ಓದುವ ಗೀಳು ವಿಶೇಷ ಲೇಖನ-ಸುಜಾತಾ ರವೀಶ್

ಓದುವುದು ಎಂದರೆ ನಿಜಕ್ಕೂ ನನ್ನ ಪಾಲಿಗೆ ಗೀಳೇ……ಅಕ್ಷರ ಸೇರಿಸಿ ಓದಲು ಕಲಿತಾಗಿನಿಂದ ನನ್ನ ಈ ಪಯಣ ಆರಂಭ ಎಂದರೆ ಸುಳ್ಳಲ್ಲ . ನನ್ನ ಮೊಟ್ಟಮೊದಲ ಓದುಗಳೆಂದರೆ ಭಾರತಭಾರತಿ ಪುಸ್ತಕ ಸಂಪದಲದ ಪುಸ್ತಕಗಳು ಹಾಗೂ ನಿಯತಕಾಲಿಕದ ಮಕ್ಕಳ ಪುಟಗಳು . ಎಷ್ಟು ಅದ್ಭುತ ಲೋಕದ ರಮ್ಯ ಪ್ರಯಾಣ . ಸಹಜವಾಗಿಯೇ ಓದಿನ ಹಂಬಲ ಮನಸ್ಸಿನಲ್ಲಿ ಇದ್ದದ್ದಕ್ಕೆ ಅಪ್ಪ ಅಮ್ಮ ನೀರೆರೆದು ಪೋಷಿಸಿದ್ದು . ನೋಡಿದ ಸುತ್ತಮುತ್ತಲಿನವರ ಬೆರಗಿನ ಮೆಚ್ಚುಗೆ ಚೈಲ್ಡ್  ಇಗೋಗೆ ಬೂಸ್ಟ್ ಕೊಟ್ಟು ಮತ್ತಷ್ಟು ಬೆಳೆಯುವಂತೆ ಮಾಡಿದ್ದು. ನಿಜಕ್ಕೂ ಅದಕ್ಕಾಗಿ ದೇವರಿಗೆ ನಾನು ಚಿರಋಣಿ . ನಾನು ನೆನಪಿದ್ದಂತೆ ಎರಡನೆಯ ತರಗತಿ ಆಗ .ಭಾರತ ಭಾರತಿ ಪುಸ್ತಕ ಸಂಪದ ಅಲ್ಲದೆ ಅಪ್ಪ ತಂದಿಟ್ಟಿದ್ದ ನಾಗರಹಾವು ಕಾದಂಬರಿಯ ಆಗ 3ಪುಸ್ತಕಗಳು ಅವುಗಳನ್ನು ಓದಿದ್ದೆ .ಅರ್ಥವಾಗಿದ್ದು ಎಷ್ಟೋ ಗೊತ್ತಿಲ್ಲ . ಅಲ್ಲದೆ 3 ಮತ್ತು ನಾಲ್ಕನೇ ಕ್ಲಾಸಿನಲ್ಲಿದ್ದ ನನ್ನ ಗೆಳತಿಯರ ಕನ್ನಡ ಪುಸ್ತಕ ತಂದು ಅದರಲ್ಲಿನ ಎಲ್ಲ ಪಾಠಗಳನ್ನು ಓದಿ ಬಿಟ್ಟಿರುತ್ತಿದ್ದೆ ಕಥೆ ಪದ್ಯ ಓದುವ ಆಸೆಗೆ . ನಮ್ಮ ಪಠ್ಯಪುಸ್ತಕಗಳು ಅಷ್ಟೇ ಬಂದ ತಕ್ಷಣ 1ಓದು ಆಗಲೇಬೇಕು . ಹಾಗೆ ಬೆಂಗಳೂರಿನ ಅಜ್ಜಿ ಮನೆಗೆ ಹೋದರೆ ಅಷ್ಟೇ ಮೈಸೂರಿನಲ್ಲಿ ಸಿಗದಿದ್ದ ಕರ್ಮವೀರ ಮಾಸಿಕಗಳನ್ನು ದಿನಾಂಕಾನುಸಾರ ಚಿಕ್ಕಪ್ಪ ಜೋಡಿಸಿಟ್ಟಿರುತ್ತಿದ್ದರು ಅಲ್ಲದೆ ಕೆಲವೊಂದು ನಿಯತಕಾಲಿಕೆಗಳ ಧಾರಾವಾಹಿ ಬೈಂಡ್ ಮಾಡಿಸಿಡಿತ್ತಿದ್ದರು. ಅವುಗಳನ್ನು ಓದುವುದೇ 1ಮುಖ್ಯ ಕೆಲಸ . ಜತೆಗೆ ನಮ್ಮ ಮನೆಗೆ ತರಿಸದಿದ್ದ ಪಾಪಚ್ಚಿ ಮಾಸ ಪತ್ರಿಕೆಗಳನ್ನು ಓದಬೇಕಿತ್ತು . ಸೋದರತ್ತೆಯ ಮನೆಯಲ್ಲಿ ಚಂದಮಾಮ ಗಳ ತ್ರಿವಳಿ ರಾಜಕುಮಾರಿ ರಾಜಕುಮಾರರ ಕಥೆಗಳು ಬ್ಲೈಂಡ್ ಆಗಿ ಕಾದಿರುತ್ತಿತ್ತು . ಎಲ್ಲರ ಮನೆಗೂ ಹೋದರೆ ನನ್ನ ಕಣ್ಣುಗಳು ಅರಸುತ್ತಿದ್ದುದು ಪುಸ್ತಕಕ್ಕಾಗಿ ಮಾತ್ರ .


ಆಗೆಲ್ಲ ಸಾಮಾನುಗಳನ್ನು ಪೇಪರ್ನಲ್ಲಿ ಕಟ್ಟಿಕೊಡುತ್ತಿದ್ದರು ಅದರೊಳಗಿನ ಅರ್ದಂಬರ್ಧ ಕಥೆ ಓದಿ ಮುಕ್ತಾಯ ಹೇಗಿರಬಹುದಿತ್ತು ಎಂದು ತಲೆಕೆಡಿಸಿಕೊಂಡಿದ್ದೂ ಉಂಟು. ಪದಬಂಧ ಗಳಿದ್ದರೆ ಮೊದಲು ಅವುಗಳನ್ನು ಭರ್ತಿ ಮಾಡುತ್ತಿದ್ದುದು . ನನ್ನ ತಂದೆಯ ಗೆಳೆಯರೊಬ್ಬರ ಮನೆಯಲ್ಲಿ ಊದುಕಡ್ಡಿ ಪ್ಯಾಕಿಂಗ್ ಟ್ಯೂಬ್ ಗಳನ್ನು ಮಾಡಿಕೊಡುತ್ತಿದ್ದರು . ಅದಕ್ಕಾಗಿ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳಿಂದ ಒಂದಿಷ್ಟು ಹಳೇ ಕಂತೆ ಪುಸ್ತಕಗಳನ್ನು ತರುತ್ತಿದ್ದರು . ಅವರು ಹೊಸ ಸ್ಟಾಕ್ ತಂದ ದಿನ ಅವರ ಮನೆಗೆ ಹೋಗಿ ಓದಬಹುದಾದ ಪುಸ್ತಕಗಳನ್ನು ಆರಿಸಿಕೊಂಡು ಬಂದು ಬೇಗ ಓದಿ ವಾಪಸ್ ಕೊಡುತ್ತಿದ್ದೆ. ಕೇಂದ್ರ ಗ್ರಂಥಾಲಯದ ವ್ಯಾನ್ ನಮ್ ಏರಿಯಾಗೆ ಬರುತ್ತಿದ್ದದು ಗುರುವಾರ.  ಒಂದು ವಾರದಲ್ಲಿ ಅಕ್ಕಪಕ್ಕದ ಮನೆಯವರ ಪುಸ್ತಕಗಳನ್ನು ಓದಿ ಮುಗಿಸಿಬಿಡುತ್ತಿದ್ದೆ ನಮ್ಮ ಸದಸ್ಯತ್ವದ 2ಪುಸ್ತಕಗಳಲ್ಲದೆ ನೆರೆಹೊರೆಯವರ ಪುಸ್ತಕಗಳೂ ನನ್ನ  ಓದಿಗೆ ಒದಗುತ್ತಿದ್ದವು.ರಾತ್ರಿ ಹನ್ನೆರಡು 1 ಗಂಟೆಯ ತನಕ ಓದುತ್ತಿದ್ದುದು ಉಂಟು ಆ ಸಮಯಗಳಲ್ಲಿ. ಪಿಯುಸಿ ಹಾಗೂ ಡಿಗ್ರಿ ಗ್ರಂಥಾಲಯಗಳಲ್ಲಿ ಓದುವ ಪುಸ್ತಕಗಳನ್ನು ತಿಳಿದುಕೊಂಡಿದ್ದಕ್ಕಿಂತ ಕಥೆ ಕಾದಂಬರಿ ಕೆಲವೊಂದು ಕವನ ಸಂಕಲನಗಳನ್ನು ತಂದು ಓದಿದ್ದೇ ಹೆಚ್ಚು . ಬನುಮಯ್ಯ ಕಾಲೇಜಿನಲ್ಲಿನ ಗ್ರಂಥಪಾಲಕೂ ನನ್ನ  ಓದುವ ಆಸಕ್ತಿ ನೋಡಿ ಕಾರ್ಡ್ ಇಲ್ಲದೆಯೇ ಕೆಲವು ಪುಸ್ತಕಗಳನ್ನು ಕೊಟ್ಟು ಓದಲು ತಿಳಿಸುತ್ತಿದ್ದರು.  
ಕೆಲಸಕ್ಕೆ ಸೇರಿದ ನಂತರ ಆಫೀಸಿನ ನಿಯತಕಾಲಿಕೆಗಳ ಉಸ್ತುವಾರಿ ನನ್ನದೇ  ನಮ್ಮ ವಲಯ ಕಚೇರಿಯ ಪುಸ್ತಕಗಳ ಗ್ರಂಥಾಲಯ ಆಗತಾನೇ ಶುರುವಾಗುತ್ತಿದ್ದ ನಮ್ಮೆಲ್ಲರ ಸಲಹೆ ತೆಗೆದು ಕೊಂಡು ಪುಸ್ತಕಗಳ ಖರೀದಿಯಾಗಿತ್ತು. ನಿಜಕ್ಕೂ ಓದಲು ಸುವರ್ಣಾವಕಾಶವಾಗಿತ್ತು ಎಷ್ಟೋ ಇಂಗ್ಲಿಷ್ ಲೇಖಕರನ್ನು ಓದಿದ್ದು ಅಲ್ಲಿಯೇ .

ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನ ಗ್ರಂಥಾಲಯ  ಕಾರ್ಡ್ ಮನೆಯಲ್ಲಿ ಇಲ್ಲವೇ ಇಲ್ಲ ಸದಾಕಾಲವೂ ಗ್ರಂಥಾಲಯದಲ್ಲಿಯೇ .. ನನ್ನ ಓದಿನ ಬಕಾಸುರ ಹಸಿವಿಗೆ ತಿನಿಸು ಸಿಕ್ಕಿದ್ದು  ಈ ಗ್ರಂಥಾಲಯಗಳಲ್ಲೇ….

ನನ್ನ ತಂದೆ ಹಾಗೂ ತಂಗಿ ಉತ್ತಮ ಪುಸ್ತಕ ಸಂಗ್ರಹಾಲಯ ಹೊಂದಿದ್ದರಿಂದ ಅವರ ಸಂಗ್ರಹದ ಪುಸ್ತಕಗಳ ಓದುವಿಕೆಯ ಭಾಗ್ಯವೂ ನನಗೆ ದೊರೆತಿದೆ .ಇತ್ತೀಚೆಗೆ ನಾನು ಸಾಕಷ್ಟು ಪುಸ್ತಕಗಳನ್ನು ಕೊಂಡಿರುವುದು ನನ್ನ ಓದಿಗೆ ಮತ್ತಷ್ಟು ಒತ್ತಾಸೆಯಾಗಿದೆ.

ಓದು ಎಂಬುದು ಎಷ್ಟು ಅನಿವಾರ್ಯ ಸಂಗತಿಯಾಗಿದೆ ಎಂದರೆ ನನಗೆ ತಿನ್ನುವಾಗಲೂ ಎಡಗೈಯಲ್ಲಿ ಪುಸ್ತಕ ಇರಲೇಬೇಕು . ಈ ಅಭ್ಯಾಸ ನನ್ನ ಚಿಕ್ಕ ತಂಗಿಯರು ಹಾಗೂ ಕಸಿನ್ ತಮ್ಮಂದಿರಿಗೂ ಬಂದು “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ” ಎಂಬ ಗಾದೆ ನಿಜವಾಗಿಬಿಟ್ಟಿದೆ . ಅಜ್ಜಿಯಂತೂ ನಮ್ಮನ್ನು ಸದಾ ಬಯ್ಯುತ್ತಿದ್ದುದು ಈ ಕಾರಣಕ್ಕಾಗಿಯೇ .

ಈಗ ಮೊಬೈಲ್ ಡಿಜಿಟಲ್ ಯುಗ ಬಂದಮೇಲೂ ಕೈಯಲ್ಲಿ ಪುಸ್ತಕ ಹಿಡಿದು ಓದುವ ಆಸೆಯೇ ನನಗೆ .ತೀರಾ ಅನಿವಾರ್ಯ ಎಂದಾಗ ಮಾತ್ರ ಡಿಜಿಟಲ್ ಓದು . ಊಟ ನಿದ್ರೆ ಗಳಂತೆಯೇ ಓದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ವ್ಯಾಯಾಮವಿಲ್ಲದಿದ್ದರೂ ಓದು  ಮಾತ್ರ ತಪ್ಪಿಸುವುದಿಲ್ಲ ನನ್ನ ಪತಿಯ ಬೈಗುಳಕ್ಕೆ ಇದೂ 1ಕಾರಣ .

ಇಂತಿರ್ಪ ನನ್ನ ಪುಸ್ತಕದ ಗೀಳು ಸದಾ ಹೀಗೆ ಇರಲಿ ಈ ಹವ್ಯಾಸಕ್ಕೆ ಹೆಚ್ಚಿನ ಇಂಬು ದೊರೆಯುತ್ತಿರಲಿ ಎಂದು ಹರಸಿ ಹಾರೈಸಿ ನೀವೆಲ್ಲ .

One thought on “ಓದುವ ಗೀಳು ವಿಶೇಷ ಲೇಖನ-ಸುಜಾತಾ ರವೀಶ್

Leave a Reply

Back To Top