ಎನ್ ಎಲ್ ಚನ್ನೇಗೌಡರ “ರಾಮಾಯಣದೊಳಗೊಂದಿಷ್ಟು ರಾಮಾಯಣ” ಕೃತಿ ಕುರಿತು ವಿಮರ್ಶೆ ಹಾಗೂ ಅಭಿಪ್ರಾಯ ಮಾಳೇಟಿರ ಸೀತಮ್ಮ ವಿವೇಕ್

ಕಾವ್ಯ ಸಂಗಾತಿ

ಎನ್ ಎಲ್ ಚನ್ನೇಗೌಡರ

“ರಾಮಾಯಣದೊಳಗೊಂದಿಷ್ಟು ರಾಮಾಯಣ”

ಮಾಳೇಟಿರ ಸೀತಮ್ಮ ವಿವೇಕ್

ಶ್ರೀಯುತ ಎನ್ ಎಲ್ ಚನ್ನೇಗೌಡರ ಯಾವುದಾದರು ಒಂದು ಪುಸ್ತಕವನ್ನು ವಿಮರ್ಶೆ ಮಾಡುತ್ತೇನೆಂದರೆ ಅದು ನಿಜಕ್ಕೂ  ಅನ್ಯಾಯವಾಗುತ್ತದೆ. ಅಷ್ಟರ ಮಟ್ಟಿಗೆ ವಿಧಿವತ್ತಾದ ಪುಸ್ತಕ ರಚನೆ ಅವರಿಂದಾಗಿದೆ. ಆದರೆ ವಿಧಿಯಿಲ್ಲ, ಸದ್ಯ ನನಗೆ ಸಮಯದ ಅಭಾವವಿರುವುದರಿಂದ ಸಾಕಷ್ಟು ಜನರನ್ನು ತಲುಪಿರುವ, ಕೇಂದ್ರ ಗ್ರಂಥಾಲಯಕ್ಕೂ ಆಯ್ಕೆಗೊಂಡಿರುವ “ರಾಮಾಯಣದೊಳಗೊಂದಿಷ್ಟು ರಾಮಾಯಣ”, ತೌಲನಿಕ ಅಧ್ಯಯನ ಕೃತಿಯನ್ನೊಂದನ್ನು  ಆಯ್ಕೆ ಮಾಡಿಕೊಂಡಿರುವೆನು. ಹೀಗೆ ಹೆಸರು ಮಾಡಿರುವ ಕೃತಿಯನ್ನು ಕೈಗೆತ್ತಿಕೊಳ್ಳುವುದು ಸಾಹಸವೇ ಸರಿ, ಆದರೂ ಧೈರ್ಯ ಮಾಡಿದ್ದೇನೆ. ಏಕೆಂದರೆ ಅವರ “ಸೀಗೆ ನಾಡ ಸಿರಿ” ಪುಸ್ತಕನ್ನು ಸೀಗೆನಾಡಿನವರಾದ ಶ್ರೀಯುತ ಹರ್ಷ ಅನಿಲ್ ಅವರು ನನಗೆ ನೀಡಿದಾಗ ಆ ಪುಸ್ತಕದ ಕರ್ತೃವಿನ ಪರಿಚಯವೇ ಇರಲಿಲ್ಲ, ಆದರೂ ಪುಸ್ತಕ ಓದಿದ ನಂತರ, ಶ್ರೀಯುತ  ಚನ್ನೇಗೌಡರು ಖುದ್ದಾಗಿ ಸ್ಥಳ ಸಂದರ್ಶನ ಮಾಡಿ ದಾಖಲಿಸಿದ್ದ ಪುರಾಣ ಪ್ರಸಿದ್ಧ ಋಷಿಶೃಂಗ ಗಿರಿ ಅಂದರೆ ೨೬  ಊರುಗಳನ್ನು ಒಳಗೊಂಡ ಸೀಗೆನಾಡಿನ ಹಲವಾರು ಪುರಾತತ್ವ ಕುರುಹುಗಳಿರುವ  ಸ್ಥಳಗಳಲ್ಲಿ ಕೆಲವಾದರೂ ವೀಕ್ಷಣೆ ಮಾಡಲೇಬೇಕೆಂಬ ಪ್ರೇರಣೆ ನೀಡಿತ್ತು ಅವರ ಪುಸ್ತಕ., ಅದರಂತೆ ಹರ್ಷ ಅವರೇ ಆ ಅವಕಾಶವನ್ನೂ  ಒದಗಿಸಿದ್ದರು. ನಂತರ ಸಾಹಿತ್ಯ ವೇದಿಕೆಗಳ ಒಡನಾಟದಿಂದಾಗಿ ಅವರ ಪರಿಚಯವಾದಾಗಲೂ, ೪೦ಕ್ಕೂ ಅಧಿಕ  ಪುಸ್ತಕ ಬಿಡುಗಡೆಗೊಳಿಸಿರುವ ಮೇರು ಸಾಹಿತಿ “ಸೀಗೆ ನಾಡಿನ ಸಿರಿ” ಪುಸ್ತಕದ ಕೃತಿಕಾರರೂ ಶ್ರೀ ಚನ್ನೇಗೌಡರೇ ಆಗಿದ್ದಾರೆ ಎಂಬುದೂ ತಿಳಿಯಲಿಲ್ಲ. ಏಕೆಂದರೆ ಅವರ ನುಡಿ  ಹಾವಭಾವ ಮೂಡಲ ಸೀಮೆ ಪಡಿ ಅಚ್ಚು, ಅಷ್ಟೇ ಸೀದಾ ಸಾದಾ ವ್ಯಕ್ತಿ. ಹಾಗಾಗಿ ನಿವೃತ್ತ ಬ್ಯಾಂಕ್ ಉದ್ಯೋಗಿ, ಮೇರು ಜ್ಞಾನದಾಹಿ ಎಂಬುದು ಯಾವ ಕೋನದಿಂದಲೂ ಅನಿಸಲಿಲ್ಲ. ಎಲೆ ಮರೆ ಕಾಯಿಯಂತೆ ಸಾಹಿತ್ಯ ಸಹಕಾರ ಸೇವೆಯನ್ನೂ ನಿಷ್ಕಲ್ಮಶವಾಗಿ ಮಾಡುತ್ತಿದ್ದ ಇವರು ಆನಂತರದಲ್ಲಿ ತಮ್ಮ ಇಳಿವಯಸ್ಸಿನ ಸಾಹಿತ್ಯ ಸಾಧನೆಗಳಿಂದಲೇ ನನ್ನ ಗಮನ ಸೆಳೆದರು. ಬ್ಯಾಂಕ್ ಉದ್ಯೋಗಿಯಾಗಿ, ಉಪನ್ಯಾಸಕನಂತೆ, ಸಂಶೋಧಕನಂತೆ, ರಂಗಕರ್ಮಿ ಯಾಗಿಯೂ, ದಾಖಲೆಗಳೊಂದಿಗೆ ಸಾಹಿತ್ಯ ರಚಿಸುವ ಸಾಹಿತಿ ವಿವಿಧ ಕ್ಷೇತ್ರಗಳಲ್ಲಿ ಖುದ್ದಾಗಿ ಇಳಿದು ಕಾರ್ಯ ನಿರ್ವಹಿಸಿರುವುದು ನಿಜಕ್ಕೂ ಅಪೂರ್ವ ಸಾಧನೆ ಎಂದು ಆಗ ನನಗನಿಸಿತ್ತು. ಇವರನ್ನು ಪರಿಚಯ ಮಾಡಿಕೊಂಡಾಗ ಮೊದಲ ಮಾರ್ಗದರ್ಶನ ಸಿಕ್ಕಿದ್ದು ಯಾರ ಕಣ್ಣಿಗೂ ಬೀಳದಂತಿರುವ ಕಲಾಭವನದ ಗ್ರಂಥಾಲಯದಲ್ಲಿನ ಕೆಲ ಸುಪ್ರಸಿದ್ಧ ಪುಸ್ತಕಗಳು ಅಂತ್ಯಂತ ಕಡಿಮೆ ದರದಲ್ಲಿ ಖರೀದಿಸುವಂತಾದಾಗ. ತದನಂತರ ಶ್ರೀಯುತರು ಬರೆದ ಪುಸ್ತಕಗಳಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ಪುಸ್ತಕಗಳು ನನ್ನ ಕೈ ಸೇರಿದ್ದವು. ಆ ಎಲ್ಲ ಪುಸ್ತಕಗಳನ್ನು ಓದಿ ಮುಗಿಸಿದಾಗ ಪ್ರತಿಯೊಂದು ಪುಸ್ತಕದಲ್ಲಿ ಹಲವಾರು ಹೊಸ ಹೊಸ ಮಾಹಿತಿಗಳಿರುವುದನ್ನು ಗುರುತಿಸಿಕೊಂಡು ಅವುಗಳನ್ನು   ಕಲೆಹಾಕಿದ್ದೇನೆ. ಇವರ ಪುಸ್ತಕಗಳಲ್ಲಿ ದೊರೆತ ಕೆಲವೊಂದು ಐತಿಹಾಸಿಕ ಮಾಹಿತಿಗಳು ನನ್ನ ಬರವಣಿಗೆಗೆ ಪೂರಕ ದಾಖಲೆ ಒದಗಿಸಿದ್ದರಿಂದ ಕೆಲವು ಪುಸ್ತಕಗಳ ಹೆಸರು ಗ್ರಂಥ ಋಣವಾಗಿ ನನ್ನ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. ನನ್ನ ಮೊದಲ ಪುಸ್ತಕ ಪ್ರಕಾಶನದಲ್ಲಿ ಆಗಿದ್ದ ಬಹುದೊಡ್ಡ ಲೋಪದೋಷಗಳನ್ನು ಸರಿಪಡಿಸಿ ಕೊಟ್ಟಂತವರು ಕೂಡ ಶ್ರೀಯುತ ಚನ್ನೇಗೌಡರಾಗಿದ್ದಾರೆ. ಆ ಕಾರಣದಿಂದಲೇ ಅವರು ನನ್ನ ಪಾಲಿನ ಮೊಟ್ಟಮೊದಲ ಕನ್ನಡ ಸಾಹಿತ್ಯಿಕ ಮಾರ್ಗದರ್ಶಕರೂ ಕೂಡ ಆಗಿದ್ದಾರೆ.
     ಹೀಗೆ ನಾನೆಂದೂ ಮರೆಯಲಾಗದ ಹಿರಿಯ ಚೇತನ ತಮ್ಮ  ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆಯೋಜಿಸಿದ್ದ ಮನೆಮನೆ ಕವಿಗೋಷ್ಠಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದಾಗ ಅವರ ಕಾರ್ಯಕ್ರಮ ಆಯೋಜನಾ ಚಾತುರ್ಯವೂ ಅನಾವರಣಗೊಂಡಿತು. ಆನಂತರವಂತು “ರಾಮಾಯಣದೊಳಗೊಂದಷ್ಟು ರಾಮಾಯಣ” ಕೃತಿ ಮತ್ತಷ್ಟು ಎಲ್ಲರ ಗಮನ ಸೆಳೆದಿದೆ, ‌ಹೆಸರು ಮಾಡಿದೆ. ಈ ಕೃತಿಯ ಹೆಸರೇ ಹೇಳುವಂತೆ ರಾಮಾಯಣ ಎಂಬ ಮಹಾಕಾವ್ಯ ತನ್ನೊಳಗೆ ಅಡಗಿಸಿಕೊಂಡಿರುವ ಅದೆಷ್ಟೋ  ತಾರ್ಕಿಕ ಅಂಶಗಳನ್ನು ಅಂದರೆ ಆಡುಮಾತಿನಲ್ಲಿ ಉಚ್ಚರಿಸುವಂತೆ, ಅದರಲ್ಲೂ ಕಿರಿಕಿರಿಗಳಿಗೆ ಪರ್ಯಾಯ ಪದವಾಗಿ ಈ ರಾಮಾಯಣ ಎಂಬ ನುಡಿ  ಬಳಸಿಕೊಳ್ಳುವಂತೆ, ಈ ಕೃತಿಯಲ್ಲಿಯೂ ರಾಮಾಯಣ ಹೆಸರನ್ನು ಹೊತ್ತಿಗೆ ಹೊತ್ತುಕೊಂಡಿದೆ. ಮುಖ್ಯವಾಗಿ ಪುಸ್ತಕದಲ್ಲಿರುವ ವಿಚಾರಗಳಿಗೆ ಒಪ್ಪುವಂತಹ ಸೂಕ್ತ ಹೆಸರನ್ನೇ ಅವರು ಮಿಳಿತಗೊಳಿಸಿದ್ದಾರೆ. ಹಾಗೆಂದು ಈ ಕೃತಿ ಯಾವುದೇ ಜಾತಿ, ಧರ್ಮ, ನಂಬಿಕೆಗಳನ್ನು ಅಥವ ಯಾರದ್ದೋ ಓಲೈಕೆಗಾಗಿ ದೂಷಣೆ ಮಾಡಿರುವಂತಹ ಕೃತಿಯಂತೂ ಅಲ್ಲವೇ ಅಲ್ಲ. ಇದರಲ್ಲಿ ಈಗಾಗಲೇ ವಿಶ್ವಾದ್ಯಂತ ದಾಖಲೆಯಾಗಿರುವ, ಅನೇಕ ಧರ್ಮಗಳಲ್ಲಿ ಕಂಡು ಬರುವ, ಮೂರು ಸಾವಿರಕ್ಕೂ ಅಧಿಕವಾಗಿ ರಚಿತವಾಗಿರುವ ರಾಮಾಯಣಗಳಲ್ಲಿನ, ಹಲವು ಆಯಾಮಗಳಲ್ಲಿ ಬರೆಯಲಾಗಿರುವಂತಹ  ರಾಮಾಯಣ ಕೃತಿ, ಕಾವ್ಯಗಳಿಂದ ಆಯ್ದ, ಕೆಲವು ಕಥಾಹಂದರಗಳಲ್ಲಿರುವ ದ್ವಂದ್ವ, ಗೊಂದಲಗಳನ್ನು ಹಾಗೂ ಅದೆಷ್ಟೋ ಜನರಿಗೇ ಗೊತ್ತೇ ಇರದ, ಮೂಲ ರಾಮಾಯಣದೊಳಗೇ ಕಂಡು ಬರುವ ಮತ್ತು ಇತರೆ  ರಾಮಾಯಣ ಪಾತ್ರಗಳ ಸಾಕಷ್ಟು ತಾಮಸಿಕತೆಯನ್ನು ದಾಖಲೆ ಸಮೇತ ಉಲ್ಲೇಖಿಸಿ ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ತೌಲನಿಕ ಅಧ್ಯಯನವನ್ನೂ ನಡೆಸಿದ್ದಾರೆ. ಇದರಿಂದಾಗಿ ಶ್ರೀಯುತರು ದೇವರು, ನಂಬಿಕೆಗಳ ಬಗ್ಗೆ ತಮ್ಮ ಮೂಗಿನ ನೇರ ಮಾತನಾಡುವಂತಹ ಜನರ ಆಲೋಚನೆಗಳನ್ನು ವಿಸ್ತರಿಸುವ  ಕೆಲಸ ಮಾಡಿದ್ದಾರೆ ಎಂದರೆ ತಪ್ಪಾಗದು. ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುವ ಮೊದಲು ಇತಿಹಾಸ ಅಧ್ಯಯನ ನಡೆಸುತ್ತಿದ್ದಾಗ ರಾಮಾಯಣ ಕುರಿತಾದ ಅನೇಕ ಗೊಂದಲಗಳು ನನ್ನನ್ನೂ ಕಾಡಿದ್ದವು. ಅದರಂತೆ ರಾಮ್ ಅಥವ ರಾಮ್’ಸೆಸ್ ಎನ್ನುವ ಹೆಸರು ಈಜಿಪ್ಟ್ ಶಾಸನಗಳಲ್ಲಿಯೂ  ಸಾಮಾನ್ಯವೆಂಬಂತೆ ಹೆಚ್ಚಿನ  ಸಂಖ್ಯೆಯಲ್ಲಿ ಕಂಡು ಬಂದಿರುವ ಹೆಸರಾಗಿದ್ದು, ಅಲ್ಲಿಯೂ ಅದು ಸಾಮರಸ್ಯ ಮತ್ತು ಸಮತೋಲನ ಕಾಯ್ದುಕೊಳ್ಳುವ ರಾಜ ಹಾಗು ದೇವರೆಂಬಂತೆ ಚಾರಿತ್ರಿಕವಾಗಿ ದಾಖಲಿಸಿರುವ ಹೆಸರು ಕೂಡ ಆಗಿದೆ. ಹಾಗಾಗಿ ರಾಮಾಯಣ ಮಹಾಕಾವ್ಯದ ಕಥಾರೂಪ ಸೃಷ್ಟಿ ಆಗಿರುವಂತಹದ್ದರ ಆಳ ಮಾತ್ರವಲ್ಲದೆ ಅದು ಅಲೌಕಿಕತೆಯನ್ನು ಅತಿಯಾಗಿ ನಂಬುವ ಮಧ್ಯಪ್ರಾಚ್ಯದಿಂದ ವಲಸೆ ಬಂದವರ ಚರಿತ್ರೆ ಇರಬಹುದೇ ಎಂಬ ಸಾಕಷ್ಟು ಪ್ರಶ್ನೆಗಳನ್ನು ಈಗಾಗಲೆ ಹುಟ್ಟುಹಾಕಿದೆ. ಮಾತ್ರವಲ್ಲದೆ ಶ್ರೀಯುತ ಚನ್ನೇಗೌಡರು ಉಲ್ಲೇಖಿಸಿರುವ ಮೂರು ಸಾವಿರ ರಾಮಾಯಣಗಳ ಸೃಷ್ಟಿ ನಳಂದಾ, ತಕ್ಷಶಿಲಾ, ಉಜೈಯಿನಿಯಂತಹ ಕ್ರಿ.ಪೂದಿಂದಲೂ ಇದ್ದಂತಹ  ಜಗದ್ವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಅಂದಿನ ಕಾಲದ ಅಧ್ಯಯನದ ಭಾಗವಾಗಿ ಬೆಳೆದಿರುವಂತಹದಿರಬಹುದೇ ಎಂಬ ಶಂಕೆಯನ್ನೂ ಮೂಡಿಸುತ್ತದೆ. ಆದ್ದರಿಂದಲೇ  ರಾಮಾಯಣ ಮಹಾಭಾರತದಂತಹ ಕಾವ್ಯಗಳು ಇಷ್ಟು ಪ್ರಸಿದ್ಧಿ ಪಡೆದಿರುವುದಲ್ಲದೆ ಎಲ್ಲಾ ಧರ್ಮಗಳ ಕೃತಿಗಳಲ್ಲೂ ರಾಮಾಯಣದ  ಕುರುಹುಗಳು ಸಿಗುತ್ತಿರಬಹುದೇ ಎಂಬ ಪ್ರಶ್ನೆಯೂ ಇದೆ. ಸೀತೆಯ ಅಗ್ನಿ ಪ್ರವೇಶ ಪ್ರಸಂಗದಲ್ಲಿ ರಾಮನೂ ಅಗ್ನಿಪ್ರವೇಶ ಮಾಡುವ ಕಥೆ, ಜೈನರಾಮಾಯಣದಲ್ಲಿ ರಾವಣ ಜೈನನಾಗಿರುವುದು, ಹೀಗೆ “ಖೋಟಾನ್” ರಾಮಾಯಣದಲ್ಲಿ ವಾಲಿ ಸುಗ್ರೀವನ ಬದಲು ನಂದ ಮತ್ತು ಸುಗ್ರೀವನ ನಡುವೆ ದ್ವೇಷ ಸಾಧನೆ ಏರ್ಪಟ್ಟಾಗ ರಾಮ ಮೋಸದಿಂದ ಸುಗ್ರೀವನ ವಧೆಗೊಳಿಸಿ ನಂದನಿಗಿದ್ದ, ಕಲ್ಲನ್ನು ನೀರಿಗೆ ಎಸೆದಾಗ ಕಲ್ಲು ನೀರಿನಲ್ಲಿ ತೇಲುತ್ತಿದ್ದ ವರವನ್ನು ರಾಮ ಬಳಸಿಕೊಂಡಿರುವ ಕಥಾನಕ ಬೆಳೆದಿರುವಂತಹದ್ದೆಲ್ಲವೂ ದೇಶದ  ವಿವಿಧ ಭಾಷಾ ಸಾಹಿತ್ಯ ವಲಯದಲ್ಲಿ ಕಾಣಸಿಗುತ್ತದೆ! ಹೀಗೆ ಮೂಲ ಕಥಾ ಆಶಯದೊಂದಿಗೆ ಸಾಗುವ ಎಲ್ಲಾ ರಾಮಾಯಣಗಳು ಕವಲೊಡೆದು ಸೃಷ್ಟಿಯಾದ  ಕಥೆಗಳಲ್ಲಿನ ವೈರುಧ್ಯಗಳನ್ನೇ ಆಯ್ದು  ಶ್ರೀಯುತ ಚನ್ನೇಗೌಡರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಅತಿಯಾಗಿ ಗಮನ ಸೆಳೆಯುವ ಮಂಡೋದರಿ ರಾಮನ ತಂದೆ ದಶರಥನ ಹೆಂಡತಿ! ಪಾತ್ರ, ಆಕೆಯ ಗರ್ಭಧಾರಣೆ ರಹಸ್ಯದಂತಹ  ಆಶ್ಚರ್ಯಕರ ದೃಷ್ಟಾಂತ, ಕೆಲವೊಂದು ಇಂದಿನ ಸ್ಥಳ ನಡಾವಳಿಗಳಿಗೆ ತಾಳೆಯಾಗುತ್ತಲೂ ಕಾಣಸಿಗುವ ವಿಷಯಗಳು ನೈಜತೆಯಿಂದ ಕಥೆ ಆಯಿತೆ ಅಥವಾ ಕಥೆಯಿಂದ ನೈಜತೆ ಮೂಡಿತೆ ಎಂದು ಯೋಚಿಸುವಂತೆಯೂ ಮಾಡಿಸುತ್ತದೆ. ಹಾಗೆ ಕಾಕಸುರ ಮತ್ತು ಮಹಾಭಾರತದ ಕರ್ಣನ ಕಥಾ ಹಂದರ ಒಂದಕ್ಕೊಂದು ಸ್ವಾಮ್ಯತೆಯಿಂದಿರುವ ವಿಚಾರ ಒಂದೇ ಕಾಲಘಟ್ಟದಲ್ಲಿ ಇವೆಲ್ಲವೂ ರಚಿಸಲ್ಪಟ್ಟಿತೇ ಎಂಬ ಸಂದೇಹವನ್ನೂ ಹುಟ್ಟು ಹಾಕಿಸುತ್ತದೆ. ಅದರಂತೆ  ರಾಮಾಯಣದಲ್ಲಿ ದಕ್ಷಿಣ ಭಾರತದಲ್ಲಿ ನಾಗರಿಕ ಜನರಿದ್ದ ಅಸ್ತಿತ್ವದ ಕುರುಹುಗಳೇ ಸಿಗುವುದಿಲ್ಲ. ಆದರೆ ಬಿಳಿ ವಾನರ ಮತ್ತು ಕಪ್ಪು ಜಾಂಬವಂತರ ಉಲ್ಲೇಖಗಳು ವರ್ಣವ್ಯವಸ್ಥೆಯ ಛಾಯೆ ನೆನಪಿಸುತ್ತದೆ. ಏಕೆಂದರೆ ವಾನರ ಪದವನ್ನು ಬಿಡಿಸಿದರೆ ವನ+ನರ=ವಾನರವಾಗುತ್ತದೆ, ಕಪ್ಪು ಕರಡಿ ಇಲ್ಲಿದ್ದ ಕಪ್ಪು ಜನರನ್ನು ತೋರಿಸಿದರೆ, ಶಂಬೂಕನಂತಹ ಶೂದ್ರರನ್ನೇ ಹೆಚ್ಚಾಗಿ ಕೊಂದಿರುವುದು, ಕೆಳವರ್ಗದ ಘಟಾನುಘಟಿ ಜನರು ಅಥವಾ ನಾಯಕರನ್ನು ಕೊಂದ ರಾಜರನ್ನೇ ದೇವರೆಂದು ಆರಾಧಿಸಿರುವುದು, ಇಲ್ಲಿಯವರನ್ನು ರಾಕ್ಷಸರೆಂದೇ ತೋರಿಸಿರುವುದೆಲ್ಲವೂ ಒಂದು ಕಾಲದ ಉತ್ತರ ಕಾವ್ಯದ ಸೂಕ್ಮಾತಿ ಸೂಕ್ಷ್ಮ  ವಿಷಯಗಳೆಡೆ ಬೊಟ್ಟು  ಮಾಡಿಸುತ್ತದೆ. ಆ ನಿಟ್ಟಿನಲ್ಲಿ  ಶ್ರೀಯುತ ಚನ್ನೇಗೌಡರ “ರಾಮಾಯಣದೊಳಗೊಂದಿಷ್ಟು ರಾಮಾಯಣ” ಕೃತಿಯು ಪ್ರತೀ  ಓದುಗನನ್ನು ತಾರ್ಕಿಕ ಚಿಂತನೆಗೆ ಒಳಪಡಿಸುವ ಮತ್ತು ಒಬ್ಬ ಸಂಶೋಧಕ ಅಥವ ಕ್ರಿಯಾಶೀಲ ವ್ಯಕ್ತಿ ಯಾವುದನ್ನಾದರೂ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕಾದ ಆಲೋಚನಾ ದೃಷ್ಟಿಕೋನವನ್ನು ವಿಸ್ತರಿಸುವ ಕೆಲಸವನ್ನು ನಿಸ್ಸಂದೇಹವಾಗಿ ಮಾಡಿಸುವಂತಿದೆ.
 ಕೊನೆಯದಾಗಿ ನಾನು ಇವರ ಇಂತಹ ಅದ್ವಿತೀಯವೆನಿಸುವ  ಸಾಹಿತ್ಯ ಕೃಷಿಗೆ ಅಭಿನಂದನೆ ಸಲ್ಲಿಸುತ್ತಾ ಇವರಿಂದ ಮಗದಷ್ಟು ವಿಭಿನ್ನ, ವಿಶೇಷವೆನಿಸುವಂತಹ ಕೃತಿಗಳು ಅನಾವರಣಗೊಳ್ಳಲಿ ಎಂಬ ಹಾರೈಕೆಗಳೊಂದಿಗೆ ಹೃದಯಾಳದಿಂದ ಶುಭ ಕೋರಿಕೊಳ್ಳುತ್ತಿದ್ದೇನೆ.



ಕೊ//ಮಾಳೇಟಿರ ಸೀತಮ್ಮ ವಿವೇಕ್
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನಗಾರ್ತಿ ಮತ್ತು ಲೇಖಕಿ.
ಹಾಸನ.
mvseetha78@gmail.com

ಪುಸ್ತಕ ಬೇಕಿದ್ದಲ್ಲಿ ಸಂಪರ್ಕಿಸಿ:

ಶ್ರೀ. ಎನ್ ಎಲ್ ಚನ್ನೇಗೌಡ
ಕಾವ್ಯಶ್ರೀ, ಹೇಮಾವತಿ ನಗರ
ಹಾಸನ-573201

ದೂ.ಸಂ: 9448741133

ಚಾಣಕ್ಯ ಪ್ರಕಾಶನ:
“ರಾಮಾಯಣದೊಳಗೊಂದಿಷ್ಟು ರಾಮಾಯಣ”
ಬೆಲೆ 125/-


ಮಾಳೇಟಿರ ಸೀತಮ್ಮ ವಿವೇಕ್

Leave a Reply

Back To Top