ದಿ//ಆರ್. ಆರ್.ನಾಯ್ಕ.ಕನ್ನಡಕ್ಕೊಂದು ಅಳಿಲು ಸೇವೆ-ನಾಗರಾಜ ಬಿ.ನಾಯ್ಕ

ವ್ಯಕ್ತಿ ಪರಿಚಯ

ದಿ//ಆರ್. ಆರ್.ನಾಯ್ಕ.

ಕನ್ನಡಕ್ಕೊಂದು ಅಳಿಲು ಸೇವೆ

ನಾಗರಾಜ ಬಿ.ನಾಯ್ಕ

ಸುಮಾರು 30 ವರ್ಷಗಳ ಹಿಂದಿನ ಮಾತು. ಅವರು ಕನ್ನಡ ಶಾಲೆಯ ಶಿಕ್ಷಕರು. ಪೇಟೆಯಿಂದ ದೂರವಿರುವ ಹಳ್ಳಿಯ ಶಾಲೆಯಲ್ಲಿ ಶಿಕ್ಷಣದ ಬೆಳಕು ಹಚ್ಚಿದವರು. ಸದೃಢ ದೇಹ ಅದಕ್ಕೆ ತಕ್ಕನಾದ ರಾಜ ಗಾಂಭೀರ್ಯ, ತೂಕದ ಮಾತು, ಅಗಾಧ ಶಬ್ದ ಜ್ಞಾನ. ಮಾತಿನಲ್ಲಿ ವಿನಯ ತುಂಬಿದ ವಿವೇಕ. ಹಲವು ಸದ್ಗುಣಗಳ ಮೆಟ್ಟಿಲುಗಳ ಮೇಲೆ ಸಾಗಿ ಬದುಕು ಕಟ್ಟಿದವರು ಅವರು. ತಮ್ಮ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಹಣತೆಗಳನ್ನ ಹಚ್ಚಿ ಅವರ ಬಾಳಿಗೆ ಬೆಳಕಾದವರು. ಕನ್ನಡ ರಾಜ್ಯೋತ್ಸವದ ಈ ದಿನಗಳಲ್ಲಿ ಅವರೇಕೆ ನೆನಪಾದರು ಎನ್ನುವ ಪ್ರಶ್ನೆ ಕಾಡಿದ ಎರಡು ದಿನಗಳ ಮುಂಚೆ ಅವರ ಭಾವಚಿತ್ರವನ್ನು ನೋಡಿದ ನೆನಪು. ಆ ನೆನಪುಗಳಲ್ಲಿ ಹಿಂದಕ್ಕೆ ಸಾಗಿದಾಗ ಸಿಕ್ಕ ಅವರ ಕನ್ನಡ ಪ್ರೀತಿಯ ಬಗ್ಗೆ ಹೇಳಬೇಕೆನಿಸಿತು‌. ಆಗೊಮ್ಮೆ  ಬೆಳಗಿನ ಬಸ್ಸಿನಲ್ಲಿ ಬರುವ ದಿನಪತ್ರಿಕೆಗಳು ಬಂದು ಬೆರಳೆಣಿಕೆಯ ಹಲವರ ಮನೆ ಸೇರುತ್ತಿತ್ತು. ಅವರಲ್ಲಿ ಈ ಗುರುಗಳ ಮನೆಗೂ ಒಂದು ದಿನಪತ್ರಿಕೆ ಬಂದಿರುತ್ತಿತ್ತು. ಕಡಿಮೆ ಸಂಬಳದ ತುಂಬಿದ ಮನೆ ಮಂದಿಯ ಜವಾಬ್ದಾರಿ. ಜೊತೆಗೆ ಇತರ ಹಿರಿತನದ ಜವಾಬ್ದಾರಿಗಳು ಅವರಿಗಿತ್ತು. ಆದರೆ ದಿನಪತ್ರಿಕೆ ಮಾತ್ರ ಒಂದು ದಿನವೂ ತಪ್ಪದೇ ಅವರ ಮನೆಗೆ ಬರುತ್ತಿತ್ತು. ಕನ್ನಡ ಪತ್ರಿಕೆಯೆಂದರೆ ಅವರಿಗೆ ಒಂದು ಉಸಿರಾಗಿತ್ತು. ಓದು ಆರಾಧಿಸುವ ಹವ್ಯಾಸವಾಗಿತ್ತು. ಅವರು ಪತ್ರಿಕೆ ಓದಿ ಮುಗಿಸುವವರೆಗೆ ನಿಶ್ಯಬ್ದ ಮನೆ ಮಾಡಿರುತ್ತಿತ್ತು. ಆರಂಭದಿಂದ ಕೊನೆಯವರೆಗೂ ಪತ್ರಿಕೆ ಓದಿ ಮುಗಿಸಿದರೆ ಅದೊಂದು ಸಮಾಧಾನದ ನಿಟ್ಟುಸಿರು ಅವರಿಗೆ. ಕನ್ನಡದ ಅಕ್ಷರಗಳ ಓದಿ ಅರ್ಥೈಸಿಕೊಳ್ಳುವ ಪರಿ ಅವರದ್ದು ತುಂಬಾ ವಿಶೇಷವಾಗಿತ್ತು. ಅವರು ಓದುವ ಶೈಲಿಯಲ್ಲಿ ಆಪ್ತತೆ ಇತ್ತು. ಕನ್ನಡ ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಪೂರ್ಣತೆಯಿತ್ತು. ವೈಚಾರಿಕತೆಯ ಅರ್ಥವಂತಿಕೆಗೆ ವೇದಿಕೆ ಆಗುವ ಮಾತಿನ ಅವತರಣಿಕೆಗಳಿತ್ತು.  ದಿನದ ವಾಸ್ತವಗಳಿಗೆ ಸದಾ ಪರಿಚಿತರಾಗಿ ಉಳಿಯುವ ಭರವಸೆ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಮಾಡುವ ಕೆಲಸದ ಬಗ್ಗೆ ಅವರಿಗೆ ಶ್ರೇಷ್ಠತೆ ಇತ್ತು. ಒಂದು ಭಾಷೆ ಜ್ಞಾನವಾಗಿ ಉಳಿಯುವ ಹಂಬಲವಿತ್ತು. ತನ್ನ ಕುಟುಂಬವನ್ನು ಎಂತಹ ಕಷ್ಟದಲ್ಲಿಯೂ ನಿರ್ವಹಿಸುವ ಸಾಮರ್ಥ್ಯ ಇತ್ತು. ಅವರು ಓದಿ ಇಟ್ಟ ಮೇಲೆ ಸುಮ್ಮನೆ ಪತ್ರಿಕೆ ಇದ್ದಲ್ಲಿಗೆ ಸಾಗಿ ಅದನ್ನು ಎತ್ತಿಕೊಂಡು ನಾವು ಓದಲು ತೊಡಗಿದರೆ ಒಂದು ಓದಿನ ಸಮಾಧಾನ ನಮಗೆ ಆಗುತ್ತಿತ್ತು. ಒಂದಿಷ್ಟು ಚಿತ್ರಗಳ ನೋಡಿ ಆದಷ್ಟು ಬೇಗ ಪುಟ ತಿರುಗಿಸಿ ಬಿಟ್ಟರೆ ಓದಿ ಮುಗಿಯುತ್ತೆ ಎನ್ನುವ ಆಶಯ ನಮ್ಮದು. ಅಲ್ಲೆಲ್ಲೋ ದೂರದಲ್ಲಿ ನಿಂತು ನಾವು ಓದಿದ್ದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು ಆ ಸಮಯಕ್ಕೆ ಹತ್ತಿರ ಬಂದು ಜಗದ ವಿಚಿತ್ರಗಳನ್ನು ಓದಲು ತೋರಿಸುತ್ತಿದ್ದರು. ಪದಗಳನ್ನು ಓದಿ ಹೇಳುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಶಬ್ದಗಳನ್ನು ಓದಲು ಹೇಳುತ್ತಿದ್ದರು. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸೂಚಿಸುವ ಪ್ರೀತಿಯ ಮಾತುಗಳು ಅವರಲ್ಲಿತ್ತು. ಕರುಣೆಯನ್ನ, ಬದುಕನ್ನ, ಅಂತ:ಕರಣವನ್ನು ತೆರೆದು ತೋರಿಸುತ್ತಿದ್ದರು. ಅಷ್ಟೇ ಅಲ್ಲ ರಜೆಯ ಸಂದರ್ಭದಲ್ಲಿ ಖಾಯಂ ಅತಿಥಿಯಾದ ನಮಗೆ ಅವರ ಮನೆಯಲ್ಲಿ ವಾರಕ್ಕೊಮ್ಮೆ 15 ದಿನಕ್ಕೊಮ್ಮೆ ಪೇಟೆಗೆ ಹೋದಾಗ ತರುತ್ತಿದ್ದ ಪಾಕ್ಷಿಕ ಪತ್ರಿಕೆಗಳು ಓದಲು ಕಾದಿರುತ್ತಿದ್ದವು. ಅಲ್ಲಿರುತ್ತಿದ್ದ ಚಿತ್ರಗಳು, ಕಥೆಗಳು ನಮ್ಮ ಓದಿನ ವಿಷಯವಾಗಿತ್ತು. ಅವರಿಗಿರುವ ಕಷ್ಟದ ಜೀವನದ ನಡುವೆ ಅವರು ತರುತ್ತಿದ್ದ ಪತ್ರಿಕೆಗಳು ನಮಗೆ ಓದುವ ಹೊಸ ರುಚಿಯನ್ನ ಹತ್ತಿಸುತ್ತಿದ್ದವು. ‘ಈ ಬಾರಿ ಹೊಸದು ವಾರಪತ್ರಿಕೆ ಬಂದಿದೆ’ ಎಂದು ಅವರು ಹೊಸ ಪತ್ರಿಕೆ ತೆರೆದು ತೋರಿಸುತ್ತಿದ್ದರೆ ನಾವೆಲ್ಲ ಓಡಿ ಬಂದು ಅದನ್ನು ನೋಡಿ ಖುಷಿಪಡುತ್ತಿದ್ದುದು ಎಂದಿಗೂ ನಮ್ಮ ನೆನಪುಗಳಲ್ಲಿ  ಶಾಶ್ವತವಾಗಿ ಜಾಗ್ರತವಾಗಿದೆ . ಎಲ್ಲವುಗಳ ಆಚೆ ಅವರಲ್ಲಿನ ಕನ್ನಡ ಪ್ರೇಮ ಮಾತ್ರ ಹೆಮ್ಮೆ ಪಡುವಂಥದ್ದು. ಗೌರವಿಸುವಂತದ್ದು. ನಾವು ಓದಲೆಂದೇ ಪತ್ರಿಕೆ ತರುವ ಕಾಳಜಿ ಕಳಕಳಿಯ ಕನ್ನಡದ ಪ್ರೇಮ ಅವರದ್ದು. ಮತ್ತೆ ಜೊತೆಗೆ ಶ್ರಮ ಕೂಡ ಅವರಂತೆ. ಮಕ್ಕಳು ಓದಬೇಕು. ಕಥೆ, ಕವನ, ವಿಜ್ಞಾನದ ಕುತೂಹಲಕಾರಿ ವಿಷಯಗಳು, ವ್ಯಂಗ್ಯ ಚಿತ್ರಗಳು, ಪದಬಂಧಗಳು, ಚಿತ್ರ ವೈಚಿತ್ರಗಳ, ಕಲೆ ,ಸಾಹಿತ್ಯ, ಇತಿಹಾಸ ಪರಿಚಯಿಸುವ ಲೇಖನಗಳನ್ನು ಮಕ್ಕಳಿಗೆ ತೋರಿಸಬೇಕು. ಓದಿಸಬೇಕು. ಒಂದು ಮಣ್ಣಿನ ನೀರಿನ ಭಾಷೆಯ ಸೊಬಗನ್ನು ಅದರ ಹಿರಿತನವನ್ನು ನೆಲದ ಒಡಲನ್ನು ತೋರಿಸಬೇಕು ಎಂಬ ಮಹಾದಾಸೆ ಅವರದಾಗಿತ್ತು. ಓದಿದ್ದು ಸುಲಭವಾಗಿ ಅರ್ಥವಾಗುವಂತಿರಬೇಕು. ಅರಗಿಸಿಕೊಳ್ಳುವಂತಿರಬೇಕು. ಊರಿಗೆ ಸಮಾಜಕ್ಕೆ ಉಪಕಾರಿಯಾಗುವಂತೆ ಇರಬೇಕು ಎಂಬ ಗಟ್ಟಿತನದ ನಿಲುವು ಅವರದಾಗಿತ್ತು. ಆ ಮಹೋದ್ದೇಶ ಅವರ ಪತ್ರಿಕೆ ತರುವ ಕಾಯಕದ ಹಿಂದಿರುವ ಆಶಯವಾಗಿತ್ತು. ಜೊತೆಗೆ ವೃತ್ತಿ ಬದುಕಿಗೆ ಬೇಕಾದ ಓದಿನ ಶ್ರೀಮಂತಿಕೆಯ ಮೂಲವೂ ಆಗಿತ್ತು. ಕನ್ನಡದ ಕವಿಗಳ, ಕಾವ್ಯಗಳ, ಕಥೆಗಳ ರೂಪಕಗಳಾಗಿ ಅವರ  ಪಾಠಗಳು ನಿಂತಿರುತ್ತಿದ್ದವು. ಕಾಯಕ ಪ್ರೀತಿಯ ಜೊತೆಗೆ ಕನ್ನಡ ಉಳಿಸುವ ಬೆಳೆಸುವ ಜೊತೆಗೆ ಒಂದು ಸದೃಢ ಸಮಾಜ ನಿರ್ಮಾಣ ಅವರ ಸದ್ದಿಲ್ಲದ ಕಾಯಕದ ಗುರಿಯಾಗಿತ್ತು. ಕನ್ನಡದ ಅಂತರಂಗದಲ್ಲಿ ಸಾಹಿತ್ಯ ಮೂಲ ಸ್ವಭಾವವಾದರೆ ಅದು ಬದುಕುವ ಸಂಯಮವನ್ನು ಆರಾಧಿಸುವ ಅಂತ:ಕರಣವನ್ನು ತಂದು ನೆಲೆ ಮಾಡುತ್ತದೆ. ಭಾಷೆ, ಮಣ್ಣು, ನಾಡಿನ ಕುರಿತಾದ ತಿಳುವಳಿ಻ಕೆ ಒಂದು ಭವಿಷ್ಯವನ್ನು ಕಾಯುವ, ಬೆಳೆಸುವ, ಉಳಿಸುವ ನಿರಂತರತೆಯನ್ನು ಎಷ್ಟೋ ತಲೆಮಾರಿಗೆ ಮುಂದುವರಿಸುತ್ತದೆ ಎಂಬ ಮುಂದಾಲೋಚನೆ ಅವರದಾಗಿತ್ತು. ಚಿಕ್ಕವರಾಗಿದ್ದ ನಮಗೆ ಆಗ ಅದು ಸಾಮಾನ್ಯ ಸಹಜ ವಿಚಾರ ಅನಿಸುತ್ತಿತ್ತು.  ಆದರೆ ಇಂದು ಅವಲೋಕನ ಮಾಡಿದರೆ ಅದೊಂದು ಮಹತ್ಕಾರ್ಯ ಎನಿಸುತ್ತದೆ.  ಆಗ ನಾಡಿನ ಹಿರಿಮೆ, ಘನತೆ, ಶ್ರೇಷ್ಠತೆ ನಮಗೆ ಅರ್ಥವಾಗುತ್ತದೆ. ಹೃದಯಕ್ಕೆ ಹತ್ತಿರವಾದ ಮಾತುಗಳನ್ನು ವ್ಯಕ್ತಿತ್ವವನ್ನು ರೂಪಿಸುತ್ತದೆ. ಬದುಕಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಾಗಿ ಧೈರ್ಯವನ್ನ ತಂದುಕೊಡುತ್ತದೆ. ಅಂತಹ  ನಿಷ್ಠೆಯಿಂದ ಕಾಯಕ ಮಾಡಿದ ಶಿಕ್ಷಕರ ದೊಡ್ಡ ಸಂಖ್ಯೆ ನಮ್ಮ ಎದುರಿಗಿದೆ.  ಕನ್ನಡದ ಮೇಲಿನ ಅಭಿಮಾನ, ಮುಂದಾಲೋಚನೆ, ಭಾಷೆಯನ್ನು ಅರಿಯುವ, ಪರಿಚಯಿಸುವ ಮುಂದಿನ ತಲೆಮಾರಿಗೆ ದಾಟಿಸುವ ಹಿಂದಿನ ತಲೆಮಾರಿನ ಕಾಳಜಿ ಹಾಗೂ ಜವಾಬ್ದಾರಿ ನಮಗೆ ಎಂದೆಂದಿಗೂ ಮಾದರಿ ಎನಿಸುತ್ತದೆ. ಎಲ್ಲಿದ್ದರೂ ನಾವು ಕನ್ನಡವನ್ನು ಪ್ರೀತಿಸೋಣ. ಪುಟ್ಟ ಪುಟ್ಟ ಮನಸ್ಸುಗಳಲ್ಲಿ ಕನ್ನಡದ ಅಭಿಮಾನವನ್ನು ಹೆಚ್ಚಿಸೋಣ. ಕನ್ನಡದ ಕಥೆ ,ಕಾವ್ಯ, ಸಾಹಿತ್ಯಗಳ ಸಿರಿತನಗಳ ಪರಿಚಯಿಸಿ ಕನ್ನಡಕ್ಕೊಂದು ಅಳಿಲುಸೇವೆ ಮಾಡೋಣ. ಕನ್ನಡ ಭಾಷೆ ಚಂದದ ಭಾಷೆ ಎಂಬುದು ಸಾರೋಣ. ಅಮ್ಮನ ಭಾಷೆಯನ್ನು ಆಡುತ್ತಾ ಹೃದಯವಂತಿಕೆ, ಸಹೋದರತೆ, ದೃಢ ನಿಲುವು, ಸದಾ ಚೇತನವಾಗುವ ಉಸಿರು ಉಪಕಾರಿಯಾಗುವ ನಡವಳಿಕೆಗಳಿಂದ ಕನ್ನಡದ ಎಳೆಯ ಮನಸ್ಸುಗಳನ್ನು ಕಟ್ಟೋಣ. ಒಳ್ಳೆಯ ಆಚಾರ ವಿಚಾರಗಳನ್ನು ಕಟ್ಟಿ ಬೆಳೆಸಲು ಆಧಾರವಾಗೋಣ. ಅತ್ಯಂತ ಶ್ರೀಮಂತ ಭಾಷೆಯಾದ ಕನ್ನಡವನ್ನು ಅಕ್ಕರೆಯಿಂದ ನಮ್ಮ ಮಕ್ಕಳಿಗೆ ಹೇಳಿ ಕೊಡೋಣ. ಹಿರಿಯರ ಆದರ್ಶಗಳ ಹಿಂಬಾಲಕರಾಗೋಣ. ನಮ್ಮತನವನ್ನು ನಮ್ಮವರ ಒಳ್ಳೆತನವನ್ನು ನಾವೇ ಗುರುತಿಸೋಣ. ಮುಂದಿನ ತಲೆಮಾರಿಗೆ ಒಂದು ಹೊಸ ದಾರಿಯನ್ನು ಹಾಕಿ ಕೊಡೋಣ. ಕನ್ನಡದ ಕಂದಮ್ಮಗಳಲ್ಲಿ ಕನ್ನಡದ ಅಭಿಮಾನ ಬೆಳೆಸೋಣ. ಅವರು ಬದುಕು ಪ್ರೀತಿಸುವಂತೆ ಮಾಡೋಣ. ಸಂಬಂಧಗಳ ಎಳೆಗಳನ್ನು ಜೋಡಿಸುವಂತೆ ಮಾಡೋಣ. ಮಣ್ಣಿನ ಭಾಷೆಯಾದ ಕನ್ನಡವನ್ನು ಕನ್ನಡವಾಗಿ ಉಳಿಸುವ ಪ್ರಯತ್ನವನ್ನು ನಾವು ಮಾಡೋಣ.  ಜಗದೆತ್ತರಕ್ಕೆ ಬೆಳೆಸುವ ಉಳಿಸುವ ಜೊತೆಗೆ ಕನ್ನಡವನ್ನು ಹೃದಯಪೂರ್ವಕವಾಗಿ ಪ್ರೀತಿಸುವ ಮನಸ್ಸು ಸದಾ ನಮ್ಮೆಲ್ಲರದ್ದಾಗಿರಲಿ. ಹಿರಿಯರ ಜನಪದ ನಂಬಿಕೆ, ನಿಷ್ಠೆ, ದೃಢತೆ, ಗಟ್ಟಿತನಗಳಲ್ಲಿ ಉಳಿದ ಆದರ್ಶಗಳ ಪರಿಪಾಲಕರಾಗೋಣ ಎನ್ನುವ ಗುರುವಿನ ಅಂತರಾಳದ ಆತ್ಮಸಾಕ್ಷಿಯ ಮಾತುಗಳ ಜೊತೆ ನಾವು ನಿಲ್ಲೋಣ ……….


ನಾಗರಾಜ ಬಿ.ನಾಯ್ಕ.

4 thoughts on “ದಿ//ಆರ್. ಆರ್.ನಾಯ್ಕ.ಕನ್ನಡಕ್ಕೊಂದು ಅಳಿಲು ಸೇವೆ-ನಾಗರಾಜ ಬಿ.ನಾಯ್ಕ

  1. ಕನ್ನಡದ ಉಳಿವಿಗಾಗಿ ಸೇವೆ ಸಲ್ಲಿಸಿದ, ಅದೆಷ್ಟು ಮಹನೀಯರು, ಎಲೆಯ ಮರೆಯ ಕಾಯಿಯಂತೆ ಇದ್ದಾರೆ. ಅವರ ಅಳಿಲು ಸೇವೆ ಸ್ಮರಣೀಯ. ಕನ್ನಡದ ಉಳಿವಿಗೆ, ಬೆಳವಣಿಗೆಗೆ, ಶಿಕ್ಷಕ ಮಿತ್ರರ ಕೊಡುಗೆ ಅಪಾರ. ಶಿಕ್ಷಕರಾಗಿ ಸ್ಮರಣೀಯ ಸೇವೆ ಸಲ್ಲಿಸಿದ ಆರ್. ಆರ್. ನಾಯ್ಕ ಕೋನಳ್ಳಿ , ಇವರ ಸ್ಮರಣೆ ಅವಿಸ್ಮರಣೀಯ. ಅವರ ಸೇವೆ, ಯುವ ಮನಸ್ಸುಗಳಿಗೆ ಪ್ರೇರಣೆಯಾಗಲಿ.. ಕನ್ನಡ ಎಂದೆಂದಿಗೂ ನಮ್ಮ ಉಸಿರಾಗಲಿ.

    ನಾಗರಾಜ ಜಿ. ಎನ್ ಬಾಡ ಕುಮಟ

    1. ಬಹಳ ಅಮೋಘವಾದ ಲೇಖನ. ಇವರ ಶ್ರದ್ಧೆ ಎತ್ತರದ ಸ್ಥಾನಕ್ಕೆ ಏರಿಸಬಲ್ಲದು.

  2. ನಮ್ಮ ಪಪ್ಪರು(ಮಾವನವರ) ರವರ ಕನ್ನಡದ ಕಕ್ಕುಲತೆಯನ್ನು ಅಕ್ಕರೆಯಿಂದ ಧಾರೆಯೆರೆದ ಪರಿಯನ್ನು ಸರಳ ಮತ್ತು ಸಹಜವಾಗಿ ಪರಿಚಯಿಸಿದ್ದೀರಿ. ಅವರು ಮರೆಯಾಗಿ 7 ವರ್ಷಗಳು ಕಳೆದರೂ ಅದೆಷ್ಟೋ ವಿದ್ಯಾರ್ಥಿಗಳು ಅವರಿನ್ನೂ ಬದುಕಿಯೆ ಇದ್ದಾರೆಂದು ಅವರ ಬಗ್ಗೆ ವಿಚಾರಿಸುವಾಗ ಕಣ್ಣಂಚಲ್ಲಿ ನೀರು ಬರುತ್ತದೆ. ಒಬ್ಬ ಕನ್ನಡ ಶಾಲೆ ಮೇಷ್ಟ್ರು ಹೇಗಿರಬೇಕು ಹಾಗಿದ್ದುಕೊಂಡೆ ತನ್ನ ವಿದ್ಯಾರ್ಥಿಗಳು ಅವರ ಪಾಲಕರು ಅಷ್ಟೇ ಅಲ್ಲ ಅವರ ಕಷ್ಟ ಸುಖಗಳನ್ನೆಲ್ಲ ತಮ್ಮದೆಂದು ಸ್ಪಂದಿಸುತ್ತಾ ಸಾಗಿದ ಗುರೂಜಿಗಳುಅವರು. ಇಂದಿಗೂ ಸಂತೆಗುಳಿ ಸುತ್ತಲಿನ ನೂರಾರು ಮನೆಗಳಲ್ಲಿ ಮತ್ತು ಮನಗಳಲ್ಲಿ ಆರ್.ಆರ್ ನಾಯ್ಕ ಮೇಷ್ಟ್ರು ಅಂದ್ರೇ ಹೆಮ್ಮೆಯಿಂದ ಅಷ್ಟೇ ಪ್ರೀತಿಯಿಂದ ನೆನೆಯುತ್ತಾರೆ. ಬಿಳಿಯ ಅಂಗಿ ಅಷ್ಟೇ ಬಿಳಿಯ ಪಂಚೆ, ಬಾಯ್ತುಂಬ ರಸಗವಳ ಹಾಕಿ ಕೋನಳ್ಳಿಯ ಹಾದಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗುತ್ತಿದ್ದರೆ.. ಎಂಥವರೂ ತಲೆ ಭಾಗಿಸಿ ಹೋಗುತ್ತಿದ್ದ ರೀತಿ ಅವರ ಗೌರವ ವ್ಯಕ್ತಿತ್ವಕ್ಕೊಂದು ಸಾಕ್ಷಿ. ಬದುಕಿನುದ್ದಕ್ಕೂ ಜವಾಬ್ದಾರಿಯುತ ಮನೆಯ ಯಜಮಾನನಾಗಿ , ಪ್ರೀತಿಯ ತಂದೆಯಾಗಿ, ಗೌರವದ ಗುರುವಾಗಿ ಬಾಳಿದ ಅಪ್ಪಟ ಕನ್ನಡ ಶಾಲೆ ಮೇಷ್ಟ್ರ ಕನ್ನಡ ಪ್ರೇಮವನ್ನು ಗುರುತಿಸಿ ಸ್ಮರಿಸಿದ ತಮಗೆ ಧನ್ಯವಾದಗಳು ಕನ್ನಡ ಪ್ರೀತಿಯನ್ನು ಎತ್ತಿ ತೋರಿಸುವ ಸುಂದರ ಬರಹ ತಮ್ಮದು.ಅಭಿಂದನೆಗಳು….

Leave a Reply

Back To Top