣಿ ಅವರ ಕೃತಿಗಳಲ್ಲಿ ಇಂಚಿಂಚು ಬಲ್ಲೆವು ಎಂದರೆ ಆಶ್ಚರ್ಯವೇನಿಲ್ಲ. ಕೆ.ಟಿ. ಗಟ್ಟಿಯವರು ಮತ್ತು ಎಸ್ ಎಲ್ ಭೈರಪ್ಪನವರ ಕಾದಂಬರಿಗಳಂತೂ ನಮ್ಮ ಚಿಂತನೆಗಳನ್ನು ಮತ್ತೊಂದು ನೆಲೆಗೆ ಕರೆದೊಯ್ಯುತ್ತವೆ. ಇದರ ಜೊತೆ ಜೊತೆಗೆ ಬಡತನದ ಹಿನ್ನೆಲೆಯಲ್ಲಿಯೂ ಸಾಧಿಸಬೇಕೆಂಬ ಛಲ ಹೊತ್ತು ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದು ಮಹತ್ತರ ಸ್ಥಾನಗಳನ್ನು ಗಳಿಸಿದ ವ್ಯಕ್ತಿಗಳ ವ್ಯಕ್ತಿ ಚಿತ್ರಣ ಸ್ಪೂರ್ತಿಯನ್ನು ತಂದಿವೆ.
ಪತ್ರಿಕೆಗಳಲ್ಲಿನ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಆಸಕ್ತಿ ಇರದಿದ್ದರೂ ಕೆಲವೊಮ್ಮೆ ಓದಿದ ಲೇಖನಗಳು ಇಂದು ನನಗೆ ಎಷ್ಟೋ ವಿಷಯಗಳ ಕುರಿತು ಮಾಹಿತಿ ಮತ್ತು ಜ್ಞಾನವನ್ನು ತುಂಬಿಕೊಟ್ಟಿವೆ. ಪುಸ್ತಕಗಳ ಮೂಲಕ ನಮಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಮಾನವೀಯ ಮೌಲ್ಯಗಳ ಜೊತೆ ಜೊತೆಗೆ ವಿಶ್ವ ಪ್ರೇಮವನ್ನು ಸಹಿಷ್ಣುತಾ ಭಾವವನ್ನು ತಂದು ಕೊಟ್ಟಿವೆ ಎಂದರೆ ತಪ್ಪಲ್ಲ. ಪುಸ್ತಕಗಳು ನಮಗೆ ವಿಭಿನ್ನ ಸ್ವಭಾವದ ಜನರ ಪರಿಚಯಗಳನ್ನು ಮಾಡಿ ಕೊಟ್ಟಿದೆ. ಪುಸ್ತಕಗಳು ನಮಗೆ ಸರಿ ತಪ್ಪುಗಳ, ನ್ಯಾಯ ಅನ್ಯಾಯಗಳ ಕುರಿತು ವಿವೇಚನೆ ನೀಡಿವೆ.

ದಶಕಗಳ ಹಿಂದೆ ಜಿಎಸ್ ಪುಟ್ಟಸ್ವಾಮಯ್ಯನ ವರು ಬರೆದ ಆರು ಸರಣಿ ಕಾದಂಬರಿಗಳು ನಾನು ವಚನ ಸಾಹಿತ್ಯದತ್ತ ಆಕರ್ಷಿಸಲ್ಪಟ್ಟ ಪರಿಣಾಮವಾಗಿ ಹಲವಾರು ಕಾದಂಬರಿಗಳನ್ನು ವಚನಕಾರರು ಮತ್ತು ಅವರ ಜೀವನ ಚರಿತ್ರೆ,ಕಲ್ಯಾಣದ ರಾಜಕೀಯ ಚಾಲುಕ್ಯ ಮತ್ತು ಕಳಚೂರಿ ವಂಶಗಳ ಕೌಟುಂಬಿಕ ರಾಜಕಾರಣ ಅಲ್ಲಿನ ಜನಜೀವನ ವಚನ ಚಳುವಳಿ, ಮುಂದೆ ಕರ್ತಾರನ ಕಮ್ಮಟ ಮತ್ತು ಅಳಿವಿನಿಂದ ಉಳವಿಯೆಡೆಗೆ ಮುಂತಾದ ಕೃತಿಗಳು ನನಗೆ ಆ ಕಾಲದ ರಾಜಕೀಯ ಸಾಂಸ್ಕೃತಿಕ ಸಾಮಾಜಿಕ ಸ್ಥಿತಿಗತಿಗಳನ್ನು ಅರಿಯಲು ಅವಕಾಶ ನೀಡಿದವು. ನಮ್ಮ ಮನೆಯ ಹತ್ತಿರದಲ್ಲಿಯೇ ಇರುವ ಕಾಲೇಜಿನ ಗ್ರಂಥಾಲಯಗಳಿಂದಲೂ ಪುಸ್ತಕಗಳನ್ನು ಎರವಲು ತಂದು ಓದುತ್ತಿದ್ದ ನಾನು ಎಷ್ಟೋ ಬಾರಿ ನನ್ನ ಮನೆಯ ಅನಕ್ಷರಸ್ಥ ಕೆಲಸದ ವ್ಯಕ್ತಿ ಗ್ರಂಥಾಲಯಕ್ಕೆ ಹೋಗಿ ತಂದು ಕೊಡುವ ವಿವಿಧ ಪುಸ್ತಕಗಳನ್ನು ಓದುತ್ತಿದ್ದೆ.

ಪುಸ್ತಕಗಳು ಮತ್ತು ಚಲನಚಿತ್ರಗಳು ನಮ್ಮ ಜೀವನದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಾವು ಓದುವ ಪುಸ್ತಕ ಮತ್ತು ನಾವು ನೋಡುವ ಚಲನಚಿತ್ರಗಳ ವ್ಯಕ್ತಿಗಳೇ ನಾವಾಗಿ ಆ ಪಾತ್ರಗಳನ್ನು ನಮ್ಮಲ್ಲಿ ನಾವು ಆವಾಹಿಸಿಕೊಂಡುಬಿಡುತ್ತೇವೆ.

ಈ ಶತಮಾನದ ಮಕ್ಕಳಿಗಿಂತ ನಾವು ಬಲು ಭಾಗ್ಯಶಾಲಿಗಳು. ನಮ್ಮ ಚಿತ್ತವನ್ನು ಕೆಡಿಸುವ, ಸಮಯವನ್ನು ಹಾಳು ಮಾಡುವ, ತಪ್ಪು ಸರಿಗಳ ಪರಿವೇ ಇಲ್ಲದೆ ಸುದ್ದಿಗಳ ರಾಶಿಯನ್ನೇ ಹೊತ್ತು ತರುವ ಅಂತರ್ಜಾಲ, ಲ್ಯಾಪ್ ಟಾಪ್, ದೂರದರ್ಶನದ ನೂರಾರು ಚಾನಲ್ಗಳು, ಕೂತಲ್ಲಿಂದ ಕಾಲ್ಕೀಳದಂತೆ ನಮ್ಮನ್ನು ಒರಗು ಕುರ್ಚಿಗೆ ಫೆವಿಕಾಲ್ ಹಾಕಿದಂತೆ ಕೂಡಿಸಿರುವ ಮೊಬೈಲ್ ಫೋನ್ ಗಳು ನಮ್ಮ ಓದುವ ಹವ್ಯಾಸವನ್ನು ನುಂಗಿ ಹಾಕಿವೆ. ಆಗ ಯಾವುದೋ ಒಂದು ವಿಷಯವನ್ನು ಹುಡುಕುವ ಸಲುವಾಗಿ ಹಲವಾರು ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದ ನಾವುಗಳು ಇಂದು ನಿರ್ದಿಷ್ಟ ವಿಷಯದ ವಿವರ ಪಡೆಯಲು ಗೂಗಲ್ ಅಮ್ಮನ ಮೊರೆ ಹೋಗಿದ್ದೇವೆ. ಆಕೆಯೋ ಮಹಾತಾಯಿ…. ನಾವು ಒಂದು ಕೇಳಿದರೆ ಹಲವು ಹನ್ನೊಂದನ್ನು ಬಡಿಸುವಾಕೆ. ಹೀಗಾಗಿ ಪುಸ್ತಕ ಎಂಬುದು ಇಂದಿನ ತಲೆಮಾರಿನ ಬಹುತೇಕ ಜನರಿಗೆ ಅಲರ್ಜಿ ಅಂತಾಗಿದೆ. ಅಕಸ್ಮಾತ್ ಯಾರಾದ್ರೂ ಹೆಚ್ಚು ಪುಸ್ತಕವನ್ನು ಓದಿದರೆ ಓದಿ ಕೆಟ್ಟ ಕೂಚು ಭಟ್ಟ, ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂದು ತಮಾಷೆ ಮಾಡಿ ಅವರನ್ನು ಹೀಗಳೆಯುತ್ತಾರೆ. ಗುಲ್ದು, ಬುಕವಾರ್ಮ್ ಎಂದೆಲ್ಲಾ ಹಂಗಿಸುತ್ತಾರೆ.

ಆದರೆ ನಿಜವಾದ ಪುಸ್ತಕ ಪ್ರೇಮಿಗಳು ಬದಲಾದ ಸನ್ನಿವೇಶದಲ್ಲಿಯೂ ಕೂಡ ವಿವಿಧ ಮಾಧ್ಯಮಗಳ ಮೂಲಕ ದೊರೆಯುವ ಕಥೆ, ಕವನ, ಕಾದಂಬರಿಗಳನ್ನು ಇಂದಿಗೂ ಓದುತ್ತಾರೆ. ಫೇಸ್ಬುಕ್, ವಾಟ್ಸಪ್ ಗ್ರೂಪ್ ಗಳಲ್ಲಿ ಸಾಹಿತ್ಯವನ್ನು ಓದುವ ಅವುಗಳನ್ನು ಪ್ರೋತ್ಸಾಹಿಸುವ ಸಾವಿರಾರು ಗುಂಪುಗಳು ಇವೆ. ನಿರಂತರವಾಗಿ ಚಟುವಟಿಕೆಗಳನ್ನು ನಡೆಸುವ ವಿವಿಧ ಗ್ರೂಪ್ಗಳ ಅಡ್ಮಿನ್ ಗಳು ಪ್ರೋತ್ಸಾಹದಾಯಕ ಮಾತುಗಳನ್ನು ಆಡುತ್ತಾರೆ ಮತ್ತು ಲೇಖನ ಕವನ ಕಥೆಗಳನ್ನು ಬರೆಯಲು ವಿವಿಧ ರೀತಿಯ ಸ್ಪರ್ಧೆಗಳನ್ನು ಒಡ್ಡಿ ಕಾಲಮಿತಿಯನ್ನು ಕೂಡ ನೀಡಿ, ತಿದ್ದಿಕೊಳ್ಳಲು ತಕ್ಕ ಸಲಹೆ ಸೂಚನೆಗಳನ್ನು ನೀಡುತ್ತಾ ಉತ್ತಮ ಬರಹ ಲೇಖನಗಳಿಗೆ ಕತೆ ಕವನಗಳಿಗೆ ಸರ್ಟಿಫಿಕೇಟ್ ನೀಡುವ ಮೂಲಕ ಪ್ರೋತ್ಸಾಹಿಸುತ್ತಾರೆ. ಓದುಗರು ಬದಲಾಗಿಲ್ಲ ಅವರ ಓದುವ ಶೈಲಿ ಬದಲಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದೀಗ ನನ್ನ ನಂತರ ನನ್ನ ಮಗಳು ಕೂಡ ಅಂತರ್ಜಾಲದಲ್ಲಿ ಪರಿಚಯವಾದ ಪುಸ್ತಕಗಳನ್ನು ಆನ್ಲೈನ್ ನಲ್ಲಿ ತರಿಸಿ ಓದುವ ಮೂಲಕ ನನ್ನ ಪರಂಪರೆಯನ್ನು ಮುಂದುವರಿಸುತ್ತಿದ್ದಾಳೆ.

ಒಟ್ಟಿನಲ್ಲಿ ಪುಸ್ತಕ ಎಂಬ ಆತ್ಮಸಖ ನಮ್ಮನ್ನು ಎಡಬಿಡದಂತೆ ಕಾಯುತ್ತದೆ. ನಮ್ಮ ನೋವಿಗೆ ತನ್ನ ತಿಳುವಳಿಕೆಯ ಮುಲಾಮು ಸವರುತ್ತದೆ. ತಲ್ಲಣಗೊಂಡ ಮನಸ್ಸಿಗೆ ಸಮಾಧಾನ ಶಾಂತಿ ನೀಡುತ್ತದೆ. ನವರಸಗಳನ್ನು ಪರಿಚಯಿಸುತ್ತದೆ.

ಎಲ್ಲರೂ ಪುಸ್ತಕಗಳನ್ನು ಓದಿ ನಿಮ್ಮ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
ವಿಶ್ವ ಪುಸ್ತಕ ದಿನದ ಶುಭಾಶಯಗಳನ್ನು ತುಸು ತಡವಾಗಿ ಕೋರುವ


Leave a Reply

Back To Top