ಕವಿತೆ
ನಾಲ್ಕು ಶಬ್ದ
ಮರಾಠಿ ಮೂಲ: ನಾರಾಯಣ ಸುರ್ವೆ
ಕನ್ನಡಕ್ಕೆ: ಕಮಲಾಕರ ಕಡವೆ

ನಾಲ್ಕು ಶಬ್ದ

ಪ್ರತಿದಿನದ ರೊಟ್ಟಿಯ ಪ್ರಶ್ನೆ ಪ್ರತಿದಿನದ್ದೂ ಆಗಿದೆ
ಒಮ್ಮೊಮ್ಮೆ ಗಿರಣಿ ಹೊರಗೆ, ಒಮ್ಮೊಮ್ಮೆ ಒಳಗೆ
ಕಾರ್ಮಿಕನು ನಾನು, ಹರಿತ ಕತ್ತಿಯಂತವನು
ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ
ಸ್ವಲ್ಪ ಸಹಿಸಿದೆ, ನೋಡಿದೆ, ಯತ್ನಿಸಿದೆ ನಾನು
ನನ್ನ ಜಗತ್ತಿನದೇ ಆದ ಪರಿಮಳವೂ ಅಲ್ಲಿದೆ
ಆಗೀಗ ತಪ್ಪಿದೆ, ಸೋತೆ, ಹೊಸತನ್ನು ಕಲಿತೆ
ಹೇಗೆ ಬಾಳುತಿರುವೇನೋ ಹಾಗೇ ನನ್ನ ಮಾತಿದೆ
ರೊಟ್ಟಿ ಬೇಕು ಸರಿಯೇ, ಮತ್ತೂ ಏನೋ ಬೇಕಿದೆ
ಅದಕ್ಕೆ ಈ ಜಗತ್ತು ರೂಪಾಯಿ ಮಾಡಿ ಕುಂತಿದೆ
ಇಲ್ಲಿಯೇ ಶಬ್ದಗಳ ಕೈಲಿ ನಾನು ಹೂವ ಹಿಡಿಸಿದೆ
ಇಲ್ಲಿಯೇ ಶಬ್ದಗಳ ಕೈಲಿ ನಾನು ಶಸ್ತ್ರ ಹಿಡಿಸಿದೆ
ಒಬ್ಬನೇ ಬಂದಿಲ್ಲ ನಾನು ಯುಗವೇ ಜೊತೆಗಿದೆ
ಹುಷಾರಿರಿ, ತೂಫಾನು ಇದೋ ಶುರುವಾಗಿದೆ
ಕಾರ್ಮಿಕನು ನಾನು ಹರಿತ ಕತ್ತಿಯಂತವನು
ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ
********