ವೀಣಾ ಹೇಮಂತ್ ಗೌಡ ಪಾಟೀಲ್,ಹೊಸ ವರ್ಷಕ್ಕೆ ನವ ಸಂಕಲ್ಪಗಳು

Preview in new tab

ಇನ್ನೇನು
 ಕೆಲವೇ ಗಂಟೆಗಳಲ್ಲಿ ಕ್ಯಾಲೆಂಡರ್ ತಿಂಗಳಿನ ಹಳೆಯ ವರ್ಷ ಮುಗಿದು…. ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಪ್ರತಿ ಹೊಸ ವರ್ಷವೂ ಮನುಷ್ಯನಲ್ಲಿ ಹೊಸತನ್ನು ಕಲಿಯಲು, ಹೊಸ ವಿಚಾರಗಳನ್ನು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಮನುಷ್ಯನಿಗೆ ಪ್ರೇರಣೆ ನೀಡುತ್ತದೆ. ಅಂತೆಯೇ ದಿನಗಳೆದಂತೆ ಮನುಷ್ಯ ತನ್ನದೇ ಜೀವನದ ಜಂಜಾಟದಲ್ಲಿ ಅವುಗಳನ್ನು ಮರೆತು ಕೂಡ ಬಿಡುತ್ತಾನೆ. ಮತ್ತೆ ಪಶ್ಚಾತಾಪ ಪಟ್ಟು ಅವುಗಳನ್ನು ಮುಂದುವರೆಸಲು ಅಪೇಕ್ಷಿಸಿದಾಗ ಆತ ತನ್ನಲ್ಲಿ ತಾನು ಹೇಳಿಕೊಳ್ಳುವುದು ಹೊಸ ವರ್ಷದಿಂದ ಖಂಡಿತವಾಗಿ ಮಾಡುತ್ತೇನೆ ಎಂದು.

ಹಾಗೆ ಹೊಸ ವರ್ಷದಲ್ಲಿ ಮಾಡಿಕೊಳ್ಳಬಹುದಾದ ಮತ್ತು ಸಾಧಿಸಬಹುದಾದ ಸಂಕಲ್ಪಗಳನ್ನು ಪಟ್ಟಿ ಮಾಡೋಣ.

1.ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಏಳಬೇಕು…. ಇತ್ತೀಚಿಗಿನ ದಿನಗಳಲ್ಲಿ ಇದು ಕಷ್ಟ ಎಂದೆನಿಸಿದರೂ ನಮ್ಮ ಮನೋ ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಅತ್ಯಂತ ಅವಶ್ಯಕವಾದದ್ದು. ರಾತ್ರಿ 8:00 ಗಂಟೆಗೆ ಮುಂಚೆಯೇ ಆಹಾರವನ್ನು ಸೇವಿಸಿ ಸುಮಾರು 2 ಗಂಟೆಗಳ ನಂತರ 10ರಿಂದ 10.30ರ ಸುಮಾರಿಗೆ ಮಲಗಿದರೆ ದೇಹದ ಚಯಾಚಪಯ ಕ್ರಿಯೆಗಳಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ. ದೇಹಕ್ಕೆ ಸಂಪೂರ್ಣ ವಿಶ್ರಾಂತಿ ದೊರೆಯುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಕಲ್ಲು ತಿಂದು ಅರಗಿಸಿಕೊಳ್ಳುತ್ತೇನೆ ಎಂಬ ಹುಂಬ ಧೈರ್ಯವೇನೋ ಇರುತ್ತದೆ ನಿಜ. ಯಾವುದೇ ರೀತಿಯ ದೈಹಿಕ ಶ್ರಮಕ್ಕೆ ಒಳಗಾಗದ ದೇಹದಲ್ಲಿ ಆಹಾರ ಜೀರ್ಣಿಸುತ್ತದೆ ನಿಜ ಆದರೆ ಅದು ಕೊಬ್ಬಾಗಿ ಪರಿಣಮಿಸುತ್ತದೆ. ದೇಹಕ್ಕೆ ಅವಶ್ಯಕವಾದಷ್ಟು ಕೊಬ್ಬು ಒಳ್ಳೆಯದು ಆದರೆ ಅಗತ್ಯಕ್ಕಿಂತ ಹೆಚ್ಚಿನ ಕೊಬ್ಬು ಬೊಜ್ಜಿನ ರೂಪದಲ್ಲಿ ಪರಿಣಮಿಸುತ್ತದೆ ಎಂಬುದನ್ನು ಅರಿಯಬೇಕು.

2.ಮುಂಜಾನೆ ಬೇಗ ಎದ್ದ ನಂತರ ಲಘು ವ್ಯಾಯಾಮ ಮತ್ತು ಕನಿಷ್ಠ ಅರ್ಧ ಗಂಟೆಯ ನಡಿಗೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದು ದೇಹದಲ್ಲಿ ನವ ಚೈತನ್ಯವನ್ನು ತರುತ್ತದೆ. ಇಡೀ ದಿನದ ಕಾರ್ಯಭಾರದ ಸಂಘರ್ಷವನ್ನು ಲೀಲಾಜಾಲವಾಗಿ ತೊಡೆದು ಹಾಕುತ್ತದೆ. ಬೇರೆ ಊರುಗಳಿಗೆ ಹೋದಾಗ ಮತ್ತಿತರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಾಗ ಒಂದೆರಡು ದಿನಗಳ ಮಟ್ಟಿಗೆ ಯೋಗ ಮತ್ತು ವಾಕಿಂಗ್ ತಪ್ಪಿದರೆ ಪರವಾಗಿಲ್ಲ ಮತ್ತೆ ಮರುದಿನದಿಂದ ಈ ಅಭ್ಯಾಸವನ್ನು ತಪ್ಪದೇ ಮಾಡಿ… ಮುಂದಿನ ವರ್ಷದಿಂದ ಮಾಡುತ್ತೇನೆ ಎಂದು ಮುಂದೆ ಮಾತ್ರ ಹಾಕಬೇಡಿ.

3.ಪ್ರತಿದಿನವೂ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಬೇಕು… ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದ ಆರೋಗ್ಯ ಸುಧಾರಿಸುತ್ತದೆ. ಎಷ್ಟೋ ಬಾರಿ ನೀರೇ ಆಹಾರ ಆದಾಗ ದೇಹದ ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆತು ಅವು ಮತ್ತೆ ಹೆಚ್ಚಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.ಮನುಷ್ಯ ದೇಹ ನಿರ್ಜಲೀಕರಣದ ಸಮಸ್ಯೆಗೆ ಒಳಗಾದಾಗ ಕುಡಿಯುವ ಒಂದು ಲೋಟ ನೀರು ಜೀವದಾಯಿನಿ ಎನಿಸುತ್ತದೆ. ಸಾಕಷ್ಟು ಪ್ರಮಾಣದ ನೀರು ಸೇವಿಸುವುದರಿಂದ ದೇಹದ ಮೂತ್ರಪಿಂಡದಲ್ಲಿ ಕಲ್ಲು ಪಿತ್ತಕೋಶದಲ್ಲಿ ಹರಳು ಎಂಬಂತಹ ಹಲವಾರು ಸಮಸ್ಯೆಗಳು ತಲೆದೋರುವುದೇ ಇಲ್ಲ.

4.ಒಳ್ಳೆಯ ಸತ್ವಯುತ ಆಹಾರ ನಿಮ್ಮದಾಗಿರಲಿ… ಏನೋ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಎಂಬ ಭಾವ ಬೇಡ. ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ, ಹಣ್ಣುಗಳು ಇದ್ದು ಪಿಷ್ಟ ಪದಾರ್ಥಗಳಿಗೆ ಕಡಿಮೆ ಆದ್ಯತೆ ನೀಡಿ. ತುಸು ಕೊಬ್ಬಿನ ಅಂಶವಿರುವ ಆಹಾರ ಪದಾರ್ಥಗಳು ದೇಹಕ್ಕೆ ಹಿತವನ್ನು ಕೊಡುತ್ತವೆ ಆದರೆ ಕೊಬ್ಬೇ ಪ್ರಧಾನ ಆಹಾರವಲ್ಲ ಎಂಬುದನ್ನು ನೆನಪಿನಲ್ಲಿಟ್ಟು ಕೊಳ್ಳಿ. ಊಟದಲ್ಲಿ ಉಪ್ಪಿನಕಾಯಿ ಇರುವಷ್ಟೇ ಆಹಾರದಲ್ಲಿ ಕೊಬ್ಬಿನ ಪ್ರಮಾಣ ಇರಬೇಕು.

5.ಯಾವಾಗಲಾದರೂ ಬಾಯಿ ಚಪಲಕ್ಕೆ ಹೊರಗಿನ ತಿಂಡಿ ತೀರ್ಥಗಳನ್ನು ಸೇವಿಸುವುದು ತಪ್ಪಲ್ಲ, ಆದರೆ ಪ್ರತಿದಿನವೂ ನಿಯಮಿತವಾಗಿ ಹೊರಗಿನ ಕುರುಕಲು ತಿಂಡಿಗಳನ್ನು ಎಗ್ ಪಫ್,ವೆಜ್ ಪಫ್,ಪಿಜ್ಜಾ ಬರ್ಗರ್ ಗಳಂತಹ ತಿನಿಸುಗಳನ್ನು ತಿನ್ನುವುದು ಅನಾರೋಗ್ಯಕರ ಅಷ್ಟೇ ಅಲ್ಲ ಬೇಡದ ಅತಿಥಿಗಳನ್ನು ದೇಹವೆಂಬ ಮನೆಯೊಳಕ್ಕೆ ಬಿಟ್ಟುಕೊಂಡಂತಾಗುತ್ತದೆ. ಹೆಚ್ಚಿನ ಪ್ರಮಾಣದ ಕೊಬ್ಬು ದೇಹದಲ್ಲಿ ಸೇರಿಕೊಂಡು ದೇಹದ ಗೋಡೆಗಳಿಗೆ ಅಲ್ಲಲ್ಲಿ ಮೆತ್ತಿಕೊಂಡು ರಕ್ತನಾಳಗಳನ್ನು ಸಂಕುಚಿಸುತ್ತದೆ ಪರಿಣಾಮವಾಗಿ ದೇಹದಲ್ಲಿ ಸರಾಗವಾದ ರಕ್ತ ಪರಿಚಲನೆ ಸಾಧ್ಯವಾಗದೆ ಹೃದಯದ ಆಘಾತ, ಹೃದಯ ಸ್ತಂಭನಗಳಂತಹ ತೊಂದರೆಗಳಿಗೆ ಸಿಲುಕಬೇಕಾಗುತ್ತದೆ.

6.ಅತ್ಯಂತ ಕ್ಷಣಿಕವಾದ ಈ ಬದುಕಿನಲ್ಲಿ ಇರುವ ನಾಲ್ಕು ದಿನಗಳನು ದ್ವೇಷ, ಅಸೂಯೆ, ಅಜ್ಞಾನ ಅಹಂಕಾರಗಳೆಂಬ ಒಡವೆಗಳನ್ನು ತೊಟ್ಟು ಮೆರೆಯುವುದಕ್ಕಿಂತ ಪ್ರೀತಿ, ವಿಶ್ವಾಸ, ನಂಬಿಕೆ, ತಾಳ್ಮೆ,ಆತ್ಮೀಯತೆಗಳನ್ನು ಹೊಂದಿರುವ ಸರಳ ಜೀವನ ಶೈಲಿಯನ್ನು ಅಳವಡಿಸಿಕೊಳ್ಳೋಣ. ಖಡ್ಗಕ್ಕೆ ಖಡ್ಗವೇ ಉತ್ತರವಾಗಬಾರದು… ಹರಿತವಾದ ಮಾತುಗಳು ಮನಸ್ಸನ್ನು ಘಾಸಿ ಮಾಡುತ್ತವೆ.. ಬೇರೆಯವರು ನಿಮ್ಮನ್ನು ನೋಯಿಸಿದಾಗ ಅತ್ಯಂತ ತಾಳ್ಮೆಯಿಂದ ಅವರನ್ನು ದೂರ ಸರಿಸಿ. ಆದರೆ ನಿಮ್ಮವರು ಎಂದು ನೀವಂದುಕೊಂಡವರೇ ನಿಮ್ಮನ್ನು ನೋಯಿಸಿದರೆ…. ಸಾಧ್ಯವಾದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿ ಹೇಳಲು ಪ್ರಯತ್ನಿಸಿ. ಇಬ್ಬರ ವಿಚಾರಗಳಲ್ಲಿ ಒಮ್ಮತ ಮೂಡದಿದ್ದಾಗ, ಅವರವರ ಅಭಿಪ್ರಾಯಗಳು ಅವರವರಿಗೆ ಎಂಬ ಸರಳ ಮತ್ತು ಬಹುಮುಖ್ಯವಾದ ತತ್ವಕ್ಕೆ ಶರಣಾಗಿ. ಆರೋಗ್ಯಕರ ಮಾನಸಿಕತೆಯನ್ನು ರೂಢಿಸಿಕೊಳ್ಳಿ.

7.ಓದು, ಚಿತ್ರಕಲೆ, ಸಂಗೀತ ಪ್ರವಾಸ ಮುಂತಾದ ಉತ್ತಮ ಆರೋಗ್ಯಕರ ಹವ್ಯಾಸಗಳನ್ನು ನಿಮ್ಮದಾಗಿಸಿಕೊಳ್ಳಿ. ಇದು ಜೀವನದಲ್ಲಿ ಹೊಸ ವಿಷಯಗಳನ್ನು ಅರಿಯಲು ಸಹಾಯವಾಗುವುದಲ್ಲದೇ, ಬದುಕಿನಲ್ಲಿ ಹೊಸ  ಹುಮ್ಮಸ್ಸನ್ನು ತುಂಬಿ ಏಕತಾನತೆಯನ್ನು ದೂರ ಮಾಡುತ್ತದೆ.

8.ಬಿ ಬ್ರೀಫ್…. ಅತ್ಯಂತ ಕಡಿಮೆ ಮಾತನಾಡಿ ಮತ್ತು ನೀವು ಹೇಳಬೇಕೆಂದಿರುವ ವಿಷಯವನ್ನು ಅತ್ಯಂತ ಕ್ಲುಪ್ತವಾಗಿ ಹೇಳುವ ಕಲೆಯನ್ನು ರೂಢಿಸಿಕೊಳ್ಳಿ. ಮಂತ್ರಕ್ಕಿಂತ ಉಗುಳು ಜಾಸ್ತಿ ಎಂಬಂತೆ ಆಗಬಾರದು ನೋಡಿ. ನಾವು ಹೇಳುವ ವಿಷಯಗಳು ಅವರನ್ನು ಮುಟ್ಟುವ ಮುಂಚೆಯೇ ಅನವಶ್ಯಕವಾದ ಎಳೆಯುವಿಕೆಯಿಂದ ವಿಷಯಾಂತರಗಳಾಗುವ ಸಾಧ್ಯತೆಗಳು ಇರುತ್ತವೆ ಜೊತೆಗೆ ಅವರ ಗಮನ ಬೇರೆ ಡೆ ತಿರುಗುತ್ತದೆ. ಸಾಧ್ಯವಾದಷ್ಟು ಇದನ್ನು ತಪ್ಪಿಸಿ. ಹೇಳುವ ವಿಷಯವನ್ನು ಅತ್ಯಂತ ಸ್ಪಷ್ಟವಾಗಿ ಸ್ಫುಟ ವಾಗಿ ಕಡಿಮೆ ಶಬ್ದಗಳನ್ನು ಬಳಸಿ ಹೇಳುವ ಕಲೆಯನ್ನು ರೂಢಿಸಿಕೊಳ್ಳಿ

9. ಮನುಷ್ಯ ಸಮಾಜ ಜೀವಿ… ಈ ಸಮಾಜ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಾಕಷ್ಟು ಕೊಡುಗೆಗಳನ್ನು ನಮಗೆ ನೀಡಿರುತ್ತದೆ.  ಈ ಸಮಾಜದಲ್ಲಿ ಹುಟ್ಟಿದ ನಾವುಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಅತ್ಯಂತ ಕೆಳ ಸ್ತರದ ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ನಿಮ್ಮ ಅಳಿಲು ಸೇವೆಯನ್ನು ಸಲ್ಲಿಸಲೇಬೇಕು. ಸಾಮಾಜಿಕ ಸೇವೆ ಎಂಬುದು *ಸಾಮಾಜಿಕ ಜವಾಬ್ದಾರಿ*ಯಾಗಿ ಬದಲಾಗಬೇಕು. ನಮ್ಮ ಸುತ್ತಲಿನ ಸಮಾಜಕ್ಕೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡುವ ಮೂಲಕ ಅವರನ್ನು ಮೇಲೆ ಎತ್ತುವ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು.

ಈ ನವ ಸಂಕಲ್ಪಗಳನ್ನು  ಅಳವಡಿಸಿಕೊಂಡು ನಮ್ಮ ನಮ್ಮ ಜೀವನಗಳನ್ನು ಉನ್ನತ ಸ್ತರಕ್ಕೆ ಒಯ್ಯುವುದರ ಜೊತೆ ಜೊತೆಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗೋಣ ಎಂಬ ಸಂಕಲ್ಪ ಮಾಡುತ್ತಾ ಕ್ಯಾಲೆಂಡರ್ ತಿಂಗಳ ಹೊಸ ವರ್ಷವನ್ನು ಸ್ವಾಗತಿಸೋಣ.


2 thoughts on “ವೀಣಾ ಹೇಮಂತ್ ಗೌಡ ಪಾಟೀಲ್,ಹೊಸ ವರ್ಷಕ್ಕೆ ನವ ಸಂಕಲ್ಪಗಳು

Leave a Reply

Back To Top