“ಪೂರ್ಣತ್ವದ ಒಂದು ಅಭಿವ್ಯಕ್ತಿಗೆ” ಸಣ್ಣಕಥೆ-ನಾಗರಾಜ ಬಿ.ನಾಯ್ಕ

ಕೆದರಿದ ಕೂದಲು, ಕುರುಚಲು ಗಡ್ಡ, ಬಣ್ಣ ಮೆತ್ತಿದ ಕೈಗಳು, ಬೆವರಿನ  ಅಂಗಿ ,ತಲೆಯ ಮೇಲೆ ತೆಳು ಪರದೆ, ಆಕಾರ ಭಾವ ರೂಪಿಸೋ ಬ್ರಷ್ಗಳು, ಬಣ್ಣಗಳು ಜೀವ ಬಂದಂತೆ ಅಲ್ಲಲ್ಲಿ.  ಅದೆಷ್ಟು ಸಾವಿರ ಚಿತ್ರಗಳನ್ನು ಬಿಡಿಸಿದ ಕಲಾಕಾರ ಅವನು . ಅವನ ಚಿತ್ರಗಳು ಕಲೆಯಿಂದಲೇ ಜೀವಂತವಾಗಿ ಜೀವ ಅಳಿದರೂ ಉಳಿಯುವ ಸ್ಮಾರಕಗಳಂತೆ ಉಳಿಯುತ್ತಿದ್ದವು. ಅಂತಹ ಅದ್ಭುತ ಕಲಾಕಾರ ಅವನು. ಕಲೆ ಒಂದು ಬದುಕಿನ ಅಸ್ತಿತ್ವ. ಅದು ಒಂದು ತಪಸ್ಸು. ಒಂದು ತಾಳ್ಮೆಯ ಅನುಭೂತಿ. ಒಂದು ಪರಿಪಕ್ವತೆಯ ಅನುರೂಪ. ವಿಶ್ವವನ್ನು ಹಿಡಿದಿಡುವ ತನ್ನ ಕೈಚಳಕದೊಂದಿಗೆ ಅವನು ಸಮಾಧಾನದಿ ನಡೆಯುವ ಪ್ರಕೃತಿಯ ಉಪಕರಿಸುವಂತೆ. ಪ್ರಕೃತಿಯ ಮಡಿಲಲ್ಲಿ ಸೋಜಿಗವ ಹಿಡಿದಿಟ್ಟು ಬಣ್ಣಗಳಲ್ಲೇ  ಸಗ್ಗವ ತೆರೆದಿಡುವ ಭಾವಗಳಲ್ಲಿ, ನೋಟಗಳಲ್ಲಿ.  ಎಲ್ಲ ಚಿತ್ರಗಳಲ್ಲೂ ಅವನು ಗೌಣ. ಎಷ್ಟೋ ಮನೆಯ ಗೋಡೆಗಳಲ್ಲಿ, ದೊಡ್ಡ ದೊಡ್ಡ ತರೇವಾರಿ ಸ್ಥಳಗಳಲ್ಲಿ ಅವನು ಬಿಡಿಸಿದ ಚಿತ್ರಗಳು ಸ್ಮಾರಕಗಳಾಗಿದ್ದವು. ಅವನೊಡನೆ ಭಾವಗಳಿದ್ದವು. ಭರವಸೆಗಳಿದ್ದವು. ಶಕ್ತಿ ಇತ್ತು. ಹಸಿವೆಯನ್ನು ಇಂಗಿಸುವ ತಾಳ್ಮೆ ಇತ್ತು. ಕೋಪವನ್ನು ಕರಗಿಸಬಲ್ಲ ತಪಶ್ಯಕ್ತಿ ಇತ್ತು.

      ಅದೊಂದು ದಿನ ದೊಡ್ಡ ಕಂಪನಿಯ ಸಿ ಇ ಓ ಆಗಿ ಬಂದ ಯುವತಿಗೆ ಕಂಪನಿಯ ವರಾಂಡದಲ್ಲಿ ಹಾಕಿರುವ ಫೋಟೋ ಕಂಡು ಇಷ್ಟವಾಗಿ ಕಲಾಕಾರನಿಗೆ ಬರಲು ಹೇಳಿ ಎಂದು ತನ್ನ ಜನರಿಗೆ ತಿಳಿಸಿದಳು. ಅದೆಷ್ಟು ಬಾರಿ ಕರೆ ಹೋದರು ಕಲಾಕಾರ ಬರಲಾಗಲಿಲ್ಲ. ಏಕೆಂದರೆ ಅವರಿಗೆ ಸಮಯವಿರಲಿಲ್ಲ. ಜೊತೆಗೆ ಅವರಿಗೊಂದಿಷ್ಟು ಜವಾಬ್ದಾರಿಗಳಿದ್ದವು. ಕನಸುಗಳು ಇತ್ತು . ಸಾವಿರ ಕೆಲಸಗಳಿದ್ದವು. ಒಂದಿಷ್ಟು ಭಾವಗಳಿದ್ದವು. ಎಲ್ಲದಕ್ಕೂ ಅವನು ರೂಪ ಕೊಡಬೇಕಿತ್ತು.  ಜೀವ ಕೊಡಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಅಸ್ತಿತ್ವವಾಗಿ ಅವನು ನಿಲ್ಲಬೇಕಿತ್ತು . ಕೋಪಗೊಂಡ ಅವಳು ಎಂದಳು ದುಡ್ಡು ಕೊಟ್ಟರೆ ಎಷ್ಟೋ ಜನ ಇಂತಹ ನೂರು ಚಿತ್ರಗಳನ್ನು ಬಿಡಿಸುತ್ತಾರೆ.

         ಆ ಕಚೇರಿಯ ಎಲ್ಲ ಹುಡುಗರು ಕಲಾಕಾರರ ಹುಡುಕಿ ಒಂದಿಷ್ಟು ಜನರನ್ನು ಕರೆಯಿಸಿ, ಚಿತ್ರ ಬಿಡಿಸಲು ತಿಳಿಸುತ್ತಾರೆ‌. ಆ ಕಾರ್ಯ ಒಂದು ದಿನ ಮುಗಿಯುತ್ತದೆ. ಬಿಡಿಸಿದ ಚಿತ್ರಗಳೆಲ್ಲ ಏನೋ ಕಥೆಗಳ ಹೇಳುತ್ತಿತ್ತು.  ಒಂದಕ್ಕಿಂತ ಒಂದು ಸುಂದರವಾಗಿ ನಿಂತರೂ ಕೂಡ ಆ ಯುವತಿಗೆ ಏನೋ ಒಂದು ಭಾವ ಹುಡುಕಬೇಕಿತ್ತು. ಹುಡುಕಿದ ಭಾವ ಎಲ್ಲ ಬಿಡಿಸಿದ ಚಿತ್ರಗಳಲ್ಲಿ ಸಿಗಬೇಕಿತ್ತು.  ಆದರೆ ಹುಡುಕಿದರೆ ಎಲ್ಲೂ ಸಿಗಲಿಲ್ಲ ಆ ಭಾವ. ಪ್ರಕೃತಿಯೊಳಗೆ ಪರಿಚಿತವಾಗಿ ಉಳಿಯಬಲ್ಲ ಭಾವ. ಆದರೆ ಯಾವುದರಲ್ಲೂ ಅದೊಂದು ಭಾವ ಕೊನೆಗೂ ಅವಳಿಗೆ ಸಿಗಲೇ ಇಲ್ಲ . ಹುಡುಕಿ ಹುಡುಕಿ ಸೋತಳು. ಅದೆಷ್ಟೋ ಸಮಸ್ಯೆಗಳ ಬಿಡಿಸಿದ್ದಳು . ದೊಡ್ಡ ದೊಡ್ಡ ದಿಗ್ಗಜರ ಪ್ರಶ್ನೆಗಳನ್ನ ಬಿಡಿಸಿ ಸೈ ಎನಿಸಿಕೊಂಡಿದ್ದಳು. ಕಾರು, ಮನೆ, ಆಸ್ತಿ ಇವುಗಳಿಗೆ ಇಲ್ಲದ ಅದೆಂತದ್ದೋ ಒಂದು ಭಾವ ಅವಳ ಮನಸ್ಸಿನಲ್ಲಿ ಕುಳಿತಿತ್ತು. ಆ ಕಲಾಕಾರ ಬಿಡಿಸಿದ ಚಿತ್ರಗಳಲ್ಲಿ ಸಿಕ್ಕ ಭಾವ ಅದು. ಸೋತುಹೋದ ಅವಳ ಪ್ರಯತ್ನ ಸುಮ್ಮನೇ ನಿಂತಿತ್ತು. ಬದುಕಲು ಎಲ್ಲವೂ ಬೇಡ ಎಂಬ ಅವಳ ಮಾತಿಗೆ ಮೊದಲ ಬಾರಿಗೆ ಹೊಡೆತ ಕೊಟ್ಟಿತ್ತು . ವಾರಗಳಾಯಿತು. ತಿಂಗಳುಗಳಾಯಿತು. ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿದ್ದು ಬಿಡಿಸಿದ ಎಲ್ಲ ಚಿತ್ರಗಳು ಅನಾಥವಾಗಿ ಉಳಿದಿದ್ದವು. ಬದುಕಿಗೆ ಒಂದು ಚೈತನ್ಯ ಬೇಕು. ಅದು ಭಾವವಾದರೂ ಆಗಬೇಕು. ಭವಿಷ್ಯವಾದರೂ ಆಗಬೇಕು. ಅದೊಂದು ಜೀವಂತವಾಗಿ ಹಿಡಿದಿಡುವ ಭಾವವಾಗಬೇಕು.

        ಕೊನೆಗೆ ಕೆಲಸಗಾರರನ್ನು ಕರೆದು ಆ ಕಲಾಕಾರನ ಒಮ್ಮೆ ನೋಡಬೇಕು ನಾನು ಎಂದಳು ಆ ಕಂಪನಿಯ ಯುವ ಸಿಇಓ .ಕೆಲಸಗಾರಿಗೆ ಆಶ್ಚರ್ಯ. ಈಗಾಗಲೇ ಎಲ್ಲ ಚಿತ್ರಗಳನ್ನ ಬಿಡಿಸಿ ಆಗಿದೆ . ಇನ್ನೇಕೆ ? ಆ ಕಲಾಕಾರ ಎಂಬ ಪ್ರಶ್ನೆ ಕಂಪನಿಯ ಕೆಲಸಗಾರರದ್ದು . ಇರಲಿ ನೀವು  ಕೇಳಿದ್ದೀರಿ ಎಂದು ಕರೆ ತರುತ್ತೇವೆ ಅವರನ್ನ. ಅವರು ಬರುತ್ತಾರೆ ಎಂದರು. ಇಲ್ಲ ನಾನೇ ಅವರನ್ನು ನೋಡಬೇಕು ಎಂದಳು. ತನ್ನ ಕಾರನ್ನು ತೆಗೆದುಕೊಂಡು ಅವನ ಮನೆಯ ವಿಳಾಸವನ್ನು ಪಡೆದು ತಿಳಿದವರ ಜೊತೆ ಅವರ ಮನೆಗೆ ಬಂದು ನಿಂತಳು. ಹಾಳು ಮನೆಯಂತಹ ದೊಡ್ಡ ಮನೆಯದಾದರೂ ನೀಟಾಗಿ ಜೋಡಿಸಿದ ಕುರ್ಚಿ ಮೇಜುಗಳು . ಮೂಲೆಯಲ್ಲಿ ಒಂದು ಹಾಡಿನ ಪೆಟ್ಟಿಗೆ. ಅದರಲ್ಲಿ ಹದವಾದ ಹಿತವಾದ ಸಂಗೀತ.  ಜೊತೆಗೆ ಆಹ್ಲಾದ ಕೊಡುವ ಗಿಡ ಮರಗಳು, ಸುತ್ತ ಹಸಿರು ಗದ್ದೆಯ ಬಯಲು ಪಕ್ಕದಲ್ಲಿ.  ಆಶ್ಚರ್ಯವಾಯಿತು ಅವಳಿಗೆ. ಇದೇನೋ ಸ್ವರ್ಗವೋ ಅಥವಾ ಭೂಮಿಯು ಎಂದುಕೊಂಡಳು. ಕ್ಷಣಕಾಲ ನಿಂತಳು. ಆ ತನ್ಮಯತೆಗೆ ……ಆದರೂ ಒಳಗಿರುವ ಅಹಂ ಕೆಣಕುತ್ತಿತ್ತು. ಸುಮ್ಮನೆ ಮನೆಯ ಒಳ ಹೋದಳು. ಅಲ್ಲಿ ಅವನು ಚಿತ್ರ ಬರೆಯುತ್ತಿದ್ದ. ಸುಮ್ಮನೇ ಕುಳಿತಲ್ಲೇ ಚಿತ್ರ ಆರಾಧಿಸುತ್ತಾ,ಬಿಡಿಸುತ್ತಾ ನೂರಾರು ವಿಧದ ದೃಷ್ಟಿ ಅವುಗಳ ಮೇಲೆ ಚೆಲ್ಲಿದ್ದ. ಸುಮ್ಮನೇ ನಿಂತಳು. ನೋಡಿದಳು. ಅವನ ಕಾರ್ಯಕ್ಕೆ ಮಾತನಾಡಬೇಕು ಎನ್ನಿಸಲಿಲ್ಲ. ಬಿಡಿಸುತ್ತಲೇ ಇದ್ದ ಅವನು ಚಿತ್ರಗಳ. ರಾತ್ರಿಯ ನಿದ್ದೆಯ ಮಂಪರು ಇನ್ನೂ ಆರಿರಲಿಲ್ಲ. ಕಣ್ಣುಗಳಲ್ಲಿ ನೋವಿತ್ತು. ಆದರೂ ಒಂದು ಬದುಕುವ ಬದುಕಿಸುವ ಭರವಸೆಯಿತ್ತು.

            ಒಂದು ಗಂಟೆಯ ನಂತರ ಅವಳೆಂದಳು ‘ನಾನು’ ಎಂದು.  “ಬಂದು ಒಂದು ಗಂಟೆ ಆಯ್ತು “……ನೀವು ..ಎಂದ. ನಾನು ಬಂದದ್ದು ನಿಮಗೆ ಹೇಗೆ ಗೊತ್ತಾಯಿತು ? ಎಂದಳು . ನಿಶ್ಯಬ್ದದಲ್ಲಿ ಶಬ್ದ ಬಂದರೆ ಅದು ಹೊಸ ಪರಿಚಯ ಎಂದರ್ಥ. ಹಾಗಾಗಿ ನೀವು ಹೊಸಬರು ಎಂದುಕೊಂಡೆ. ಸುಮ್ಮನಾದೆ. ‘ಚಿತ್ರಗಳನ್ನು ನೋಡಿ’ ಎಂದ. ನೋಡಿದಳು ಚಿತ್ರಗಳ  ಎಣಿಸಿದಳು ನೂರು ಇಲ್ಲಾ ಸಾವಿರ ಇಲ್ಲಾ ಇಲ್ಲಿರುವ ಭಾವಗಳು ಸಾವಿರ ಸಾವಿರ. ಅವಳಿಗೆ ಆಶ್ಚರ್ಯ.  ಅವನು ಬಂದು ನೋಡಿದಿರಾ ಚಿತ್ರಗಳನ್ನು?   ಎಂದ. ನೋಡಿದೆ ಎಂದಳು. ಮಾತನಾಡುವಿರಾ ಎಂದ. ಇಲ್ಲಾ ಎಂದಳು .ಏಕೆ  ?ಎಂದ. ಇಲ್ಲಿರುವ ಚಿತ್ರಗಳನ್ನು ಎಣಿಸಲಾರೆ….. ಭಾವಗಳನ್ನು ಹಾಗೆ…. ಸಮಯವಾದರೆ ನನಗೊಂದು ಚಿತ್ರ ಬಿಡಿಸಿಕೊಡಿ ಎಂದಳು. ಪ್ರಯತ್ನಿಸುವೆ ಒಂದು ಪೂರ್ಣತ್ವದ ಅಭಿವ್ಯಕ್ತಿಗೆ ಎಂದ. ಕೊಟ್ಟ ಮಾತಿಗೆ ತಪ್ಪಲಾರೆ. ಒಂದು ಚಿತ್ರ ನಾಳೆಯೊಳಗೆ ನಿಮಗೆ ಸಿಗುತ್ತದೆ ಎಂದ. ಅವಳು ಎದ್ದು ನಮಸ್ಕರಿಸಿ ಹೊರಟಳು ಒಬ್ಬ ಸಾಮಾನ್ಯ ಮನುಷ್ಯಳಾಗಿ. ಜೊತೆಗೆ ಅವನ ಮನೆಯ ಗೋಡೆಯ ಮೇಲೆ ಬರೆದ ಸಾಲುಗಳಲ್ಲಿ ಇರುವ ಭಾವವನ್ನ ಮನದಲ್ಲಿ ಓದಿ ಅಚ್ಚಾಗಿ ಮೂಡಿಸುತ್ತಾ  ಶೂನ್ಯದೊಳಗೊಂದು ಶೂನ್ಯವಾಗಿ ಬಿಡೋಣ. ಆಗ ನಮ್ಮ ಶೂನ್ಯತೆಯ ಅರಿವಾಗುತ್ತದೆ. ಜೊತೆಗೆ ನಮ್ಮ ಪ್ರಜ್ಞೆಯ ಅವಶ್ಯಕತೆಯೂ ನಮಗೆ ತಿಳಿಯುತ್ತದೆ ಎನ್ನುತ್ತಾ ಹೊರಟಳು. ಅವಳು ಕಲೆಯ ಆರಾಧಕಗಳಾಗಿ ಕಲಾಕಾರನ ಕಲೆಯ ಪ್ರಸ್ತುತಿಯನ್ನು ಆರಾಧಿಸುತ್ತಾ……….. ನಗುತ್ತಾ ಜಗವ ಗೆದ್ದಂತೆ……..


7 thoughts on ““ಪೂರ್ಣತ್ವದ ಒಂದು ಅಭಿವ್ಯಕ್ತಿಗೆ” ಸಣ್ಣಕಥೆ-ನಾಗರಾಜ ಬಿ.ನಾಯ್ಕ

    1. ಕಲೆಯ ಅಭಿವ್ಯಕ್ತಿ ಹಾಗೂ ಕಲಾವಿದನ ಅನುಭೂತಿಯನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸಿ ದ್ದಿರಿ. ಚೆಂದನೆಯ ವರ್ಣನೆಯೊಂದಿಗೆ ಓದುವಂತಿದೆ.

  1. ಕಲೆ ಸಾಹಿತ್ಯ ಎನ್ನುವುದು ಎಲ್ಲರಿಗೂ ಸುಲಭವಾಗಿ ಕೈಗೆ ಸಿಗುವಂತದ್ದು ಅಲ್ಲ. ಅದನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ನೈಪುಣ್ಯತೆ ಬೇಕು. ನಿತ್ಯ ನಿರಂತರ ಪರಿಶ್ರಮ ಬೇಕು. ಸಾಣೆ ಹಾಕುತ್ತಾ ಸಾಗಬೇಕಾಗುತ್ತದೆ. ಕಲೆ ಎನ್ನುವುದು ಯಾರ ಸ್ವತ್ತು ಅಲ್ಲ. ಕಲೆ ಎನ್ನುವುದಕ್ಕೆ ಬಡವ ಬಲ್ಲಿದ ಎನ್ನುವ ಭೇದ ಭಾವವು ಇಲ್ಲ. ಯಾರು ಆರಾಧಿಸುತ್ತಾರೋ ಅವರನ್ನು ಒಪ್ಪಿಕೊಳ್ಳುತ್ತದೆ. ಕಲೆಗಾರ ತಾನು ನೋಡಿದ ರಮ್ಯ ಜಗತ್ತನ್ನ ನಿಸರ್ಗದ ವೈಭವವನ್ನ ನಮ್ಮ ಕಣ್ಣೆದುರು ತೆರೆದಿಡುತ್ತಾನೆ. ಆತನ ಕಲೆಯಲ್ಲಿ ರೋಚಕತೆ ಇರುತ್ತದೆ, ನೈಜತೆಯೂ ಇರುತ್ತದೆ, ಭಾವುಕತೆಯು ತುಂಬಿರುತ್ತದೆ. ಬದುಕಿನ ಒಂದಿಷ್ಟು ಅಚ್ಚರಿಗಳು ತುಂಬಿರುತ್ತದೆ. ಕಲೆಯನ್ನುವುದು ಸೀಮಿತ ಚೌಕಟ್ಟಿಗೆ ಒಳಪಡುವಂಥದ್ದಲ್ಲ. ಅದೊಂದು ಸಾಧನೆ, ಅದು ಸಾಧಕನ ಸ್ವತ್ತು, ಅದಕ್ಕೆ ಬೆಲೆ ಕಟ್ಟುವುದು ಸುಲಭವಲ್ಲ. ದುಡ್ಡನ್ನ ಟಾರ್ಗೆಟ್ ಮಾಡಿ ಪರಿಶ್ರಮಿಸಿ ಸಂಪಾದಿಸಬಹುದೇನೋ. .. ಕಲೆ ಸುಲಭವಾಗಿ ಸಿದ್ಧಿಸುವಂತದ್ದಲ್ಲ. ಕೆಲವೇ ಕೆಲವರು ಮಾತ್ರ ಕಲೆಯಲ್ಲಿ ಸಿದ್ದ ಹತ್ತರಾಗುತ್ತಾರೆ. ಅಂತಹ ಅದ್ಭುತ ಕಲೆಗಾರನ ಚಿತ್ರಣ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಶೂನ್ಯತೆಯಿಂದ ಅನಂತತೆಯ ದರ್ಶನ ಮಾಡಿಕೊಡುತ್ತದೆ. ಬದುಕಿನ ರಮ್ಯತೆಯನ್ನು ತೆರೆದಿಡುತ್ತದೆ. ಇನ್ನೂ ಹೆಚ್ಚಿನದನ್ನ ನಿರೀಕ್ಷಿಸಬಹುದು…

  2. ನಿಮ್ಮೆಲ್ಲರ ಪ್ರೀತಿಯ ಅಭಿಮಾನದ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದಗಳು…….

Leave a Reply

Back To Top