“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ

ಪೂರ್ಣಿಮಾಳ ಬಾಲ್ಯದ ಪುಟ್ಟ ಪ್ರಪಂಚದ ನೆನಪಿನಂಗಳದ ಮರೆಯಾಗದೆ ಉಳಿದ ಅನುಭವ ಅವಳ ಸೋದರ ಮಾಮನ ಮನೆ. ತನ್ನ ತಂಗಿ ಕುಟುಂಬ ಎಂದರೆ ಮಾವನಿಗೆ ಬಲು ಪ್ರೀತಿ ಮತ್ತು ಕಾಳಜಿ. ಮಾಮ ಸ್ವರ್ಣ ನದಿಯಲ್ಲಿ ದೋಣಿಯಲ್ಲಿ ಹೊಯ್ಗೆ ತೆಗೆಯುವ ಕೆಲಸ ಮಾಡುತ್ತಿದ್ದರು. ಮಾವನ ದೋಣಿಯಲ್ಲಿ ವಿಹರಿಸುವುದೆಂದರೆ ಪೂರ್ಣಿಮಾಳಿಗೆ ಎಲ್ಲಿಲ್ಲದ ಸಂತೋಷ. ಅವರು ಮನೆಗೆ ಬರುವಾಗ ಕೈಯಲ್ಲಿ ಏನಾದರೂ ಹಣ್ಣು , ತಿಂಡಿ ತರುತ್ತಿದ್ದರು. ಮಾಮಿ ಭಾಗೀರಥಿ. ಗಟ್ಟಿ ದನಿಯ ದಿಟ್ಟ ವನಿತೆ. ಶಿಸ್ತಿನ ತಾಯಿ, ದುಡಿಮೆಯ ಗಂಡನ ಅಕ್ಕರೆಯ ಮಡದಿ ಬಾಗಿ. ಪರಸ್ಪರ ಒಲವು ಗೌರವದಿಂದ ಬದುಕುತ್ತಿದ್ದ ಈ ದಂಪತಿ ಜಗಳವಾಡಿದ್ದನ್ನು ಪೂರ್ಣಿಮಾ ನೋಡಲೇ ಇಲ್ಲ.
ಸುವರ್ಣ ನದಿಯ ಮಧ್ಯೆ ಇರುವ ಸಣ್ಣ ಕುದುರಿನಲ್ಲಿ ಎತ್ತರವಾದ ಮಣ್ಣಿನ ಪಂಚಾಂಗದ ಮೇಲೆ ಮಣ್ಣಿನ ನೆಲದ ಬೈಹುಲ್ಲು ಹೆಣೆದ ಚಾವಣಿಯ ಒಕ್ಕಲು ಮನೆಯಲ್ಲಿ ಮಾಮನ ಸಂಸಾರ. ತೆಂಗಿನ ಗರಿಯ ತಟ್ಟಿಯ ಅಡುಗೆಮನೆ. ಮಣ್ಣಿನ ನೆಲಕ್ಕೆ ಸೆಗಣಿ ಸಾರಿಸಿ ಅದರ ಮೇಲೆ ಚಿಮಿಣಿ ದೀಪದ ಕರಿಯ ಒಪ್ಪ ಕೊಟ್ಟು ಬೋರು ಕಲ್ಲಿನಿಂದ ನೆಲವನ್ನು ಚೆನ್ನಾಗಿ ತಿಕ್ಕಿ ಕನ್ನಡಿಯಂತೆ ನಯವಾಗಿ ತೀಡುತ್ತಿದ್ದರು ಮಾಮಿ. ತೋಟದ ಕೆರೆಯಿಂದ ಕೆಸರು ಮಣ್ಣನ್ನು ತಂದು ಅಂಗಳಕ್ಕೆ ಹಾಕಿ ತಮ್ಮ ಕಾಲುಗಳಿಂದ ಒದ್ದು ಹದ ಮಾಡಿ ಕೆಸರು ಕಾಂಕ್ರೀಟ್ ಹಚ್ಚಿ ಮತ್ತೆ ಕರಿಯಲೇಪನವನ್ನು ಕೊಟ್ಟು ಅಚ್ಚುಕಟ್ಟಾಗಿ ಸೆಗಣಿ ಸಾರಿಸುತ್ತಿದ್ದರು. ಅಂಗಳದಲ್ಲಿದ್ದ ತೆಂಗಿನ ಮರಕ್ಕೆ ಅದೇ ರೀತಿ ದೊಡ್ಡ ಕಟ್ಟೆಯನ್ನು ಕಟ್ಟುತ್ತಿದ್ದರು. ಚಾವಡಿಯ ಗೋಡೆಯಲ್ಲಿ ತೂಗಿಸಿದ ಮೆಜೆಸ್ಟಿಕ್ ಕ್ಯಾಲೆಂಡರ್. ಮಾಡಿಗೆ ನೇತಾಡಿಸಿದ ಆ ಕಾಲದ ಲ್ಯಾಂಟಿನು ಲ್ಯಾಂಪ್.
ಒಳಗೆಲ್ಲಾ ವಾಲ್ ಮೌಂಟೆಡ್ ಚಿಮಿಣಿ ದೀಪ ಹಾಗೂ ಅದರ ಹೊಗೆಗೆ ಅಡ್ಡಲಾಗಿ ಗೋಡೆಗೆ ಬಡಿದಿಟ್ಟ ತಗಡಿನ ಒಳಭಾಗದಲ್ಲಿ ಕರಿ ತುಂಬಿಕೊಂಡಾಗ ಜೇನುಗೂಡಿನಂತೆ ಕಾಣುತ್ತಿತ್ತು. ಚಾವಡಿಯ ಮಧ್ಯ ಕಂಬದಲ್ಲಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದ ದೊಡ್ಡ ರೇಡಿಯೋ ಮಂಗಳೂರು ಆಕಾಶವಾಣಿಯನ್ನು ಸರಾಗವಾಗಿ ಬಿತ್ತರಿಸುತ್ತಿತ್ತು. ತಟ್ಟಿಯ ಬಿದಿರುಗಳಡಿಯಲ್ಲಿ ಸಿಕ್ಕಿಸಿರುತ್ತಿದ್ದ ಆ ಕಾಲದ ಎಮರ್ಜೆನ್ಸಿ ಮತ್ತು ಮೇಕಪ್ ಕಿಟ್ಟುಗಳು. ಆಲ್ಲಿ ಬಾಚಣಿಗೆ, ಕತ್ತಿ,ಚೂರಿ, ಬೆತ್ತ ,ಕಾಗೆಗರಿ, ಪೆನ್ಸಿಲ್ ಇನ್ನೇನೆಲ್ಲ ಇತ್ತೋ ನೆನಪಿಲ್ಲ. ಚಡಿತೆಗೆದ ಬಿದಿರೇ ಕಾಯಿನ್ ಬಾಕ್ಸ್. ಚಾವಡಿಯಿಂದ ಮೇಲೆ ಬಂದರೆ ಹಗಲಲ್ಲೂ ಮನೆ ಒಳಗೆಲ್ಲಾ ಕತ್ತಲು. ಏನಾದರೂ ಬೇಕೆಂದರೆ ಟಾರ್ಚ್ ಹಾಕಿ ಅಥವಾ ದೀಪ ಹಚ್ಚಿ ಹುಡುಕಬೇಕಿತ್ತು. ಮಣ್ಣಿನ ಗೋಡೆಯ ರಂದ್ರಗಳಲ್ಲಿ ತಿಗಣೆಯ ವಾಸ. ಹಿತ್ತಲ ತುಂಬಾ ಬಗೆ ಬಣ್ಣದ ಹೂವು, ತರಕಾರಿ ಹಾಗೂ ಮದ್ದಿನ ಗಿಡಗಳು. ಗೂಡು ತುಂಬಾ ಕೋಳಿ ಮರಿಗಳು. ಮನೆಯ ಎರಡು ಬದಿಗಳಲ್ಲಿ ಹಲಸಿನ ಮರ ಮತ್ತು ಮಾವಿನ ಮರ.
ಬಾಗಿ ಮಾಮಿ ಅಪ್ಪಟ ಗರತಿ. ಬಿಳಿ ಮುಂಗುರುಳಿನ ಎಣ್ಣೆ ಸವರಿ ನವಿರಾಗಿ ಬಾಚಿ ಕಟ್ಟಿದ ಮುಡಿ. ಮುಡಿ ತುಂಬಾ ಹೂವು. ಬೇಲಿ ಹೂವಾದರೂ ಕೊಯ್ದು ಮುಡಿ ಗೇರಿಸಿಕೊಳ್ಳುತ್ತಿದ್ದರು ಮಾಮಿ. ಹಣೆ ತುಂಬ ಕೆಂಪು ಕುಂಕುಮದ ಬೊಟ್ಟು, ಬೈತಲೆಗೆ ಸಿಂಧೂರ, ಹರಳಿನ ದೊಡ್ಡ ಕಿವಿಯೋಲೆ ,ಕೈಯಲ್ಲಿ ಗಾಜಿನ ಬಳೆಗಳು, ಕಾಲಿಗೆ ಬೆಳ್ಳಿ ಕಡಗ. ಮಾಮಿಯ ಬಾಯಿಯೆ ಧ್ವನಿವರ್ಧಕ. ಗದ್ದೆಗೆ ಇಳಿದರೆಂದರೆ ಜೊತೆ ಕೆಲಸಗಾರರಿಗೆ ಮಾತ್ರವಲ್ಲ ಸುತ್ತಲ ಮನೆಯವರಿಗೂ ಬೋರೆಣಿಸುತ್ತಿರಲಿಲ್ಲ. ಬೈಲು ತುಂಬಾ ಪಾಡ್ದನ ದ ಹಾಡು, ಲೋಕಾಭಿರಾಮದ ಮಾತುಗಳು.
ಹಬ್ಬ ಹರಿದಿನ, ಮದುವೆ ಮುಂಜಿ, ಸೀಮಂತ ,ಮದುಮಕ್ಕಳ ಸಿಂಗಾರ , ಮನೆ ಮದ್ದು ಮಕ್ಕಳನ್ನು ಸಾಕುವುದು, ದೈವ ದೇವರ ಪೂಜೆ, ಪುನಸ್ಕಾರಗಳಲ್ಲಿ ಬಹಳ ಆಸಕ್ತಿಯಿಂದ ಮುಂದೆ ನಿಂತು ಕೆಲಸ ಮಾಡುತ್ತಿದ್ದರು. ತಮ್ಮ ಕೈ ರುಚಿಯಿಂದ ಕುಟುಂಬದವರ ಹಾಗೂ ಊರಿನವರ ಪ್ರಶಂಸೆಗೆ ಭಾಜನರಾಗಿದ್ದರು ಕೂಡ. ಪೂರ್ಣಿಮಾ ಪ್ರಥಮ ಬಾರಿಗೆ ಚಿಟಿಯಪ್ಪ ಸವಿದದ್ದು ಅವಳ ಮಾಮಿಯ ಕೈಯಿಂದ. ನೀರುದೋಸೆ ಘಮ ಘಮ ಕೋಳಿ ಗಸಿ, ಬಿಸಿ ಬಿಸಿ ಮೀನು ಸಾರ್ ಹೀಗೆ ಮಾಮಿ ಏನೇ ಮಾಡಿದರೂ ಏನೋ ವಿಶೇಷ ರುಚಿ. ಮಾರಿ ಹಬ್ಬ ಬಂತೆಂದರೆ ಕುಟುಂಬಿಕರ ಎಲ್ಲರ ಮನೆಯಲ್ಲೂ ಮಾಮಿಯದೇ ರೊಟ್ಟಿ. ಮಾಮಿಯ ಮಾರಿ ರೊಟ್ಟಿ ಎಂದರೆ ಪೂರ್ಣಿಮಾಗೆ ಪಂಚಪ್ರಾಣ. ಬೆಳಿಗ್ಗೆ ಬೇಗನೇ ಬಂದು ಒಲೆ ಮುಂದೆ ಕುಳಿತು ರಾತ್ರಿವರೆಗೆ ಕಾದ ಹೆಂಚಿನ ಮೇಲೆ ಅಕ್ಕಿ ಹಿಟ್ಟನ್ನು ತೆಳುವಾಗಿ ಹರಡಿ ಗರಿಗರಿಯಾದ ನಾಜೂಕು ರೊಟ್ಟಿಯನ್ನು ತಯಾರು ಮಾಡುತ್ತಿದ್ದರು. ಎಷ್ಟೇ ಬೆನ್ನು ನೋವಿದ್ದರೂ ಸೊಂಟಕ್ಕೆ ಜಟ್ಟಿ ಕಟ್ಟಿಕೊಂಡು ಕೆಜಿ ಗಟ್ಟಲೆ ಅಕ್ಕಿಯ ರೊಟ್ಟಿ ಮಾಡಿ ಡಬ್ಬಿಯಲ್ಲಿ ತುಂಬಿಸಿ ಇದು ನನ್ನ ಸೊಸೆಗೆ ಎಂದು ಪ್ರೀತಿಯಿಂದ ಹೇಳುತ್ತಿದ್ದರು.
ಮಧ್ಯಾವಧಿ ಹಾಗೂ ವಾರ್ಷಿಕ ರಜೆ ಸಿಕ್ಕಾಗೆಲ್ಲ ಪೂರ್ಣಿಮಾ ಮಾವನ ಮನೆಗೆ ಹೋಗಲು ಟೊಂಕ ಕಟ್ಟಿ ನಿಲ್ಲುತ್ತಿದ್ದಳು. ಮಾಮನಿಗೆ ಏಳು ಮಕ್ಕಳು.
ದೊಡ್ಡ ಮಗಳು ವಿನೋದಕ್ಕ ನೀಲವೇಣಿ. ಬೀಡಿ ಕಟ್ಟುತ್ತಿದ್ದರು. ಎರಡನೆಯವರು ಹರೀಶಣ್ಣ .ಇವರು ಮುಂಬೈಯಿಂದ ಬಂದರೆಂದರೆ ಮನೆಯಲ್ಲಿ ಹಬ್ಬ. ಹರೀಶಣ್ಣ ಪೂರ್ಣಿಮಾಳನ್ನು ಹೆಗಲ ಮೇಲೆ ಕೂರಿಸಿ ತಿರುಗಾಡಿಸುತ್ತಿದ್ದರು. ನಂತರದವನು ಗುಲ್ಬರ್ಗದಲ್ಲಿ ಕೆಲಸ ಮಾಡಿಕೊಂಡಿದ್ದ ಬಾಸುಗ.ಅವನಿಗೆ ಪೂರ್ಣಿಮಾಳ ಅಮ್ಮ ಎಂದರೆ ವಿಶೇಷವಾದ ಅಕ್ಕರೆ. ಊರಲ್ಲಿದ್ದಾಗ ಒಂದು ಸಲ ಬಾಸು ದೇವರ ಸ್ಟ್ಯಾಂಡ್ ಮೇಲೆ ಇಟ್ಟಿದ್ದ ಚಿಲ್ಲರೆ ಹಣವನ್ನು ತೆಗೆದ ಎಂದು ಕೋಪಗೊಂಡ ಅವನ ಅಪ್ಪ ಅಮ್ಮ ಬಾಸುವನ್ನು ಚಾವಡಿಯ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ ಕೊತ್ತಲಿಗೆಯ ಏಟು ತಿನ್ನಿಸಿ ಪೊರಕೆ ಪೂಜೆ ಮಾಡಿದರು. ಇದನ್ನು ಕಂಡ ಪೂರ್ಣಿಮಾ ಅಬ್ಬಾ ಎಂತಹ ಕಠಿಣ ಮನಸ್ಸು ನನ್ನ ಮಾಮ ಮಾಮಿಗೆ ಎಂದು ಭಯ ಬಿದ್ದಿದ್ದಳು. ಬಾಸು ನೋವು ತಾಳಲಾರದೆ ಅಳುತ್ತಾ ಕ್ಷಮೆ ಬೇಡುತ್ತಿದ್ದಾಗ ಪೂರ್ಣಿಮಾಗೆ ಕರುಳೇ ಬಾಯಿಗೆ ಬಂದಂತಾಗಿತ್ತು. ಪಾಂಡು ತುಂಬಾ ಮುಗ್ಧ. ಅವನಿಗೆ ಸಂಬಂಧಿಕರು ಎಂದರೆ ತುಂಬಾ ಇಷ್ಟ. ನಂತರ ಸೀತ ಗೀತಾ ಎಂಬ ಅವಳಿ ಹೆಣ್ಣು ಮಕ್ಕಳು. ಇವರೆಲ್ಲರೂ ಪೂರ್ಣಿಮಾಳನ್ನು ತುಂಬಾ ಪ್ರೀತಿಯಿಂದ ಉಪಚರಿಸುತ್ತಿದ್ದರು. ಸಣ್ಣವ ರವಿ ಪೂರ್ಣಿಮಾಗಿಂತ ಒಂದು ವರ್ಷ ದೊಡ್ಡವನಾಗಿದ್ದು ಮನೆಯವರು ರವಿ ಹಾಗೂ ಪೂರ್ಣಿಮಾ ಗೆ ತಮಾಷೆ ಮಾಡಿ ಚೇಡಿಸುತ್ತಿದ್ದುದರಿಂದ ಒಂದೇ ತರಗತಿಯಲ್ಲಿದ್ದರೂ ಒಬ್ಬರನ್ನೊಬ್ಬರು ಮಾತಾಡಿಸಲು ತುಂಬಾ ಸಂಕೋಚಪಡುತ್ತಿದ್ದರು.
ಮುಂಜಾನೆ ನೀರಿನ ಜಾವ ನೋಡಿ ಮಾಮ ಹೊಳೆಗೆ ಹೊರಟರೆ ಮಾಮಿ ತಂಗಳನ್ನಕ್ಕೆ ಮೀನು ಸಾರು ಕಲಸಿ ಗಂಡನಿಗೆ ಉಣ ಬಡಿಸುವರು. ಮಾಮ ಗಟ್ಟಿ ಉಂಡು ದೊಡ್ಡ ತೇಗು ತೆಗೆದು ಸಂತ್ರಪ್ತಿಯಿಂದ ಹೊಯಿಗೆ ತೆಗೆಯಲು ನದಿಗೆ ತೆರಳುತ್ತಿದ್ದರು.
ಸಂಜೆ ಆಯಿತೆಂದರೆ ಮಾಮಿಯ ಮನೆಯ ಹಿಂದಿರುವ ಬಾವಿ ಕಟ್ಟೆಯ ಸುತ್ತ ಹಾಗೂ ಅದರ ಪಕ್ಕ ಇರುವ ಸುವರ್ಣ ನದಿಯ ಸೇತುವೆ ಗಂಡು ಹುಡುಗರ ಪಂಚಾಯಿತಿ ಕಟ್ಟೆ ಆಗುತ್ತಿತ್ತು.
ಅದೊಂದು ಸಲ ವಿನೋದಕ್ಕನಿಗೆ ನೆಂಟಸ್ತಿಕೆ ಕುದುರಿ ಮದುವೆ ನಡೆಯಿತು. ಮಾಮಿ ಮನೆಯಲ್ಲಿ ಸಂಭ್ರಮ. ಮನೆ ತುಂಬಾ ಜನ, ಗೌಜಿ ಗಮ್ಮತ್ತು. ಗಂಡನ ಮನೆಗೆ ಹೋಗುವಾಗ ವಿನೋದಕ್ಕನ ಜೊತೆ ಪೂರ್ಣಿಮಾಳನ್ನು ಕಳಿಸಿದರು. ಬಾವ ಪೂರ್ಣಿಮಾಗೆ ಒಳ್ಳೆಯ ಒಂದು ಅಂಗಿಯನ್ನು ಕೊಡಿಸಿದರು. ಬಹಳ ವರ್ಷಗಳು ಆ ಆಂಗಿ ಪೂರ್ಣಿಮಾಳಿಗೆ ವಿನೋದಕ್ಕನ ಮನೆಯವರ ಉಪಚಾರವನ್ನು ನೆನಪಿಸುತ್ತಿತ್ತು.

ಹೀಗಿರುವಾಗ ವಿಷಗಳಿಗೆಯಲ್ಲಿ ನಡೆದ
ಸೂಕ್ಷ್ಮವಾದ ಒಂದು ಘಟನೆ ಮಾಮನ ಕುಟುಂಬವನ್ನೇ ಘಾಸಿ ಗೊಳಿಸಿ ಬಹಳ ಗೊಂದಲಕ್ಕೀಡು ಮಾಡಿತು. ಮರ್ಯಾದೆಗೆ ಅಂಜಿ ಮಾಮ ರಾತ್ರಿ ಬೆಳಗಾಗುವಷ್ಟರಲ್ಲಿ ಆಳವಾಗಿ ಬೇರೂರಿದ್ದ ಸಂಬಂಧ, ಗೆಳೆತನ ಎಲ್ಲಾ ಬಿಟ್ಟು ಕುಟುಂಬ ಸಮೇತ ಹರೀಶಣ್ಣ ಇದ್ದ ದೂರದ ಮುಂಬೈಗೆ ಚಲಿಸಿ ಬಿಟ್ಟರು.
15 – 20 ವರ್ಷಗಳ ಮೇಲೆ ಮಾವನ ಆಕಸ್ಮಿಕ ಸಾವಿನ ವಿಷಯ ಕೇಳಿ ಕೊನೆಗೂ ಅಣ್ಣನನ್ನು ನೊಡಲಾರದ ತಂಗಿಯಂದಿರು, ಸಂಬಂಧಿಕರು, ಮಕ್ಕಳು ಕಂಬನಿ ಮಿಡಿದರು. ರವಿ ಆಗ ದುಬೈಯಲ್ಲಿ ಕೆಲಸ ಮಾಡುತ್ತಿದ್ದ. ಊರಿಗೆ ಬಂದವನು ಎಲ್ಲರನ್ನು ಭೇಟಿ ಮಾಡಿದ. ಸ್ವಲ್ಪ ವರ್ಷಗಳಲ್ಲಿ ಊರಲ್ಲಿ ಮನೆ ಮಾಡಿ ಕುಟುಂಬದವರನ್ನು ಊರಿಗೆ ಕರೆಸಿದ. ಮತ್ತೆ ಪೂರ್ಣಿಮಾನ ಅಮ್ಮ ತಮ್ಮ ಅತ್ತಿಗೆಯನ್ನು ನೋಡಲು ಅವರ ಮನೆಗೆ ಹೋದರು. ಪೂರ್ಣಿಮಾ ಕೂಡಾ ಅಮ್ಮನ ಜೊತೆ ಮಾಮಿಯ ಮನೆಗೆ ಹೋದಳು. ಮಾಮಿಯ ದೇಹಕ್ಕೆ ಪ್ರಾಯವಾಗಿದ್ದರು ಅವರ ಪ್ರೀತಿ ಕಾಳಜಿಯಲ್ಲಿ ಒಂಚೂರು ಬದಲಾದಂತೆ ಅನ್ನಿಸಲಿಲ್ಲ. ಬಿಳಿಯಾಗಿದ್ದ ಮುಂಗುರುಳು ಮಾತ್ರ ಬಣ್ಣ ಹಚ್ಚಿ ಕೆಂಪಾಗಿತ್ತು. ಜೊತೆ ಇದ್ದ ಅವಳ ಮಗನಿಗೆ ಮಾಮಿ ಅವನಿಷ್ಟದ ಹಾಲು ತಿಂಡಿ ಕೊಟ್ಟು ಕೊಂಗಾಟ ಮಾಡಿದರು. ಬಾಸು, ಗೀತಾ, ರವಿಯ ಹೆಂಡತಿಯೊಡನೆ ಕುಶಲೋಪರಿ ಮಾತಾಡಿ ಬಹಳ ಆನಂದದಿಂದ ಅಲ್ಲಿಂದ ವಾಪಸಾದಳು ಪೂರ್ಣಿಮಾ. ಮತ್ತೆ ತುಂಬಾ ದಿನ ಅಲ್ಲಿಗೆ ಹೋಗಲಾಗಲಿಲ್ಲ. ಒಂದು ದಿನ ಬೆಳಿಗ್ಗೆ ದುಬಾಯಿಯಿಂದ ಪೂರ್ಣಿಮಾಳಿಗೆ ರವಿಯ ಫೋನ್ ಬಂತು. ಅಮ್ಮ ಸಂಜೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಮನೆಯವರು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದ. ಬೆಳಿಗ್ಗೆ ಹೋಗಲಾಗದೆ ಸಂಜೆ ಆಸ್ಪತ್ರೆಗೆ ಧಾವಿಸಿದಾಗ ಪೂರ್ಣಿಮಾ ಕಂಡದ್ದು ಪಾರ್ಶ್ವ ವಾಯು ತಗಲಿ ಐಸಿಯು ಬೆಡ್ ಮೇಲೆ ನಿಸ್ಸಹಾಯಕರಾಗಿ ಮಲಗಿದ್ದ ತನ್ನ ಪ್ರೀತಿಯ ಮಾಮಿಯನ್ನು . ಮಾಮಿಯ ಕೈಕಾಲುಗಳನ್ನು ಹಿಡಿದು ಹಣೆಯನ್ನು ಸವರಿ ಮಾಮಿ ನೋಡಿ ನಾನು ಪೂರ್ಣಿ , ನಿಮ್ಮ ಮುದ್ದಿನ ಸೊಸೆ ಬಂದಿದ್ದೇನೆ ಮಾತಾಡಿ ಎಂದು ಎಷ್ಟು ಕರೆದರೂ ಅವರಿಗೆ ಇವಳ ಪರಿಚಯವಾಗಲಿಲ್ಲವೇನೋ! ಕಿವಿಯಲ್ಲಿ ಮಾಮಿ ಮಾಮಿ ಎಂದು ಉಸಿರಿದಾಗ ಒಂದು ಸಲ ಕಣ್ಣು ತಿರುಗಿಸಿ ಮತ್ತೆ ಮುಚ್ಚಿದರು. ಅದನ್ನೇ ಅವರ ಆಶೀರ್ವಾದ ಎಂದು ತಿಳಿದುಕೊಂಡಳು ಪೂರ್ಣಿಮಾ.
ಮತ್ತೆಂದೂ ಮಾಮಿ ಯಾರ ಜೊತೆನೂ ಮಾತಾಡಲೇ ಇಲ್ಲ. ಆಸ್ಪತ್ರೆಯಿಂದ ಹಿಂತಿರುಗಿದ ಮಾಮಿಯನ್ನು ನೋಡಲು ಪೂರ್ಣಿಮಾ ಮನೆಗೆ ಹೋದಾಗ ಮಾಮಿಯ ದೇಹ ನಿಸ್ತೇಜವಾಗಿತ್ತು. ಮಕ್ಕಳೆಲ್ಲರೂ ದೂರದಿಂದ ಬಂದು ತುಂಬಾ ಪ್ರೀತಿ ಕಾಳಜಿಯಿಂದ ಅಮ್ಮನ ಸೇವೆ ಮಾಡುತ್ತಾ ಎಲ್ಲಾ ವಿವರ ನೀಡುತ್ತಿದ್ದಾಗ ಪೂರ್ಣಿಮಾಳಿಗೆ ಶಾಲೆಯಲ್ಲಿ ಕಲಿತ ವಿದ್ಯೆ ಎಲ್ಲಾ ಮರೆತು ಹೋದಂತಾಯ್ತು. ಮನಸಲ್ಲೇ ಮಾಮಿಯ ಜೊತೆ ಮಾತಾಡಿದಳು. ಮಾಮಿ ನೀವು ಮಕ್ಕಳಿಗೆ ಕಲಿಸಿದ ಜೀವನ ಪಾಠ ಫಲಿಸಿತು, ನಿಮ್ಮ ಮಕ್ಕಳು ಅಕ್ಷರ ವಿದ್ಯೆಯಲ್ಲಿ ಹಿಂದುಳಿದರೂ ಸದಾಚಾರವನ್ನು ಮರೆತಿಲ್ಲ. ಹೆತ್ತಮ್ಮನನ್ನು ಕಂದನಂತೆ ನೋಡಿಕೊಳ್ಳುತ್ತಿದ್ದಾರೆ. ನೀವೇ ಧನ್ಯರು ಎಂದು ಅವರ ಪಾದಗಳಿಗೆ ನಮಸ್ಕರಿಸಿ ಹೊರ ಬಂದಳು.
ಒಂದು ಬೆಳಿಗ್ಗೆ ಹರೀಶಣ್ಣ ಫೋನ್ ಮಾಡಿ ಅಮ್ಮ ತೀರಿದರು ಎಂದಾಗ ಪೂರ್ಣಿಮಾಗೆ ಮನೆಯಿಂದ ಹೊರಡಲಾರದ ಸ್ಥಿತಿ. ಕೊರೋನಾ ರಿಸ್ಟ್ರಿಕ್ಷನ್ ಇದ್ದುದರಿಂದ ಆ ದಿನ ಊರಲ್ಲಿ ಕರ್ಫ್ಯೂ ಜಾರಿಯಾಗಿತ್ತು. ದೂರದಿಂದಲೇ ಮಾಮಿಗೆ ಮನಸಾರೆ ನಮಸ್ಕರಿಸಿದಳು .
ಮತ್ತೆ ಹರೀಶಣ್ಣ ಮಾಮಿಯ ಸಾವಿನ ಒಂದು ವರ್ಷದ ನೆನಪಿಗೆ ಬಂಧುಗಳಿಗೆ ಭೋಜನ ಇಟ್ಟಿದ್ದೇ ವೆ ಬನ್ನಿ ಎಂದು ಕರೆದರು. ಎಲ್ಲ ಮಕ್ಕಳು ಹಾಗೂ ಬಳಗದವರು ಸೇರಿ ಅಡುಗೆ ತಯಾರಿಸಿದ್ದರು. ಮಾಮಿ ಇಲ್ಲದಿದ್ದರೂ ಅಡುಗೆಯಲ್ಲಿ ಅವರದೆ ಕೈ ರುಚಿ ಇತ್ತು. ಎಲ್ಲಾ ಅಡುಗೆಯಲ್ಲಿ ಮಾಮಿಯನ್ನು ಮಿಸ್ ಮಾಡಿಕೊಂಡಳು.
ಈಗ ಪೂರ್ಣಿಮಾ ಕುಟುಂಬಕ್ಕೆ ಸೋದರ ಮಾಮ ಮಾಮಿ ಇಲ್ಲ ಆದರೆ ಅವರ ಪ್ರೀತಿ ಆತ್ಮೀಯತೆ ಹೃದಯದಲ್ಲಿ ಶಾಶ್ವತವಾಗಿ ಅಚ್ಚಾದಂತಿದೆ.

ಹರೀಶಣ್ಣ ಪೂರ್ಣಿಮಾಳ ಜೊತೆ ಮಾತಾಡುತ್ತಾ ಒಮ್ಮೆ ಕೇಳಿದರು, ನಮ್ಮ ಸಂಬಂಧಿಕರಲ್ಲಿ ತುಂಬಾ ಚೆನ್ನಾಗಿ ವಿದ್ಯೆ ಕಲಿತವರಿದ್ದಾರಲ್ಲ. ಯಾಕೆ ಯಾರೂ ಅಷ್ಟೊಂದು ಒಳ್ಳೆ ಸೆಟಲ್ ಆಗ್ಲಿಲ್ಲ ಎಂದು. ಅಲ್ಲಿಂದ ವಾಪಸ್ ಬಂದು ಪೂರ್ಣಿಮಾ ಈ ಬಗ್ಗೆ ಮನೆಯಲ್ಲಿ ಚಿಂತಿಸಿದಳು. ಎಷ್ಟು ಚೆನ್ನಾಗಿ ಕುಟುಂಬ ಸಂಬಂಧ ನಿಭಾಯಿಸಿ ತೋರಿಸಿದರು ನಮ್ಮ ಮಾಮ ಮಾಮಿ. ಅವರ ಮಕ್ಕಳು ಒಬ್ಬರಿಗೊಬ್ಬರು ಹೆಗಲಿಗೆ ಹೆಗಲು ಕೊಡುತ್ತಾ ತಮ್ಮ ತಂದೆ ತಾಯಿ ಹಾಕಿಕೊಟ್ಟ ಸಂಸ್ಕಾರದ ಭಧ್ರ ಬುನಾದಿಯ ಮೇಲೆ ಪರಸ್ಪರ ಸುಖ ಕಷ್ವವನ್ನು ಹಂಚಿಕೊಂಡು ಬದುಕುತ್ತಿದ್ದಾರೆ.
ನಮ್ಮ ಕುಟುಂಬಗಳಲ್ಲಿ ಎಷ್ಟು ಸಾಮರಸ್ಯ ಇದೆ? ನಾವ್ಯಾಕೆ ಪಶುಗಳಂತೆ ವರ್ತಿಸುತ್ತೇವೆ? ನಮ್ಮ ಭಾವನೆಗಳ ಹಿಡಿತ ನಮಗೇಕಿಲ್ಲ? ಹಿರಿಯರ ನೋವುಗಳಿಗೆ ಸ್ಪಂದಿಸುವ, ಪರಸ್ಪರರ ಭಾವನೆಗಳ ಜೊತೆ ರಾಜಿ ಮಾಡಿಕೊಳ್ಳುವ ಮನೋಭಾವ ನಮಗೇಕಿಲ್ಲ? ಎಂದು ಪೂರ್ಣಿಮಾಳ ಮನಸ್ಸು ಕಂಪಿಸಿತು.
ನಮ್ಮೆಲ್ಲ ಯೋಚಿಸುವ ದಾರಿ, ಜೀವನಶೈಲಿ ಬದಲಾಗಬೇಕಿದೆ. ಮತ್ತೆ ಹಿಂದಿನಂತೆ ಬದುಕ ಬೇಕಿದೆ. ಆದರೆ ಅದು ಈಗ ಕಷ್ಟಕರ. ಕಾರಣ ನಮಗೆ ಕಲಿತ ವಿದ್ಯೆ ತಲೆಗೆ ಹತ್ತಿದೆ. ಅದನ್ನು ಮನಸ್ಸಿಗೆ ಹತ್ತಿಸಿಕೊಳ್ಳುವ ಪ್ರಯತ್ನ ಮಾಡಿದರೆ ಏನಾದರೂ ಸಾಕಾರವಾದೀತು. ಇಂದು ದೇವಾಲಯದಲ್ಲಿ ದೇವರಿದ್ದಾನೆಯೇ ಎಂದು ಶೋಧಿಸುವ ನಾಜೂಕು ಯುಗದಲ್ಲಿ ನಾವಿದ್ದೇವೆ. ಅಂದು ಮನೆಯ ಹಿರಿಯರಲ್ಲಿ ಗುರುಗಳನ್ನು ದೇವರನ್ನು ಕಾಣುತ್ತಿದ್ದೆವು. ಎಷ್ಟೇ ದೊಡ್ಡ ಪಂಡಿತನಾದರು ಮುಗ್ಧತೆ ಇಲ್ಲದ ನರ ನರಿ ಗೆ ಸಮಾನ ಅಲ್ಲವೇ?


3 thoughts on ““ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ

    1. ತುಂಬಾ ಚೆನ್ನಾಗಿ ಬರೆದಿದ್ದೀರಿ… ನಾನು ಅದೇ ನಿಮ್ಮ ಮಾಮಿ ಮನೆಯ ನೆರೆಮನೆಯಲ್ಲಿರುವುದು… ನಿಜ ಜೀವನದ ಘಟನೆಗಳನ್ನು ತುಂಬಾ ಸೊಗಸಾಗಿ ನಿರೂಪಿಸಿದ್ದೀರಿ… ಧನ್ಯವಾದಗಳು
      ರವಿ ತೋನ್ಸೆ

Leave a Reply

Back To Top