ಲಹರಿ ಸಂಗಾತಿ
ಭಾರತಿ ಅಶೋಕ್
ಅವರ ನೆನಪುಗಳು
“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು”
ಪ್ರಾಥಮಿಕ ಶಾಲೆಯ ದಿನಗಳವು. ಪ್ರತಿ ಹೋಳಿ ಹಬ್ಬದಲ್ಲಿ ನಾವು ನಮ್ಮ ಹಿರಿಯ ಸಹಪಾಠಿಗಳಿಂದ ಕೆಲವು ಸ್ಪರ್ಧೆಗೆ ಒಳಗಾಗುತ್ತಿದ್ದೆವು. ಅವುಗಳಲ್ಲಿ ಮಗ್ಗಿ ಹೇಳುವುದು ಒಂದು. ಎರಡರಿಂದ ಇಪ್ಪತ್ತರವರೆಗೆ ನಿಗಧಿತ ಸಮಯಲ್ಲಿ ತಡವರಿಸದೇ ಹೇಳಿ ಮುಗಿಸುವುದು. ನಾನದನ್ನು ನಿರರ್ಗಳವಾಗಿ ಮಾಡಿ ಮುಗಿಸುತ್ತಿದ್ದೆ. But ಆದರೆ it ಇದು what ಏನು son ಮಗನೇ ಅಂತ ಒಂದೇ ಉಸಿರಿಗೆ ಹೇಳಿ ಮುಗಿಸುವುದು ಮತ್ತೊಂದು ಸವಾಲ್. ಇದರಲ್ಲಿ ಗೆದ್ದವರಿಗೆ ಬಹುಮಾನ ಡಬ್ಗಳ್ಳಿ ಹಣ್ಣು. ಅದರ ರುಚಿ ಹುಚ್ಚು ಹತ್ತಿದವರು ಅದನ್ನು ಹೇಗಾದರು ಮಾಡಿ ಪಡೆದು ತಿನ್ನಲೇಬೇಕೆಂದು ಕಾಯುತ್ತಾರೆ.
ಆ ಹಣ್ಣು ನಮ್ಮ ಊರಿಂದ ಹೊರಗೆ ಎತ್ತ ನಡೆದರೂ ರಸ್ತೆಯ ಬದಿಯಲ್ಲಿ, ಹೊಲಗಳ ಬದುಗಳಲ್ಲಿ ಸಿಗುತ್ತವೆ. ದನ ಕರುಗಳು ಅಷ್ಟೇ ಏಕೆ ಮನುಷ್ಯರು ಹೊಲಗಳ ಬದು ದಾಟದಂತೆ ಮೇರೆಗಳಿಗೆ ಇವನ್ನು ಹಬ್ಬಿಸಿರುತ್ತಿದ್ದರು ಅಥವಾ ತಾವೇ ಹಬ್ಬಿಕೊಂಡಿರುತ್ತಿದ್ದವು. ಮತ್ತೆ ಇಷ್ಟು ಸುಲಭವಾಗಿ ದೊರೆಯುವ ಹಣ್ಣನ್ನು ಸ್ಪರ್ಧೆಯಿಂದ ಪಡೆಯಬೇಕೇ ಎಂದು ನಿಮಗನ್ನಿಸಬಹುದು! ಹೌದು. ಅದರೆ ಅವುಗಳನ್ನು ಕಿತ್ತು ತಿನ್ನಲು ಸಾಮಾನ್ಯವಾಗಿ ಎಲ್ಲರಿಗೂ ಸಾಧ್ಯವಿಲ್ಲ ಕಾರಣ ಅದರ ಮೈಗೆ ಅಂಟಿರುವ ಮುಳ್ಳು ಇದು ಭೀಷ್ಮಾಚಾರ್ಯರ ಶರಶಯ್ಯೆಯನ್ನು ನೆನಪಿಸುತ್ತದೆ. ಮುಳ್ಳು ಡಬ್ಬಳದ ತರ ಇರುವುದಕ್ಕೆ ಅದು ಡಬ್ಗಳ್ಳಿ.
ನಾವು ಸ್ನೇಹಿತರೆಲ್ಲಾ ಸಾಲಿಗೆ ಬಿಡುವಿದ್ದ ಶನಿವಾರ ಭಾನುವಾರದಂದು ಒಡಲುರಿಗೆ ಒಲೆ ಉರಿಸಲು ಬೇಕಾದ ಉರುವಲು ತರಲು ಊರಿಂದ ಅಚೇಗೆ ಇರುತ್ತಿದ್ದೆವು. ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು. ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು
ಈ ಇಂಥಹ ನನ್ನ ಅಸೆ ನೋಡಿ, ತಿಳಿದೇ ನನ್ನ ಹಿರಿಯ ಸಹಪಾಠಿಗಳು ಡಬ್ಗಳಿ ಹಣ್ಣಿನ ನನ್ನ ರಾಕ್ಷಸಿ ಆಶೆಗೆ ನನ್ನನ್ನು ಮುಖ್ಯ ಸ್ಪರ್ಧಾಳುವಾಗಿರಿಸಿ ಎರ್ಪಡಿಸುತ್ತಿದ್ದರು.
ಇಂಥಹದ್ದೇ ಒಂದು ಹೋಳಿ ನನಗೆ ಮರೆಯಲಾರದ ನೆನಪಾಗಿ ಮರಳಿ ಮರಳಿ ಬರುವ ಹೋಳಿ’ ಗೆ ಮರಳಿ ಬಾರದ ವಯಸ್ಸನ್ನು ನೆನಪಿಸುತ್ತದೆ. ನಾನಾಗ ಆರನೇ ತರಗತಿಯಲ್ಲಿದ್ದೆ ನನ್ನ ಗೆಳತಿ ಲತಾ( ಹೆಸರು ಬದಲಿಸಿರುವೆ)ಳ ಮನೆಯಲ್ಲಿ ಪ್ರತಿ ವರ್ಷದಂತೆ ಈ ಅಲ್ಲ.. ಆ ವರ್ಷವೂ ಸ್ಪರ್ಧೆಗೆ ತಯಾರಿ ನಡೆದಿತ್ತು. ಈ ಬಾರಿ ಮಗ್ಗಿ ಹೇಳುವಂತಿಲ್ಲ ಬರೆಯಬೇಕು ಎಲ್ಲಿಯೂ ತಿದ್ದದೇ… ಮೂರು ನಾಲ್ಕು ಜನ ಗೆಳತಿಯರ ಜೊತೆಗೆ ನಾನು ಬರೆಯಲು ಕುಳಿತೆ. ನಿಗಧಿತ ಸಮಯಕ್ಕು ಮೊದಲೇ ಬರೆದು ಮುಗಿಸಿ ಎದ್ದೆ. ಸರಿ ನೀನು ನಿನ್ನಕ್ಕನ ಮನೆಗೆ ಹೋಗಿ ಬಾ ಅಷ್ಟರಲ್ಲಿ ಇವರು ಬರೆದು ಮುಗಿಸಿರುತ್ತಾರೆ ಯಾರು ವಿಜೇತರೆಂದು ಘೋಷಿಸುತ್ತೇವೆ. ಎಂದರು. ಅಯಿತು ಎಂದು ಹೊರಟೆ. ಅಕ್ಕನಿಗೆ ಇದೆಲ್ಲವನ್ನು ವರದಿಸುತ್ತಾ ಆಚೀಚೆ ತಿರುಗಾಡುತ್ತಿದ್ದಾಗ ಹೇಯ್ ಬಾ ಇಲ್ಲಿ ನಿನ್ ಲಂಗಕ್ಕೆ ಅದೇನದು ಹತ್ತಿರೋದು ಅಂದಳು. ಗೊತ್ತಿಲ್ಲಕ್ಕಾ ಏನು ಅಂದೆ ಆಕೆ ಹತ್ತಿರ ಕರೆದು ನೋಡಿದಳು, ಹೇಳಿದಳು ಈಗ ಮನೆಗ್ಹೋಗು, ಇದನ್ನು ಅವ್ವನಿಗೆ ತೋರಿಸು ಅಂತ ಲಂಗ ದುಂಡಗೆ ಹಿಡಿಸಿ ಕಳಿಸಿದಳು. ಅಯ್ಯಯ್ಯೋ..! ಇಲ್ಲಪಾ ಮೊದಲು ನಾನು ಸ್ಪರ್ಧೆಯಲ್ಲಿ ಗೆದ್ದಿದಿನಾ ನೋಡಿ ಹಣ್ಣು ಇಸ್ಕೋಬೇಕು ಅಮೇಲೆ ತೋರಸಿದ್ರಾಯ್ತು ಅಂತ ಗೆಳತಿ ಮನೆಗೆ ಹೋದೆ.
ಆ ಮನೆಯವರು ಭಯಂಕರ ಮಡಿವಂತರು. ನಾನ್ ಅಲ್ಲಿಗೆ ಹೋದಾಗ ಅವರ ಮನೆಯಲ್ಲಿ ಹುಣುಸೆ ಕಾಯಿ(ಹಣ್ಣು) ಚಣ್ನಿ ರುಬ್ಬುತ್ತಿದ್ದರು. ಇಂಥಹ ಬಾಳಿಕೆ ಬರುವ (ಬಳಕಲು) ವಸ್ತುಗಳಾದ ಉಪ್ಪಿನಕಾಯಿ, ಸಂಡಿಗೆ, ಹಪ್ಪಳ ಮಜ್ಜಿಗೆ ಮೆಣಸಿನಕಾಯಿ ಮಾಡುವಾಗ ಹತ್ತಿರ ಸೇರಿಸುವುದಿಲ್ಲ. ಇನ್ನು ನಾನುಟ್ಟ ಲಂಗದ ಕಡೆ ಅವರು ಗಮನಿಸಿ ಹೇ ಹೇ ಹೆ ದೂರ ಇರು ದೂರ ಇರು ಅಂತ ಕುಊಗಲು ಸುರು ಮಾಡಿದರು. ನನಗೆ ಇದ್ಯಾವುದೂ ತಿಳಿಯದೇ ತುಂಬಾ ಬೇಸರದಲ್ಲಿಯೇ ದೂರ ನಿಂತೆ. ಗೆಳತಿ ಲತಾ ತುಸು ದೂರದಲ್ಲಿ ನಿಂತು ಇಲ್ನೋಡು ನೀನು ದೊಡ್ಡೊಳಾಗಿದಿಯಾ ಅದಕೆ ಅವ್ರೆಲ್ಲಾ ದೂರ ಇರು ಅಂತಿದಾರೆ ಅಂದಳು. ನಾನುಟ್ಟ ಲಂಗಕ್ಕೆ ಅಂಟಿದ ಕಲೆ ತೋರಿಸುತ್ತಾ ಅಂದಳು. ಆಗ ಅಕ್ಕ ಲಂಗ ದುಂಡಗೆ ಹಿಡಿದು ಕಳುಹಿದ್ದು ನೆನಪಾಯ್ತು. ಆದರೆ. … ಅದಾವುದು ನನಗೆ ತಿಳಿಯದು, ಅದೇ ಸಮಯಕ್ಕೆ ನಮ್ಮ ಹಿರಿಯ ಸಹಪಾಠಿಗಳು ನನ್ನ ಪೆಚ್ಚು ಮೋರೆ ನೋಡಿ ನಗಲು ಪ್ರಾರಂಭಿಸಿದರು. ಅದರೂ ಬಿಡದೇ ನಾನು ಗೆದ್ದಿದಿನಿ ನನಗೆ ಹಣ್ಣು ಕೊಡ್ರಕ್ಕಾ ಅಂತ ಜೋರಾಗಿ ಕಿರುಚಿದೆ. ನೀ ಗೆದ್ದ ಹಣ್ಣು ನಿನ್ನ ಕಂಗಕ್ಕಂಟಿದೆ ನೋಡು ಅಂತ ಇನ್ನು ಜೋರಾಗಿ ನಕ್ಕರು ಅವಮಾನವಾದಂತಾಗಿ ಮನೆಗೆ ಬಂದು ಅವ್ವನಿಗೆ ತೋರಿಸಿದೆ. ಅವ್ವನು ಪಾಪ! “ಹೌದು ನೀನು ದೊಡ್ಡವಳಾಗಿದಿಯಾ” ಅಂದಳು. ತಾಯಿಗೆ ತನ್ನ ಮಕ್ಕಳು ಮೈ ನೆರದಾಗ ಆಗುವ ನೋವೇ ಆಗಿರಬಹುದು. ಅದೇ ಬೇಸರದಲ್ಲಿ ಒಳ ಉಡುಪನ್ನು ಪರೀಕ್ಷಿಸಿದಳು. ಅವ್ವ ಒಮ್ಮೆಲೇ “ಯಾರವಳು ನಿನ್ ಲಂಗಕ್ಕ ಡಬ್ಗಳ್ಳಿ ಹಣ್ಣು ಹಚ್ಚಿದವಳು” ಅಂತ ಕೇಳಿದಳು. “ಗೊತ್ತಿಲ್ಲವ್ವ” ಅಂತ ಬಾಯಲ್ಲಿ ಹೇಳಿದರೂ ಯಾರು ಹಚ್ಚಿದ್ದು ಅಂತ ಗೊತ್ತಾಯ್ತು. ಆ ಲಂಗ ಬದಲಾಯಿಸಿ ಸೀದಾ ಲಂಗಕ್ಕೆ ಹಣ್ಣಿನ ತಿರುಳನ್ನು ಹಚ್ಚಿದವರ ಮನೆಗೆ ಹೋಗಿ ಜೋರು ಗಲಾಟೆ ಮಾಡಿ ಮತ್ತೆ ಡಬ್ಗಳ್ಳಿ ಹಣ್ಣು ಇಸ್ಕೊಂಡು ಬಂದು ತಿಂದು ಹೋಳಿ ಖುಷಿ ಅನುಭವಿಸಿದೆ. ಸಧ್ಯ ಆಗ ನಾನು ದೊಡ್ಡವಳಾಗಿರಲಿಲ್ಲ ಅನ್ನುವ ಖುಷಿ ಅವ್ವನಿಗೆ ಭಾಳಾ ದಿನ ಉಳಿಯಲಿಲ್ಲ.
ಆದರೆ ಡಬ್ಗಳ್ಳಿ ಹಣ್ಣು ಮಾತ್ರ ರಕ್ತಕ್ಕಿಂತ ಕೆಂಪಗೆ ಇರುತ್ತೆ ಅನ್ನೋದಂತು ಸತ್ಯ. ರಕ್ತದಷ್ಟೇ ಶಕ್ತಿಯುತ ಮತ್ತು ಎಷ್ಟೋ ಔಷಧಿಯ ಗುಣಗಳನ್ನು ಒಳಗೊಂಡಿದೆ. ಇವತ್ತಿಗೆ ಎಷ್ಟೋ ಜನರಿಗೆ ಈ ಹಣ್ಣು ಗೊತ್ತಿಲ್ಲ ತಿನ್ನುವುದಂತು ದೂರವೆ..
ಭಾರತಿ ಅಶೋಕ್