ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-10
ಅನ್ನದಾತಾ ಸುಖಿಭವ..
ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚಿಟ್ಟರೂ ಅಡುಗೆ ಮನೆಯಲ್ಲಿ ತುಂಬಿಟ್ಟ ಡಬ್ಬಿಗಳು ಖಾಲಿಯಾದಾಗ ಬಾಗಿಲು ತೆಗೆದು ಕಿರಾಣಿ ಅಂಗಡಿಗೆ ಧಾವಿಸುತ್ತೇವೆ. ಸೊಪ್ಪು ತರಕಾರಿ ಎಂಬ ವ್ಯಾಪಾರಿಗಳ ಕೂಗು ಕೇಳುದಾಗ ಕಿಟಕಿ ಬಾಗಿಲನ್ನು ಕೊಂಚ ತೆಗೆದು ಅವರು ತಂದಿರುವ ತರಕಾರಿಯಲ್ಲಿ ನಮಗೆ ಬೇಕಾದದ್ದೇನಾದರೂ ಇದೆಯೇ ನೋಡುತ್ತೇವೆ. ಬೇಕಾದ್ದನ್ನೆಲ್ಲ ಖರೀದಿಸಿ ರುಚಿಕಟ್ಟಾಗಿ ಅಡುಗೆ ಮಾಡಿ ಉಣ್ಣುವಾಗ ನಾವು ಇವುಗಳನ್ನೆಲ್ಲ ಬೆಳೆದ ರೈತರ ಬಾಳು ತಣ್ಣಗಿರಲೆಂದು ಹಾರೈಸುತ್ತೇವೆ…ಬದುಕಿನ ಹಿಂದಿನ ಪುಟಗಳನ್ನು ತಿರುವಿದೆ..
ನಾಲ್ಕು ದಶಕಗಳ ಹಿಂದೆ ಸರಿ ಸುಮಾರು ಎಲ್ಲರೂ ಸಾವಯವ ಕೃಷಿಕರಾಗಿದ್ದರು. ಬೀಜ ಗೊಬ್ಬರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರು. ರೈತರು ಕೂಲಿಕಾರರೊಂದಿಗೆ ಬೆರೆತು ದುಡಿಯುತ್ತಿದ್ದರು. ಕೈಕೆಸರಾದರೆ ಬಾಯಿಗೆ ಮೊಸರು ಎಂಬುದನ್ನು ಅರಿತಿದ್ದರು. ಇರುವ ತೋಟ ಗದ್ದೆಗಳಲ್ಲಿ ವೈವಿಧ್ಯದ ಬೆಳೆ ಬೆಳೆಯುತ್ತಿದ್ದರು. ಆಹಾರ ಭದ್ರತೆಗೆ ಆದ್ಯತೆ ಇತ್ತು. ಜೇನುಕೃಷಿ, ಪಶುಸಂಗೋಪನೆ, ಕುರಿ ಸಾಕಣೆ…ಹೀಗೆ ಉಪಕಸುಬುಗಳಿಗೂ ಆದ್ಯತೆ ನೀಡುತ್ತಿದ್ದರು. ಬೆಳೆದ ಬೆಳೆ ನಿರ್ವಿಷವಾಗಿರುತ್ತಿತ್ತು. ಉಣ್ಣುವವರಿಗೆ ಸತ್ವಯುತ ಆಹಾರವಾಗಿತ್ತು.
ಕ್ರಮೇಣ ಹಸಿರು ಕ್ರಾಂತಿಯ ಪರಿಣಾಮ ರಸಗೊಬ್ಬರಗಳ ಬಳಕೆ, ಹೈಬ್ರೀಡ್ ತಳಿ ಬೀಜಗಳ ಬಳಕೆಯಿಂದ ಹೇರಳ ಬೆಳೆ ಬೆಳೆಯಲಾರಂಭಿಸಿದರು. ಉಪಕಸುಬುಗಳು ಸೊರಗಿದವು. ಬೆಳೆದ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಣೆ ಅನಿವಾರ್ಯ ಎಂಬಂತಾಯಿತು. ರೈತರು ಲಾಭದಾಯಕ ಕೃಷಿಯತ್ತ ಒಲವು ತೋರುವುದು ಹೆಚ್ಚಾದಂತೆ ವಾಣಿಜ್ಯ ಬೆಳೆಗಳು ಜನಪ್ರಿಯವಾದವು ಕಡಿಮೆ ಶ್ರಮ ಅಧಿಕ ಲಾಭ ಎನ್ನುವ ಸೂತ್ರಕ್ಕೆ ಜೋತು ಬಿದ್ದರು. ಅತೀ ಹೆಚ್ಚು ನೀರಿನ ಬಳಕೆಯ ಕಬ್ಬು ಭತ್ತ ಬೆಳೆದು ಅದೆಷ್ಟೋ ಹೆಕ್ಟೆರ್ ಭೂಮಿ ಜವುಳಾಗಿದೆ. ಶುಂಠಿ ಬೆಳೆದ ಭೂಮಿ ಬರಡಾಗಿದೆ. ಪರಂಪರೆಯಿಂದ ಬಂದ ಜ್ಞಾನ ಮೂಲೆಗುಂಪಾಗಿದೆ. ಅಕ್ಕಡಿ ಬೆಳೆ. ಬಹು ವೈವಿಧ್ಯದ ಬೆಳೆ ಎಂಬುದನ್ನೆಲ್ಲ ಒಪ್ಪದ ರೈತರನೇಕರು ಬೇಗ ಬೇಗ ಬಿತ್ತಿ ಬೆಳೆದು ಲಾಭ ಗಳಿಸುವ ಮನಸ್ಥಿತಿಗೆ ಬಂದಿದ್ದಾರೆ. ಹೆಚ್ಚು ಗೊಬ್ಬರ ಹೆಚ್ಚು ನೀರು,ಲೆಕ್ಕಕ್ಕಿಲ್ಲದಷ್ಟು ಕೀಟನಾಶಕ, ಇನ್ವೆಸ್ಟ ಮಾಡಿದ ಹಣ ಆದಷ್ಟು ಹತ್ತಾರು ಪಟ್ಟಾಗಿ ತಿರುಗಿ ಬಂದು ಬಿಡುತ್ತದೆ ಎಂಬ ಲೆಕ್ಕಾಚಾರ. ಬರಲೇ ಬೇಕು ಎಂಬ ಹಠದಲ್ಲಿ ಸಾಲ ತೆಗೆದು, ಬೆಳೆ ಬೆಳೆದು ಯಶಸ್ಸು ಕಂಡರೆ ಸರಿ ಇಲ್ಲವಾದರೆ ಸಾಲ ತೀರಿಸಲಾರದೇ ನೇಣಿಗೆ ಶರಣು!. . ಒಬ್ಬ ರೈತ ಒಂದು ಬೆಳೆಯಲ್ಲಿ ಲಾಭ ಗಳಿಸಿದ ಸುದ್ದಿ ಸಿಕ್ಕರೆ ಸಾಕು ಸಾವಿರಾರು ರೈತರು ಅದೇ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟವಾಗದೇ ವ್ಯವಸ್ಥೆಗೆ ಬೈದು ಬೆಳೆದ ಬೆಳೆಯನ್ನು ನಡು ರಸ್ತೆಯಲ್ಲಿ ಸುರಿದು ಪ್ರತಿಭಟಿಸುವುದು ಮಾಮೂಲು.. ಈಗೀಗ ತಿನ್ನುವ ಧವಸ ಧಾನ್ಯಗಳಲ್ಲಿ, ಹಣ್ಣು ತರಕಾರಿಗಳಲ್ಲಿ ಬೆರೆತ ವಿಷವನ್ನು ಬೇರ್ಪಡಿಸಿ ಉಣಲಾರದ ಅಸಹಾಯಕತೆ ಬಳಕೆದಾರರದ್ದು. ಆಗ ಅನ್ನದಾತ ಸುಖಿ ಭವ!? ( ಹಾರೈಸಲು ವಿಚಾರ ಮಾಡುವಂತಾಗುತ್ತದೆ), ಅಂಗಡಿಗೆ ಹೋದರೆ ದುಬಾರಿ ಬೆಲೆ ತೆತ್ತು ಕೊಳ್ಳಲಾಗದ ಅಸಹಾಯಕತೆ ಅನೇಕರದ್ದು.
ಈಗ ಹೇಗಿದ್ದಾರೆ ಹಾಗಾದರೆ ರೈತರು? ಉಳಿದ ಕ್ಷೇತ್ರದಲ್ಲಿ ಕಂಡ ಬಿಕ್ಕಟ್ಟು ರೈತರನ್ನೆಂತು ಕಾಡುತ್ತಿದೆ? ಬೆಳೆದ ಬೆಳೆ ಭಾಗ್ಯದ ಬಾಗಿಲನ್ನು ತೆರೆದಿದೆಯೇ?
ಮುಂದುವರಿಯುವುದು..
********
ಮಾಲತಿ ಹೆಗಡೆ