ಗಝಲ್
ಡಾ.ಗೋವಿಂದ ಹೆಗಡೆ
ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ
ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ
ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ
ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ
ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ
ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ
ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ
ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ
ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ
ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ
ಎಷ್ಟೊಂದು ಮಾತುಗಳ ಎಡಬಿಡದೆ ಎರಚಿರುವೆ ‘ಜಂಗಮ’
ನಿನ್ನ ತುಟಿಗಳಲಿ ಅರೆ ಚಣದ ಮೌನವಾಗಿಸು ನನ್ನ
*********
ಏನು ಹೇಳಲಿ ನಾನು! ಹೊಗಳಲು ನನ್ನಲ್ಲಿ ಪದಗಳಿಲ್ಲ.ನಿಮ್ಮ ಅನನ್ಯ ಪ್ರತಿಭೆಗೆ ಅಭಿಮಾನ ಪೂರ್ವಕ ನಮನಗಳು