ಕಥಾಯಾನ

ಕಥೆ

ಪೊಟ್ಟಿ

ಶೀಲಾ ಭಂಡಾರ್ಕರ್.

ಪೊಟ್ಟಿ.

ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು.

ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು.

ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ.

ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ!

ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ.

ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು.

ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ.

ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು.

ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ.

ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ.

ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ.

ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು.

ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌.

ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು.

ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು.

ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು.

ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು.

ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ.

ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು.

ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ.

ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ.

ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು.

ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು.

ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು.

ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು.

ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು.

ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು.

ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು.

ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ.

ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.  

*********

2 thoughts on “ಕಥಾಯಾನ

  1. ಪೊಟ್ಟಿಯಂಥಹ ಅದೆಷ್ಟೋ ಹೆಣ್ಣು ಮಕ್ಕಳು ಸುಡುವ ಕೆಂಡವನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡು,ಸುಟ್ಟರೂ ಸುಡದಂತೆ,ನೋವನ್ನೆಲ್ಲ ನುಂಗಿ ಬದುಕುತ್ತಿದ್ದಾರೆ. ಆಕೆಯೋ ಮೂಕಿ,ಆದರೆ ಮಾತು ಬಂದವರೂ ಸಹ ಮೂಗರಾಗಿ ಸಮಾಜಕ್ಕೆ ಹೆದರಿ ಜೀವನ ಸವೆಸುತ್ತಿದ್ದಾರೆ.. ನಮ್ಮ ಸಮಾಜದ ದುರ್ದೈವ….

    1. ಹೌದು ರಶ್ಮಿ. ಒಂದೇ ಜಗತ್ತಿನಲ್ಲಿ ಅದೆಷ್ಟು ಜಗತ್ತು ಅಲ್ಲವೇ? ಪ್ರತಿಕ್ರಿಯೆಗೆ ಧನ್ಯವಾದಗಳು.

Leave a Reply

Back To Top