ಅಮು ಭಾವಜೀವಿ ಮುಸ್ಟೂರುರವರ ಕವಿತೆ-ʼಮರುಪೂರಣ ಮಾಡುʼ

ಎಲ್ಲೆಲ್ಲೂ ಒಣ ಭೂಮಿ
ಬಾಯಿ ತೆರೆದು ಕಾದಿದೆ ನಾಲ್ಕು ಹನಿಗೆ
ಬೀಸುವ ಗಾಳಿ ಎಲ್ಲ ಬಿಸಿಯಾಗಿ
ಬೇಸತ್ತಿದೆ ಬೇಸರದ ಬೆವರಿಗೆ

ಇಂಥ ಬರಗಾಲ ಎಂದು ಕಂಡಿಲ್ಲ
ಬೆಂಕಿ ಉಗುಳುವ ಸೂರ್ಯಗೆ ಕರುಣೆ ಇಲ್ಲ
ಅದೆಷ್ಟೋ ಗಿಡ ಮರಗಳು ಒಣಗಿಹೋದವಲ್ಲ
ಕಾಡ್ಗಿಚ್ಚಿಗೆ ಸೋಕದಿದ್ದರಷ್ಟೇ ಸಾಕಲ್ಲ

ಆಧುನಿಕತೆಯ ಬರದಲ್ಲಿ ಬರೆದು ಮಾಡಿ
ಬರ ಬಂದಿದೆ ಎಂದು ಕೊರಗುವವರ ನೋಡಿ
ಮತ್ತಷ್ಟು ಬೆಂಕಿಯ ಉಗುಳುತಿಹನು ರವಿ
ಬೇಸಿಗೆ ಭೀಕರೆತೆಗೆ ಬರೆದಾದವು ಕೆರೆ ಬಾವಿ

ಕೆಂಡವಾಗುತ್ತಿದೆ ಧರೆಯೊಡಲು
ಮರ ಕಡಿದರೆ ಇನ್ನೆಲ್ಲಿ ನೆರಳು
ಮಳೆಗಾಗಿ ದೇವರ ಪ್ರಾರ್ಥಿಸುವ ಬದಲು
ಶ್ರಮಿಸು ಮಾನವ ಮತ್ತಷ್ಟು ಕಾಡು ಬೆಳೆಯಲು

ಪ್ರಕೃತಿ ಮುನಿದರೆ ಕಾಯುವವರಿಲ್ಲ
ಅದು ಕೋಪಿಸಿಕೊಂಡರೆ ಸಾಯುವೆ ಎಲ್ಲಾ
ಮುಂದಿನ ಪೀಳಿಗೆಗೆ ಆನಂದ ನೀಡುವುದಾದರೆ
ಕಡಿದ ಜಾಗದಲ್ಲಿ ಮತ್ತೆ ಮರಗಳನ್ನು ಬೆಳೆಸು

ಕೆರೆಕುಂಟೆಗಳ ಒತ್ತುವರಿ ನಿಲ್ಲಿಸು
ಓಡುವ ನೀರನ್ನು ಅಲ್ಲಿ ತಡೆದು ನಿಲ್ಲಿಸು
ಅಂತರ್ಜಲಕ್ಕೆ ಮರುಪೂರಣ ಮಾಡು
ಆಗ ಹನಿ ನೀರಿಗೆ ಅಹಾಕಾರ ತಪ್ಪುವುದು ನೋಡು


Leave a Reply

Back To Top