ಗಝಲ್
ಸಹದೇವ ಯರಗೊಪ್ಪ
ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ|
ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ||
ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ|
ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ||
ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ|
ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ||
ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ ವಿಶ್ವಾಸ|
ಕಪ್ಪು ಮೂತಿಯ ಮುಗಿಲ ಕಣ್ಣೀರು ಕೋಡಿ ಹರಿವು ಆಶಿಸಿ ಮಳೆಗಾಗಿ ಕಾಯುತಿರುವೆ||
ನೆಲ ಮುಗಿಲು ಮಿಲನ ಮರೆತರೆ ಕಂಗಳ ಕೊಳದ ನೀರುಣಿಸಿ ಬರ ಚಿಗುರಿಸುವೆ|
ಸಾಚಿ ಉಡಿ ಮುತ್ತುಗಳನ್ನು ಕೂರಿಗೆ ಕಣ್ಣಲ್ಲಿ ಪೋಣಿಸಿ ಮಳೆಗಾಗಿ ಕಾಯುತಿರುವೆ||
***********
ಸೂಪರ್ ಸರ್
ತುಂಬಾ ಲಯಬಡವಾಗಿದೆ ಸರ್
ಕೃಷಿಕರ ಮಹಾದಾಸೆ ಮಳೆಯ ನಿರೀಕ್ಷೆ ತಮ್ಮ ಕೃತಿಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ ಸರ್