ನೆನಪಿನ ಸಂಗಾತಿ
ಸ್ವರ ಸಾಮ್ರಾಜ್ಞಿ
ಲತಾ ಮಂಗೇಶ್ಕರ್
ಒಂದುನೆನಪು-
ಸುಜಾತಾ ರವೀಶ್
೧೯೨೯ ಸೆಪ್ಟೆಂಬರ್ ಇಪ್ಪತ್ತೆಂಟನೇ ತಾರೀಕು ಶನಿವಾರ ಭಾರತೀಯ ಚಲನ ಚಿತ್ರ ಗೀತೆಗಳ ಗಾಯನದಲ್ಲಿ ಇತಿಹಾಸ ನಿರ್ಮಿಸಿದ ಲತಾ ಮಂಗೇಶ್ಕರ್ ರವರ ಜನನ ಇಂದೋರ್ ನಲ್ಲಿ ಆಯಿತು . ತಂದೆ ದೀನಾನಾಥ್ ಮಂಗೇಶ್ಕರ್ ಹಾಗೂ ತಾಯಿ ಶುದ್ದಮತಿ. ಮೂವರು ಸೋದರಿಯರು ಆಶಾ ಭೋಂಸ್ಲೆ ಮೀನಾ ಖಾದಿಕರ್ ಉಷಾ ಮಂಗೇಶ್ಕರ್ ಹಾಗೂ ಸಹೋದರ ಹೃದಯನಾಥ್ ಮಂಗೇಶ್ಕರ್ .
ಮರಾಠಿ ನಾಟಕಗಳನ್ನಾಡುತ್ತಿದ್ದ ತಂದೆ ದೀನಾನಾಥ್ ಮಂಗೇಶ್ಕರ್ ರಿಂದಲೇ ಮೊದಲು ಸಂಗೀತ ಕಲಿತ ಲತಾ ಅವರು ತಂದೆಯನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡು ಹದಿಮೂರನೆಯ ವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯಿಸಿ ಹಿನ್ನೆಲೆ ಸಂಗೀತಗಳನ್ನು ಹಾಡುತ್ತ ಕುಟುಂಬದ ಜೀವನೋಪಾಯಕ್ಕಾಗಿ ಹಾಡುಗಾರಿಕೆಯನ್ನು ಅವಲಂಬಿಸಬೇಕಾಯಿತು . ಹಿಂದಿ ಚಲನಚಿತ್ರ ಸಂಗೀತದ ಅನಭಿಷಿಕ್ತ ಮಹಾರಾಜ್ಞಿಯಾಗಿ ಮೆರೆದ ಲತಾ ಮಂಗೇಶ್ಕರ್ ಅವರು ತುಳಿದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ . ಬಡತನ ಅಪಮಾನ ಹಾಗೂ ಕಠಿಣ ಪರಿಶ್ರಮದ ಹಾದಿಯಲ್ಲಿ ನಡೆದು ಪ್ರಸಿದ್ಧಿಯ ಮೇರು ಶೃಂಗದಲ್ಲಿ ನೆಲೆ ನಿಂತರು . ಬಾಲಿವುಡ್ ನ ನೈಟಿಂಗೇಲ್ ಎಂದೇ ಹೆಸರುವಾಸಿಯಾದ ಲತಾ ಅವರು ಹತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಇಪ್ಪತ್ತೆರಡು ಭಾಷೆಗಳಲ್ಲಿ ಹಾಡಿದ್ದಾರೆ . ಆದರೆ ಮೊದಮೊದಲು ಇವರ ಧ್ವನಿ ತುಂಬಾ ತೆಳು ಎಂದು ಅವಕಾಶಗಳು ನಿರಾಕರಿಸಲ್ಪಟ್ಟಿದ್ದವಂತೆ .
ಅದ್ಭುತ ಸ್ವರಮಾಧುರ್ಯದ ಆ ಮಧುರ ಕಂಠದ ನಾದಸಿರಿ ಕೇಳಿದವರು ಎಂದಿಗೂ ಮರೆಯಲಾರರು. ಈ ಕೆಲವು ಅವರ ಮಧುರ ಗೀತೆಗಳು ಚಿತ್ರರಸಿಕರ ನೆನಪಿನ ಭಿತ್ತಿಯಿಂದ ಎಂದಿಗೂ ಅಳಿಯಲಾರದಂತಹವುಗಳು.
ಆಪ್ ಕಿ ನಜ಼ರೋನೇ ಸಮ್ಝಾ” ಅಜೀಬ್ ದಾಸ್ತಾನ್ ಹೆ, ಯಾರಾ ಸಿಲಿಸಿಲಿ ಬಿರಹಾ ಕಿ, ಬಾಹೋಮೆ ಚಲಿ ಆವ್, ಸುನ್ ಸೈಬಾ ಸುನ್.. ಛಿಟ್ಟಿಯೇ.. ಇದು ಮುಗಿಯದ ಪಟ್ಟಿ . ಅರುವತ್ತು ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಲತಾ ಅವರ ಹಾಡುಗಳು ಷೋಡಶಿಯರ ಮೇಲೆ ಚಿತ್ರೀಕರಣವಾಗುತ್ತಿತ್ತು ಅಂದರೆ ಆ ಕೊರಳಿನ ಚಿರಂತನತೆಯನ್ನು ನಿರಂತರ ತಾಜಾತನವನ್ನು ನಾವು ಊಹಿಸಬಹುದು. ಅವರ ಹಾಡುಗಳಲ್ಲಿ ಸಂಗೀತದ ಶಾಸ್ತ್ರೀಯ ಬುನಾದಿ ಮತ್ತು ಅವರ ಸ್ಪಷ್ಟಶಬ್ದೋಚ್ಚಾರದ ಝಲಕ್ ಅನ್ನು ನಾವು ಕಾಣಬಹುದು . ಅಲ್ಲದೆ ಸನ್ನಿವೇಶಕ್ಕೆ ತಕ್ಕಂತೆ ಹಾಗೂ ಕಂಠ ನೀಡುವ ನಟಿಯರ ಧ್ವನಿಗೆ ಹೊಂದುವಂತೆ ಹಾಡುತ್ತಿದ್ದುದು ನಿಜಕ್ಕೂ ಅವರಿಗೆ ಆ ದೇವರು ಕೊಟ್ಟ ವರದಾನವೇ ಸರಿ.
ಹಿಡಿದ ಕೆಲಸದಲ್ಲಿ ನಿಷ್ಠೆ ಹಾಗೂ ಅದನ್ನು ಪರಿಪೂರ್ಣವಾಗಿ ಸಾಧಿಸುವ ಛಲ ಪರಿಶ್ರಮ ಅವರಿಗೆ ಒಲಿದು ಬಂದಿದ್ದರಿಂದಲೇ ಯಶಸ್ಸಿನ ಶಿಖರ ಏರಲು ಸಾಧ್ಯವಾದದ್ದು . ಅಂದಿನ ಹಿಂದಿ ಹಾಡುಗಳು ಹೆಚ್ಚು ಉರ್ದು ಶಬ್ದಗಳಿಂದ ಕೂಡಿರುತ್ತಿದ್ದ ದು ಒಮ್ಮೆ ನಟ ದಿಲೀಪ್ ಕುಮಾರ್ ಇವರ ಉಚ್ಚಾರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಹಿಂದಿ ಹಾಗೂ ಉರ್ದು ಭಾಷೆಯ ಪಾಠಗಳನ್ನು ಕಲಿತು ಉಚ್ಚಾರಣೆ ಸರಿಪಡಿಸಿಕೊಂಡಂತಹ ಅದ್ಭುತ ವಿದ್ಯಾರ್ಥಿನಿ ಈಕೆ. ಆರಂಭದಲ್ಲಿ ಹಾಡುವಾಗ “ಆಯೆಗಾ ಆನೆವಾಲ” ಹಾಡಿಗೆ ಇಪ್ಪತ್ತೆರಡು ಟೇಕ್ ಗಳನ್ನು ತೆಗೆದುಕೊಂಡಿದ್ದರು. ನಂತರ ಸತ್ಯಂ ಶಿವಂ ಸುಂದರಂ ನ ಶೀರ್ಷಿಕೆ ಹಾಡನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದು ಇವರ ವೃತ್ತಿ ಬದ್ಧತೆಗೆ 1 ಉತ್ತಮ ನಿದರ್ಶನ .
ನೇರ ಮಾತು ಹಾಗೂ ತಪ್ಪುಗಳನ್ನು ನೇರವಾಗಿ ಖಂಡಿಸುವ ದಿಟ್ಟ ವ್ಯಕ್ತಿತ್ವದ ಲತಾ ಹಲವಾರು ವಿವಾದಗಳಲ್ಲಿ ಸಿಲುಕಿದ್ದುಂಟು.ಮಿಕ್ಕೆಲ್ಲಾ ಚಲನಚಿತ್ರ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದರೂ ಸಂಗೀತ ನಿರ್ದೇಶಕ ಓಪಿ ನಯ್ಯರ್ ಅವರೊಂದಿಗೆ ಎಂದಿಗೂ ಒಟ್ಟಿಗೆ
ಕೆಲಸ ಮಾಡಲೇ ಇಲ್ಲ . ಸಹ ಗಾಯಕ ಮಹಮ್ಮದ್ ರಫಿ ಅವರ ಜತೆಗೂ ಸ್ವಲ್ಪಕಾಲ ಇವರಿಗೆ ಭಿನ್ನಾಭಿಪ್ರಾಯ ಇದ್ದರೂ ನಂತರ ಅದು ಸರಿ ಹೋಯಿತು . ನಿರ್ದೇಶಕ ಸಿ ರಾಮಚಂದ್ರ ಅವರೊಡನೆಯೂ ಸ್ವಲ್ಪ
ವಿವಾದ ಏರ್ಪಟ್ಟಿತ್ತು . ತನ್ನ ಸೆಕ್ರೆಟರಿಯೊಂದಿಗೆ ಓಡಿಹೋಗಿ ಮದುವೆಯಾದಳೆಂದು ತಂಗಿ ಆಶಾ ಭೋಂಸ್ಲೆ ಜತೆಗೂ ಎಷ್ಟೋ ಕಾಲ ಮಾತನಾಡಿಯೇ ಇರಲಿಲ್ಲವಂತೆ ಲತಾ ದೀದಿ ಅವರು.
ಕವಿ ಪ್ರದೀಪ್ ಅವರು ರಚಿಸಿ ಶ್ರೀ ರಾಮಚಂದ್ರ ಅವರು ಸಂಗೀತ ನಿರ್ದೇಶಿಸಿದ ಸೈನಿಕರ ಬಲಿದಾನ ತ್ಯಾಗ ಕುರಿತಾದ “ಏ ಮೇರೆ ವತನ್ ಕೇ ಲೋಗೋ” ಹಾಡಿನ ಭಾವಪೂರ್ಣ ಗಾಯನಕ್ಕೆ ಅಂದು ವೇದಿಕೆಯಲ್ಲಿದ್ದ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಕಣ್ಣಲ್ಲಿ ಕಂಬನಿ ಬಂದಿತ್ತಂತೆ . ಈಗಲೂ ಆ ಹಾಡು ಕೇಳಿದಾಗಲೆಲ್ಲ ಮೈಯಲ್ಲಿ ಮಿಂಚಿನ ಸಂಚಾರವಾಗುವುದು ಸುಳ್ಳಲ್ಲ. ಇವರ ಮಾಂತ್ರಿಕ ಧ್ವನಿ ಬೀರುವ ಪ್ರಭಾವಕ್ಕೆ ಇದು ಸಾಕ್ಷಿ .
ಲತಾ ಅವರನ್ನು ಅರಸಿ ಬಂದ ಪ್ರಶಸ್ತಿ ಗೌರವಗಳು ಅಪಾರ . ೬ ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ (ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ).
ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು
ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ
ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನದಿಂದ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಪದ್ಮಭೂಷಣ
ಭಾರತರತ್ನ
ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ…
ಇನ್ನೂ ಮುಂತಾದವು….
ಇವರಂತೆ ಹಾಡುಗಾರಿಕೆಗಾಗಿ ಭಾರತರತ್ನ ಪ್ರಶಸ್ತಿ ಪಡೆದ ಎಂ ಎಸ್ ಸುಬ್ಬಲಕ್ಷ್ಮಿ ಅವರನ್ನು ಚಿಕ್ಕಂದಿನಲ್ಲಿ ನೋಡಿದ ಲತಾ “ತಪಸ್ವಿನಿ” ಎಂದು ಕೈಮುಗಿದಿದ್ದರಂತೆ . ಸಂಗೀತವನ್ನು ಹಾಡುಗಾರಿಕೆಯನ್ನು ಒಂದು ತಪಸ್ಸು ಎಂದು ಬಗೆದು ಜೀವನವಿಡೀ ಅದನ್ನೇ ಆರಾಧಿಸಿದ ಈ ಗಾನ ಕೋಗಿಲೆ ಫೆಬ್ರುವರಿ ೬ ೨೦೨೨ ರಂದು ನಮ್ಮೆಲ್ಲರಿಂದ ದೂರಾಗಿ ಅನಂತ ಗೀತೆ ಹಾಡಲು ಪರಮಾತ್ಮನ ಪಾದ ಸೇರಿತು. ಈ ಯುಗದ ದಂತಕಥೆ ಇತಿಹಾಸದ ತೆರೆ ಸೇರಿತ್ತು.
ಲತಾ ಮಂಗೇಶ್ಕರ್ ರ ಆತ್ಮಚರಿತ್ರೆಯ ಪುಸ್ತಕದ ಹೆಸರು “ಫುಲೆ ವೇಚಿತಾ”.ಕನ್ನಡದಲ್ಲಿ ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ ಹಾಡುಹಕ್ಕಿಯ ಹೃದಯಗೀತೆ ಪುಸ್ತಕವನ್ನು ಹಿರಿಯ ಪತ್ರಕರ್ತ ವಸಂತ ನಾಡಿಗೇರ ಅವರು ರಚಿಸಿದ್ದಾರೆ .
ಕನ್ನಡದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ಹಾಡಿದ “ಬೆಳ್ಳನೆ ಬೆಳಗಾಯಿತು” ಹಾಡು
ಇನ್ನೂ ಕಿವಿಯಲ್ಲಿ ಹಾಗೇ ಗುನುಗುನಿಸುತ್ತಿದ್ದಂತೆ ಅವರ ಅಪೂರ್ವ ವ್ಯಕ್ತಿತ್ವ ಕಣ್ಮುಂದೆ ತೇಲಿ ಬರುತ್ತದೆ .ಇಂತಹ ಸಾಧಕರ ಜೀವಿತಕಾಲದಲ್ಲಿ ನಾವೂ ಇದ್ದೇವಲ್ಲ ಎಂಬುದೇ ಒಂದು ಧನ್ಯತೆಯ ಭಾವ .
ಸುಜಾತಾ ರವೀಶ್