ಶ್ರೀವಲ್ಲಿ ಶೇಷಾದ್ರಿ ಕವಿತೆ-ಜೀವದ ಜೀವಗಂಗೆ

ಕಾವ್ಯ ಸಂಗಾತಿ

ಶ್ರೀವಲ್ಲಿ ಶೇಷಾದ್ರಿ

ಜೀವದ ಜೀವಗಂಗೆ

ಕಣ್ಣೀರು ಬತ್ತಿ
ಎದೆಯಾಳ ಬಿಕ್ಕಿ
ಬಿರಿದ ನೆಲ
ಬಾಡಿದೊಡಲು
ತೀರದ ದಾಹವೀ
ತುಂಗಾ ತೀರ

ಹೊಳೆ ದಂಡೆ ಹಸಿರು
ಕರಿಯಾಯ್ತು ಗರಿಕೆ
ತಾಯಾಕಳ ಮೊಲೆ
ಕಚ್ಚಿದೆ ಕರು
ಬರಿದಾದ ಹಾಲಿದುವೆ
ಯಮುನಾ ತೀರ

ಹೂವಾಗೊ ಮುನ್ನ
ಮೊಗ್ಗಲ್ಲೆ ಕಳಚಿದೆ
ಸೌಗಂಧವಿರದು
ಈ ಕೊಳೆತ ಕೂಪ
ಪಾಪ ತೊಳೆಯೆ ಬಾ
ಗಂಗಾ ಸಮೀರ

ಪಾತಾಳ ಪಾವನಿಯ
ಅಂತರಾಳ ಕೊಳ
ಸಾರ ಸುರಿ ಸುರಿದು
ಸುಡಲು ಹಿಂಗಿದೊಡಲು
ಧಗೆ ಬೆಂಗಾವಲು
ಸುರ ಸುಧೆಯೆ ಬಾರೆ ಧರೆಗೆ

ಓ ಅಮೃತ ವರ್ಷೆ
ಹನಿ ಹನಿಯ ಭಿಕ್ಷೆ
ಮಳೆ ತರುತ ಘಳಿಗೆ ಇಳಿದಿಳೆಯೆ ಇಳೆಗೆ ಬಿಗುಮಾನವೇನೆ
ಬರಲಾರೆಯೇನೆ

ತುಸು ಹರುಷ ತಂದವಳೆ ಹೊಸ ಜೀವವಿಟ್ಟವಳೆ
ಹಸಿರೆನ್ನಲೇನ ಉಸಿರೆನ್ನಲೇನೆ

ಮಳೆಯೆನ್ನಲೇನೆ ಇಳೆಎನ್ನಲೇನೆ
ಕನಸ ಕರಗಿಸಿ ಹೊಳೆ ಹಾಸು ಬಾ
ಜೀವದ ಜೀವ ಗಂಗೆ.


ಶ್ರೀವಲ್ಲಿ ಶೇಷಾದ್ರಿ.

Leave a Reply

Back To Top