“ಮನದೊಳಗೊಂದು ಜೀವಿತ” ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

ಮೌನವಾಗಿ ಕುಳಿತು ಕುಳಿತು ಅವರು ತಮ್ಮ ಕೆಲಸಗಳನ್ನು ಮಾಡುತ್ತಿದ್ದರು. ಮನೆಗೆ ಬಂದರೆ ಅದೇ ನೆನಪು ಅವರಿಗೆ ಮರುಕಳಿಸಿ ಬರುತ್ತಿತ್ತು. ಕೃಷಿ ಉಪಕರಣಗಳನ್ನು ನೋಡಿದಾಗಲೆಲ್ಲಾ ಅವರಿಗೆ ಅವು ಅನಾಥವಾದಂತೆ. ಅನಾಥವಾಗಿ ನಕ್ಕಂತೆ. ಯಾರೋ ಅದನ್ನ ಎತ್ತಿಕೊಂಡು ದೂರಕ್ಕೆ ಓಡಿದಂತೆ. ಮತ್ತೆಲ್ಲಿಗೂ ಎಸೆದಂತೆ ಕಾಣುತ್ತಿತ್ತು. ಅಷ್ಟೇ ಅಲ್ಲ ಅವು ಕುಳಿತು ಮಾತನಾಡಿದಂತೆ, ಮನುಷ್ಯರನ್ನು ಬೈದಂತೆ ಕಾಣುತ್ತಿತ್ತು. ತಮ್ಮಣಿ ಮಾಸ್ತರರಿಗೆ ಈವರೆಗೆ ತಮ್ಮ ಮನೆ ಕೃಷಿ ಪ್ರಯೋಗ ಶಾಲೆಯಾಗಿ ಬೆಳೆದು ನಿಂತ ಬಗ್ಗೆ ಹೆಮ್ಮೆ ಇತ್ತು. ತಮ್ಮ ಸ್ವಂತ ತಮ್ಮ ಬದುಕಿರುವವರೆಗೆ ಅವರ ಮನೆ ಊರಿನ ಕೃಷಿ ಚಟುವಟಿಕೆಯ ಜೀವಾಳವಾಗಿರುವುದು ಸತ್ಯ ಎನ್ನುವುದನ್ನು ಆ ಊರಿನ ಎಲ್ಲರ ಬಾಯಿಂದ ಕೇಳಬಹುದಿತ್ತು‌. ಈಗ ಅವರ ತಮ್ಮ ಜೀವಂತವಾಗಿಲ್ಲ. ಹಾಗಾಗಿ ಈಗ ಅವರ ಮನೆಯ ಕೃಷಿಯ ಕೆಲಸ ಎಷ್ಟು ಬೇಕು ಅಷ್ಟು ಮಾತ್ರ ಎನ್ನುವಂತೆ ಇತ್ತು. ಬದುಕಿದ್ದಾಗ ತಮ್ಮ ಕಷ್ಟಪಟ್ಟು ಮಾಡಿದ ಜಮೀನುಗಳೆಲ್ಲಾ ಈಗ ಅನಾಥವಾದವಲ್ಲ ಎಂದು ಅನಿಸುತ್ತಿತ್ತು ಅವರಿಗೆ‌. ಕೃಷಿ ಮಾಡಿದರೆ ಮಾತ್ರ ಪ್ರಕೃತಿಯಲ್ಲಿ ಹಸಿರು ಕಾಣಲು ಸಾಧ್ಯ ಎಂದು ಪಾಠ ಮಾಡುವಾಗ ಎಲ್ಲ ಮಕ್ಕಳಿಗೆ ಹೇಳುವ ತಮ್ಮಣಿ ಮಾಸ್ತರರು ಶಾಲೆ ಬಿಟ್ಟ ಮೇಲೆ ತಲೆಗೊಂದು ಮುಂಡಾಸು ಸುತ್ತಿ ಎತ್ತನ್ನು ಹಿಡಿದು ಹೇರೆರೇ ಹೋಯ್ ಎಂದು ಹಾಡು ಹೇಳುತ್ತಾ ಸಾಗಿದರೆ ಸುತ್ತಮುತ್ತಲಿನ ಗದ್ದೆಗಳಲ್ಲಿನ ಎತ್ತುಗಳು ಹಾಡು ಕೇಳುತ್ತಾ ಹೆಜ್ಜೆ ಹಾಕುತ್ತಿದ್ದವು. ಒಮ್ಮೊಮ್ಮೆ ತಮ್ಮಣಿ ಮಾಸ್ತರರಿಗೆ ಅನಿಸಿದ್ದಿದೆ . ಈ ಮೂಕ ಪ್ರಾಣಿಗಳು ತಮ್ಮ ಹಿಂದಿನ ಜನ್ಮದಲ್ಲಿ ಅಣ್ಣ ತಮ್ಮಂದಿರಾಗಿದ್ದರಬೇಕು. ಮಾತು ಬಾರದ ಅವುಗಳಿಗೆ ಮಾತು ಅರ್ಥವಾಗುವುದು ಖುಷಿ ಅನಿಸುತ್ತಿತ್ತು‌. ಅವೆಲ್ಲವೂ ಈಗ ನೆನಪು ಮಾತ್ರ.
ತಮ್ಮ ಕೃಷಿ ಭೂಮಿಯನ್ನು ನೆಮ್ಮದಿಯ ಆತ್ಮವಾಗಿಸಿಕೊಂಡ ಮಾಸ್ತರರಿಗೆ ಆಸ್ಪತ್ರೆಗೆ ಹೋಗಿ ಬರುವೆ ಎಂದು ಹೇಳಿ ಹೋದ ತಮ್ಮ ಜೀವಂತವಾಗಿ ಬಾರದಾದಾಗ ಆದ ನೋವು ಅಷ್ಟಿಷ್ಟಲ್ಲ. ಮನೆಯ ಉಸಿರೇ ಆಗಿದ್ದ ತಮ್ಮ ಎಲ್ಲರಿಗೂ ಅನ್ನದಾತನಾಗಿದ್ದ. ಅದೆಷ್ಟು ದಿನ ಅವನಿಗೆ ಆ ನೋವು ಕಾಡಿತ್ತೋ…. ಹೇಳದೇ ನೋವನ್ನು ನುಂಗಿ ಬದುಕಿದ. ಆದರೆ ಕೊನೆಗೆ ಇಲ್ಲವಾದ. ಅವನ ಕಾಯಕವೆಂದರೆ ಹಾಗೆ ಅಲ್ಲೊಂದು ಶಿಸ್ತು, ಅಚ್ಚುಕಟ್ಟುತನ, ಸಮಯಪ್ರಜ್ಞೆ , ಮಾಡುವ ಕೆಲಸ ಮುಗಿಯುವವರೆಗೆ ಶ್ರದ್ಧೆ ಅವನದ್ದು‌. ತನ್ನ ಕೆಲಸವಾಯಿತು ತಾನಾಯಿತು ಎಂದು ಎಷ್ಟು ದುಡಿಯಲು ಸಾಧ್ಯವೋ ಅಷ್ಟು ದುಡಿದವ ಮನೆಗಾಗಿ. ಬೆವರಿಗೆಷ್ಟು ಜೀವ ಎಂದು ಮಾಸ್ತರರು ನಗುತ್ತಾ ಕೇಳಿದ್ದಿದೆ ತಮ್ಮನಿಗೆ ಸುಮ್ಮನೇ . ಬೆವರಿಗೆ ಈ ಭೂಮಿ ಅಷ್ಟೇ ಜೀವ ಎನ್ನುತ್ತಿದ್ದ ಮಾತು ನೆನಪಾಯಿತು. ಕೊನೆಯ ಬಾರಿ ತಮ್ಮನ ಮುಖವನ್ನು ನೋಡಬೇಕೆಂದು ಅಂದುಕೊಂಡರು ಮಾಸ್ತರರು ಆಗಲಿಲ್ಲ. ಏಳಲು ಹೋದರೆ ಕಣ್ಣು ಕತ್ತಲಿಟ್ಟಿತ್ತು. ಸಾವರಿಸಿಕೊಂಡು ಹೋಗಿ ನಿಂತರು. ತಮ್ಮನ ಮುಖದ ಮೇಲೆ ಕೈ ಇರಿಸಿ ಮುಖವನ್ನು ದಿಟ್ಟಿಸಿ ನೋಡಿದರು. ತಮ್ಮ ಏನು ಆಗಿಲ್ಲವೆಂಬಂತೆ ಮಲಗಿದ್ದಂತೆ ತೋರಿತು. ಆದರೆ ಜೀವ ಇರಲಿಲ್ಲ. ಮಾಸ್ತರರಿಗೆ ತಡೆಯಲಾಗಲಿಲ್ಲ…… ಅಳುವನ್ನು …..ಸಂಸ್ಕಾರಗಳು ಮುಗಿದವು. ಜೀವಂತವಾಗಿದ್ದ ತಮ್ಮ ನೆನಪುಗಳ ಆಚೆ ಮರೆಯಾದ.

    ಪ್ರತಿವರ್ಷ ಬೆಳೆ ಬಂದಾಗ ಅವನ ಶ್ರಮವನ್ನು ನೋಡಿ ಮಾಸ್ತರರು ಕೊಡುತ್ತಿದ್ದ ಇಪ್ಪತ್ತು ಸಾವಿರದ ನೆನಪಾಯಿತು. ಯಾರಿಗೂ ಕಾಣದಂತೆ ತಾವು ಕೊಡುತ್ತಿದ್ದ ಇಪ್ಪತ್ತು ಸಾವಿರವನ್ನು ತಮ್ಮ ತೆಗೆದುಕೊಳ್ಳಲು ಬೇಸರಿಸುತ್ತಿದ್ದ. ಇದೇಕೆ ನನಗೆ?  ನೀನೇ ಇಟ್ಟುಕೋ. ಬೇಕಾದಾಗ ಕೊಡುವಿಯಂತೆ ಎಂದು ಹೇಳಿ ಸುಮ್ಮನಾಗುತ್ತಿದ್ದ ತಮ್ಮ. ಆದರೆ ಮಾಸ್ತರರೇ  ನಿನಗೆ ಇಟ್ಟುಕೋ. ನಿನಗೆ ಕೈಲಾಗದಾದಾಗ ಬೇಕಾಗುತ್ತದೆ ಎಂದಿದ್ದಿದೆ. ಬೇಡ ಎಂದರೂ ಕೇಳದೇ ಮಾಸ್ತರರು ಅವನ ಕಿಸೆಯಲ್ಲಿ ಇಟ್ಟು ಬರುತ್ತಿದ್ದರು. ತಮ್ಮ ಅವರು ಕೊಟ್ಟ ಹಣವನ್ನು ಅವರ ಹೆಸರಿನಲ್ಲಿ ಶಾಲೆಗೂ, ದೇವರಿಗೂ ಕೊಟ್ಟು ಬರುತ್ತಿದ್ದ.  ತಮ್ಮ ಅಣ್ಣನ ಮೇಲಿನ ಗೌರವದಿಂದ. ತರಗತಿಯಲ್ಲಿ ಒಮ್ಮೊಮ್ಮೆ ಪುಟಾಣಿಗಳ ನಡುವೆ ಕುಳಿತಾಗ ಸಂಬಂಧಗಳು ಈ ವಿಚಾರ ಬಂದರೆ ತಮ್ಮಣಿ ಮಾಸ್ತರರು ಕಣ್ತುಂಬಿ ಕುಳಿತ ಸನ್ನಿವೇಶ ಮಕ್ಕಳಿಗೂ ಪರಿಚಿತ. ಮಕ್ಕಳ ಅರಿವಿಗೆ ಬಾರದಂತೆ ಕಣ್ಣಲ್ಲಿ ಮೂಡಿ ಬಂದ ನೀರನ್ನು ಸುಮ್ಮನೆ ಒರೆಸಿ ದೊಡ್ಡದಾಗಿ ನಕ್ಕು ಕೆಮ್ಮಿ ಬೇರೆಡೆಗೆ ಸೆಳೆಯುವುದು ಅವರಿಗೆ ಕರಗತ. ಆದರೂ ಜೊತೆಗಿದ್ದ ಜೀವ ಈಗ ಇಲ್ಲವಲ್ಲ ಎಂಬ ನೋವು ಸದಾ ಅವರನ್ನು ಕಾಡುತ್ತಿತ್ತು. ಇಡೀ ಕುಟುಂಬಕ್ಕಾಗಿ ದುಡಿದ ತಮ್ಮ ಸುಖವನ್ನು ಬಯಸದೇ ದುಡಿತದಲ್ಲೇ ಕೊನೆಯನ್ನು ಕಂಡಿದ್ದು ತುಂಬಾ ನೋವಾಗಿತ್ತು ತಮ್ಮಣಿ ಮಾಸ್ತರರಿಗೆ. ಊರಿನ ತಂಟೆ ತಕರಾರು ಯಾವುದರ ಗೋಜಿಗೆ ಹೋಗದ ಈ ಮಾಸ್ತರರಿಗೆ ಒಂದಿಷ್ಟು ಅಭಿಮಾನಿ ಬಳಗ ಯಾವಾಗಲೂ ಇದೆ. ಅವೇ ಊರಿನ ವಯಸ್ಸಾದ ಹಿರಿಯರು, ಅಜ್ಜಿಯಂದಿರು, ಅವರಿಂದ ಕಲಿತ ವಿದ್ಯಾರ್ಥಿಗಳು,ಪುಟ್ಟ ಪುಟ್ಟ ಮಕ್ಕಳು, ಕಷ್ಟ ಎಂದು ಓಡಿ ಬರುವ ಇನ್ನೂ ಅನೇಕರು ಹೀಗೆ. ಮಾತು ಕೇಳದ ಮಕ್ಕಳಿಗೆ ನೀವಾದರೂ ಸಮಾಧಾನ ಹೇಳಿ ಒಂದು ಮಾತು ಹೇಳಿ ಎಂದು ಬರುವ ವಯಸ್ಸಾದ ಅಜ್ಜಿಯರನ್ನು ಕಂಡ್ರೆ ತಮ್ಮಣಿ ಮಾಸ್ತರರಿಗೆ ಹೆಮ್ಮೆ. ಅವರನ್ನು ಕರೆದು ಕೂಡಿಸಿ ಸಮಾಧಾನದ ನಾಲ್ಕು ಮಾತು ಹೇಳಿ ಚಾ ಕೊಟ್ಟು ಅವರನ್ನು ಕಳಿಸಿದಾಗಲೇ  ಮಾಸ್ತರರಿಗೆ ಸಮಾಧಾನವಾಗುತ್ತಿತ್ತು. ಒಮ್ಮೊಮ್ಮೆ ಯಾರೋ ಅಜ್ಜಿ ಹೇಳಿದ ಗುಳಿಗೆ, ಔಷಧಿ ಚೀಟಿ,ಸೂಜಿ, ಇತರೆ ಸಣ್ಣ ಪುಟ್ಟ ವಸ್ತುಗಳನ್ನ ಪೇಟೆಗೆ ಹೋದಾಗ ನೆನಪಿಟ್ಟು ತರುತ್ತಿದ್ದುದು ತಮ್ಮಣಿ ಮಾಸ್ತರರೇ.  ಒಮ್ಮೆ ಚಪ್ಪಲಿ ಬೇಕು ಎಂದು ಹೇಳಿದ ಅಜ್ಜಿ ಹೇಳಿದ ಮೂರೇ ದಿನಕ್ಕೆ ಸಾವು ಕಂಡಿದ್ದಳು. ಅಯ್ಯೋ ಕೊನೆಗೂ ಅಜ್ಜಿಯ ಆಸೆಯನ್ನು ಈಡೇರಿಸಲು ಆಗಲಿಲ್ಲವಲ್ಲ ಎಂದು ತಮ್ಮಣಿ ಮಾಸ್ತರರು ಮನೆಯಲ್ಲಿ ಹೇಳಿ ಮರುಗುತ್ತಿದ್ದದು ಕಥೆ. ಯಾರೂ ಏನು ಅಲ್ಲದಿದ್ದರೂ ಅವರ ಕಷ್ಟಗಳಿಗೆ ಸುಮ್ಮನೆ ಮರುಕ ಪಡುವ ಜೀವ ಅವರದಾಗಿತ್ತು. ಅರ್ಜಿ ಬರೆಸಲೆಂದು, ಔಷಧಿ ತರಲೆಂದು ಬರುವವರಿಗೆ ಅವರು ಇಲ್ಲವೆಂದು ದಿನವೇ ಇಲ್ಲ. ದೂರದ ಊರಿನ ಶಾಲೆಗೆ ಹೋಗಿ ಬಂದು ಸಾಕಾಗಿ ಕುಳಿತಾಗ ಮನೆ ಜನ ಬೈದು ಹೇಳುತ್ತಿದ್ದರು. ಸಾಕು ಮಾಡಿ ನಿಮ್ಮ ಉಪಕಾರಿ ಗುಣವಾ ಎಂದು ಹೇಳುತ್ತಿದ್ದರು. ಉಪಕಾರ ಎನ್ನಬೇಡಿ ಅದು ಋಣ. ಜನಕ್ಕೆ ನಾವು ಮಾಡುವ ಚಿಕ್ಕ ನೆರವು ಎಂದು ನಕ್ಕು ಸುಮ್ಮನಾಗುತ್ತಿದ್ದರು ಅವರು. ಊರಿನ ಅನೇಕರು ಇವರನ್ನು ಸದಾ ಮಾತನಾಡಿಸುವುದು ಜೊತೆ ಇರುವುದು ಅವರಿಗೆ ಹಗುರವಾದಂತೆ ಮನಸ್ಸಿಗೆ.  ಹಾಗಾಗಿ ಅವರು ತನ್ನ ತಮ್ಮನನ್ನು  ಕೃಷಿ ಕೆಲಸಕ್ಕೆ ಹಚ್ಚಿದ್ದು.

    ಊರಿಗೆ ಹಸಿರು ಹೆಚ್ಚಿದರೆ ಹೊಟ್ಟೆ ತುಂಬುತ್ತದೆ. ಆರೋಗ್ಯ ಉಳಿಯುತ್ತದೆ ಎಂಬ ಅರಿವು ಅವರದು.  ಊಟಕ್ಕೆ ಕುಳಿತಾಗ ಮನೆಯಲ್ಲಿ ಬೆಳೆದಿದ್ದು ಏನಿದೆ  ಇಂದು ಊಟಕ್ಕೆ? ಎಂದು ಕೇಳಿ ಹೆಂಡತಿಗೆ ಮನೆ ತರಕಾರಿ ಬೆಳೆಯಬೇಕು ಬೆಳೆಸಬೇಕು ಎಂದು ಹೇಳುತ್ತಿದ್ದರು. ಇಡೀ ಊರಿಗೆ ಊರೇ ಕೃಷಿಯಿಂದ ಏನು ಲಾಭವಿಲ್ಲ ಎಂದು ಭೂಮಿ ಪಾಳು ಬಿಟ್ಟಾಗ ತಮ್ಮಣಿ ಮಾಸ್ತರರು ಎಲ್ಲ ಗದ್ದೆಯನ್ನು ತಮ್ಮನ ಜೊತೆ ಸೇರಿ ಮಾಡಿದರು. ತಮ್ಮನು ಇವರಿಗೆ ಹೆಗಲು ಕೊಟ್ಟು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದ. ಇವರ ದುಡಿಮೆ ಕಂಡು ಊರಿನ ಅನೇಕರು ಕಣ್ಣು ಕಣ್ಣು ಬಿಟ್ಟು ನೋಡಿದ್ದು  ಇದೆ. ನೋಡುವವರ ಜೊತೆಗೆ ಚೆನ್ನಾಗಿ ಮಾತನಾಡಿ ನೀವು ಮಾಡಿ ಎಂದು ಹೇಳಿ ಅವರಿಗೂ ಸಹಾಯ ಮಾಡಿದ್ದರು ತಮ್ಮಣಿ ಮಾಸ್ತರರು.

     ಒಟ್ಟಿನಲ್ಲಿ ಆ ಊರಿಗೆ ಹಸಿರು ಹೆಚ್ಚಾದರೆ ಸಾಕಿತ್ತು ಅವರಿಗೆ. ಕೊನೆಗೆ ಅವರ ಮನೆಯ ಕೃಷಿಯ ಪ್ರಯೋಗಶಾಲೆಯಾಗಿ ನಿಂತಿದ್ದು ಅವರಿಗೆ ಹೆಮ್ಮೆ ಮೂಡಿಸಿತ್ತು .ದೂರ ಉಳಿದವರೂ ಕೂಡ ಈಗ ಅಂಗಡಿಗಳಲ್ಲಿ ಕುಳಿತು ತಮ್ಮಣಿ ಮಾಸ್ತರರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದು ಕೇಳಿದ್ದರು ಆ ಊರಿನ ಇತರರು. ಅವರು ಬಂದರೆ ಏನೋ ಗೌರವ. ಇನ್ನೂ ತಮ್ಮಣಿ ಮಾಸ್ತರರು ಮನೆಗೆ ಬಂದರು ಅಂದ್ರೆ ಕುರ್ಚಿ ಒರೆಸಿ ಕುಳ್ಳಿರಿಸಿದಾಗಲೇ ಅವರಿಗೆ ಸಮಾಧಾನ‌. ಇನ್ನು ಯಾರ ಮನೆಗೆ ಹೋಗದ ಅವರು ಮನೆಗೆ ಬಂದಿದ್ದಾರೆ ಎಂದರೆ ಏನು ಗಂಭೀರ ವಿಷಯವೇ ಇರಬೇಕು ಎಂದು ಜನ ಅಂದಾಜಿಸುತ್ತಿದ್ದರು. ಹಾಗೆಯೇ ಸಮಯ ಸಂದರ್ಭಗಳಲ್ಲಿ ಸಿಟ್ಟು ಇಲ್ಲವೆಂದಲ್ಲ..... ಅವರಲ್ಲಿ ಇತ್ತು.  ಆದರೆ ಅದು ಒಳಿತಿಗಾಗಿ ಮಾತ್ರ ಎನ್ನುವುದು ಅದರ ಬಳಕೆ.  ಎಷ್ಟೋ ಬಡ ಮಕ್ಕಳಿಗೆ ಹಣ ನೀಡಿ ಓದಲು ಉಪಕಾರಿಯಾದ ಜೀವ ಅವರದ್ದು. ಆದರೆ ಹೇಳಿಕೊಂಡಿದ್ದಿಲ್ಲ ಎಂದೂ. ಮಾಡುವ ಕೆಲಸದಲ್ಲಿ ಆತ್ಮ ಸಮಾಧಾನ ಸಿಕ್ಕರೆ ಅದು ದೇವರ ಸೇವೆ ಎಂಬ ನಂಬಿಕೆ ಎಂಬುದು ಅವರ ವ್ಯಕ್ತಿತ್ವ.

   ಬೆವರು ಪರಿಶ್ರಮದ ನೆರಳು. ಅದು ಒಂದು ಭೂಮಿಯ ಅಂತರ್ಗತ ಋಣ. ಎಲ್ಲಿಯವರೆಗೆ ಆ ಮಣ್ಣಿನ ಋಣ ನಮಗಿರುತ್ತದೆಯೋ ಅದು ಜೀವಿತ. ಅಲ್ಲಿ ಒಳಿತಿಗಾಗಿ ಉಳಿದು ಹೋಗುವುದು ಸಾರ್ಥಕ ಬದುಕು. ವ್ಯಕ್ತಿ ಸಾಮಾನ್ಯನಾದರೂ ಅವನು ಭರವಸೆಯಾಗುವುದು ಅವನ ಸಹಜ ಕಾರ್ಯಗಳಿಂದ. ದುಡಿಮೆ ಒಂದು ಬದುಕಿನ ನೆಮ್ಮದಿ. ಅದೆಷ್ಟೋ ಜೀವಗಳ ಸಾಕುವ ಆಧಾರ. ಅಸ್ತಿತ್ವವೆನ್ನುವುದು ಅವಕಾಶಗಳ ಪರಿಮಿತಿಯಲ್ಲಿ ಅವ್ಯಕ್ತವಾಗಿ ಉಳಿಯುವ ವಾಸ್ತವ ಎಂದು ಬದುಕಿದವ ಅವರ ತಮ್ಮ. ಆರೋಗ್ಯದಿಂದ ಬದುಕಿದವ. ಅವನಿಗೆ ಇದ್ದಕ್ಕಿದ್ದಂತೆ ಎದೆನೋವು  ಕಾಣಿಸಿಕೊಂಡು ಇಲ್ಲವಾಗಿದ್ದ. ಮನೆಯಲ್ಲಿ ನೋಡಿದೆಡೆಯಲ್ಲಿ ಅವನ ಕೃಷಿಯ ವಸ್ತುಗಳು ಕಾಣಿಸುತ್ತಿದ್ದವು. ತಮ್ಮ ನೆನಪಾಗುತ್ತಿದ್ದ. ಆಡಿದ ಮಾತು ನೆನಪಿಗೆ ಬರುತ್ತಿತ್ತು. ಎಷ್ಟೋ ಮನೆಗಳನ್ನು ಕಂಡಿದ್ದರು. ತಮ್ಮಣಿ ಮಾಸ್ತರರು ಅಣ್ಣತಮ್ಮಂದಿರು ದೂರದವರಂತೆ ಬದುಕುವುದ. ಆದರೆ ತನ್ನ ತಮ್ಮಂದಿರ ಬಗ್ಗೆ ಹೆಮ್ಮೆ ಅವರಿಗೆ ಯಾವಾಗಲೂ ಇತ್ತು. ಕುಳಿತಲ್ಲೇ ತಮ್ಮನನ್ನು ಜೀವಂತವಾಗಿ ಇರಿಸುವ ಬಗ್ಗೆ ಚಿಂತಿಸುತ್ತಿದ್ದರು ಅವರು. ತಮ್ಮ ಜೊತೆಗೆ ಸುಲಭವಾಗಿ ಬರುವವರು ಮಕ್ಕಳು. ಅವರಿಗೆ ಮಕ್ಕಳನ್ನು ಸುಲಭವಾಗಿ ಬದಲಿಸುವ ಗುಣ ಇತ್ತು. ಮನೆಯ ಸುತ್ತಮುತ್ತ ಊರಿನ ನಾಲ್ಕಾರು ಮಕ್ಕಳನ್ನು ಕರೆದು ನಿಮಗೆ ಒಂದು ಕೆಲಸವಿದೆ ಮಾಡುವಿರಾ? ಎಂದು ಮಕ್ಕಳಿಗೆ ಕೇಳಿದರು ಅವರು. ಏನು ಹೇಳಿ ಸರ್? ಯಾರು ಇಷ್ಟಪಟ್ಟು ಮಾಡುವಿರಿ? ಎಂದು ಕೇಳಿದರೆ ನಾಲ್ಕೈದು ಮಕ್ಕಳು ನಾನು ನಾನು ಎಂದರು. ಎಲ್ಲ ಮಕ್ಕಳಿಗೂ ಒಂದೊಂದು ಬಿಸ್ಕೆಟ್ ಪ್ಯಾಕ್ ಕೊಟ್ಟು ಮುಂದಿನ ವಾರ ನಿಮ್ಮ ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿನ ಕಸ ಆರಿಸಬೇಕು ಯಾರು ಚೆನ್ನಾಗಿ ಸ್ವಚ್ಛ ಮಾಡುತ್ತೀರೋ ಅವರಿಗೆ ಬಹುಮಾನ ಎಂದು ಹೇಳಿದರು. ರವಿವಾರ ಬರೋದರೊಳಗೆ ಮಕ್ಕಳ ಮನೆಯ ಸುತ್ತಮುತ್ತ ಕಸ ಕಡ್ಡಿಗಳಿಲ್ಲದೇ ಸ್ವಚ್ಛವಾಗಿತ್ತು. ಮಕ್ಕಳು ಮಾಡಿರುವ ಕೆಲಸಗಳು ಅಚ್ಚುಕಟ್ಟಾಗಿ ಇತ್ತು. ಎಲ್ಲ ಮಕ್ಕಳಿಗೆ ಬೇಸ್ ಎಂದರು ತಮ್ಮಣಿ ಮಾಸ್ತರರು. ದೊಡ್ಡವರೂ ಅನೇಕರು ಸೇರಿಕೊಂಡರು. ಮಕ್ಕಳ ಉತ್ಸಾಹ ಕೆಣಕಲು  ಮುಂದಿನವಾರ ಬಹುಮಾನ ಇಲ್ಲ ಯಾರು ಮಾಡುತ್ತೀರಿ? ಎಂದು ಮಕ್ಕಳ ಕೇಳಿದರು . ಆಗಲೂ ಕೂಡ ನಾನು ನಾನು ಎಂದರು ಎಲ್ಲರೂ. ಏಕೆಂದರೆ ಅವರು ಬರುವಾಗ ಮತ್ತೆ ಮೂರ್ನಾಲ್ಕು ಜೊತೆಗಾರ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಅವರಿಗೆ ನಿರಾಸೆ ಆಗಬಾರದಲ್ಲ ಎಂಬುದು ಮಕ್ಕಳ ಆಸೆಯಾಗಿತ್ತು. ನಾಲ್ಕು ಎಂಟು ಮಕ್ಕಳಿಂದ ಆರಂಭವಾದ ಈ ಕೆಲಸ ಈಗ ಇಪ್ಪತ್ತೈದರ ಮೇಲೆ ಸೇರಿಸಿದ್ದು ಮಕ್ಕಳನ್ನು. ಮಕ್ಕಳ ಈ ಸಂಖ್ಯೆ ಕಂಡ ಮಾಸ್ತರರು ತಮ್ಮ ಘೋಷಣೆ ಮಾಡಿಬಿಟ್ರು.  ಮುಂದಿನ ವಾರ ನಮ್ಮ ಇಡೀ ಊರಿನ ತುಂಬಾ ತಮ್ಮ ತಮ್ಮನ ಹೆಸರಿನಲ್ಲಿ ಸ್ವಚ್ಛತಾ ಕಾರ್ಯ ಎಂದು. ಅದರ ತಯಾರಿಗಾಗಿ ತಮ್ಮನ ಭಾವಚಿತ್ರ ಇರುವಂತಹ ಬ್ಯಾನರ್ಗಳನ್ನ ಹಲವು ಕಡೆ ಅಂಟಿಸಿದರು. ಭಾಗವಹಿಸುವ ಎಲ್ಲ ಮಕ್ಕಳಿಗೆ ಟೋಪಿ ,ಟೀ ಶರ್ಟ್ ,ಹ್ಯಾಂಡ್ ಗ್ಲೌಸ್ , ಬುಟ್ಟಿ ಪಿಕಾಸಿ, ಗುದ್ದಲಿ ಎಲ್ಲವನ್ನೂ ನೀಡಿದರು. ಮಕ್ಕಳ ಉತ್ಸಾಹ ಇಮ್ಮಡಿ ಆಯಿತು. ತಮ್ಮಣಿ ಮಾಸ್ತರರ ಈ ಕಾರ್ಯ ಊರಿನ ಮನೆ ಮನೆಗಳಲ್ಲಿ ಮಾತಾಯಿತು. ಸುದ್ದಿ ಕೇಳಿದ ಯಾರ್ಯಾರೋ ಓಡಿ ಬಂದರು ನೋಡಲು. ದೂರ ನಿಂತು ನೋಡಿದರು. ಹೆಂಗಸರು, ಮಕ್ಕಳು, ವಯಸ್ಸಾದವರು ಎಲ್ಲರೂ ಬಂದು ನೋಡಿದರು. ನೋಡಿದ ಎಲ್ಲರಿಗೂ ಅನಿಸಿತು. ಈ ಕೆಲಸ ಮಕ್ಕಳು ಮಾಡುವಾಗ ನಾವು ಸೇರಿ ಮಾಡಬೇಕು ಎಂದು. ಸೇರಿದರು ಹೆಂಗಸರು ಮಕ್ಕಳು ,ಮುದುಕರು, ತಾಯಿಯಂದಿರು ಎಲ್ಲರೂ. ಊರು ಸ್ವಚ್ಛ ಆಯ್ತು. ಕಸ, ಕಡ್ಡಿ ,ಬಾಟಲಿ ,ಪ್ಲಾಸ್ಟಿಕ್ ಎಲ್ಲಾ ಸೇರಬೇಕಾದಲ್ಲಿಗೆ ಸೇರಿತು. ಎಲ್ಲ ಕೆಲಸ ಮುಗಿದ ನಂತರ ತಮ್ಮಣಿ ಮಾಸ್ತರರು ನಾಲ್ಕು ಮಾತನಾಡಬೇಕು ಎಂದು ಎಲ್ಲರಿಗೂ ಕೈಜೋಡಿಸಿ ನಿಂತುಕೊಂಡರು. ಅವರ ಕಾರ್ಯಕ್ಕೆ ಧನ್ಯವಾದಗಳ ತಿಳಿಸಿದರು. ಎಲ್ಲರೂ ಮಾಡಿದ ಕಾರ್ಯಗಳಿಂದ ಜೀವಂತವಾಗಿ ತಮ್ಮ ಉಳಿದಿದ್ದಾನೆ ನಿಮ್ಮೆಲ್ಲರ ರೂಪದಲ್ಲಿ ಎಂದರು. 

                         ಮನಸ್ಸಿಗೆ ಮಾಡುವ ಕಾರ್ಯಗಳು ಒಂದಿಷ್ಟು ಸಂತೃಪ್ತಿ ನೀಡಿದರೆ ಅದು ಹೃದಯದಿ ಕುಳಿತ ಸಾಲಾಗುತ್ತದೆ. ಭಾವ ಮಾತಿನೊಡನೆ ಬೆರೆತು ಅದು ಭವವಾಗುತ್ತದೆ. ಅಲ್ಲೆಲ್ಲ ಒಂದು ಸದ್ಭಾವನೆಯ ಶುದ್ಧತೆ ಇರುತ್ತದೆ. ಹಿತವಾದ ಕಾಣಿಕೆ ಇರುತ್ತದೆ. ಊರಿಗೆ ಉಪಕಾರಿಯಾಗುವ ಕಾರ್ಯಗಳು ಉಳಿಯುತ್ತದೆ. ಸಮಯ ಸಂಯಮವಾಗುತ್ತದೆ.  ಸಂಯಮ ಸಂಯೋಜನೆಯಾಗುತ್ತದೆ. ದೃಢತೆ ಮೈದುಂಬಿಸುತ್ತದೆ. ಅಂತಃಕರಣ ಸಾಲುಗಳಾಗುತ್ತವೆ. ಮತ್ತೆ ಹೊಸ ಊರಾಗುತ್ತದೆ. ಉಸಿರಾಗುತ್ತದೆ. ಅರಿವಿಗೆ ಉಳಿವಿಗೆ ಸ್ವಚ್ಛತೆ ಆಧಾರವಾಗುತ್ತದೆ ಎನ್ನುತ್ತಾ ತಮ್ಮಣಿ ಮಾಸ್ತರರು ರಾಶಿ ಹಾಕಿದ ಕಸವನ್ನು ತೋರಿದರು. ಪ್ರಕೃತಿಯ ಮಹತ್ವವನ್ನು ತಿಳಿಸಿದರು. ಪ್ರಾಣಿ ಪಕ್ಷಿಗಳ ಉಳಿವಿನ ಬಗ್ಗೆ ತಿಳಿಸಿ ಎಲ್ಲರಿಗೂ ಧನ್ಯವಾದಗಳ ಹೇಳಿದರು . ನೆರೆದ ಎಲ್ಲರೂ ಚಪ್ಪಾಳೆ ತಟ್ಟಿದರು. ತಮ್ಮಣಿ ಮಾಸ್ತರರು ಹೇಳಿದ ಮಾತು, ಮಾಡಿದ ಕಾರ್ಯ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದದೇ ಉಳಿದಿತ್ತು. ವಿಶೇಷವಾಗಿ ಅದೊಂದು ಕಾರ್ಯ ಜನರ ಮನಸ್ಸು ಗೆದ್ದು ಆ ಊರಿನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿತು. ತಮ್ಮನ ನೆನಪಿನಲ್ಲಿ ತಾವು ಮಾಡಿರುವ ಈ ಚಿಕ್ಕ ಕಾರ್ಯ ಪರಿಣಾಮಕಾರಿಯಾಗಿದ್ದು ತಮ್ಮಣಿ ಮಾಸ್ತರರಿಗೆ ಖುಷಿ ಕೊಟ್ಟಿತು. ನಾವು ನಮಗಾಗಿ ಏನೇನು ಮಾಡುತ್ತೇವೆ ಆದರೆ ಊರಿಗಾಗಿ, ಮಣ್ಣಿಗಾಗಿ ,ಬಾಂಧವ್ಯಕ್ಕಾಗಿ , ಉಸಿರಿಗಾಗಿ ನಾವೇನು ಮಾಡುತ್ತೇವೆ ಮಾಡಿದ್ದೇವೆ ಮಾಡಬಹುದು ಎಂಬುದು ಜನರಿಂದ ಹಿರಿಯರಿಂದ ನೋಡಿದವರಿಂದ ಪ್ರತಿಧ್ವನಿಸುವುದು ಗದ್ದೆಯಲ್ಲಿ ಸುಮ್ಮನೆ ಕುಳಿತ ತಮ್ಮಣಿ ಮಾಸ್ತರ ಕಿವಿಯನ್ನು ತಲುಪಿತ್ತು. ಬೀಸಿದ ತಂಗಾಳಿಯಲ್ಲಿ ಮತ್ತೆ ಮತ್ತೆ ಮರೆಯಾದ ತಮ್ಮನ ನೆನಪು ಬರುತ್ತಿತ್ತು ಮತ್ತೆ ಮತ್ತೆ........
-----------------------
ನಾಗರಾಜ ಬಿ.ನಾಯ್ಕ


12 thoughts on ““ಮನದೊಳಗೊಂದು ಜೀವಿತ” ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

  1. ಕತೆಯ ನಿರೂಪಣೆ ಚೆನ್ನಾಗಿದೆ..
    ಮಾಸ್ತರರ ಬಗ್ಗೆ ಹೇಳಿದ್ದು ಜಾಸ್ತಿಯಾಯಿತಾದರೂ ತಮ್ಮನ ಸಾವಿನ ನಿಗೂಢತೆಯ ಬಗ್ಗೆ ಹೇಳಬೇಕಿತ್ತು.ಆದರೂ ಚಿತ್ತಾಲ,ಜಯಂತ,ಮುಂತಾದವರನ್ನು ಓದಿದರೆ ಒಳ್ಳೆಯ ಕತೆಗಾರ ಶಗುವ ಲಕ್ಷಣಗಳಿವೆ.ಅಭಿನಂದನೆಗಳು..

    1. ಧನ್ಯವಾದಗಳು ಸರ್
      ತಮ್ಮ ಆಪ್ತವಾದ ಸಾಲುಗಳಿಗೆ……. ಜೊತೆಗೆ ತಮ್ಮ ಓದಿಗೂ

  2. ಒಂದು ಸಾವಿನ ಸುತ್ತಾ ತೆರೆದುಕೊಳ್ಳುವ ಕಥೆ, ತಮ್ಮನಿ ಮಾಸ್ತರ್ ಅವರ ಮನಸ್ಸಿನ ವ್ಯಥೆಯನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ತಮ್ಮನ ಅಪ್ಪಟ ವ್ಯವಸಾಯದ ಬದುಕು ಮಣ್ಣಿನ ಮಕ್ಕಳ ಬದುಕಿನ ಭವಣೆಗಳನ್ನು ತೆರೆದುಕೊಳ್ಳುತ್ತಾ ಸಾಗುತ್ತದೆ. ಹಳ್ಳಿಯ ಜನರ ಮುಗ್ಧ ಮನಸ್ಸಿನ ಭಾವನೆಗಳನ್ನು ಮಣ್ಣಿನ ಮೇಲಿನ ಪ್ರೀತಿಯನ್ನು, ಹಸಿರೇ ಉಸಿರು ಎಂಬ ಭಾವವನ್ನು ,ತೋರಿಸುತ್ತದೆ. ತಮ್ಮಣಿ ಮಾಸ್ತರ ತಮ್ಮ ಕಾಯಕ ಪ್ರಜ್ಞೆಯ ಜೊತೆಗೆ , ಹಳ್ಳಿಯ ಒಳಿತಿಗಾಗಿ ಸುತ್ತಮುತ್ತಲಿನ ಪರಿಸರದ ಉಳಿವಿಗಾಗಿ, ಕೋರುವ ನಿರಂತರ ಪ್ರೀತಿಯನ್ನು, ಸ್ವಚ್ಛತೆಯ ಬಗೆಗಿನ ಕಾಳಜಿಯನ್ನ, ಅತ್ಯಂತ ಸುಂದರವಾಗಿ ನಿರೂಪಿಸಲಾಗಿದೆ.. ಸಾವಿನ ಸುತ್ತಾ ಸಾಗುವ ಕಥೆ ಪರಿಸರದ ಉಳಿವಿಗಾಗಿ, ನಡೆಸುವ ಪ್ರಯತ್ನದತ್ತ ಸಾಗುವುದು ಮನಸ್ಸಿಗೆ ಹಿತವೆನಿಸುತ್ತದೆ. ಕಾಡುವ ಸಾವು ಮತ್ತೆ ಮತ್ತೆ ಕಾಡುತ್ತದೆ… ಸಾವಿನ ನಿಗೂಢತೆ ನಮ್ಮನ್ನು ಕಾಡುತ್ತದೆ…

    ನಾನಾ ಬಾಡ

    1. ಧನ್ಯವಾದಗಳು ತಮ್ಮ ಓದಿಗೆ…….
      ಜೊತೆಗೆ ವ್ಯಕ್ತ ಭಾವಗಳಿಗೂ……..

  3. ಉತ್ತಮ ಕಥೆ ಇದು ಕಥೆ ಎನ್ನುವುದಕ್ಕಿಂತ ನಿಜ ಜೀವನದ ಕೈಗನ್ನಡಿ

    1. ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು

  4. ಕಥೆಯಲ್ಲಿನ ಪಾತ್ರಗಳಲ್ಲಿ ಜೀವಂತಿಕೆ ತುಂಬಿದೆ. ಸಾವಿನ ನಂತರ ಬರುವ ಒಳ್ಳೆಯ ಗುಣಗಳು ಸಮಾಜಕ್ಕೆ ಮಾದರಿಯಾಗಿ ಶಾಶ್ವತವಾಗಿ ಉಳಿದುಬಿಡುತ್ತವೆ ಎನ್ನುವುದನ್ನು ಕಥೆಯಲ್ಲಿ ಚೆನ್ನಾಗಿ ಮೂಡಿಸಿದ್ದೀರಿ ಸರ್. ತುಂಬಾ ಸೊಗಸಾಗಿದೆ.

    1. ಪ್ರತಿಕ್ರಿಯೆಗೆ ಧನ್ಯವಾದಗಳು……
      ಆಪ್ತ ಓದಿಗೂ……

  5. ಉತ್ಕೃಷ್ಟ ಮೌಲ್ಯಗಳನ್ನು ಬೋಧಿಸುವ ಸಂವೇದನಾಶೀಲ ಕತೆ.

    1. ಧನ್ಯವಾದಗಳು ತಮ್ಮ ಓದಿಗೆ
      ಹಾಗೂ ಪ್ರತಿಕ್ರಿಯೆಗೆ

Leave a Reply

Back To Top