ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಣ್ಣು ತೆರೆದು ನೋಡಿದಾಗ ಕಲ್ಯಾಣಿ ಅಣ್ಣನ ಮಡಿಲಲ್ಲಿ ಮಲಗಿದ್ದರು. ಮಾತನಾಡಲು ಸಾಧ್ಯವಾಗದೇ ದುಖಃ ಉಮ್ಮಳಿಸಿ ಬಂದು ಅಣ್ಣನ ಕೈ ಹಿಡಿದು ಮನಸೋ ಇಚ್ಛೆ ಅತ್ತರು. ಅವರನ್ನು ಸಂತೈಸಬೇಕು ಎಂದು ಅಣ್ಣನಿಗೆ ಅನಿಸಿದರೂ ಅತ್ತು ಹಗುರಾಗಲಿ ಎಂದು ಹಾಗೇ ಕುಳಿತರು.

ನಂತರ …”ನಾರಾಯಣನ್ ಹಾಗೂ ಮಕ್ಕಳು ಎಲ್ಲಿ? ನೀನೇಕೆ ಹೀಗೆ ಅಳುತ್ತಾ ಇರುವೆ? ಎಂದು ಕೇಳಿದರು…. “ಅಣ್ಣಾ ಅವರೆಲ್ಲಾ ನನ್ನನ್ನು ಬಿಟ್ಟು ಕರ್ನಾಟಕಕ್ಕೆ ಹೋದರು…ನಾನು ಇಲ್ಲೇ ಉಳಿದರೆ ಖಂಡಿತಾ ನನಗಾಗಿ ಬರುವರು ಎಂದು ಕೊನೇ ಘಳಿಗೆಯಲ್ಲಿ ನಾನು ಹೋಗದೇ ಇಲ್ಲೇ ಉಳಿದುಕೊಂಡೆ ಆದರೆ ಅವರು ಹಿಂತಿರುಗಿ ಬರಲೇ ಇಲ್ಲ”…. ನನ್ನೆಲ್ಲಾ ಪ್ರಯತ್ನಗಳು ವಿಫಲವಾದವು…. ನಾನು ಈಗ ಇಲ್ಲಿ ಒಂಟಿ…. ನನ್ನನ್ನೂ ಅವರು ಇರುವಲ್ಲಿಗೆ ದಯವಿಟ್ಟು ಕರೆದುಕೊಂಡು ಹೋಗಿ…. ಪತಿ ಹಾಗೂ ಮಕ್ಕಳು ಇಲ್ಲದೇ ಒಂದರೆ ಘಳಿಗೆ ಇರಲಾರೆ….. ನಾನಿಲ್ಲದೇ ಮಕ್ಕಳು ಅದೆಷ್ಟು ಕಂಗೆಟ್ಟಿರಬಹುದು… ಅವರಿಗೆ ನಾನಿಲ್ಲದೆ ಇದ್ದು ಅಭ್ಯಾಸವಿಲ್ಲ…. ತವರಿಗೆ ಬಂದಿದ್ದಲ್ಲದೇ ಅವರಿಗೆ ಬೇರೆಲ್ಲೂ ಉಳಿದು ಅಭ್ಯಾಸವಿಲ್ಲ….ದಯವಿಟ್ಟು ಕರೆದು ಕೊಂಡು ಹೋಗಿ…. ಎಂದು ಅಂಗಲಾಚಿದರು. ತಂಗಿಯ ಈ ಅವಸ್ಥೆ ಕಂಡು ಅಣ್ಣನ ಮನಸ್ಸಿಗೆ ಅತೀವ ವೇದನೆ ಉಂಟಾಯಿತು. ಹಾಗೂ ನಾರಾಯಣನ್ ರವರ ಮೇಲೆ ಬಹಳ ಕೋಪ ಬಂದಿತು. ಇವಳೇನೇ ಹಠ ಮಾಡಿದ್ದರೂ ಕರೆದುಕೊಂಡು ಹೋಗದೇ ಬಿಟ್ಟು ಹೋದರಲ್ಲ…..ನಾವೆಲ್ಲಾ ಎಷ್ಟು ಕೇಳಿಕೊಂಡೆವು….. ಕಲ್ಯಾಣಿ ಮತ್ತು ಮಕ್ಕಳನ್ನು ಇಲ್ಲಿ ಬಿಟ್ಟು  ನಾಣು ಸಕಲೇಶಪುರಕ್ಕೆ ಹೋಗಿ ತೋಟ ಖರೀದಿ ಮಾಡಿದ ನಂತರ ತಂಗಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ….ನಮ್ಮ ಮಾತಿಗೆ ಎಳ್ಳಷ್ಟೂ ಬೆಲೆ ಕೊಡದೇ ತನ್ನ ಹಠವನ್ನೇ ಸಾಧಿಸಿದರಲ್ಲ…. ಈಗ ಹೀಗೆ ಇವಳನ್ನು ಒಂಟಿಯಾಗಿ ಬಿಟ್ಟಿದ್ದು ಎಷ್ಟು ಸರಿ? ಎಂದು ಮನದಲ್ಲೇ ನಿಂದಿಸುತ್ತಾ ತಂಗಿಯನ್ನು ಸಂತೈಸುವ ಪ್ರಯತ್ನಕ್ಕೆ ಮುಂದಾದರು.

“ಈ ಮನೆಯನ್ನು ಆಸ್ತಿಯನ್ನು ನಿನ್ನ ಗಂಡ ಮಾರಿದ್ದೂ ಆಯ್ತು ಇಲ್ಲಿಂದ ಹೊರಟು ಹೋದದ್ದೂ ಆಯ್ತು…. ನೀನು ಹೀಗೆ ರೋಧಿಸುತ್ತಾ ಇಲ್ಲಿ ಕುಳಿತರೆ ಹೇಗೆ? …ನಿನಗೆ ಗಂಡ ಮಕ್ಕಳ ಮೇಲೆ ಅಷ್ಟೊಂದು ಮಮಕಾರ ಇರುವಾಗ ನೀನು ಕೂಡಾ ನಾಣುವಿನ ನಿರ್ಧಾರಕ್ಕೆ ಸಮ್ಮತಿಸಿ ಜೊತೆಗೆ ಹೋಗಬೇಕಾಗಿತ್ತಲ್ಲವೇ ಕಲ್ಯಾಣಿ” ಎಂದು ಕಲ್ಯಾಣಿಯ ತಲೆಯನ್ನು ನೇವರಿಸಿ….” ನಡೆ ಬಾ ಮನೆಗೆ ಹೋಗೋಣ…. ಇಲ್ಲಿ ಹೀಗೆ ಒಬ್ಬಳೇ ಇರುವುದು ಸರಿಯಲ್ಲ…. ನಿನಗೆ ನಿನ್ನ ತವರು ಇಲ್ಲವೇ? ನಾಣು ಸ್ವಲ್ಪ ದಿನಗಳಲ್ಲೇ ಬಂದು ನಿನ್ನನ್ನು ಕರೆದುಕೊಂಡು ಹೋಗುವನು. ನಿನ್ನನ್ನು ಖಂಡಿತಾ ಅವನು ಬಿಟ್ಟಿರಲು ಸಾಧ್ಯವಿಲ್ಲ….ನಿನ್ನ ಮತ್ತು ಅವನ ನಡುವಿನ ಬಾಂಧವ್ಯ ಏನೆಂದು ನಾವೆಲ್ಲಾ ಬಲ್ಲೆವು….ಮಕ್ಕಳು ಕೂಡಾ ನಿನ್ನನ್ನು  ಬಿಟ್ಟಿರಲಾರರು…. ನೀನು ಆಸ್ತಿ ಮನೆ ಮಾರಿ ಪರ ಊರಿಗೆ ಹೋಗಿ ವಾಸ್ತವ್ಯ ಹೂಡಲು ನಿರಾಕರಿಸಿದ್ದರಿಂದ ನಾಣುವಿಗೆ ಸ್ವಲ್ಪ ಕೋಪವಿರಬಹುದು….ಕೋಪವು ತಣಿದ ನಂತರ ಖಂಡಿತಾ ಬಂದೇ ಬರುವನು…. ಬಾ ಈಗ ನಿನ್ನ ತವರಿಗೆ….ನಮ್ಮ ಮನೆಗೆ ಹೋಗೋಣ….ಆ ಮನೆಯೂ ಸದಾ ನಿನ್ನದೇ…. ಹೇಗಿದ್ದರೂ ನಾಣು ಮತ್ತು ಮಕ್ಕಳು ಅಲ್ಲಿ ಒಂಟಿಯಲ್ಲ…. ನಿನ್ನ ನಾದಿನಿ ಹಾಗೂ ಅವರ ಮಗಳು ಸಕಲೇಶಪುರದಲ್ಲಿಯೇ ತಾನೇ ಇರುವುದು…. ನಿನ್ನನ್ನು ಕರೆದುಕೊಂಡು ಹೋಗುವವರೆಗೂ ಅವರು ಮಕ್ಕಳನ್ನು ನಾಣುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ….ಎಂದು ಹೇಳುತ್ತಾ ತನ್ನ ಜೊತೆಗೆ ಬಂದಿದ್ದ ತನ್ನ ಪತ್ನಿ ಹಾಗೂ ತಮ್ಮ  ಮತ್ತು ತಮ್ಮನ ಹೆಂಡತಿಯನ್ನು ಸಮ್ಮತಿಯೆ ಎಂದು ಕೇಳುವಂತೆ ಅವರನ್ನೆಲ್ಲ ನೋಡಿದರು. ಅವರೂ ಕೂಡಾ ಪರಿಪೂರ್ಣ ಸಮ್ಮತಿ ಎಂಬಂತೆ ತಲೆ ಅಲ್ಲಾಡಿಸಿದರು. ಕಲ್ಯಾಣಿಯ ಹಿರಿಯ ಅತ್ತಿಗೆ ಬಂದು ಅವರನ್ನು ಮೆಲ್ಲಗೆ ಎಬ್ಬಿಸಿ ತೋಳು ಆನಿಸಿ ಜೊತೆಗೆ ಕರೆದುಕೊಂಡು ಹೋದರು. ಜೊತೆಗೆ ಚಿಕ್ಕ ಅತ್ತಿಗೆಯೂ ಜೊತೆ ಗೂಡಿದರು. ಕಲ್ಯಾಣಿಯ ಅಂಗವಸ್ತ್ರದಿಂದ ಅವರ ಕಣ್ಣುಗಳು ಮತ್ತು ಮುಖವನ್ನು ಒರೆಸಿದರು. ಅಷ್ಟು ಹೊತ್ತಿಗಾಗಲೇ ಮನೆಯನ್ನು ಖರೀದಿಸಿದ ಹೊಸ ಮಾಲೀಕರು ಅಲ್ಲಿಗೆ ಬಂದರು.

ಎಲ್ಲರನ್ನೂ ಮನೆಯ ಒಳಗೆ ಬರಮಾಡಿಕೊಂಡರು. ಕುಡಿಯಲು ಸಂಬಾರವನ್ನು ಕೊಟ್ಟು ಆದರಾತಿಥ್ಯದೊಂದಿಗೆ

ಉಭಯಕುಶಲೋಪರಿ ವಿಚಾರಿಸಿ ಬೀಳ್ಕೊಟ್ಟರು. ಕಲ್ಯಾಣಿ ಅಣ್ಣಂದಿರು ಹಾಗೂ ಅತ್ತಿಗೆಯರೊಡನೆ ತವರಿಗೆ ಬಂದರು. ಅವರಿಗೆ ಪತಿ ಹಾಗೂ ಮಕ್ಕಳದೇ ಚಿಂತೆ. ಈಗ ಅವರೆಲ್ಲಾ ಏನು ಮಾಡುತ್ತಾ ಇರಬಹುದು? ನಿಂತರೂ ಕುಳಿತರೂ ಅವರದೇ ಧ್ಯಾನ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಂಡರು. ಯಾರೊಂದಿಗೂ ಹೆಚ್ಚು ಮಾತಿಲ್ಲ. ಆಗಾಗ ಪತಿ ಬಂದರೇ ಎಂದು ಹೊರ ಬಂದು ನೋಡುತ್ತಾ ಇದ್ದರು. ಯಾರೇ ಮನೆಯ ಅಂಗಳದಲ್ಲಿ ಸುಳಿದಾಡಲಿ ಬಾಗಿಲ ಸಂದಿಯಿಂದ ಇಣುಕಿ ನೋಡುವರು. ಪತಿಯು ಸಂತೋಷದಿಂದ ತನ್ನ ಜೊತೆ ಇದ್ದಾಗ ಹೀಗೆ ಪರ ಊರಿಗೆ ಹೋದರೆ ಚಿಂತೆ ಇರಲಿಲ್ಲ. ಆದರೆ ಆಸ್ತಿ ಮಾರುವ ಮಾತು ಬಂದಾಗಿನಿಂದ ತಾನು ವಿರೋಧ ವ್ಯಕ್ತಪಡಿಸಲು ಪ್ರಾರಂಭ ಮಾಡಿದ ಅಂದಿನಿಂದ ಸ್ವಲ್ಪ ಸ್ವಲ್ಪವೇ ತನ್ನಿಂದ ದೂರವಾಗಿದ್ದರು ಪತಿ ಎನ್ನುವ ನೋವು ಅವರನ್ನು ಬಹಳವಾಗಿ ಹಿಂಡಿತ್ತು. ಈಗ ಎಷ್ಟು ದಿನವಾದರೂ ಬಾರದೇ ಇರುವುದು ಕಂಡು ತನ್ನನ್ನು ಪತಿ ಸಂಪೂರ್ಣವಾಗಿ ತೊರೆದು ಹೋದರೇ ಎಂಬ ಭಯ ಕಾಡಿತ್ತು. ಪತಿಗೆ ಪತ್ರ ಬರೆದು ತನ್ನನ್ನು ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳಬೇಕು ಎಂದು ಮನಸ್ಸಿಗೆ ಬಂದರೂ ಪತಿಯು ಹೋದ ರೀತಿ ನೋಡಿದರೆ ತನ್ನನ್ನು ತೊರೆದಂತೆಯೇ ಇದೆ. ಇಲ್ಲದಿದ್ದರೆ ಹೀಗೆ ಬಾರದೇ ಇರುವರೇ….ಒಂದು ಪತ್ರವಾದರೂ ತನ್ನ ಹೆಸರಿಗೆ ಬರೆಯುತ್ತಾ ಇರಲಿಲ್ಲವೇ? ಮಕ್ಕಳಿಂದಲಾದರೂ ಒಂದು ಪತ್ರ ಬರೆಯಿಸಬಹುದಿತ್ತಲ್ಲವೇ?….ಮಕ್ಕಳು ಕೂಡಾ ನನ್ನನ್ನು ಮರೆತರೇ….ಅಯ್ಯೋ ದೇವರೇ ಎಂತಹ ದುಸ್ಥಿತಿ ನನಗೆ ಬಂದೊದಗಿದೆ…. ಪತಿ ಹಾಗೂ ಮಕ್ಕಳ ಬಗ್ಗೆ ತಿಳಿಯಲು ನಾನೇನು ಮಾಡಲಿ ಈಗ….ನಾನು ಪತ್ರ ಬರೆಯಲು ಅವರ ಯಾವುದೇ ವಿಳಾಸ ಕೂಡಾ ನನ್ನ ಬಳಿ ಇಲ್ಲ. ಎಲ್ಲಿಗೆಂದು ಪತ್ರ ಬರೆಯಲಿ? 

ಹೀಗೇ ದಿನಗಳು ಕಳೆಯುತ್ತಾ ಬಂದಂತೆ ತನ್ನ ಉದರದಲ್ಲಿ ಇನ್ನೊಂದು ಜೀವ ಉಸಿರಾಡುತ್ತಿರುವ ಕುರುಹು ಕಲ್ಯಾಣಿಯ ಅರಿವಿಗೆ ಬಂತು. ತಾನು ತಾಯಿಯಾಗುತ್ತಿರುವ ಲಕ್ಷಣಗಳು ಕಾಣಿಸಿಕೊಂಡಿತು. ಇದು ಕಲ್ಯಾಣಿಗೆ ಅತ್ಯಂತ ಸಂತೋಷದ ವಿಷಯವಾಗಿತ್ತು. ತಮ್ಮಿಬ್ಬರ ಪ್ರೇಮದ ಫಲವು ಉದರದಲ್ಲಿ ಬೆಳೆಯುತ್ತಿದೆ ಎಂದು ತಿಳಿದು ಅತ್ಯಂತ ಸಂತೋಷ ಪಟ್ಟರು. ಈ ಸಂತೋಷದ ಸುದ್ದಿಯನ್ನು ಪತಿಗೆ ತಿಳಿಸಲು ಬಯಸಿದರು. ಆದರೆ ಅವರಿಗೆ ತಿಳಿಸುವುದು ಹೇಗೆ? ಅತ್ತಿಗೆಯರಿಗೆ ಮೊದಲು ಈ ವಿಷಯ ತಿಳಿಸಿದರು. ಅವರಿಗೂ ಸಂತೋಷವಾಯಿತು. ಆದರೆ ಆತಂಕಕ್ಕೆ ಒಳಗಾದರು. ಮೊದಲೇ ಪತಿ ಹಾಗೂ ಮಕ್ಕಳ ಅಗಲಿಕೆಯಿಂದ ನೊಂದು ಹೋಗಿರುವ ಕಲ್ಯಾಣಿ ತಾಯ್ತನದ  ಸಂಕಟ ಕಷ್ಟಗಳನ್ನು ಸಹಿಸಿಕೊಳ್ಳಲು ಸಾಧ್ಯವೇ? ಮಾನಸಿಕವಾಗಿ ಬಹಳ ನೊಂದಿರುವ ಕಲ್ಯಾಣಿಯ ಸ್ಥಿತಿ ನೋಡುವುದೇ ಇಬ್ಬರು ಅತ್ತಿಗೆಯರಿಗೂ

ಕಷ್ಟವಾಗುತ್ತಿತ್ತು. ಇನ್ನು ಹೇಗೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಎಂಬ ಯೋಚನೆಗೆ ಒಳಗಾದರು. ಹೇಗಾದರೂ ಅವಳ ಪತಿ ಹಾಗೂ ಮಕ್ಕಳು ಇರುವ ಊರನ್ನು ಹುಡುಕಿ ಅಲ್ಲಿಗೆ ಕಳುಹಿಸಬೇಕು ಎಂದು ಅಣ್ಣಂದಿರು ಶ್ರಮಿಸುತ್ತಿದ್ದರು. ಹಾಗಿರುವಾಗ ಇಂಥಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಈ ಸ್ಥಿತಿಯಲ್ಲಿ ಏನು ಮಾಡಬೇಕೆಂದು ಅವರಿಬ್ಬರಿಗೂ ಹೊಳೆಯಲಿಲ್ಲ. ಕೊನೆಗೆ ಅಪ್ಪ ಅಮ್ಮ ಹಾಗೂ ಮನೆಯ ಇತರ ಸದಸ್ಯರೊಂದಿಗೆ ಚರ್ಚಿಸಿ ಕಲ್ಯಾಣಿಯ ಪ್ರಸವ ಕಳೆದು ಮಗು ಸ್ವಲ್ಪ ದೊಡ್ಡದು ಆಗುವವರೆಗೂ ಇಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳೋಣ ಎಂದು ಎಲ್ಲರೂ ತೀರ್ಮಾನಿಸಿದರು. ಕಲ್ಯಾಣಿಯ ಆರೈಕೆಯನ್ನು ಅತ್ಯಂತ ಮುತುವರ್ಜಿಯಿಂದ ಮಾಡಲು ನಿಶ್ಚಯಿಸಿದರು.

About The Author

Leave a Reply

You cannot copy content of this page

Scroll to Top