ವಡಗೋಲ ಶಿವಾನಂದ ಭಾಗಾಯಿ ಅವರ ಕೃತಿ ‘ಬಡವನ ಬುತ್ತಿ’ ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ.


             ಕವನಗಳು ಲಯಬದ್ಧವಾಗಿ ಅಥವ ತಾಳಬದ್ಧವಾಗಿ ಇರಬೇಕೆಂದಲ್ಲ ಅವುಗಳೇನ್ನಿದ್ದರು ಅರ್ಥಪೂರ್ಣವಾಗಿರಬೇಕು ಹಾಗೆಯೇ ಭಾವದೊನಲಿರಬೇಕು.ಇಲ್ಲಿ ಭಾವ ತುಂಬಿದ ಬರೆಹಗಳಿಂದಾಗುವ ಕವನಗಳು ಪರಿಪೂರ್ಣತೆಯಿಂದ ಕೂಡಿರುತ್ತವೆ.ಆದ್ದರಿಂದ ಕವಿತೆಗಳು ಲಯದೊಂದಿಗೆ ಮಿಳಿತವಾಗಿರಬೇಕೆಂಬುದು ಕಡ್ಡಾಯವೇನಲ್ಲ. ಆದರೆ ಅದು ಭಾವ ಪ್ರಧಾನವಾಗಿರಬೇಕು.ಕವಿತೆಯ ಪ್ರಕಾರಗಳಲ್ಲಿ ಹಲವಿರಬಹುದು.ಭಕ್ತಿ ಪ್ರಧಾನಗೀತೆಗಳು ಇದರಲ್ಲಿ ದೇವರ ಗೀತೆಗಳು ಬಹಳ ಭಕ್ತಿಯಿಂದ ಕೂಡಿರುವಂತದ್ದು, ಭಾವಗೀತೆಯು ಅಷ್ಟೆ ಬರೆದವರ ಒಡಲ ಸಂಕಟವೇ ಇರಲಿ, ಸಂತಸವೇ ಆಗಲಿ ಅಕ್ಷರ ರೂಪ ಪಡೆದು ಭಾವದೊನಲನ್ನು ಹರಿಸುವುದಿದಿಯಲ್ಲ ಅದೊಂಥರ ಸೊಗಸು.ಹೀಗೆ ನಾಡಗೀತೆ, ದೇಶಭಕ್ತಿಗೀತೆಗಳು ಸಹ ಅದರದ್ದೆ ಭಾವನೆಗಳನ್ನೆ ಹೊತ್ತಿ ಬಂದಿರುತ್ತವೆ.
ಇಲ್ಲಿಯೂ ಕೂಡ ಬರಹಗಾರರಾದ ಶ್ರೀ ಶಿವಾನಂದ ಭಾಗಾಯಿಯವರ “ಬಡವನ ಬುತ್ತಿ”
ಕೃತಿಯು ಹಲವು ಕವಿತೆಗಳ ಪ್ರಕಾರಗಳನ್ನ್ಹೊತ್ತು ಬಂದಿರುವ ಸೊಗಸಾದ ಹಾಗು ಪ್ರತಿಯೊಬ್ಬರು ಓದಬಹುದಾದ ಕೃತಿಯಾಗಿದೆ…

ಕವನಗಳನ್ನು ಯಾರೆ ಬರೆಯಲಿ ಅದು ಅವರವರ ಭಾವನೆಗಳಿಗನುಣವಾಗಿ ರಚಿತವಾಗಿರುತ್ತವೆ. ಹಾಗೆಯೇ ಮನಸ್ಸಿನ ಒಂದು ಉತ್ತೇಜಿತ ಸ್ಥಿತಿಯಲ್ಲಿ ಜನ್ಯವಾಗುವ ಭಾವ ವಿಶೇಷವು ಕೂಡ ಆಗಿರುತ್ತವೆ.
ಪ್ರಕೃತಿಯ ಅಸಂಖ್ಯ ನಿಯಮಗಳಂತೆ ಇದು ಕೂಡ ಒಂದು ಅಂದರೆ  ನೇಸರನ ಆಗಮನ, ನಿರ್ಗಮನ
ಆಗಿರಬಹುದು, ಚಂದಿರನ ಬೆಳದಿಂಗಳಾಗಿರಬಹುದು, ಚಿಗುರಾಗಿ, ಗಿಡವಾಗಿ, ಮರವಾಗುವುದು ಹೇಗೆ ನಿಸರ್ಗದ ಸ್ವಯಂ ಪ್ರೇರಿತ ಪ್ರಕ್ರಿಯೆಯೋ ಹಾಗೆ ಕವನದ ಹುಟ್ಟು ಕೂಡ ಸ್ವಾಭಾವಿಕ. ಉತ್ತಮ ಕವನದ ಅರಳುವಿಕೆಗೆ ಬರಹಗಾರನೊಳಗಿರುವ ಪ್ರತಿಭೆಯೂ ಕಾರಣವಾಗುತ್ತದೆ ಎಂದು ಹೇಳ ಬಯಸುವೆ.
ಕಾವ್ಯ ರಚನೆ ಎಂಬುವುದೊಂದು ವಿಶೇಷ ಸಾಮರ್ಥ್ಯವೂ ಹೌದು.ಒಂದು ಕವಿತೆಯ ಹುಟ್ಟಿಗೆ ಮೂಲಭೂತವಾಗಿ ಬೇಕಾದದ್ದು ಕವಿಯ ಮನೋಧರ್ಮ.ಅವನೊಳಗಿನ ಆಲೋಚಿನ ಶಕ್ತಿ , ಚಿಂತನ ,ಮಂಥನ ಹಾಗೆಯೇ ಭಾವಗಳ ಸ್ಪುರಣವನ್ನು ಯಾವ ರೀತಿ ಬಳಸಿಕೊಳ್ಳುವರೋ ಅದರ ಆಧಾರದ ಮೇಲೆ ಕವಿತೆಗಳ ರಚನೆಯಾಗುತ್ತಿರುತ್ತವೆ. ಈ ಹಾದಿಯೊಳಗೆ  ‘ಶಿವಾನಂದ ಭಾಗಾಯಿ’ಯವರು ಸಹ ಒಗ್ಗಿರುವುದು ಅವರ ಕವನಗಳ ರಚನೆಯಲ್ಲಿ ನಾನು ಕಾಣುತ್ತಿರುವೆ.

                 ಪ್ರಕೃತಿ ಮತ್ತು ಪರಿಸರದಲ್ಲಿ ನಡೆಯುವ ವಿಶೇಷ ವಿದ್ಯಮಾನಗಳು ದೈನಂದಿನ ಜೀವನದಲ್ಲಿ ನಡೆಯುವ ಸಂಗತಿಗಳು, ಸಮಾರಂಭಗಳು, ಸಂಭ್ರಮಗಳಿದ್ದಂತೆ ಮನುಷ್ಯನಿಗೆ ನೋವುಗಳು ಸಹ ಸರ್ವೆ ಸಾಮಾನ್ಯ ಇಂತಹ ನೋವುಗಳಿದ್ಯಾಗ್ಯು ಕವಿಯ ಭಾವಸ್ಪುರಣದಿಂದ ಬರೆಹಗಳು ಹುಟ್ಟಲು ಕಾರಣವಾಗಬಹುದು.ಕೂತಾಗ ,ನಿಂತಾಗ, ಅಪರೂಪವಾದ ಹಾಗು ವಿಶೇಷವಾದ ದೃಶ್ಯಗಳನ್ನು ಕಂಡಾಗ ಕವಿಯ ಭಾವ ಕೋಶದೊಳಗೆ ಅಡಗಿರುವ ಕಿಡಿಯೊಂದು ಕೂಡ ಉನ್ಮಿಲನಲ್ಗೊಂಡು ಕಾವ್ಯ ರಚನೆಗೆ ಪ್ರೆರೇಪಣೆ ಹೊಂದುವರು.ಹಾಗೆ ಇಲ್ಲಿ ಶಿವಾನಂದ ಭಾಗಾಯಿಯವರು ಕೂಡ ನೋವು, ನಲಿವು, ಪ್ರೀತಿ, ಪ್ರೇಮ,ಸಂಕಟ ,ತಳಮಳ,ರೋಧನೆ
 ,ವೇದನೆ, ನಿವೇದನೆ,ದುಃಖ, ದುಮ್ಮಾನಗಳು ಹೀಗೆ ಹಲವಾರು ವಸ್ತುವಿಷಯಗಳನ್ನಿಟ್ಟುಕೊಂಡು ತುಂಬಾ ಸೊಗಸಾದ ಕಾವ್ಯದೊಲನ್ನೆ ಹರಿಸಿದ್ದಾರೆ..

“ಗಣಪತಿ ನೀಡಲು ಅಭಯ”….
ಶಿವಾನಂದ ಭಾಗಾಯಿಯವರ ಮೊದಲ ಕವನ ಗಣೇಶನನ್ನು ಸ್ತುತಿಸುವುದಾಗಿದೆ

ದೇವ ಗಣಪತಿ ನೀಡಲು ಅಭಯ/ನನಗಿಲ್ಲ ಇನ್ನೂ
ಯಾವ ಭಯ/ಕರುಣೆಯಿಟ್ಟುಕಾಪಾಡು ಜನಕ/
ಭಕ್ತಿಯಿಂದ ನಮಿಸುವೆ ಜೀವವಿರುವತನಕ//…

             ಗಣಪತಿಯು ಸಂಕಷ್ಟಹರನೆಂದೇ ಪ್ರಸಿದ್ಧ.
ಹಾಗೆಯೆ ಪ್ರಥಮ ಪೂಜಿತನಿವ. ನಮಗೇನಾದರೂ ತೊಂದರೆ, ಆತಂಕಗಳು ಎದುರಾದರೆ ಮೊದಲಿಗೆ ವಿಘ್ನೇಶ್ವರನನ್ನು ಮರೆಯದೇ ಮನಸ್ಸಿನಲ್ಲಿ ನಮಿಸುತ್ತ ಬೇಡಿಕೊಳ್ಳುವೆವು.ಅವನ ಸನ್ನಿಧಿಯಲ್ಲಿ ನಮ್ಮ ಸಂಕಟವನ್ನು ಹೇಳಿಕೊಂಡರೆ ಅದನೆಲ್ಲ ಅವನು ಪರಿಹರಿಸಿಯೇ ಸಿದ್ಧನೆಂಬುದು ನಮ್ಮೆಲ್ಲರ ದೃಢ ನಂಬಿಕೆ. ನಮ್ಮಂಥ ಸಾಮಾನ್ಯರಾದ ಮನುಷ್ಯರಿಗಷ್ಟೇ ಅಲ್ಲ, ದೇವಾನುದೇವತೆಗಳಿಗೂ ಕೂಡ ಗಣೇಶನು ಅಭಯವನ್ನು ನೀಡುತ ಅಭಯದಾಯಕನೆಂದು ಎಲ್ಲರಿಂದಲೂ ಕರೆಸಿಕೊಂಡಿರುವನು.ಎಂಬುದನ್ನು ಈ ಕವನದ ಮೂಲಕ ತುಂಬಾ ಚನ್ನಾಗಿ ಭಕ್ತಿ ಪ್ರಧಾನೆಯತೆಯನ್ನು ಮೆರೆದಿರುವರು.

ಹಾಗೆಯೇ ನಾಡು ನುಡಿಗೆ ಸಂಬಂಧಿಸಿದ ಅರ್ಥಪೂರ್ಣ ಸಾಲುಗಳಿಂದ ಕವನವನ್ನು ರಚಿಸಿರುವರು. ಅವುಗಳಲ್ಲಿ ಒಂದು

“ಕನ್ನಡದ ತೇರನು ಎಳೆಯೋಣ ಬನ್ನೀ”….

ನಾಡು ನುಡಿಗಾಗಿ ಪಣತೊಟ್ಟು/ನಾಡ ದ್ರೋಹಿಗಳನ್ನ ಹಾಡು ಹಗಲೇ ಸುಟ್ಟು/ಎಲ್ಲರೊಂದಾಗಿ ಕನ್ನಡದ ತೇರು/ಸಂಭ್ರಮದಿಂದ ಎಳೆಯೋಣ ಬನ್ನೀ/….

ಕನ್ನಡ ನಾಡು ನುಡಿಗಾಗಿ ನಾವೆಲ್ಲರು ದೃಢ ಸಂಕಲ್ಪದೊಂದಿಗೆ ನಿಲ್ಲೋಣ.ನಮ್ಮ ನಾಡು ಇಂದು ಸಾಗರವನ್ನು ದಾಟಿ ಪ್ರಪಂಚದಾದ್ಯಂತ ತನ್ನ ಬಾಹುವನ್ನು ವಿಸ್ತರಿಸುತಿದೆ.ಇಂದಿಗೂ ಹಲವಾರು ಮಂದಿ “ಕನ್ನಡ’ವನ್ನು ಜೀವ ಭಾಷೆಯಾಗಿ ಪ್ರೀತಿಸಿ, ಪೋಷಿಸುತ್ತಿದ್ದಾರೆ. ಕನ್ನಡವು ಉಳಿದು, ಇನ್ನಷ್ಟು ವಿಶಾಲವಾಗಿ ಬೆಳೆಯಬೇಕೆಂದರೆ ಕನ್ನಡ ತಾಯಿಯನ್ನು ಎಲ್ಲರೂ ಒಗ್ಗಟ್ಟಾಗಿ ಪೋಷಿಸಿ, ಬೆಳೆಸಬೇಕಿದೆ.ಜೊತೆಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ನೈಸರ್ಗಿಕ ಸಂಪತ್ತನ್ನು ಹೆಚ್ಚಿಸುವುದರ ಮೂಲಕ ‘ನಾವೆಲ್ಲರೂ ಒಂದಾಗಿ ಮುನ್ನಡೆಯೋಣ’ ಎಂಬ ಸಂದೇಶ ಸಾರಿರುವ ಸಾಲುಗಳು ನಮ್ಮ ನಾಡಿನ ಸಂಸ್ಕೃತಿ ಸಂಸ್ಕಾರಗಳನ್ನು ಸಾರುವಂತಿವೆ.

ಪ್ರಕೃತಿಗೆ ಸಂಬಂಧಿಸಿದ ಕವಿತೆಗಳು ಕೂಡ ಪ್ರಕೃತಿಯಂತೆಯೆ ನೈಜತೆಯಿಂದ ನಳನಳಿಸುತಿವೆ.

“ಚಿಗುರೆಲೆಯ ಸಂಭ್ರಮ”….

ಭೂರಮೆಯ ಮಡಿಲಿನಿಂದ ಸದೃಢಅವಾಗಿ ಗಿಡವೊಂದು ಮೆಲ್ಲನೆ ಅರಳಿದೆ/ಆಗಸದಿಂದ ಚಿಟಪಟ ಹನಿಗಳು ಬೀಳಲು/ ಚಿಗುರೆಲೆಯ ಸಂಭ್ರಮ ಹೆಚ್ಚಾಗಿದೆ//

ಮುಂಜಾನೆಯ ಮನೋಲ್ಲಾಸಕರ ವಾತಾವರಣದಿ
ಹಸುರೆಲೆಗಳ ಮೇಲೆ ಸಾಲಾಗಿ ಕುಳಿತ ಮಳೆಹನಿಗಳು
ಸೂರ್ಯರಶ್ಮಿಯೊಡನೆ ಸರಸವಾಡುತ್ತಾ


ಸಜ್ಜಾಗಿದೆ ಸಂತಸ ಸಂಭ್ರಮಗಳನ್ನು ಹೆಚ್ಚಿಸುತಿರುವುದನ್ನು ಈ ಕವಿತೆಯ ಸಾಲಿನಲ್ಲಿ ಕಾಣಬಹುದು.ಹಾಗೆಯೇ ಗಿಡಮರದ ಮುಡಿಯಲ್ಲಿ ಕಂಗೊಳಿಸುವ ಬಣ್ಣ ಬಣ್ಣದ ಚಿಗುರೆಲೆಯನ್ನು ನೋಡುತಿದ್ದರೆ;ಪ್ರಕೃತಿ ಕವಿಯೊಬ್ಬರ ಕವಿತೆಯ ‘ಚಿಗುರಿನ ಸೊಬಗಿಗೆ ಸೋತಿದೆ,ಎಂಬಂತೆ ಭಾಸವಾಗುವುದಂತು ಸತ್ಯ. ಇದನ್ನು ಎಲ್ಲರೂ ಬೆರಗಾಗುವುದು ಸಾಮಾನ್ಯ. ಆದರೆ ಚಿಗುರಿನ ಬಣ್ಣ ವೈವಿಧ್ಯಕ್ಕೆ ಹೂವೂ ಸಹ ಮನಸೋಲಬೇಕು! ಈ ಮಳೆಹನಿಯ ಸಿಂಚನದ ನಿಸರ್ಗದಲ್ಲಿ ಕಂಡುಬರುವ ಹೊಸತನ ಕವಿ ಹೃದಯವನ್ನು ಪುಳಕಿತಗೊಳಿಸುತ್ತದೆ ಎಂಬುದನು ಈ ಪದ್ಯದಿಂದ ಸ್ಪಷ್ಟವಾಗಿ ನಿರೂಪಿಸಿರುವರು.ಹೀಗೆ ತಾವು ಕಂಡ ಚಿಗುರಿನ ಸಂಭ್ರಮ ಹಾಗೂ ವಿವಿಧ ಬಣ್ಣ ಪಡೆದು ಕೊನೆಗೆ ಹಸಿರಾಗುವ ನೈಸರ್ಗಿಕ ಪ್ರಕ್ರಿಯೆ ಕಂಡು ಹೃದಯ ಹಗುರವಾದ ಬಗೆಯನ್ನು ಈ ಕವಿತೆಯಲ್ಲಿ ಪ್ರಸ್ತುತಪಡಿಸಿದ ರೀತಿ ಚಂದವಾಗಿದೆ…

“ಶಿಕ್ಷಣವೇ ಬಾಳಿನ ಬೆಳಕು”….

ಶಿಕ್ಷಣವೇ ನಮ್ಮಯ ಜೀವನದ ಬೆಳಕು/ಮನಸಿಟ್ಟು ಕಲಿತರೆ ಸುಂದರ ಬದುಕು/ಮನದಿ ಅಪಾರ ಛಲವನ್ನು ತುಂಬಬೇಕು/ಗುರಿಯಡೆಗೆ ಗಮನವಿಟ್ಟು ಸಾಗಬೇಕು//

ಶಿಕ್ಷಣವೇ ಬಾಳಿನ ಬೆಳಕು ಹಾಗೆಯೆ ಶಕ್ತಿ ಎಂದೆಲ್ಲ ಹೇಳುತ್ತ ಶಿಕ್ಷಣದ ಮಹತ್ವವನ್ನು ತಮ್ಮ ಕವನದ ಸಾಲಿನಲ್ಲಿ ತುಂಬಾ ಚನ್ನಾಗಿ ಬಿಂಬಿಸಿರುವರು.
ನಮ್ಮೊಳಗಿನ ಅಜ್ಞಾನದ ಕತ್ತಲ್ಲನ್ನು ಹೋಗಲಾಡಿಸಲು ಸುಜ್ಞಾನವೆಂಬ ಬೆಳಕನ್ನು ಬೆಳಗಬೇಕು.ಈ ಮುಖೇನ ಶಿಕ್ಷಣ ನಮ್ಮ ಬಾಳಿಗೆ ನಿಜಕ್ಕೂ ಬೆಳಕಾಗಿದೆ.ಶಿಕ್ಷಣದಿಂದ ನಾವು ಉತ್ತಮ ಗುರಿಯೆಡೆಗೆ ಸಾಗಬಹುದು ಎಂಬುದನ್ನು ಹೇಳಿರುವರು..

“ಒಲವ ಹಣತೆ”……

ಒಲವ ಹಣತೆಯೊಂದು ಪ್ರಜ್ವಲಿಸುತ ಒಲವಗೀತೆಯೊಂದಿಗೆ ಸೊಗಸಾಗಿ ಮೇಳೈಸಿದೆ….

ಒಲವ ಹಣತೆ ಉರಿಯಲು ನಂಬಿಕೆಯ/ ತೈಲವು ಬೇಕಿದೆ ಗೆಳತಿ/ಪರಿಶುದ್ಧ ಪ್ರೇಮದ ಪರಿಮಳವ ಮನಸಾರ/ಸವಿಯ ಬೇಕಿದೆ ಗೆಳತಿ/

ಉಸಿರಾಗಿ ಬಾ ಗೆಳತಿ ಒಲವ ಹಣತೆ ಹಚ್ಚುತ ನಕ್ಕು
ನಕ್ಕು ಹಗುರಾಗುವೆ.ಬದುಕಾಗಿ ಬಾ ಗೆಳತಿ
ಒಲವ ಹಣತೆ ಹಚ್ಚುವೆ.ಪರಿಶುದ್ಧ ಪರಿಮಳವನು ಮನಸಾರೆ ಸವಿಯಬೇಕಿದೆ ಎಂಬ ಕಾದಲನ ಮಾತಿನಲಿ ಒಲವಗೀತೆಯ ಹಾಡುತ ಒಲವ ಹಣತೆಯನ್ನು ಹಚ್ಚುವಂತೆ ಮಾಡಿರುವ ಪರಿ ತುಂಬಾ ಚನ್ನಾಗಿ ಮೂಡಿಬಂದಿದೆ..

ಹೀಗೆ ಶಿವಾನಂದ ಭಾಗಾಯಿರವರು ಒಟ್ಟು ನೂರು ಕವನಗಳನ್ನೂ ವಿವಿಧ ಪ್ರಕಾರಗಳಲ್ಲಿ ಜನಮನ ಸೂರೆಗೊಳ್ಳುವಂತೆ ರಚಿಸಿರುವುದು ನಿಜಕ್ಕೂ ಖುಸಿಯಾಗಿದೆ.ಬದುಕನ್ನು ಕಾವ್ಯ ಎಷ್ಟು ತೀವ್ರವಾಗಿ ಆವರಿಸಿಕೊಂಡಿದೆ ಎಂಬುದಕ್ಕೆ ಕವಿಯೊಬ್ಬನ ನಿತ್ಯದ ಒಡನಾಟ, ಬಳಲಾಟ, ಪರದಾಟ,ಖುಷಿ,ಕೃಷಿ ಪ್ರಕೃತಿ, ಪರಿಸರ ,ನೋವು, ನಲಿವು ,ದುಃಖ,ಕೋಪ,ಬೈಗುಳ,
ಅಸಹನೆ,ಕಿರಿಕಿರಿ-ಹೀಗೆ ಎಲ್ಲವನ್ನು ತನ್ನ ಕಾವ್ಯದ ಮೂಲಕ ವ್ಯಕ್ತಪಡಿಸುತ ಜೀವನ ಕಲಿಸಿದ ಪಾಠಗಳನ್ನು ತಾನು ನೋಡಿದ, ಕೇಳಿದ, ಓದಿದ ಪ್ರಸಂಗಗಳು ತನ್ನ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಕಾವ್ಯವಾಗಿಸುವ ಯತ್ನದಲ್ಲಿ ತೊಡಗುತ್ತಾನೆ.ಎಂಬುದಕ್ಕೆ ಈ ಕೃತಿಯಲ್ಲಿನ ಬರೆಹಗಳೆ ಉತ್ತಮ ನಿದರ್ಶನವಾಗಿವೆ.ಹಾಗೆಯೆ ಈ ಒಂದು ಕೃತಿಗೆ ಶ್ರೀ ಕೆ.ಬಿ.ಹೊನ್ನಾಯ್ಕ ಸರ್ ರವರ ಚಂದದ ಮುನ್ನುಡಿ ಹಾಗು ಡಾ.ವಿಜಯಾ ರಾ.ಡಾಂಗೆಯವರ ಬೆನ್ನುಡಿಯು ಸೊಗಸಾಗಿ ಮೂಡಿಬಂದಿದೆ.ಹೀಗೆ ಮುಂದೆಯೂ ಕೂಡ ಸಾಹಿತ್ಯ ಕೃಷಿ ಮತ್ತಷ್ಟು, ಮಗದಷ್ಟು ಆಗುತ್ತಿರಲೆಂದು ಶುಭ ಹಾರೈಕೆಗಳೊಂದಿಗೆ….


One thought on “ವಡಗೋಲ ಶಿವಾನಂದ ಭಾಗಾಯಿ ಅವರ ಕೃತಿ ‘ಬಡವನ ಬುತ್ತಿ’ ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ.

  1. ನಿಜ ಬಡವನ ಬುತ್ತಿಯೊಳು ಮುತ್ತಿನ ಹಾರದಂತಹ ಮಾತುಗಳಿವೆ…ಗೆಳತಿ

Leave a Reply

Back To Top