ಕಾರ್ಮಿಕ ದಿನದ ವಿಶೇಷ ಲೇಖನ

ಕಾರ್ಮಿಕರಿಲ್ಲದ  ಕಾರ್ಮಿಕ ದಿನಾಚರಣೆ

ಗಣೇಶ್ ಭಟ್ ಶಿರಸಿ

ಕಾರ್ಮಿಕರಿಲ್ಲದ  ಕಾರ್ಮಿಕ ದಿನಾಚರಣೆ

ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ! | May 1 ...

             ಕೆಂಪು ಧ್ವಜಗಳ ಹಾರಾಟ,  ಜನರ ಮೆರವಣ ಗೆಗಳಿಲ್ಲದ  ಕಾರ್ಮಿಕ ದಿನಾಚರಣೆ  ನಡೆಯುತ್ತಿದೆ. ಎಂದಿನಂತೆ  ಸರ್ಕಾರ ರಜೆ   ಘೋಷಿಸಿದ್ದರೂ, ರಜೆಯನ್ನು  ಅನುಭವಿಸಲಾರದ ಸ್ಥಿತಿಗೆ ಜಗತ್ತಿನಾದ್ಯಂತ ಕಾರ್ಮಿಕರು ತಲ್ಪಿದ್ದಾರೆ.

           ಮೇ 1 ನೇ ತಾರೀಕಿನಂದು ಕಾರ್ಮಿಕ ದಿನ ಆಚರಿಸಲು ಕಾರಣವಾದ  ಘಟನೆ ನಡೆದಿದ್ದು 1886 ರಲ್ಲಿ.  ಅಮೇರಿಕಾವು ಅದಾಗಲೇ ಆರ್ಥಿಕ ಹಿಂಜರಿತದಿಂದ ಜರ್ಝರಿತವಾಗಿತ್ತು. 1882 ರಿಂದಲೂ ಮಂದಗತಿಯಲ್ಲಿದ್ದ  ಆರ್ಥಿಕ ಸ್ಥಿತಿಯಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದರು.  ದುಡಿಮೆಯ ಅವಧಿಗೆ  ಮಿತಿ  ಇರಲಿಲ್ಲ. ದಿನಕ್ಕೆ 10 ರಿಂದ 12 ತಾಸು ಕೂಡ ಕೆಲಸ ಮಾಡಬೇಕಾಗುತ್ತಿತ್ತು.

            ಇಂತಹ  ದಿನಗಳಲ್ಲಿ  ಕಾರ್ಮಿಕ ಸಂಘಟನೆಗಳು ದಿನದ  ದುಡಿಮೆಯನ್ನು 8 ತಾಸುಗಳಿಗೆ  ಸೀಮಿತಗೊಳಿಸುವಂತೆ ಒತ್ತಾಯಿಸುತ್ತಿದ್ದವು.  ಕಾರ್ಖಾನೆಗಳ, ಉದ್ದಿಮೆಗಳ ಮಾಲೀಕರು  ಇದಕ್ಕೆ    ಒಪ್ಪದಿದ್ದಾಗ  ವಸಂತ ಕಾಲದ ಪ್ರಾರಂಭವಾದ 1 ಮೇ 1886 ರಿಂದ  ದಿನಕ್ಕೆ  8 ತಾಸು ಮಾತ್ರ ಕೆಲಸ  ಮಾಡಬೇಕೆಂದು ಕಾರ್ಮಿಕ ಸಂಘಟನೆಗಳು ತಮ್ಮ  ಸದಸ್ಯರಿಗೆ ಕರೆ ನೀಡಿದವು.

         ಆದರೆ ಮಾಲೀಕರ ಒಡೆದಾಳುವ ನೀತಿಯಿಂದಾಗಿ ಕಾರ್ಮಿಕ  ಸಂಘಟನೆಗಳ ಕೆಲವು  ಸದಸ್ಯರು ಕೆಲಸಕ್ಕೆ  ಹಾಜರಾಗಿ ಎಂದಿನಂತೆ 10 ತಾಸುಗಳ ದುಡಿಮೆಗೆ  ಮುಂದಾದರು. ಇದನ್ನು  ಪ್ರತಿಭಟಿಸಲು ಉಳಿದ ಕಾರ್ಮಿಕರು  ಫ್ಯಾಕ್ಟರಿಗಳ  ಹೊರಗಡೆ  ಜಮಾಯಿಸಿದರು.

        ಮೇ 3 ನೇ ತಾರೀಖಿನಂದು ಪ್ರತಿಭಟನಾ ನಿರತ ಕಾರ್ಮಿಕರ ಸಂಖ್ಯೆಯಲ್ಲಿ  ಹೆಚ್ಚಳವಾಗಿ  ನೂಕುನುಗ್ಗಲು ಉಂಟಾಯಿತು.  ಇದನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಕೆಲವರು ಸಾವನ್ನಪ್ಪಿದರು.  ಅವರ ಶವವನ್ನಿಟ್ಟು ಪ್ರತಿಭಟನೆ   ಮುಂದುವರಿಯಿತು.

  ಮೇ 4 ರಂದು ಪ್ರತಿಭಟನೆ  ನಡೆಯುತ್ತಿದ್ದ  ಸ್ಥಳದಲ್ಲಿ ಬಾಂಬ್ ಸ್ಪೋಟಗೊಂಡಿತು.  ಕೆಲವು ಪೋಲೀಸರು ಹಾಗೂ ನಾಗರಿಕರು ಸತ್ತರು ಹಾಗೂ ಹಲವರಿಗೆ  ಗಾಯಗಳಾದವು.  ಪೋಲೀಸ್ ಬಲದಿಂದ ಚಳುವಳಿಯನ್ನು  ಹತ್ತಿಕ್ಕಲಾಯಿತು.  ಬಾಂಬ್ ಸ್ಪೋಟಕ್ಕೆ ಕಾರ್ಮಿಕರೇ ಕಾರಣವೆಂದು  ಹಲವರನ್ನು  ಬಂಧಿಸಿ, ಕೆಲವರಿಗೆ  ಶಿಕ್ಷೆ ವಿಧಿಸಲಾಯಿತು.

        ಈ ಘಟನೆ  ನಡೆದಾಗ ಅಲ್ಲಿ ವಲಸೆ ಬಂದ ಕಾರ್ಮಿಕರ ಸಂಖ್ಯೆ  ತುಂಬಾ ದೊಡ್ಡದಿತ್ತು.  ಜರ್ಮನಿ, ಮೆಕ್ಸಿಕೋಗಳಿಂದ  ಬಂದ ಕಾರ್ಮಿಕರನ್ನು  ಸ್ಥಳೀಯರು ಇಷ್ಟಪಡುತ್ತಿರಲಿಲ್ಲ.  ಕಾರ್ಮಿಕರ  ನಡೆಗೆ ವಿರೋಧ  ಹಾಗೂ   ಪೋಲೀಸರ ದಬ್ಬಾಳಿಕೆಗೆ  ಸ್ಥಳೀಯ ಉದ್ದಿಮೆದಾರರು,  ವ್ಯಾಪಾರಿಗಳು, ಸಾರ್ವಜನಿಕರಿಂದ  ಭಾರೀ ಬೆಂಬಲ ವ್ಯಕ್ತವಾಯಿತು.  ಮುಂದೆ ಎಷ್ಟೋ ವರ್ಷಗಳ ನಂತರ ಈ  ಘಟನೆ  ನಡೆದ ಚಿಕಾಗೋ ನಗರದ ಹೇ ಮಾರ್ಕೆಟ್  ಚೌಕದಲ್ಲಿ  ಕಾರ್ಮಿಕರಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಯಿತು.

         ಅಂದಿನ ಘಟನೆಗೂ ಇಂದು ನಡೆಯುತ್ತಿರುವ ಸಂಗತಿಗಳಿಗೂ ತುಂಬಾ ಸಾಮ್ಯತೆ ಇದೆ. ಲಾಕ್‍ಡೌನ್  ನಿಂದಾಗಿ ಕಾರ್ಮಿಕರ ಮರು ವಲಸೆ ನಡೆಯುತ್ತಿದೆ. ದುಡಿಯುವ  ಊರಿನಲ್ಲಿ  ಅವರು ವಲಸೆಗಾರರು, ಸ್ವಂತ ಊರಿಗೆ  ಹೋದಾಗ ಪರ- ಊರಿನಿಂದ ಕಷ್ಟಕಾಲದಲ್ಲಿ  ಓಡಿಬಂದು ತಮಗೆ ತೊಂದರೆ ನೀಡುವರೆಂಬ ಭಯ. ಇಂತಹ   ಮಾನಸಿಕ ತುಮುಲಗಳ ನಡುವೆ, ನಿರುದ್ಯೋಗದ ಸಮಸ್ಯೆ. ಅವೈಜ್ಞಾನಿಕವಾಗಿ, ಪೂರ್ವಯೋಜಿತವಲ್ಲದ ರೀತಿಯಲ್ಲಿ  ಅನುಷ್ಠಾನಗೊಂಡ ಲಾಕ್‍ಡೌನ್‍ನಿಂದ  ಉದ್ಯೋಗ ಕಳೆದುಕೊಂಡವರಿಗೆ  ನಗರಗಳಿಗೆ  ವಾಪಸ್ಸು  ಹೋಗುವ  ಧೈರ್ಯ ಬರುತ್ತಿಲ್ಲ.  ಇನ್ನು ಯಾವಾಗ ದಿಢೀರ್ ಎಂದು ಲಾಕ್‍ಡೌನ್  ಬಂದೀತೆಂಬ  ಆತಂಕ. ನಗರಗಳಲ್ಲೇ ಉಳಿದವರಿಗೆ   ಉದ್ಯೋಗ ಮುಂದುವರಿಕೆಯಾದೀತೆಂಬ ಭರವಸೆಯೂ ಇಲ್ಲ. 

       ಈ ಮರುವಲಸೆಯ ಪರ್ವ ದೇಶದ  ಆಂತರಿಕ  ಸಮಸ್ಯೆ ಮಾತ್ರವಲ್ಲ;  ಅಂತರಾಷ್ಟ್ರೀಯ ಸಮಸ್ಯೆಯೂ ಹೌದು. ದೇಶದ  ದೊಡ್ಡ ನಗರಗಳಿಂದ  ಹಳ್ಳಿಗಳಿಗೆ ವಾಪಸ್ಸಾಗುತ್ತಿರುವಂತೆಯೇ, ವಿವಿಧ ದೇಶಗಳಿಂದಲೂ ಭಾರತಕ್ಕೆ  ಮರಳಲು ಜನ ತುದಿಗಾಲಲ್ಲಿ  ನಿಂತಿದ್ದಾರೆ.  ಲಾಕ್‍ಡೌನ್  ತೆರವಿನ ನಂತರ   ಈ ಪ್ರಮಾಣ ಹೆಚ್ಚಲಿದೆ.  ಮರು ವಲಸಿಗರಲ್ಲಿ  ದೈಹಿಕ ಶ್ರಮಿಕರು ಮಾತ್ರವಲ್ಲ; ಬೌದ್ಧಿಕ  ಶ್ರಮಿಕರೂ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ.

  ಈ ಮರುವಲಸೆಯ ಮಹಾಪರ್ವವನ್ನು  ಎದುರಿಸಲು ಭಾರತ ಸರ್ಕಾರದ ಬಳಿ ಯಾವುದೇ ಯೋಚನೆ ಅಥವಾ ಯೋಜನೆಗಳಿಲ್ಲ. ಈಗ ಅಸ್ತಿತ್ವದಲ್ಲಿರುವ ನರೇಗಾ ಮುಂತಾದ ಯೋಜನೆಗಳಿಂದ  ದೊಡ್ಡ ಪ್ರಮಾಣದ  ಯಾವ ಪ್ರಯೋಜನವೂ ಆಗದು.  ನಿರುದ್ಯೋಗ ಭತ್ತೆ ನೀಡಿಕೆ ಭಾರತದಲ್ಲಿ  ಆಗದ ವಿಷಯ. ಉಚಿತ ಆಹಾರ ನೀಡಿಕೆಯನ್ನು ಎಷ್ಟು ದಿನ ಮುಂದುವರಿಸಲು ಸಾಧ್ಯ?

     ಈ ಸಮಸ್ಯೆಗೆ ಪರಿಹಾರವೆಂದರೆ ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ  ಸ್ಥಾನಿಕವಾಗಿ  ಉದ್ದಿಮೆಗಳ ಸ್ಥಾಪನೆ.  ಸ್ಥಳೀಯವಾಗಿ ಲಭ್ಯವಿರುವ  ಸಂಪನ್ಮೂಲಗಳನ್ನು ಆಧರಿಸಿ,  ಬ್ಲಾಕ್  ಮಟ್ಟದಲ್ಲಿ  ಯೋಜನೆಯನ್ನು ರೂಪಿಸಬೇಕು.  ಬ್ಲಾಕ್‍ನ  ನಿವಾಸಿಗಳೆಲ್ಲರಿಗೂ ಫಲಪ್ರದ  ಉದ್ಯೋಗಾವಕಾಶ  ಸೃಷ್ಟಿಸುವ  ಗುರಿಯಿಂದ  ಆರ್ಥಿಕ ಚಟುವಟಿಕೆಗಳು  ಹಾಗೂ  ಅಭಿವೃದ್ಧಿ ಕಾರ್ಯಗಳು  ರೂಪಿತವಾಗಬೇಕು.  ಅಗತ್ಯವಿರುವಲ್ಲಿ  ಕೆಲಸದ  ಅವಧಿಯನ್ನು ದಿನಕ್ಕೆ 3 ಅಥವಾ 4 ತಾಸುಗಳಿಗೆ  ಇಳಿಸಬೇಕು.

   ವಿಕೇಂದ್ರೀಕೃತ ಅರ್ಥನೀತಿಯ  ಅಳವಡಿಕೆ,  ಸಮತೋಲಿತ ಆರ್ಥಿಕ ಚಟುವಟಿಕೆ  ( ಯಾವ ಕ್ಷೇತ್ರದ ಮೇಲೆ ಜನಸಂಖ್ಯೆಯ ಎಷ್ಟು ಪ್ರಮಾಣದ  ಜನ ಅವಲಂಬಿತರಾಗಿರಬೇಕೆಂಬುದು) 100% ಉದ್ಯೋಗಾವಕಾಶ, ಬ್ಲಾಕ್ ಮಟ್ಟದ ಯೋಜನಾ ನಿರೂಪಣೆ  ( ತಳಮಟ್ಟದಿಂದ  ಉನ್ನತ ಮಟ್ಟದ   ಯೋಜನಾ ನಿರೂಪಣಾ ಪದ್ಧತಿ) ಗಳಿಂದ  ಇಂದು ಉದ್ಭವವಾಗುವ  ನಿರುದ್ಯೋಗ ಹಾಗೂ ಆರ್ಥಿಕ  ಸಮಸ್ಯೆಗೆ ಪರಿಹಾರ ಸಾಧ್ಯ.

    ಚೀನಾವನ್ನು  ಬಿಟ್ಟೋಡಿ ಬರುವ  ಕಂಪನಿಗಳಿಂದ  ಉದ್ಯೋಗ ಸೃಷ್ಟಿಯಾಗಲಿದೆ,  ಭಾರತದ ಶ್ರೀಮಂತ   ಕಂಪನಿಗಳು   ನಿರುದ್ಯೋಗಿಗಳ ನೆರವಿಗೆ  ಬರುತ್ತವೆಂಬ ಭ್ರಮೆಯಲ್ಲೇ  ಮುಳುಗಿದ್ದರೆ ಬರಲಿರುವ   ಆರ್ಥಿಕ  ಕುಸಿತ,   ಉಂಟಾಗಲಿರುವ ಸಾಮಾಜಿಕ  ಕ್ಷೋಭೆಯನ್ನು, ಆಗಬಹುದಾದ  ಅನಾಹುತ ತಡೆಯಲು ಅಧಿಕಾರದಲ್ಲಿರುವವರಿಂದ  ಸಾಧ್ಯವಾಗದು.

********

Leave a Reply

Back To Top