ಕಾವ್ಯಸಂಗಾತಿ
ಪ್ರಮೋದ ಜೋಶಿ
“ಸಾವಿನ ಕ್ಷಣಹೊತ್ತು ಮುನ್ನ”
ಸಾಯುವ ಮುನ್ನ ನೆನಪಾಗುತಿದೆ
ಬಂಧು ಬಳಗದವರ ನೆನಪೆಲ್ಲಾ
ಎಷ್ಟೋ ದಿನದಂತೆ ಅನಿಸುತಿದೆ
ಅವರೊಂದಿಗೆ ಮಾತಾಡಿ
ನೆನಪಾಗುತಿದೆ ತಂದೆ ತಾಯಿ
ತಾಯಿ ಮಡಿಲಿನೊಳ ಹುಡುಗಾಟತನ
ಗೊತ್ತಾಗಲಿಲ್ಲ ಸಂಸಾರದ ಜವಾಬ್ದಾರಿಯಲಿ
ಹೋದ ವಯಸ್ಸು ಮುವತ್ತರಿಂದ ಎಪ್ಪತ್ತು
ಆವರಿಸುತಿದೆ ಈಗ ನನಗೆ
ನಮ್ಮವರನು ಎಂದೂ ಕಾಣದ ಭೀತಿ
ಬಂದ ಕೊನೇ ಕ್ಷಣಕೆ
ಕಣ್ಗಳೂ ಒದ್ದೆಯಾಗುತಿದೆ ಈಗ
ಜೀವನದ ಚಿಕ್ಕಪುಟ್ಟ ಘಟನೆಗಳು
ಈಗ ನೆನಪಾಗುತ್ತಲೇ ಇದೆ
ನನ್ನೊಂದಿಗೆ ಬಂದು ಹೋದ ಜನ
ನನ್ನನ್ನು ನಿರ್ಲಕ್ಷಿಸಿದ ಕ್ಷಣ
ಹುಟ್ಟಿದಾ ಮನೆ ಆಡಿದಾ ಸ್ಥಳ
ಬಾಲ್ಯದ ಗೆಳೆಯರ ಬಳಗ
ಕಟ್ಟಿದಾ ಮನೆ ನನ್ನ ಮೊದಲ ಗಾಡಿ
ನಾ ಮಾಡಿದಾ ದೂರ ಸವಾರಿ
ಕ್ಷಣ ಕ್ಷಣವೂ ಕ್ಷೀಣಿಸುತಿದೆ
ಮೈಗಳ್ಳತನದಿ ಬಿಟ್ಟ ಕ್ಷಣಗಳು ಅಣಿಕಿಸುತಿವೆ
ಗುರಿ ಮುಟ್ಟಲು ಸಾಗಿದ ದಾರಿಗಳು
ಎಲ್ಲವೂ ನನ್ನ ದೂರುತಿವೆ
ಕೊಡುವುದಾದರೆ ಕೊಡು ಇನ್ನೋಂದು ಕ್ಷಣ
ನನ್ನಿಂದ ಬಳಲಿದವರಲಿ ಕ್ಷಮೆ ಬೇಡುವೆ
ನಿರಾಳ ಭಾವದಿ ಈ ಲೋಕ ತೊರೆಯಲು
ಈ ಜೀವಕೆ ತೆರೆ ಎಳೆಯಲು
ಪ್ರಮೋದ ಜೋಶಿ ಧಾರವಾಡ
.
Wonderful..!
Words fall short to appreciate this..!