ಗಝಲ್
ಎ.ಹೇಮಗಂಗಾ
ನಡುರಾತ್ರಿ ಎದ್ದು ಹೋಗುವ ಮುನ್ನ ಒಮ್ಮೆ ಹಿಂತಿರುಗಿ ನೋಡಬೇಕಿತ್ತು
ಯಶೋಧರೆಯ ಅಳಲ ಕೊನೆಯ ಬಾರಿಗಾದರೂ ಕೇಳಬೇಕಿತ್ತು
ನೀನೇನೋ ಕಷ್ಟ, ಕೋಟಲೆಯ ಸಂಕಟ ಕಳೆಯಲು ಹೊರಟವನು
ಸಂಗಾತಿಯಿರದ ಒಂಟಿ ಜೀವದ ನೋವಿಗೆ ಮಿಡಿಯಬೇಕಿತ್ತು
ಸಿರಿ ಸಂಕೋಲೆ ಕಳಚಿ ಯಾರ ಗೊಡವೆಯಿರದೇ ನಡೆದುಹೋದೆ
ನೀನೇ ಎಲ್ಲವೂ ಎಂದುಕೊಂಡವಳ ಬಾಳು ಬರಡು ಮಾಡಬಾರದಿತ್ತು
ಧ್ಯಾನ,. ಚಿಂತನೆಗಳಲ್ಲಿ ತೊಡಗಿದವನಿಗೆ ಸಂಸಾರದ ಬಂಧವೆಲ್ಲಿ ?
ನಿನ್ನನೇ ನಂಬಿದ ಜೀವವ ಧಿಕ್ಕರಿಸಿದ ಯಾತನೆ ಅರಿವಾಗಬೇಕಿತ್ತು
ಗೌತಮ ಬುದ್ಧನಾಗಿ ಅರಿವಿನ ಗುರುವಾಗಿ ನಂಬಿದವರ ಉದ್ಧರಿಸಿದೆ
ಲೌಕಿಕ ಯುದ್ಧದಿ ಬಲಿಯಾದವಳ ಪತಿಯಾಗಿ ಕಾಪಿಡಬೇಕಿತ್ತು
******