ಕಥಾಯಾನ

ಜುಗ್ಗ ರಾಮಣ್ಣ

ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು ಗೊತ್ತಿತ್ತು. ಅವನ ಮನೆಯವರಿಗೆ ಇದು ಸ್ವಲ್ಪ ಮುಜುಗರ ಎನಿಸಿದರೂ, ಸ್ವತ: ರಾಮಣ್ಣನಿಗೆ ಅದರಿಂದ ಯಾವ ಬೇಸರವಾಗಲಿ, ಮುಜುಗರವಾಗಲಿ ಇರಲಿಲ್ಲ. ತಾನು ಜುಗ್ಗ ಎನಿಸಿಕೊಳ್ಳುವ ನಿಟ್ಟಿನಲ್ಲಿನ ಆತನ ಪ್ರಯತ್ನ ಮುಂದುವರೆದಿತ್ತು. ಊರಲ್ಲಿ ತನ್ನ ಹೆಸರಿನ ಹಿಂದೆ ಸೇರಿಕೊಂಡ ಜುಗ್ಗ ಎನ್ನುವ ಶಬ್ದ ತನಗೆಸಿಕ್ಕ ಯಾವುದೊ ಪ್ರಶಸ್ತಿಯೇನೊ ಎಂಬಂತೆ ಒಳಗೊಳಗೆ ಖುಶಿ ಪಡುವಷ್ಟರ ಮಟ್ಟಿಗೆ ರಾಮಣ್ಣ ಅದಕ್ಕೆ ಒಗ್ಗಿ ಹೋಗಿದ್ದ.

ಹಾಗೆ ನೋಡಿದರೆ ರಾಮಣ್ಣನೇನು ಹುಟ್ಟಾ ಶ್ರೀಮಂತನೇನಲ್ಲ. ಅವರ ಅಪ್ಪ ಆ ಕಾಲದಲ್ಲಿ ಒಂದು ಸೈಕಲ್ ಶಾಪ್ ಇಟ್ಟುಕೊಂಡು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಚಿರಪರಿಚಿತರಾಗಿದ್ದರು. ಹೈಸ್ಕೂಲು ದಾಟದ ರಾಮಣ್ಣನೂ ಕ್ರಮೇಣ ಸೈಕಲ್ ಶಾಪಿನ ಕೆಲಸಕ್ಕೆ ನಿಂತು ಬಿಟ್ಟ. ಪಂಕ್ಚರ್ ಹಾಕುವುದರಿಂದ ಹಿಡಿದು ವೀಲ್ ಬೆಂಡ್ ತೆಗಿಯೋವರೆಗಿನ ಅಷ್ಟೂ ಕೆಲಸಗಳನ್ನು ಕಲಿತುಕೊಂಡು ಸೈಕಲ್ ರಿಪೇರಿಯ ವಿಚಾರದಲ್ಲಿ ಪಂಟರ್ ಅನಿಸಿಕೊಂಡಿದ್ದ. ರಾಮಣ್ಣನಿಗೆ ಇಪ್ಪತ್ಕಾಲು ವರ್ಷವಾಗಿದ್ದಾಗ ಅವರ ಅಪ್ಪ ತುಮಕೂರಿನ ವ್ಯಾಪಾರಸ್ಥರೊಬ್ಬರ ಮಗಳುಸಾವಿತ್ರಮ್ಮನ ಜೊತೆ ಮದುವೆ ಮಾಡಿಸಿದ್ದರು..ರಾಮಣ್ಣನನ್ನು ಮದುವೆಯಾಗಿ ಬರುವಾಗ ಸಾವಿತ್ರಮ್ಮನೇನು ಬರಿಗೈಲಿ ಬಂದಿರಲಿಲ್ಲ. ಆ ಕಾಲದಲ್ಲಿಯೇ ಇಪ್ಪತ್ತು ಸಾವಿರ ರೂಪಾಯಿ ನಗದು ಕಾಲು ಕೆಜಿ ಬಂಗಾರ ಅರ್ದ ಕೆಜಿ ಬೆಳ್ಳಿ ಒಡವೆಗಳ ಗಂಟಿನೊಂದಿಗೆಯೇ ಬಂದಿದ್ದಳು. ಒಂದರ ಹಿಂದೆ ಒಂದರಂತೆ ನಾಲ್ಕು ಮಕ್ಕಳ ತಾಯಿಯಾದ ಸಾವಿತ್ರಮ್ಮನಿಗೆ ಮಾವ ಇರುವತನಕ ಯಾವ ಕಷ್ಟವೂ ಎದುರಾಗಿರಲಿಲ್ಲ. ಮನೆ ಮತ್ತು ಅಂಗಡಿಗಳ ವ್ಯವಹಾರಗಳನ್ನು ತನ್ನ ಕೈಲೇ ಇಟ್ಟುಕೊಂಡಿದ್ದ ರಾಮಣ್ಣನ ಅಪ್ಪ ತೀರಾ ದಾರಾಳಿಯಲ್ಲದಿದ್ದರು ಮನೆಗೆ ತಂದು ಹಾಕುವಲ್ಲಿ ಉಣ್ಣುವುದು ತಿನ್ನುವುದರಲ್ಲಿ ಜುಗ್ಗತನ ತೋರಿಸಿದವನಲ್ಲ. ಹೀಗಾಗಿ ರಾಮಣ್ಣನ ಮಕ್ಕಳು ತಾತನ ಆರೈಕೆಯಲ್ಲಿಯೇ ಬೆಳೆಯತೊಡಗಿದ್ದರು. ರಾಮಣ್ಣನ ಮೊದಲ ಮೂರೂ ಮಕ್ಕಳು ಗಂಡು ಮಕ್ಕಳಾಗಿದ್ದು ನಾಲ್ಕನೆಯದು ಮಾತ್ರ ಹೆಣ್ಣಾಗಿತ್ತು. ನಾಲ್ಕನೆಯದಾಗಿ ಹೆಣ್ಣು ಹುಟ್ಟಿದ ಮೂರನೆ ತಿಂಗಳಿಗೆ ರಾಮಣ್ಣನ ಅಪ್ಪ ಪಾಶ್ರ್ವವಾಯುವಿಗೆ ತುತ್ತಾಗಿ ಶಿವನ ಪಾದ ಸೇರಿಬಿಟ್ಟಿದ್ದರು.

ಅಲ್ಲಿಂದಾಚೆಗೆ ರಾಮಣ್ಣನ ಯಜಮಾನಿಕೆ ಶುರುವಾಯಿತು. ಕೈಗೆ ವ್ಯವಹಾರ ಸಿಕ್ಕೊಡನೆ ರಾಮಣ್ಣ ಕೈ ಬಿಗಿಮಾಡತೊಡಗಿದ. ಸೈಕಲ್ಲು ಶಾಪಿಗೆ ಬರುತ್ತಿದ್ದ ಗಿರಾಕಿಗಳ ಕಷ್ಟ ಸುಖ ತಿಳಿದುಕೊಂಡಿರುತ್ತಿದ್ದ ರಾಮಣ್ಣ ನಿದಾನವಾಗಿ ಮನೆಯಲ್ಲಿದ್ದ ದುಡ್ಡನ್ನು ಬಡ್ಡಿಗೆ ಬಿಡತೊಡಗಿದ. ಮೊದಲು ಸಣ್ಣದಾಗಿ ಶುರು ಮಾಡಿಕೊಂಡ ಈಬಡ್ಡಿ ವ್ಯವಹಾರ ರಾಮಣ್ಣನ ಕೈ ಹಿಡಿಯತೊಡಗಿತು. ಮೊದಮೊದಲು ನಂಬಿಕೆಗೆ ಸೀಮಿತವಾಗಿ ನಡೆಯುತ್ತಿದ್ದ ವ್ಯವಹಾರ ಕ್ರಮೇಣ ಪತ್ರಗಳನ್ನು ಬರೆಸಿಕೊಳ್ಳುವ ಹಂತಕ್ಕೆ ಬಂದಿತ್ತು. ದಿನಕಳೆದಂತೆ ರಾಮಣ್ಣ ನಿದಾನವಾಗಿ ದೊಡ್ಡ ವ್ಯವಹಾರಗಳಿಗೆ ಕೈ ಹಾಕತೊಡಗಿದ್ದ. ಮನೆಪತ್ರ, ಹೊಲಗದ್ದೆಗಳ ಪತ್ರವನ್ನು, ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಕೊಡತೊಡಗಿದ. ಈ ಲೇವಾದೇವಿವ್ಯವಹಾರ ದೊಡ್ಡದಾಗುತ್ತಿದ್ದಂತೆ ಸೈಕಲ್ಲುಗಳ ಜಾಗದಲ್ಲಿ ಆಗತಾನೆ ಮಾರ್ಕೆಟ್ಟಿಗೆ ಬಂದ ಮೋಟಾರ್ ಸೈಕಲ್ಲುಗಳ ಹಾವಳಿ ಕಂಡ ರಾಮಣ್ಣ ತನ್ನದೇ ಆದ ಮೋಟಾರ್ ಸೈಕಲ್ ಮಾರಾಟದ ಶೋರೂಮನ್ನು ಪ್ರಾರಂಬಿಸಿದ. ಅದರಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯ ತೊಡಗಿತು. ಈ ನಡುವೆ ತನ್ನ ಲೇವಾದೇವಿ ವ್ಯವಹಾರಗಳಲ್ಲಿ ಪೋಲೀಸರ ಕಿರಿಕಿರಿ ತಡೆಯಲಾಗದೆ ನಾಮಕಾವಸ್ಥೆಗೆ ಒಂದು ಫೈನಾನ್ಸ್ ಕಂಪನಿ ರಿಜಿಸ್ಟರ್ ಮಾಡಿಸಿ ತನ್ನ ವ್ಯವಹಾರದ ಇಪ್ಪತ್ತೈದರಷ್ಟನ್ನು ಅದರ ಮೂಲಕ ಮಾಡ ತೊಡಗಿ, ಸರಕಾರದ ಕಣ್ಣಿಗೆ ಮಣ್ಣೆರಚಿ ವ್ಯವಹಾರ ನಡೆಸ ತೊಡಗಿದ. ಊರೊಳಗೆ ನಷ್ಟದಲ್ಲಿ ನಡೆಯುತ್ತಿದ್ದ ಒಂದು ರೈಸ್ ಮಿಲ್ಲನ್ನು ಖರೀಧಿಸಿ ಅದನ್ನು ಅಭಿವೃದ್ದಿ ಪಡಿಸಿ ಲಾಭ ಬರುವಂತೆ ಮಾಡಿಕೊಂಡ. ಕೊಟ್ಟ ಸಾಲ ಹಿಂದಿರುಗಿಸಲಾಗದವರ ಹತ್ತಾರು ಏಕರೆ ಗದ್ದೆ, ಅಡಿಕೆ ತೋಟಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಜಮೀನ್ದಾರನೆಂಬ ಹೆಸರು ಗಳಿಸಿಕೊಂಡ. ಇಷ್ಟೆಲ್ಲ ಆದರೂಹೀಗೆ ಯಥೇಚ್ಚವಾಗಿ ಸೇರುತ್ತಲೇ ಹೋದ ದುಡ್ಡು ಮನೆಯಲ್ಲಿ ಅವನ ಹೆಂಡತಿ ಮಕ್ಕಳಿಗೆ ಯಾವುದೆ ಸುಖಸಂತೋಷ ತರಲೇಇಲ್ಲ. ಮನೆಯಲ್ಲಿ ಒಂದು ಅಡುಗೆಮಾಡುವ ವಿಚಾರದಲ್ಲೂ ರಾಮಣ್ಣನ ಅನುಮತಿ ಬೇಕಾಗಿತ್ತು. ಆತ ತಂದು ಕೊಟ್ಟ ದಿನಸಿಯಲ್ಲಿಯೇ ಸಾವಿತ್ರಮ್ಮ ಸಂಸಾರ ನಿಬಾಯಿಸಬೇಕಿತ್ತು. ಮಕ್ಕಳು ಆಸೆಯಿಂದ ಏನಾದರು ತಿಂಡಿ ಕೇಳಿದರೂ ರಾಮಣ್ಣ ಸಂತೋಷವಾಗಿರುತ್ತಿದ್ದ ಸಮಯ ನೋಡಿ ಕೇಳಿ ಆತನ ಅಪ್ಪಣೆ ಪಡೆದೆ ಮಾಡಿಕೊಡಬೇಕಾಗಿತ್ತು. ಅವನ ಗಂಡುಮಕ್ಕಳಿಗು ಅಪ್ಪನ ಜುಗ್ಗತನ ಅರ್ಥವಾಗಿ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬೆಳೆಯ ತೊಡಗಿದ್ದರು. ವರ್ಷದಲ್ಲಿ ಗೌರಿ ಹಬ್ಬ ಮತ್ತು ದೀಪಾವಳಿಗೆ ಬಟ್ಟೆ ತೆಗೆಯುವಾಗಲೂ ಮೂವರು ಗಂಡು ಮಕ್ಕಳಿಗು ಒಂದೇ ತರದ ಅಗ್ಗದ ಬಟ್ಟೆ ತೆಗೆಯುತ್ತಿದ್ದ. ಅವನ್ನು ಹೊಲಿಸುವಾಗಲು ಅವರ ಅಳತೆಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ದೊಡ್ಡದಾಗಿಹೊಲಿಸುತ್ತಿದ್ದ.ಇನ್ನು ತನ್ನ ಮನೆಗೆ ಯಾರೇ ನೆಂಟರು ಬಂದರೂ ನೆಟ್ಟಗವರು ಒಂದು ರಾತ್ರಿಯೂ ಇರಬಾರದ ರೀತಿಯಲ್ಲಿ ಕಟುಕಿಯಾಡಿ ಕಳಿಸಿಬಿಡುತ್ತಿದ್ದ.ಅವನ ಇಂತಹ ಜಿಪುಣತೆಯನ್ನು ಕಂಡ ಸಾವಿತ್ರಮ್ಮನ ತವರಿನವರು ಸಹ ಈ ಕಡೆ ತಲೆಹಾಕಿ ಮಲಗುವುದನ್ನು ನಿಲ್ಲಿಸಿಬಿಟ್ಟಿದ್ದರು.ಗಂಡು ಮಕ್ಕಳಿಗೆ ಹದಿನಾರು ವರ್ಷ ದಾಟಿದರೂ ಯಾವತ್ತೂ ಅವರು ಒಂದೇ ಒಂದು ರೂಪಾಯಿ ತೆಗೆದುಕೊಂಡು ಅಂಗಡಿಗೆ ಹೋಗಿ ಸಾಮಾನು ತಂದವರಲ್ಲ.ಅವರುಗಳು ಹೈಸ್ಕೂಲು ಮುಗಿಸುವಷ್ಟರಲ್ಲಿ ಒಬ್ಬೊಬ್ಬರನ್ನೇ ತನ್ನ ವ್ಯವಹಾರಗಳನ್ನು ನಡೆಸಲು ಬಳಸಿಕೊಳ್ಳತೊಡಗಿದ.ದೊಡ್ಡ ಮಗ ಶೋರೂಮಿನಲ್ಲಿ ಕೂತರೂ ದಿನಸಂಜೆ ಅಪ್ಪನಿಗೆ ಪೈಸೆಪೈಸೆಗೆ ಲೆಕ್ಕ ಒಪ್ಪಿಸಬೇಕಿತ್ತು.ಬಂದ ಗಿರಾಕಿಗಳಿಗೆ ಒಂದು ಲೋಟ ಕಾಫಿ ತರಿಸಿ ಕುಡಿಸಲು ಸ್ವಾತಂತ್ರವಿಲ್ಲದೆಯೆ ಅವನು ಶೋರೂಮಲ್ಲಿ ಕೂರಬೇಕಿತ್ತು ಎರಡನೆಯವನು ಫೈನಾನ್ಸ್ ಆಪೀಸಲ್ಲಿ ಕೂತು ಲೆಕ್ಕಾಚಾರ ನೋಡಿಕೊಳ್ಳಬೇಕಿತ್ತು. ಜೊತೆಗೆ ಸಾಲ ವಸೂಲಿ ಮಾಡಿ ಅಪ್ಪನಿಗೆ ತಂದು ಕೊಡುವುದಷ್ಟನ್ನೆ ಮಾಡಬೇಕಾಗಿತ್ತು. ಇನ್ನು ವಸೂಲಿಗೆ ಹೋಗಲು ಹಳೆಯಕಾಲದ ಸೈಕಲ್ಲನ್ನೇ ತುಳಿಯಬೇಕಿತ್ತೇ ಹೊರತು ಮೋಟಾರ್ ಬೈಕು ಇರಲಿಲ್ಲ. ತಮ್ಮದೇಆದ ಮೋಟಾರ್ ಬೈಕಿನ ಶೋರೂಮಿದ್ದರೂ ಮಕ್ಕಳು ಮಾತ್ರ ಸೈಕಲ್ಲು ತುಳಿದೆ ಕೆಲಸ ಮಾಡಬೇಕಾಗಿತ್ತು. ಯಾರಾದರೂಅವನ ಸರೀಕರು ರಾಮಣ್ಣನನ್ನು ಕೇಳಿದರೆ ಸಯಕಲ್ಲು ಅನ್ನೋದು ನಮಗೆ ಮನೆದೇವರಿದ್ದ ಹಾಗೆ. ಅದರ ಪುಣ್ಯದಿಂದಲೇ ನಾವಿವತ್ತು ಈ ಮಟ್ಟಿಗೆ ಬಂದಿರುವುದೆಂದು ತಿಪ್ಪೆ ಸಾರಿಸುತ್ತಿದ್ದ. ಮೂರನೆಯವನು ರೈಸುಮಿಲ್ಲಿಗೆ ಹೋಗುತ್ತಾ ಗದ್ದೆತೋಟಗಳ ನಿಗಾ ವಹಿಸಿ ಕೆಲಸ ಮಾಡಬೇಕಾಗಿತ್ತೇ ಹೊರತು ಐದೇ ಐದು ಪೈಸೆಯ ಮುಖ ಕೂಡಾ ನೋಡಿರಲಿಲ್ಲ. ಇನ್ನು ರಾಮಣ್ಣ ಸ್ವತ: ತಾನಾದರು ಸುಖ ಅನುಭವಿಸಿದನೆ ಅಂದರೆ ಅದೂ ಇಲ್ಲ. ಒಂದು ದಿನವೂ ಒಳ್ಳೆಯ ಊಟಮಾಡದೆ ಒಂದೊಳ್ಳೆಯ ಬಟ್ಟೆ ಹಾಕದೆ ಜಿಪುಣತನದಲ್ಲಿಯೇ ಬದುಕುತ್ತಿದ್ದ. ಇನ್ನು ಊರಲ್ಲಿನ ಯಾವುದೇ ಸಮಾರಂಭಗಳಿಗೂ ನಯಾಪೈಸೆ ಕೊಡುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಾಗಿಲಿಗೆ ಸಾಲ ಕೇಳುವವರ ಹೊರತಾಗಿ ಬೇರೆಯವರೂ ಬರುತ್ತಿರಲಿಲ್ಲ. ಹಬ್ಬ ಹರಿದಿನಗಳನ್ನು ಆಚರಿಸಿದರೆ ಖರ್ಚಾಗುತ್ತದೆ ಅಂತ ಸಾವಿತ್ರಮ್ಮನ ತವರು ಮನೆಗೆ ಹೆಂಡತಿ ಮಕ್ಕಳನ್ನು ಕಳಿಸಿ ತಾನೊಬ್ಬನೆ ಮನೆಯಲ್ಲಿ ಇದ್ದು ಬಿಡುತ್ತಿದ್ದ. ಅವರು ಹೋಗಲು ಮಾತ್ರ ರೈಲಿನ ಟಿಕೇಟಿಗೆ ದುಡ್ಡು ಕೊಡುತ್ತಿದ್ದರಿಂದ ವಾಪಾಸು ಬರುವಾಗ ಅವಳ ತವರು ಮನೆಯವರೆ ಅವರನ್ನು ಕರೆದುಕೊಂಡು ಬಂದು ಬಿಟ್ಟುಹೋಗಬೇಕಾಗಿತ್ತು..

ರಾಮಣ್ಣ ಜುಗ್ಗರಾಮಣ್ಣನಾಗಿ ಹೀಗೆ ಹೆಸರುಮಾಡಿರುವಾಗಲೆ ನಡೆದ ಘಟನೆಯೊಂದು ರಾಮಣ್ಣನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ರಾಮಣ್ಣನ ಮೂವರು ಗಂಡುಮಕ್ಕಳ ನಂತರ ಹಿಟ್ಟಿದ ಮಗಳು ಸುಮ ಪಿಯುಸಿ ಓದುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋದವಳು ಮನೆಗೆವಾಪಾಸು ಬರದೆಕಣ್ಮರೆಯಾಗಿ ಬಿಟ್ಟಿದ್ದಳು. ಹಾಗೆ ನೋಡಿದರೆ ರಾಮಣ್ಣನಿಗೆ ಮಗಳನ್ನು ಕಂಡರೆ ಬಹಳ ಪ್ರೀತಿ ಇತ್ತು. ಎಷ್ಟೇ ಜುಗ್ಗನಾದರೂ ಮನೆಯಲ್ಲಿ ಬೇರ್ಯಾರಿಗು ಕಾಣದಂತೆ ಆಕೆಗೆ ಗುಟ್ಟಾಗಿ ತುಂಬಾ ದುಡ್ಡು ಕೊಡುತ್ತಿದ್ದ. ಅವಳಿಗೆ ಏನು ಬೇಕಾದರು ತೆಗೆದುಕೊಳ್ಳಲು ನಡೆದುಕೊಳ್ಳಲು ಸ್ವಾತಂತ್ರ ಕೊಟ್ಟಿದ್ದ. ಆದರೆ ಅವಳ ಮೇಲೆ ತನಗಿರುವ ಪ್ರೀತಿಯನ್ನು ಅವನ್ಯಾವತ್ತು ಬಹಿರಂಗವಾಗಿ ತೋರಿಸಿಕೊಂಡವನಲ್ಲ. ಅಂತಹ ಮಗಳು ವಾರವಾದರು ಮನೆಗೆ ಬಾರದೆ ನಾಪತ್ತೆಯಾದಾಗ ರಾಮಣ್ಣ ಕುಸಿದು ಕುಳಿತು ಬಿಟ್ಟಿದ್ದ. ವಾರ ಕಳೆದರು ಅವನು ಮನೆಯಿಂದಾಚೆ ಬರಲೆ ಇಲ್ಲ. ಕೊನೆಗೆ ಗಂಡು ಮಕ್ಕಳೆ ಸ್ಟೇಷನ್ನಿಗೆ ಹೋಗಿಕಂಪ್ಲೇಟ್ ಕೊಟ್ಟು ಬಂದಿದ್ದರು. ಹತ್ತನೆ ದಿನದ ಹೊತ್ತಿಗೆ ಅವಳು ಅದೇ ಊರಿನ ಹುಡುಗನನ್ನು ಮದುವೆಯಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿರುವುದು ಗೊತ್ತಾಯಿತು. ಈ ವಿಷಯ ಕೇಳಿದ ಸಾವಿತ್ರಮ್ಮ ಹೆಂಚು ಹಾರಿಹೋಗುವಂತೆ ಕಿರುಚಾಡಿ ಅಳುವಾಗ ‘ಮುಚ್ಚೇ ಬಾಯಿ! ಅವಳಿಗಿಷ್ಟ ಬಂದವನನ್ನು ಮದುವೆ ಮಾಡಿಕೊಂಡು ಹೋಗಿದ್ದಾಳೆ. ಎಲ್ಲೋ ಸುಖವಾಗಿರಲಿ’ ಅಂತೇಳಿ ಎಲ್ಲರಲ್ಲು ಅಚ್ಚರಿ ಹುಟ್ಟಿಸಿದ್ದ. ಬೆಂಗಳೂರಿಗೆ ಹೋಗಿ ಅವಳನ್ನು ನೋಡಿಕೊಂಡು ಬರೋಣ ಅಂತ ಹೆಂಡತಿ ಮಕ್ಕಳು ಹೇಳಿದರೂ ರಾಮಣ್ಣ ಸುತಾರಂ ಒಪ್ಪದೇ ಹೋದ.ಅಷ್ಟರಲ್ಲಿ ಊರಲ್ಲಿ ಇನ್ನೊಂದಿಷ್ಟು ವಿವರಗಳು ಬಯಲಾಗ ತೊಡಗಿದ್ದವು

ಸುಮಾ ಪ್ರೀತಿಸಿ ಮದುವೆಯಾದ ಹುಡುಗ ಬೇರೆ ಯಾರೂ ಆಗಿರದೆ ನಾಲ್ಕು ವರ್ಷಗಳ ಹಿಂದೆ ರಾಮಣ್ಣನ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಾಗ ಅವಮಾನ ಸಹಿಸಲಾಗದೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಪ್ಪನ ಮಗ ಎನ್ನುವ ವಿಷಯವೇಊರಲ್ಲಿ ಕುತೂಹಲದ ಕತೆಯಾಗಿ ಹರಡಿತ್ತು. ರಾಮಣ್ಣನ ಮೇಲಿನ ಸೇಡಿನಿಂದಲೇ ಆ ಹುಡುಗ ಸುಮಾಳನ್ನು ತಲೆ ಕೆಡಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂದು, ಸ್ವಲ್ಪ ದಿನವಾದ ಮೇಲೆ ಅವಳನ್ನು ಕೈಬಿಟ್ಟು ತವರು ಮನೆಗೆ ಓಡಿಸುತ್ತಾನೆಂದು ಜನ ಮಾತಾಡಿಕೊಳ್ಳತೊಡಗಿದ್ದರು. ಈ ವಿಷಯ ರಾಮಣ್ಣನ ಕಿವಿಗೂ ಬಿದ್ದಿತ್ತು. ಇದನ್ನು ಕೇಳಿದ ಸಾವಿತ್ರಮ್ಮನಂತು ಅಯ್ಯೋ ಈ ಗಂಡಸಿನ ಜುಗ್ಗತನದಿಂದ ನನ್ನ ಮಗಳ ಜೀವನ ಹಾಳಾಯಿತಲ್ಲ ಎಂದು ಎದೆ ಬಡಿದುಕೊಂಡು ಮನೆತುಂಬಾ ಉರುಳಾಡಿ ಅತ್ತಳು. ಗಂಡು ಮಕ್ಕಳು ಅಪ್ಪನನ್ನು ಮಾತಾಡಿಸುವ ಧೈರ್ಯ ಸಾಲದೆ ಕೂತುಬಿಟ್ಟಿದ್ದರು.

ಅಂತೂ ಗಂಡ ಏನಾದರು ಅಂದುಕೊಂಡು ಸಾಯಲಿ ಎಂದುಕೊಂಡ ಸಾವಿತ್ರಮ್ಮ ಅವತ್ತು ಸಾಯಂಕಾಲ ಮೂವರು ಗಂಡುಮಕ್ಕಳನ್ನು ಕರೆದು ರೂಮಿನಲ್ಲಿ ಕೂತಿದ್ದ ಗಂಡನಿಗೆ ಕೇಳುವಂತೆ ನಾಳೆ ಬೆಳಗ್ಗಿನ ರೈಲಿಗೆ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ನೋಡಿಕೊಂಡು ಬರೋಣ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಎಂದು ಹೇಳಿದಾಗ ನಡುಮನೆಯಲ್ಲಿ ಸಾಲಾಗಿ ಕೂತಿದ್ದ ಗಂಡು ಮಕ್ಕಳು ಮೌನವಾಗಿ ತಲೆಯಾಡಿಸಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡರಾಮಣ್ಣ ಏನೂ ಮಾತಾಡಿರಲಿಲ್ಲ.

ರಾತ್ರಿ ಮಾಮೂಲಿಯಂತೆಎಂಟುಗಂಟೆಗೆ ಊಟಕ್ಕೆ ಕರೆದಾಗ ಹೊರಗೆದ್ದು ಬಂದ ರಾಮಣ್ಣ ಹೆಂಡತಿ, ಮೂರೂಮಕ್ಕಳನ್ನು ಮುಂದೆ ಕೂರಿಸಿಕೊಂಡು ತನ್ನ ಕೈಲಿದ್ದ ಸಣ್ನ ಪೆಟ್ಟಿಗೆಯನ್ನು ಸಾವಿತ್ರಮ್ಮನ ಕೈಲಿ ಕೊಟ್ಟು ಇದರಲ್ಲಿ ಮನೆ, ಶೋರೂಂ, ಪೈನಾನ್ಸ್ , ಸೈಟು-ಮನೆಗಳ ಪತ್ರಗಳು,ಬ್ಯಾಂಕುಗಳ ಪಾಸ್ ಬುಕ್ಕುಗಳು ಸೇರಿದಂತೆ ಎಲ್ಲ ಪತ್ರಗಳೂ ಇವೆ. ನೀವು ಬೆಂಗಳೂರಿಗೆ ಹೋಗುವ ಮುಂಚೆ ಈ ಆಸ್ತಿಯನ್ನು ನಾಲ್ಕು ಭಾಗವನ್ನಾಗಿ ಮಾಡಿ ನಾಲ್ಕೂ ಮಕ್ಕಳ ಹೆಸರಿಗೆ ಮಾಡಿಸಿಬಿಡು. ನಮ್ಮ ಲಾಯರ್ ವೆಂಕಟೇಶಯ್ಯ ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಗೆ ಬರ್ತಾರೆ. ನೀವೆಲ್ಲ ಕೂತು ಮಾತಾಡಿ ಯಾರ್ಯಾರಿಗೆ ಏನೇನು ಅಂತ ನಿದರ್ಾರ ಮಾಡಿಕೊಳ್ಳಿ ಎಂದು ಯಾರೀಗೂ ಪ್ರಶ್ನೆ ಕೇಳುವ ಅವಕಾಶ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ.

ಬೆಳಿಗ್ಗೆ ಒಂಭತ್ತು ಗಂಟೆಯಾದರು ಯಾಕೆ ಎದ್ದಿಲ್ಲವೆಂದು ಸಾವಿತ್ರಮ್ಮ ಗಂಡನ ರೂಮಿಗೆ ಹೋದರೆ ಅವನಲ್ಲಿರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ಯಾವುದಾದರು ವಸೂಲಿಗೆ ಹೋಗಿರಬೇಕೆಂದು ಕೊಳ್ಳುವಷ್ಟರಲ್ಲಿ ಲಾಯರ್ ವೆಂಕಟೇಶಯ್ಯ ಬಂದರು. ರಾಮಣ್ಣನ ಅನುಪಸ್ಥಿತಿಯಲ್ಲಿಯೇ ಅವರುಗಳು ಆಸ್ತಿಯ ಪತ್ರಗಳನ್ನಿಟ್ಟುಕೊಂಡು ಮಾತಾಡತೊಡಗಿದರು. ಅವರೆಲ್ಲ ಒಂದು ತೀಮರ್ಾನಕ್ಕೆ ಬರುವಷ್ಟರಲ್ಲಿ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಅಷ್ಟು ಹೊತ್ತಾದರು ರಾಮಣ್ಣ ಬರದೆ ಹೋದಾಗ ಎಲ್ಲರಿಗು ಆತಂಕ ಅನುಮಾನ ಶುರುವಾಗಿತ್ತು. ಮತ್ತೊಂದು ಸಲ ಅವನ ರೂಮಿಗೆ ಹೋಗಿ ನೋಡಿದಾಗ ಕಡೆಯದಾಗಿ ಅವನುಬರೆದಿಟ್ಟ ಪತ್ರ ಸಿಕ್ಕಿತ್ತು. ಅದರಲ್ಲಿ ಎಲ್ಲ ಆಸ್ತಿಯನ್ನು ನೀವುಗಳು ಹೇಗಾದರು ಹಂಚಿಕೊಳ್ಳಿ ಆದರೆ ಈ ಮನೆಯನ್ನು ಮಾತ್ರ ಈಊರಿನ ಯಾವುದಾದರುಅನಾಥಾಶ್ರಮಕ್ಕೊ ವೃದ್ದಾಶ್ರಮಕ್ಕೋಉಚಿತವಾಗಿ ಕೊಟ್ಟು ಬಿಡಿ. ನನ್ನ ಹುಡುಕಲು ಪ್ರಯತ್ನಿಸಬೇಡಿ ಎಂದು ಬರೆದಿತ್ತು. ಪತ್ರ ಓದಿದ ಸಾವಿತ್ರಮ್ಮ ಎದೆ ಬಡಿದುಕೊಂಡು ಅತ್ತಳು. ಮೂವರು ಗಂಡುಮಕ್ಕಳು ಮಾತ್ರ ಇದಕ್ಕೆ ಅಳುವುದೊ ನಗುವುದೊ ಎಂಬ ಗೊಂದಲದಲ್ಲಿ ಮುಖಮುಖ ನೋಡಿಕೊಂಡರು

ನಂತರ ಸಾವಿತ್ರಮ್ಮ ಮತ್ತು ಮಕ್ಕಳು ಆಸ್ತಿಯವಿಷಯವನ್ನು ಪಕಕ್ಕಿಟ್ಟು ಎಷ್ಟೆಲ್ಲ ಹುಡುಕಿದರೂ ರಾಮಣ್ಣನ ಸುಳಿವೇ ಸಿಗಲಿಲ್ಲ. ಮೂರು ತಿಂಗಳ ಕಾಲ ಹುಡುಕಾಡಿದಂತೆ ಮಾಡಿದ ಪೋಲೀಸರು ಕೊನೆಗೊಂದು ದಿನ ರಾಮಣ್ಣನ ಕಣ್ಮರೆಯ ಕೇಸನ್ನು ಕ್ಲೋಸ್ ಮಾಡಿ ಬಿ ರಿಪೋರ್ಟ ಹಾಕಿಕೈ ತೊಳೆದುಕೊಂಡರು.

ಇದೆಲ್ಲ ಆಗಿ ಈಗ ಒಂದು ವರ್ಷವಾಗಿದ್ದು,ಸಾವಿತ್ರಮ್ಮ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ಊರಿಗೆ ಕರೆದುಕೊಂಡು ಬಂದು ಅಳಿಯನ ತಂದೆಯ ಹರಾಜಿಗೆ ಬಂದಿದ್ದ ಹಳೆಯ ಮನೆಯನ್ನು ಅವರ ಹೆಸರಿಗೆ ಮಾಡಿಸಿ ಇಲ್ಲೇ ಇರುವಂತೆ ಹೇಳಿದ್ದಾಳೆ. ಇನ್ನು ಶೋರೂಂ, ರೈಸ್ ಮಿಲ್, ಗದ್ದೆತೋಟಗಳನ್ನು ಮೂವರು ಮಕ್ಕಳಿಗೂ ಹಂಚಿ ಗಂಡನ ಹೆಸರಲ್ಲಿದ್ದ ಒಂದು ದೊಡ್ಡ ಮನೆಯಲ್ಲಿ ಮಕ್ಕಳ ಜೊತೆ ತಾನೂ ವಾಸವಿದ್ದಾಳೆ. ದೊಡ್ಡ ಮಗನ ಮದುವೆಗೆ ಹೆಣ್ಣು ಹುಡುಕಲು ಅವರಿವರಿಗೆ ಹೇಳಿಟ್ಟಿದ್ದಾಳೆ

ಇದೀಗ ಒಂದು ವರ್ಷದ ನಂತರ ರಾಮಣ್ಣನ ಪಿತ್ರಾರ್ಜಿತ ಮನೆಯನ್ನು ಒಂದು ಸಂಸ್ಥೆಗೆ ದಾನ ಮಾಡಲಾಗಿದ್ದು, ಅವರುಗಳು ಆ ಮನೆಯಲ್ಲೊಂದು ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ. ಆ ಆಶ್ರಮದ ಅದರ ಮುಂದೆ ‘ಶ್ರೀ ರಾಮಣ್ಣ ಸ್ಮಾರಕ ಅನಾಥಾಶ್ರಮ’ ಎಂಬ ಬೋರ್ಡ್ ನೇತಾಡುತ್ತಿದೆ.

ಈ ನಡುವೆ ಮುನಿಸಿಪಾಲ್ಟಿಯಿಂದ ನಗರಪಾಲಿಕೆಗೆ ಬಡ್ತಿಯಾದ ಊರೀಗ ಹೊಸ ಕಾರ್ಪೋರೇಟರುಗಳ ಆಳ್ವಿಕೆಯಲ್ಲಿ ಮುನ್ನಡೆಯುತ್ತಿದ್ದು, ಅವರುಗಳು ಊರಿನೆಲ್ಲ ಬೀದಿಗಳಿಗೆ ಸ್ವಾತಂತ್ರ ಹೋರಾಟಗಾರರ, ಸಾಹಿತಿಗಳ ಹೆಸರುಗಳನ್ನಿಟ್ಟು ಬೋರ್ಡ್ಗಳನ್ನು ಹಾಕಲು ಶುರುಮಾಡಿದ್ದಾರೆ. ಹಾಗೆಯೇ ರಾಮಣ್ಣನ ಮನೆಯಿದ್ದ ಬೀದಿಗೂ ಬಂದಾಗ ಜನ ಹೊಸ ಹೆಸರಿನ ಬೋರ್ಡ್ ಹಾಕುವುದನ್ನು ವಿರೋಧಿಸಿ, ಪ್ರತಿಭಟಿಸಿದರು. ಪಾಲಿಕೆಯವರು ಹಟ ಹಿಡಿದು ತಾವು ತಂದ ಬೋರ್ಡ್ ಹಾಕಿ ಹೋದ ಒಂದೇ ದಿನಕ್ಕೆ ಜನ ಜುಗ್ಗರಾಮಣ್ಣನ ಹೆಸರಿರುವ ಅದಕ್ಕಿಂತ ದೊಡ್ಡ ಬೋರ್ಡ್ ಒಂದನ್ನು ಅದರ ಪಕ್ಕವೇ ತಂದು ಹಾಕಿದ್ದಾರೆ. ಇದೀಗ ವಿಧಿಯಿಲ್ಲದೆ ಪಾಲಿಕೆಯವರು ತಾವು ಹಾಕಿದ ಬೋರ್ಡನ್ನು ವಾಪಾಸು ತೆಗೆದುಕೊಂಡು ಹೋಗಿದ್ದಾರೆ. ಇವತ್ತಿಗೂ ಆ ಬೀದಿ ಜನರ ಬಾಯಲ್ಲಿ ‘ಜುಗ್ಗರಾಮಣ್ಣನ’ ಬೀದಿ ಎಂದೇ ಕರೆಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ ನಗರಪಾಲಿಕೆಯ ಕಡತಗಳಲ್ಲಿಯೂ ‘ಜುಗ್ಗರಾಮಣ್ಣನ ಬೀದಿ’ ಎಂದೇ ದಾಖಲಾಗಿದೆ.

ಆ ಊರಿಗೆ ಹೊಸದಾಗಿ ಬರುವ ಜನರಿಗೆ ಜುಗ್ಗರಾಮಣ್ಣನ ಕತೆ ಹೇಳಲು ಜನ ಇವತ್ತಿಗೂ ಬೇಜಾರು ಮಾಡಿಕೊಳ್ಳದೆ ಆಸಕ್ತಿಯಿಂದ ಕಾಯುತ್ತಾರೆ. ಆದರದು ರಾಮಣ್ಣನ ಮೇಲೆ ಅವರಿಗಿರುವ ಗೌರವವೊ ಅಥವಾ ಆತನ ಜುಗ್ಗತನದ ಬಗ್ಗೆ ಅವರಿಗಿರುವ ಅಸಹನೆಯೊ ನನಗಂತು ಅರ್ಥವಾಗಿಲ್ಲ

*********

ಕು.ಸ.ಮದುಸೂದನ

Leave a Reply

Back To Top