ಕಾವ್ಯ ಪ್ರೀತಿ
ಹಂಸಪ್ರಿಯ ವಿಜಯಪುರ
ಪ್ರೇಮನಾದ

ಬೇಕು,ಏನೂ ಬೇಕೋ ದೇವ! ನಿನಗೆ?
ಅವಿತು ಕಾಡುವೆ ಅಂತರಂಗದೊಳಗೆ, //ಪ//
ಬಯಕೆಗಳ ಚಿಗಿಸಿ ಚಿತ್ತದೊಳಗೆ,
ತೊಗಲುಗೊಂಬೆಗಳಂತೆ
ಕುಣಿಸುವೆಯೋ ಮಹಾದೇವ…
ಹರ.. ಹರ…..ಮಹಾದೇವ…. //1//
ಬಚ್ಚಿಟ್ಟು” ಪ್ರೇಮ”ವ,
ಹಚ್ಚಿದೆ ಹುಡುಕಲು ಕಣ್ಣುಕೊಟ್ಟು.
ಮನದಲಿ ಹುಟ್ಟಿಸಿದ ಬಯಕೆಗಳು
ಪದಗಳಾಗಿ ಕುಣಿಯುತಿವೆ ಮೌನವಾಗಿ ಚಿತ್ತದೊಳಗೆ.//2/
ವಿರಹದುರಿಯಲಿ ಬೇಯುತಾ
ಅಂಜಿಕೆ – ಶಂಕೆಗಳ ಕೊಳೆ ತೆಗೆದು
ಅಪರಂಜಿಯಂತೆ ಹೊಳೆದು
ನಿನ್ನೊಳಗೊಂದಾಗುವ ಪರಿಯಂತು ದೊರೆಯೇ..//3//
ನೂರಾರು ಕನಸುಗಳ ಮೆರವಣಿಗೆ,
ಬಹಿರಂಗದ ರಂಗಭೂಮಿಯೊಳಗೆ.
ನೋವು – ನಲಿವು;ಆಶೆ – ನಿರಾಶೆ,
ಕೋಪ – ತಾಪ;ರಾಗ -ವಿರಾಗ ನಾನಾ ಭಾವ,
ನಾನಾ ಪಾತ್ರಗಳ ನಟನೆ ನಿನ್ನ ಕೈ ಚಳಕದೊಳಗೆ..//4//
ಅನಂತನೇ…ಅಮೋಘನೇ…
ನುಡಿಸು, ಧ್ವನಿಸು,, “ಪ್ರೇಮನಾದ”!..
ನಿನ್ನೊಲುಮೆಯಿಂದರಳಿದ ನುಡಿಗಳು
ಹಾಡುಗಳಾಗಿ ಅನುರಣಿಸಲಿ ಬಾಹ್ಯಾಂತರದಿ..//5//.
ಹಂಸಪ್ರಿಯ ವಿಜಯಪುರ




