ಎಚ್.ಮಂಜುಳಾ ಹರಿಹರ-ತಂಪೆರೆದು ಕಾಯೋ…ತಂದೆ…!!

ಕರುಣಿಸೋ ತಂದೆ ವರುಣ ದೇವ…
ಧಗ ಧಗಿಸುತಿಹಳು ಅವನಿ
ನೀ ದಯೆ ತೋರದೇ ಗತಿಯ ಕಾಣೆವೋ..
ಕುದಿ ಕುದಿತದ ಬೆಂಕಿ ಆವರಿಸಿ ಎಲ್ಲೆಡೆ
ಬದುಕು ಬೆಂಗಾಡು ಶಿವನೇ…
ಯಾರದೋ ಪಾಪಕ್ಕೆ ಇಡೀ ಮನುಕುಲದ ನರಳಿಕೆ..!
ಬಸಿರು ಬಾಣಂತಿಯರು ಹಸಿ ಹಸುಳೆಗಳ,
ಕುಡಿ ಕುಡಿಯಂದದ ಮಕ್ಕಳ; ಬಳಲಿಕೆ
ಹಾಸಿಗೆ ಹಿಡಿದು ಮೇಲೇಳಲಾಗದವರ ಕನವರಿಕೆ..
ಕಾಣದೇನೋ ನಿನಗೆ…?!
ನಾವೇನೋ…ಪಾಪಿಷ್ಟರು…ಬಿಡು,
ನಳನಳಿಸಲಾಗದೇ ಬಳಲಿ ನೆಲಕ್ಕೊರಗಿವೆ
ಬಳ್ಳಿ ಗಿಡ ಪೊದೆಗಳು, ಕನಲಿ ಹೋಗಿವೆ
ನೆರಳ ನೀಡಬೇಕಾದ ಮರಗಳು;
ಬಿಸಿಲ ಅಲೆಗಳ ಝಳಕ್ಕೆ ನಲುಗಿ
ಸೊರಗಿದ ಪ್ರಾಣಿ ಪಕ್ಷಿಗಳನ್ನಾದರೂ
ಕಾಪಾಡಲು ಬಾರೋ ತಂದೆ..!
ಕರುಣಿಸೋ ತಂದೆ ವರುಣ ದೇವ
ಧಾರೆ ಧಾರೆಯಾಗಿ ಧರೆಗಿಳಿದು
ಸುರಿ ಸುರಿದು ಮಳೆಯಾಗಿಸೋ ಇಳೆಯನ್ನ .
ಬಾಯಿಯಿರದ ಪ್ರಾಣಿಗಳು
ಹಸಿರ ಸಿರಿಯ ಪುಣ್ಯದಲ್ಲಿ –
ಈ ಪಾಪಿಗಳಿಗೊಂದಿನಿತು
ಕರುಣಿಸೋ…
ಎಲ್ಲವನ್ನೂ ತಂಪಾಗಿಸೋ…!!!

Leave a Reply

Back To Top