ಲೇಖನ ಸಂಗಾತಿ
“ಸಾಹಿತ್ಯದ ಸಾರ್ಥಕ್ಯ
ಉಪದೇಶವಲ್ಲವೆಂಬ
ಪೂರ್ತಿ ಅರಿವಿನಲ್ಲಿ”
ಪ್ರೇಮಾ ಟಿ.ಎಂ.ಆರ್.
ಆಸ್ಪತ್ರೆತ ಕ್ಯೂನಲ್ಲಿದ್ದೆ. ಮುಟ್ಟಿದರೆ ಮಾಸಿಯಾಳೇನೋ ಎಂಬಷ್ಟು ಮುದ್ದುಮುದ್ದಾದ ಸಿಡಿದರೆ ನೆತ್ತರು ಸಿಡಿದೀತೇನೋ ಅನ್ನುವಷ್ಟು ಆರೋಗ್ಯ ಸೂಸುವ ಹೆಣ್ಣು ಸರದಿಯಲ್ಲಿದ್ದಳು. ಒಂಚೂರು ಸಣ್ಣಗಿದ್ದಿದ್ರೆ ಇನ್ನಷ್ಟು ಚಂದ ಕಾಣ್ತಾ ಇದ್ಲೇನೋ ಕೊಂಕು ಹುಡುಕಿತು ಡೊಂಕುಮನ. “ನೀನ್ಯಾವಾಗ್ಲೂ ನಾಯಿಬಾಲಾನೇ ನಿನ್ನಜ್ಜಿ ಕತ್ತೆಬಾಲ ” ಬಾಯಿಗೆ ಬಂದ ಬೈಗಳುಗಳನ್ನೆಲ್ಲ ಮನಸಿನ ಮುಖಕ್ಕೆ ಉಗಿದು ಜೊತೆಗಿದ್ದ ಗೆಳತಿಯನ್ನು ತಿವಿದೆ. ನನ್ನಂತೆ ಅವಳ ಅಂದಕ್ಕೆ ಫಿದಾ ಆದ ಗೆಳತಿ ಮೇಲಿಂದ ಕೆಳತನಕ ಅವಳನ್ನೇ ಕದ್ದು ನೋಡುತ್ತ ಜೊತೆಗಿದ್ದ ನನ್ನ ಮರೆತಿದ್ದಳು. ಡಾಕ್ಟರ್ ಛೆಂಬರ್ ಹೊಕ್ಕ ಹುಡುಗಿಯ ಜೇನ್ನುಡಿಗಳಿಗೆ ಗೋಡೆಯೀಚೆ ನಿಂತು ಕದ್ದು ಕಿವಿಗೊಟ್ಟೆ. ಕಾಲು ನೋವೆಂದು ವೈದ್ಯರನ್ನು ಕಾಣಲು ಬಂದಿದ್ದಳು ಹುಡುಗಿ. ಡಾಕ್ಟರ್ ಕೆಲ್ಶಿಯಂ ಮಿಟಮಿನ್ ಡಿ ಎಂದು ಕೊರತೆಗಳನ್ನು ಪಟ್ಟಿಮಾಡಿ ಗುಳಿಗೆಗಳನ್ನು ಬರೆದರು. ನಾನು ನನ್ನ ಗೆಳತಿ ಮುಖಮುಖ ನೋಡಿಕೊಂಡೆವು. “ಮುಂಬೆಳಗಿಗೋ ಮುಸ್ಸಂಜೆಗೋ ಒಂದಷ್ಟು ಎಳೆಬಿಸಿಲಿಗೆ ಮೈಯ್ಯೊಡ್ಡಿದರೆ ಒಂದಷ್ಟು ಹಾಲು ಹಸಿರಿಗೆ ಹಾಸಿಹೊದೆವಷ್ಟು ಸಿಗುವ ಜೀವಸತ್ವಗಳಿಗೆ ಸಪ್ಲಿಮೆಂಟರಿಗಳನ್ನು ನುಂಗುವ ಚಾಳಿಗೆ ತಲೆಚಚ್ಚಿಕೊಳ್ಳಬೇಕೆನ್ನಿಸುತ್ತೆ ” ಜೊತೆಗಿದ್ದ ಗೆಳತಿ ವಟಗುಡುತ್ತಿದ್ದಳು. ನಾನು ಹಾರಿದ್ದೆ ನನ್ನೂರಿಗೆ ನನ್ನ ಕೇರಿಗೆ ನನ್ನ ಕೊಪ್ಪಕ್ಕೆ ನನ್ನ ಕಾನಿಗೆ. ನನ್ನ ಗೂಡಿಗೆ .
ಚಳಿ ಚಳಿಯೆಂದು ಹರಕು ಕಂಬಳಿಯೊಳಗೋ ಅಮ್ಮನ ಹಳೆಸೀರೆಯೊಳಗೋ ಎಂಟರಂಕೆಯಾಗಿ ಮುದುಡಿಕೊಳ್ಳುವ ಮತ್ತೆ ಚುಮುಗುಡುವ ಮೈಕೊರೆವ ಬೆಳಗಿನಜಾವದ ಚಳಿಗೇ ಅಂಗಳಕ್ಕೆ ಬೀಳುವ ನಮಗೆ ಆ ವಯಸ್ಸಿಗೆ ಕಾಲು ನೋವೆಂದರೇನೆಂದು ಗೊತ್ತೇ ಇರಲಿಲ್ಲ. ಮಗ್ಗುಲು ಮುರಿದೆದ್ದರೆ ತೋಟದಿಳುಕಲಿಗೆ ಓಡಿ ನೆಲದಂಡಿಗೆಗೆ ಕೊಡ ಇಳಿಸಿ ಎಳೆದರೆ ಹುರಿಹಗ್ಗದ ಒರಟಿಗೆ ಕೈಬಿರುಕಿನ ನಡುವೆ ನೆತ್ತರು ಒಸರುವ ಹಾಗೆ ಬಣ್ಣದ ಎಳೆಗಳು. ಅಗಳದ ಬಾನಿಗೆ ನೀರು ತುಂಬಿಸಿ, ಮೋಟುದ್ದ ಕುಂಟಿಡಿ ಹಿಡಿದು ಅಂಗಳ ಪೂರಾ ಗುಡಿಸಿ, ಗೋಮಯ ಹಾಕಿ, ದೇವರ ಪಾತ್ರೆಗೆ ಬೂದಿಹಚ್ಚಿ ತಿಕ್ಕಿ ತೊಳೆದು, ಅಷ್ಟಾದಮೇಲೆ ತುಂಬಿದ ಚೊಂಬು ಹಿಡಿದು ಬಿರಬಿರನೆ ಗುಡ್ಡ ಹತ್ತಿ ಒಂದಷ್ಟು ಅದು ಮುಗಿಸ್ಕೊಂಡು, ಆ ನಡುವೆಯೇ ಒಂದಷ್ಟು ಒಲೆಮುಂದೆ ಕುಕ್ಕರಗಾಲಲ್ಲಿ ಕೂತು ಫೂಫೂ ಎಂದು ಒಲೆಯೂದಿ, ಆರೇಳು ಮನೆಯಂಗಳದ ಬೇಲಿ ಹಾರಿ ಹಾಲಿನ ಮನೆಯವರೆದುರು ಗಡ್ಡ ಜೋಲಿಸಿ ನಿಂತು, ಹಾಲಿನ ಲೋಟ ಹಿಡಿದು ಸರ್ಕಸ್ಸು ಮಾಡುತ್ತಲೇ ಮತ್ತೆ ದಣಪೆಗಳನ್ನು ದಾಟಿ, ಒಂದಷ್ಟು ಬಿಸಿಗಂಜಿ ಹೊಟ್ಟೆಗಿಳಿಸಿ, ನಿನ್ನೆ ಜಗುಲಿಮೂಲೆಗೆಸೆದ ಮೂರ್ನಾಲ್ಕು ಪಟ್ಟಿಪುಸ್ತಕ ಜೋಡಿಸ್ಕೊಂಡು ಎದೆಗೊತ್ತಿಕೊಂಡು ಮೂರ್ನಾಲ್ಕು ಕಿಲೋಮೀಟರು ನಡೆದದ್ದೇ ಗೊತ್ತಾಗದಿದ್ದಷ್ಟು ಪಂಚಾತ್ಗಿ ಮಾಡ್ಕೊಂಡು ನಡೆಯುತ್ತಿದ್ದ ದಿನಗಳು. ಬೆಳಗಿನ ಅಕ್ಕಿಗಂಜಿ ಬಲದಲ್ಲೇ ಎಲ್ಲ ಪಿರಿಯಡ್ಡುಗಳನ್ನು ಮುಗಿಸಿಕೊಂಡು, ಹೋದದಾರಿಯನ್ನೇ ಮೆಟ್ಟಿ ಮನೆದಾರಿ ಹಿಡಿದು, ಒಂದಷ್ಟು ನೇರ ದಾರಿ ಬಿಟ್ಟು ಕಲ್ಲರೆ ಏರಿ ಮುಳ್ಳಣ್ಣು ಚಿರುಕ್ಲ ಹಣ್ಣು ಮಾವು ಹುಣಸೆಕಾಯಿ ಹರಿದು, ಹುಡುಗರ ಚಿಗುರು ಮೀಸೆ ಬೆಲ್ ಬಾಟಮ್ ಪ್ಯಾಂಟ್ ಲೆಕ್ಚರರ್ಸಗಳ ಮತ್ತೆಮತ್ತೆ ರಿಪೀಟ್ ಆಗುವ ಡೈಲಾಗುಗಳ ಗಾಸಿಪ್ ಮಾಡ್ಕೊಂಡು ತಿರುಗುತ್ತಿದ್ದ ಹೊತ್ತಿನಲ್ಲಿ ಈ ಕಾಲ್ನೋವು ಇತ್ತೇ? ಮತ್ತೆ ಪ್ರಶ್ನೆ ಎಸೆದುಕೊಳ್ಳುತ್ತೇನೆ.
ಶಾಲೆ ಕೊಲೇಜು ಮುಗಿಸ್ಕೊಂಡು ಮನೆ ಮುಟ್ಟಿದ್ರೂ ನಮ್ಮ ಚಟುವಟಿಕೆಗಳಿಗೆ ಪೂರ್ಣವಿರಾಮ ಬಿತ್ತು ಅಂತ ಲೆಕ್ಕ ಅಲ್ಲ. ಹಸಿವೆಗೊಂದಷ್ಟು ಕೊಚ್ಚಗಕ್ಕಿ ಅನ್ನ ಒಣಮೀನು ಸಾರು ಸಿಕ್ಕರೆ ಅದೇ ಸ್ವರ್ಗವೆಂದು ಗಡದ್ದು ಉಂಡು ತೊಟ್ಟ ಅಂಗಿಯ ಮೂಲೆಗೆ ಕೈಬಾಯಿ ಒರೆಸ್ಕೊಂಡು ಕತ್ತಿ ಸಿಂಬಿ ಬಳ್ಳಿ ಹಿಡಿದು ಮತ್ತೆ ಮನೆ ಮೇಲಿನ ಗುಡ್ಡಕ್ಕೆ ಒಂದು ಹೊರೆ ಕರಡಕ್ಕೋ ಇಲ್ಲ ಕತ್ತಿ ಚೂಳಿ ಹಿಡಿದು ಮನೆ ಕೆಳಗಿನ ಗೆದ್ದೆಗೆ ಹಸುಕರುಗಳ ಬಾಯಿಗೆ ಹಸಿಹುಲ್ಲಿಗೋ ಎದ್ದು ನಡೆವ ಕಾಯಕ. ಇರುಳು ಉಂಡು ಹೊರಜಗುಲಿಯಲ್ಲಿ ಹೊದ್ದು ಮಲಗಿದರೆ ಹೊತ್ತೊಯ್ದರೂ ಎಚ್ಚರಾಗದ ಗಡದ್ದು ನಿದ್ದೆ. ಹಾಂ ಮಳೆ ಚಳಿಗೊಂದಷ್ಟು ಸೀನು ಸೋರುವಮೂಗು ಹೆಚ್ಚೆಂದರೆ ಸುಡುಜ್ವರ ಪುಳ್ಳಾಟ ಕಾಡುತ್ತಿದ್ದುದು ಸುಳ್ಳಲ್ಲ. ತೋಟದ ಬೇಲಿಯಂಚಿಗೆ ಬೆಳೆವ ಉರ್ಗಿಗೆಡ್ಡೆ ಅಮೃತಬಳ್ಳಿಯ ಕಷಾಯ, ಚಾಕಣ್ಣು, ಕಚರಿಟ್ಟಿನ ಗಂಜಿ, ಜೇನತುಪ್ಪ ಜೇಷ್ಟಮದುಗಳ ಹೆಸರು ಕೇಳಿಯೇ ಓಡಿ ಹೋಗುತ್ತಿದ್ದ ಕಸುವಿಲ್ಲದ ಪಿಳ್ಳೆರೋಗಗಳು ಬಿಡಿ. ಈಗಿನಂತೆ ಮೋರ್ ಗಳಂಥ ಮಾಯಾನಗರಗಳಲ್ಲಿ ಸಿಗುವ ಹೆಸರೇ ಗೊತ್ತಿರದ ಹಣ್ಣುಗಳು ಹೈಜನಿಕ್ ದಿನಸಿಗಳೆಲ್ಲಿದ್ದವು ? ಹಟ್ಟಿ ಗೊಬ್ಬರವುಂಡು ಬೆಳೆದ ಹೀರೆ ಬೆಂಡೆ ಸೌತೆ ಕುಂಬಳ, ಕೊಟ್ಟಿಗೆಯ ಗೊಜರೆಯುಂಡು ಕೊಬ್ಬಿದ ಬಸಳೆ ಹರಿವೆಗಳು, ಬೆರಕೆಗೆ ತೋಟದ ಬೇಲಿಯಲ್ಲ ಹಾಯಾಗಿ ಬೆಳೆದ ಪೊಪ್ಪಳೆಕಾಯಿ, ಮೂರ್ ಸಿದ್ದೆ ಬಳಚಿಗೆ ಮನೆಮುಂದೆ ತೂಗುವ ನುಗ್ಗೆಕಾಯಿ, ಅಂಗಳದಲ್ಲಿ ಹಾಸಿಬೀಳುವ ನುಗ್ಗೆ ಹೂವು, ನುಗ್ಗೆ ಸೊಪ್ಪು, ಹರಿವ ನೀರಲ್ಲಿ ಹಾಸಿಕೊಳ್ಳುವ ಕೆಸು ಬಿದ್ದ ಮಳೆಗೆ ಚಿಗುರಿಕೊಳ್ಳುವ ತಗಟೆಸೊಪ್ಪು ಮಿಟಮಿನ್ನುಗಳ ಖಜಾನೆಯೇ ಅಂತ ನಮಗೆಲ್ಲಿ ಗೊತ್ತಿತ್ತು? ಆದ್ರೆ ಅವು ಸದ್ದು ಮಾಡದೇ ಹೊಟ್ಟಸೇರಿ ನಮ್ಮ ಸಲಹಿತ್ತಿದ್ದುದಂತೂ ಸುಳ್ಳಲ್ಲವಲ್ಲ. ಹಲಸಿನ ಕಾಯಿ ದಪ್ಪ ಗಸಿ, ಬಾಳೆದಿಂಡಿನ ಪಲ್ಯ, ಆಗೊಮ್ಮೆ ಈಗೊಮ್ಮೆ ನೆಂಟರು ನಾಡವರು ಬಂದಾಗೊಮ್ಮೆ ನಾಟಿಕೋಳಿಯ ಸಾರು, ಬೇಯಿಸಿದ ಮೊಟ್ಟೆ ಎಲ್ಲವೂ ನೆಲದ ಸಾರಸತ್ವವೇ ಮಳೆಚಳಿಯಲ್ಲಿ ಮಣ್ಷುಗಳ ಸ್ಥಾನಪಲ್ಲಟದ ಮೆಕ್ಕಲು ಮಣ್ಣಿಗೇ ಮಲೆತು ಬೆಳೆದ ಕಾನಮರದಲ್ಲಿ ಜೋತುಬೀಳುವ ಆಯಾ ಕಾಲಕ್ಕೆ ಹಣ್ಣಾಗಿ ತೂಗುವ ಹುಳಿ ಸಿಹಿ ಮಾವು ಜಂಬೆ ಹಲಸು ಹುಣಸೆ ಹುಳಿಸಂಪಿಗೆ ಮುರುಗಲ ಅಮಟೆ ಜೊತೆಗೊಂದಷ್ಟು ಕಸುರು ಗೋವೆಹಣ್ಣುಗಳಲ್ಲವೇ ನಮ್ಮ ತಲೆಕಾಯ್ದದ್ದು.
ಕನ್ನಡಶಾಲೆಗಳಲ್ಲಿ ಕೊಡುವ ಗೋಧಿಕಡಿಯ ಉಪ್ಪಿಟ್ಟು ಬಿಟ್ಟರೆ ಮತ್ತೆ ಗೋಧಿ ಜೋಳ ಸೋಯಾ ಸ್ವೀಟ್ ಕಾರ್ನಗಳ ಹೆಸರೇ ಇಲ್ಲದ ದಿನಗಳು. ಹಸುಕರುಗಳು ರಾಜಕೀಯಕರಣವಾಗದ ಹೊತ್ತು. ಬರೀ ಕೊಟ್ಟಿಗೆಯ ಗೊಬ್ಬರದ ಸಾರವುಂಡು ಬೆಳೆದ ಕೊಚ್ಚಗಕ್ಕಿ ಅನ್ನ ಬೆಣ್ತಕ್ಕಿ ರೊಟ್ಟಿಗೆ ಅದೆಂಥ ತಾಕತ್ತು. ಹಚ್ಚಹಸುರಿನ ಸ್ವಚ್ಛಗಾಳಿಯಲ್ಲಿ ಮೈನುಲಿದ ಏದುಸಿರು ಬಿಟ್ಟ ಬೆವರಿ ಉಪ್ಪುಪ್ಪಾದ ಕೆಂಚು ಮೈಗಳ ಮುಟ್ಟಲು ಈ ಮಿಟಮಿನ್ನು ಕೊರತೆಗಳಿಗೆ ನಡುಕ. ಖೆಮಿಕಲ್ ಮೆನ್ಯೂರ್ಸ ಪೆಸ್ಟಿಸೈಡ್ಸ ಇನ್ಸೆಕ್ಟಿಸೈಡ್ಸಗಳಿಲ್ಲದೆಯೇ ಬೆಳೆಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ಚರಮಸೀಮೆಯನ್ನ ತಲುಪಿದ್ದೇವೆ. ಮಹಾ ನಗರಗಳಲ್ಲಿ ಶುದ್ಧಗಾಳಿಯನ್ನೂ ಮಾರಾಟಕ್ಕಿಡತೊಡಗಿದ್ದಾರಂತೆ. ನೀರು ಎಷ್ಟರ ಮಟ್ಟಿಗೆ ಸುರಕ್ಷಿತ ಮೇಲಿದ್ದವನೇ ಬಲ್ಲ ಹೊಸತಲೆಮಾರಿನ ಆರೋಗ್ಯ ಪದ್ಧತಿಯೋ ಮತ್ತೆ ಹೇಳುವಂತಿಲ್ಲ. ನಮ್ಮ ಆವಿಷ್ಕಾಗಳೇ ಭಸ್ಮಾಸುರವಾಗಿ ನಮ್ಮದೇ ತಲೆ ಹುಡುಕುವ ವಿಪರ್ಯಾಸಗಳ ಜೊತೆಗೇ ನಡೆದುಬಂದ ದೂರ ತೀರಾ ಉದ್ದವೇ. ಸಾಹಿತ್ಯದ ಉದ್ಧೇಶ ಉಪದೇಶವಲ್ಲ ಎಂಬ ಪೂರ್ತಿ ಅರಿವಿನಲ್ಲೂ ಹಿಂತಿರುಗಿ ನೋಡಲೇ ಬೇಕಾದ ಕಾಲ ಎಂದು ಹೇಳಲೇ ಬೇಕಾದ ಅನಿವಾರ್ಯತೆ. ಮೊಟ್ಟ ಮೊದಲ ಸಮಸ್ಯೆಯೇ ಜನಸಂಖ್ಯೆ. ಜಾತಿಮತ ಧರ್ಮಗಳ ಹೆಸರಿನಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳಿ ಎಂದು ಕರೆಕೊಡುವ ಯಾವವ್ಯಕ್ತಿಯೂ ದೇಶಪ್ರೇಮಿಯಲ್ಲ, ಜೀವಪರನಲ್ಲ. ಮಕ್ಕಳಿಗೆ ಅಕ್ಷರಗಳ ಜೊತೆಗೆ ನೆಟ್ಟು ಬೆಳಸುವದನ್ನು ನಿಸರ್ಗವನ್ನು ಪ್ರೀತಿಸುವದನ್ನು ಸಾವಯವದ ಅರಿವನ್ನ ಮೂಡಿಸಲೇ ಮನೆಗೊಂದು ಹಟ್ಟಿ ಮನೆಮುಂದೊಂದು ಕೈತೋಟ ಇಂದಿನ ಅವಶ್ಯಕತೆ. ಇಲ್ಲದಿರೆ ಹಿಸುಕಿಕೊಳ್ಳಲು ಕೈಕಾಲೂ ಗಟ್ಟಿ ಇರಲಿಕ್ಕಿಲ್ಲ ಎಂಬ ಆತಂಕದೊಂದಿಗೆ……
ಪ್ರೇಮಾ ಟಿ ಎಂ.ಆರ್.