ಕೋಳಿ ಮತ್ತು …..!ಪ್ರಬಂಧ, ಭಾರತಿ ಅಶೋಕ್

ಲಲಿತ ಪ್ರಬಂಧ

ಕೋಳಿ ಮತ್ತು …..!

ಭಾರತಿ ಅಶೋಕ್

ಮೊದಲೆಲ್ಲಾ ಮನೆಗಳಲ್ಲಿ ಸಾಕು ಪ್ರಾಣಿಗಳನ್ನು ಹೆಚ್ಚೆಚ್ಚು ಸಾಕುತ್ತಿದ್ದರು. ನಾಯಿ, ಬೆಕ್ಕು ಕೋಳಿ ಹೀಗೆ ಮನೆಯ ಎಲ್ಲ ಸದಸ್ಯರೂ ಪ್ರಾಣಿ ಪಕ್ಷಿಗಳ ಬಗ್ಗೆ ಆದರತೆ ಪ್ರೀತಿ ವಾತ್ಸಲ್ಯ ಹೊಂದಿರುತ್ತಿದ್ದರು. ಆದರೆ ಬದುಕಿನ ಅನಿವಾರ್ಯತೆ ಹುಟ್ಟಿದೂರು ಬಿಟ್ಟು ಪಟ್ಟಣ ಸೇರಿದಾಗ ಇದೆಲ್ಲಾ ಸಾಹಸದ ಕೆಲಸವೇ ಸರಿ, ಕಾರಣ ಪಟ್ಟಣಗಳಲ್ಲಿ ಹಳ್ಳಿಗಳಂತೆ ಪ್ರಾಣಿಗಳನ್ನು ಸಾಕಲು ಸಾಧ್ಯವಿರದು. ಅದಕ್ಕೆ ಹಲವಾರು ಕಾರಣಗಳು ಇವೆ. ಬಾಡಿಗೆ ಮನೆಗಳಲ್ಲಿ ಅದೆಲ್ಲಾ ಆಗದ ಕೆಲಸ.ಹಾಗಾಗಿ ಪ್ರಾಣಿ ಪಕ್ಷಿಗಳ ಬಾಂಧವ್ಯ ಕಡಿದು ಕೊಂಡಂತಾಗಿರುವುದು ಸಹಜವೆ. ಆದರೆ ನಮ್ಮ ಮನೆಯಲ್ಲಿ ಸ್ವಲ್ಪ ಭಿನ್ನ, ಆಗಾಗ ಮನೆಯವರು ಮಕ್ಕಳ ಜೊತೆ ಸೇರಿ ಇಂತಹ ಸಾಹಸಕ್ಕೆ ಕೈ ಹಾಕುತ್ತಿರುತ್ತಾರೆ. ಕೋಳಿ ಮರಿಯನ್ನು ತಂದು ಅದನ್ನು ಮಗುವಿನಂತೆ ಸಾಕುವುದು, ಲಾಲನೆ, ಪಾಲನೆ ಮಾಡುವುದು ನಡೆದೆ ಇರುತ್ತೆ, ಹಾಗೆ ಅದು ದೊಡ್ಡದಾಗಿ ಬೆಕ್ಕಿನ ಬಾಯಿಗೆ ಆಹಾರವಾಗುವುದು, ಅದರಿಂದ ಮಕ್ಕಳಿಬ್ಬರೂ ಮಂಕಾಗುವುದು ಇದ್ದೆ ಇರುತ್ತೆ.
ಇತ್ತೀಚಿಗೆ ಈ ಕೋರೋನಾ, ಲಾಕ್ ಡೌನ್ ಮಕ್ಕಳನ್ನು ಶಾಲೆಯಿಂದ ದೂರ ಮಾಡಿ ಅವರನ್ನು ಸಂಪೂರ್ಣವಾಗಿ ಮೊಬೈಲ್,ಟೆಲೆವಿಷನ್ ನಂತಹ ಮಾದ್ಯಮಗಳು ಹಿಡಿದುಕೊಂಡು ಅವರ ಸೃಜನಾತ್ಮಕತೆಯನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ಆದರೂ ಅದರಿಂದ ಕೆಲ ಹೊತ್ತಾದರೂ ಹೊರ ಬಂದು ಮಕ್ಕಳು ಒಂದಷ್ಟು ಜೀವ ಪ್ರೀತಿಯನ್ನು, ದಯೆ,ವಾತ್ಸಲ್ಯವನ್ನು ಬೆಳೆಸಿಕೊತ್ತಾರೆಂದರೆ ನಿಜಕ್ಕೂ ನೆಮ್ಮದಿಯ ಸಂಗತಿ. ಹೀಗೆ ನನ್ನ ಕಿರಿಯ ಮಗ ತನ್ನ ಸ್ನೇಹಿತರಿಂದ ಒಂದು ಕೋಳಿ ಮರಿಯನ್ನು ಪಡೆದು ತಂದು ನನ್ನ ಸಂಗಾತಿ, ಕಿರಿಯ ಮಗ ಮತ್ತು ಹಿರಿಯವನು ಮೂರೂ ಜನರು ಅದರ ಕಾಳಜಿ‌, ರಕ್ಷಣೆ ಮಾಡುವುದು ಮತ್ತೇ ಪ್ರಾರಂಭವಾಗಿ ಅವರ ಆ ಪ್ರಾಣಿ ಪ್ರೀತಿಗೆ ಬೆರಗಾಗಿದ್ದೇನೆ.


ಲಾಕ್ ಡೌನ್ ಕಾರಣ ಸದಾ ಮೇಲ್ಮನೆಯಲ್ಲಿಯೇ ಕಾಲ ಕಳೆಯುವ ಮಕ್ಕಳು ಅದರಲ್ಲಿಯೂ ಹಿರಿಯ ಮಗ ತಾನು ಇರುವ ಕೋಣೆ ಒಳಗೆ ಆ ಕೋಳಿಯನ್ನು ಇರಿಸಿಕೊಂಡು. ಅದಕ್ಕೆ ಬೇಕಾದ ರಾಗಿ ಅಕ್ಕಿ ಜೋಳ ಕಾಳು ಕಡಿಗಳನ್ನು ಹಾಕುತ್ತಾ ಅದರ ಪೋಷಣೆ ಮಾಡುವುದರ ಜೊತ ಜೊತೆಗೆ ಅದರ ಬೆಳವಣಿಗೆಯನ್ನು ತುಂಬಾ ಕುತೂಹಲದಿಂದ ಗಮನಿಸುತ್ತಿರುವುದನ್ನು ಕಂಡಿರುವೆ. ಅದು ಇನ್ನು ಬೆಳೆದೇ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ಪಶು ವೈದ್ಯರ ಬಳಿಗೂ ಕರೆದೊಯ್ದು ತೋರಿಸಿದ್ದಾನೆ.ಅದಕ್ಕೆ ಬದಾಮಿ,ಕಡಲೆ ಬೀಜ ತಾವು ತಿನ್ನುವ ಆಹಾರದ ಜೊತೆಗೆ ತಿನ್ನಿಸುತ್ತಿದ್ದರು. ಕೋಳಿ ಈಗ ಬೆಳೆದು ಸ್ವಲ್ಪ‌ ದೊಡ್ಡದಾಗಿದೆ. ಅವನ ಕೊಣೆಯ ತುಂಬೆಲ್ಲ ಓಡಾಡುವುದು.‌ ಅಷ್ಟೇ ಅಲ್ಲ ಅವನು ಓದಲು ಕುಳಿತರೆ ಮೈ ಮೇಲೆಲ್ಲಾ ಮೈದಾನವೆಂಬತೆ ಓಡಾಡುವುದು.ಅಪ್ಪ ಮಕ್ಕಳು ಮೂರು ಜನ ಸೇರಿ ಆಗಾಗ ಕೋಳಿಗೆ ಶಾಂಪೂ ಹಾಕಿ ಬಿಸಿ ನೀರಿನಿಂದ ಸ್ನಾನ‌ ಮಾಡಿಸುವುದು ನೋಡಿದರೆ ಮನೆಯ ಸದಸ್ಯಳೆಂಬಂತೆ ಭಾಸವಾಗುತ್ತದೆ
ಹೀಗಿರುವಾಗ ನನಗೆ ತಿಳಿಯದೇ ಮಕ್ಕಳಿಬ್ಬರೂ ಕೋಳಿಗೆ ಕೆಲವು ದಿನಗಳಿಂದೆಯಷ್ಟೇ ಹುಂಜದ ಸಂಘ ಮಾಡಿಸಿ ತಂದಿದ್ದಾರೆ‌. ಆದರೆ‌…ಮಕ್ಕಳಲ್ಲಿ ಈ ಬಗೆಯ ಆಲೋಚನೆಗೆ, ನಿರ್ಧಾರಕ್ಕೆ ನಿಜಕ್ಕೂ ದಿಗ್ಭ್ರಮೆಗೊಂಡಿರುವೆ. ಆ ಕಾರಣವಾಗೇ ನಾಲ್ಕೈದು ದಿನಗಳಿಂದ ಕೋಳಿ ಮೊಟ್ಟೆ ಇಡುತ್ತಿದೆ. ಆ ಸಂದರ್ಭದಲ್ಲಿ ಅದರ ನರಳಾಟ ಕೂಗಾಟ ಕೇಳಿಸಿಕೊಂಡ ಮಕ್ಕಳು ಒದ್ದಾಡ್ತಾ ಇರೋದನ್ನು ಕಂಡ್ರೆ ನಿಜಕ್ಕು ಮನಸ್ಸು ವ್ಯಾಕುಲಗೊಳ್ಳುತ್ತದೆ.ಒಂದಿನ ಮೊಟ್ಟೆ ಇಡದ ಕಾರಣ, “ಅಮ್ಮಾ, ಯಾಕೆ ಮೊಟ್ಟೆ ಇಡ್ಲಿಲ್ಲ ಕೋಳಿ?’ ಎಂದು ಹುಬ್ಬು ಗಂಟು ಹಾಕುವರು.ಅಷ್ಟಕ್ಜೆ ಮುಗಿಯಲಿಲ್ಲ” ಪಾಪ ಮೊಟ್ಟೆ ಹಾಕ್ತಿರೊದ್ರಿಂದ ಎಷ್ಟು ಸೊರಗಿದೆ ನೋಡಮ್ಮ ಪಾಪ,ಎಷ್ಟು ಕೆಂಪಗಿದ್ದ ಕೋಳಿ ಮುಖ ಬೆಳ್ಳಗಾಗಿದೆ” ಅಂದಾಗ ನಿಜಕ್ಕೂ ನನಗೆ ಒಳಗೊಳಗೆ ನಗು ಬರುವುದು,ಜೊತೆಗೆ ಅವರ ಆ ಯೋಚನೆಗೆ ಕಾಳಜಿಗೆ ಹೆಮ್ಮೆ ಅನ್ನಿಸುವುದು.ಕೆಳಗೆ ಬಿಟ್ಟರೆ ತಪ್ಪಿಸಿಕೊಂಡು ಹೋಗುವುದೆಂಬ ಆತಂಕದಿಂದ ಮಗ ತನ್ನ ಹಾಲುಗಲ್ಲದ ಮಗುವನ್ನು ಎತ್ತಿಕೊಂಡ ಹಾಗೆ ಎದೆಗವುಚಿ ಕೆಳಗಿಳಿಯುವುದು ಮೇಲೇರುವುದು ಮಾಡುವನು. ಆ ಕೋಳಿಯೂ‌ ಹಾಗೆ ಇದೆ ನಾನು ಕರೆದರೆ ಬರದು. ಅತ್ತೆ ಸೊಸೆಯ ಹಾಗೆ. ಸಂಗಾತಿ ಮಕ್ಕಳು ಕರೆದರೆ ಬಿಂಕ ಮಾಡುತ್ತ ನಿಧಾನಕ್ಕೆ ಓಡಿ ಹೋಗುವುದು. ಹಾಗೆ ಒಂದು ಕೋಳಿಯೂ ಮನೆಯ ಸದಸ್ಯಳಂತೆ ಆಪ್ತವಾಗುವುದನ್ನು ನೋಡುತ್ತಾ ಕಣ್ತುಂಬಿಕೊಳ್ಳುವೆ


ಭಾರತಿ ಅಶೋಕ್

Leave a Reply

Back To Top