ವ್ಯಕ್ತಿ ಪರಿಚಯ
ಹಿರಿಯ ನಾಟಕ ಕಲಾವಿದ ಕವಿ
ಲೇಖಕ ಶಂಕರ ಲಮಾಣಿಯವರ
ಬಹುಮುಖ ಪ್ರತಿಭೆ
ಅನಾವರಣಕ್ಕೊಂದು ಕಿರು ಲೇಖನ
ಚಲುವ ಕರುನಾಡು ಸರ್ವ ಜನಾಂಗದ ಶಾಂತಿಯತೋಟದಂತಿದೆ ಎಂಬ ರಾಷ್ಟ್ರಕವಿ ಕುವೆಂಪುರವರ ವಾಣಿ ಅಕ್ಷರಶಃ ಸತ್ಯ. ಇಲ್ಲಿ ಹಲವು ಜಾತಿ ಮತ ಜನಾಂಗದ ವೈವಿಧ್ಯಮಯ ಕಲಾ ಸಾಹಿತ್ಯ ಸಾಂಸ್ಕೃತಿಕ ಪರಂಪರೆ ಇದೆ. ಅದನ್ನೆಲ್ಲ ಸಾಹಿತಿಗಳು, ಕಲಾಕಾರರು ತಮ್ಮ ಕೃತಿಗಳಲ್ಲಿ ಅಚ್ಚೊತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾರುವ ಗಂಧದ ನಾಡಿನಲ್ಲಿ ಬಂಜಾರ ಜನಾಂಗದ ಜನಪದ ಉಡುಗೆ – ತೊಡುಗೆ, ರೂಡಿ – ಸಂಪ್ರದಾಯ, ಕುಲ ಕಸಬು, ದೈವಾರಾಧನೆ, ಹಬ್ಬ – ಹರಿದಿನ ಆಚಾರ – ವಿಚಾರ ಎಲ್ಲರ ಕಣ್ಮನ ಸೆಳೆದು; ಸಂಭ್ರಮ ಸಡಗರಕ್ಕೆ ನಾಂದಿ ಹಾಕುತ್ತದೆ. ಕರ್ನಾಟಕ ಏಕೀಕರಣ ನಂತರ ನಾಡಿನ ಅಭಿವೃದ್ಧಿಯಲ್ಲಿ ಹಿರಿಯ ಬಂಡಾಯ ಸಾಹಿತಿ ಬಿ. ಟಿ. ಲಲಿತಾ ನಾಯಕ, ಇಂದುಮತಿ ಲಮಾಣಿ, ಶಂಕರ ಲಮಾಣಿ ಅನೇಕರು ಬಹುಮುಖರಾಗಿ ತೊಡಗಿಸಿಕೊಂಡಿದ್ದಾರೆ. ಬಾಳ ಮುತ್ಸಂಜೆಯಲ್ಲಿರುವ ಈ ಮಹನೀಯರಿಗೆ ಸುವರ್ಣ ಕರ್ನಾಟಕ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಸನ್ಮಾನಿಸಿ ಗೌರವಿಸಬೇಕೆಂಬುದು ಈ ಲೇಖನದ ಕಳಕಳಿ.
ಬಾಗಲಕೋಟೆ ನಾಡಿನ ೮೦ರ ವಯೋಮಾನದ ಹಿರಿಯ ಸಾಹಿತಿಗಳಾದ ಶಂಕರ ಎಚ್. ಲಮಾಣಿಯವರು ಪಶು ಸಂಗೋಪನಾ ಇಲಾಖೆಯಲ್ಲಿ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಅಲಂಕರಿಸಿ ಸಾರ್ಥಕ ೩೫ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿ ಇಂದಿಗೆ ೧೯ ವರ್ಷಗಳಾದವು. ಹುಣಸೆ ಮರ ಮುಪ್ಪಾದರೂ ಹುಣಸೆಗೆ ಮುಪ್ಪೆ? ಎಂಬ ಗಾದೆಯ ತಾತ್ಪರ್ಯದಂತೆ ಇವರು ಪ್ರವೃತ್ತಿಯಿಂದ ಸದಾ ಕ್ರಿಯಾಶೀಲ ಕಲಾಕಾರರು, ಸಾಹಿತಿಗಳು, ನಾಟಕಕಾರರು ಕವಿಗಳಾಗಿ ಇದುವರೆಗೂ ಇವರು ೧೭ ಕೃತಿಗಳನ್ನು ಕನ್ನಡ ತಾಯಿ ಪಾದಕ್ಕೆ ಅರ್ಪಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ನಾಟಕಗಳನ್ನು ಬರೆದು; ಸ್ವತಃ ಪಾತ್ರಧಾರಿಯಾಗಿ ನಟಿಸಿ, ನಿರ್ದೇಶಿಸಿ ನಾಡಿನಾದ್ಯಂತ ಪ್ರಸಾರಮಾಡಿ ರಂಗಮಂಚವೇರಿ ಶೋತೃಗಳಿಂದ ಭೆಶ್ ಎನಿಸಿಕೊಂಡಿದ್ದಾರೆ.
ಘಟಪ್ರಭಾ ಮಲಪ್ರಭಾ ಕೃಷ್ಣಾನದಿ ಹರಿವ ಅಣ್ಣ ಬಸವಣ್ಣನ ಐಕ್ಯಸ್ಥಳ ಕೂಡಲ ಸಂಗಮದ ಹತ್ತಿರ ಇರುವ ಮುಚಖಂಡಿ ತಾಂಡೆ ಬಾಗಲಕೋಟೆ ಜಿಲ್ಲೆಯಲ್ಲಿ ಬಂಜಾರಾ ಸಮಾಜದ ಕೃಷಿಕ ಕುಟುಂಬದಲ್ಲಿ ೦೮ ಪೆಬ್ರವರಿ ೧೯೪೫ರಂದು ಜನಿಸಿದರು. ಸಾಹಿತ್ಯದ ವಾತಾವರಣ ಸುಳಿವಿರದ ಪಶು ಸಂಗೋಪನೆ ವೃತ್ತಿಯ ಜೊತೆ ಜೊತೆಗೆ ಪ್ರವೃತ್ತಿಯಿಂದ ನಾಟಕ ರಚನೆ ಮತ್ತು ನಟನೆಯ ಮೂಲಕ ಕನ್ನಡ ನಾಡು ನುಡಿ ಸೇವೆ ಮಾಡಿ ಜನಮಾನಸದೊಳಗೆ ಮೌಲ್ಯಯುತವಾದ ಸಂದೇಶ ಸಾರಿದವರು.
ನಾಟಕಕಾರ ಶಂಕರ ಲಮಾಣಿಯವರ ಪ್ರಕಟಿತ ನಾಟಕ, ಜೀವನ ಚರಿತ್ರೆ ಮತ್ತು ಕಾವ್ಯ ಕೃತಿಗಳು
ಸೋತು ಗೆದ್ದವಳು, ಬಯಸಿ ಬಂದವಳು (ಸಾಮಾಜಿಕ ನಾಟಕಗಳು), ಕೊನೆಯಾವಾಗ? (ವರದಕ್ಷಣೆ ಕುರಿತ ನಾಟಕ), ಮಾನೆ ಹೊಲ (ಬೆಟಗೇರಿ ಕೃಷ್ಣಶರ್ಮರ ಕಥೆ ಆಧಾರಿತ ನಾಟಕ), ಹಾಲು ಮತದ ವೀರಗಾಥೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ (ಐತಿಹಾಸಿಕ ನಾಟಕ), ಇರ್ಷೆ (ಹೊಸ ಅಲೆಯ ನಾಟಕ), ಹೇಳ್ಕಿ (ಏಡ್ಸ ಸಮಸ್ಯೆ ಕುರಿತ ಕಿರು ನಾಟಕ), ಪವಾಡ ಪುರುಷ ತೆಗ್ಗಿಸಿದ್ದಾಪೂರ ಶ್ರೀಹುಚ್ಚಪ್ಪಯ್ಯ (ನಾಟಕ), ಗಣೇಶನ ಕಥೆಗಳು, ಚಿಣ್ಣರ ಮೂರು ನಾಟಕಗಳು (ಮಕ್ಕಳ ನಾಟಕಗಳು), ಅಚ್ಚರಿ, ನೆಲದ ತಾಯಿ (ಕವನ ಸಂಕಲನಗಳು), ಕೋಟೆ ಕಾವ್ಯ (ಸಂಪಾದಿತ ಕವನ ಸಂಕಲನ), ಸಂತ ಶ್ರೀ ಸೇವಾಲಾಲ ಮಹಾರಾಜ, ನೀಲಾನಗರ ಶ್ರೀ ನೀಲಾಬಾವಾ (ಜೀವನ ಚರಿತ್ರೆ), ಜನಪದ ಗೀತ ರಾಮಾಯಣ, ಗೋರ ಬಂಜಾರಾ (ಲಂಬಾಣಿ ಸಂಸ್ಕೃತಿಯ ಪರಿಚಯ)
ಈ ರೀತಿಯಾಗಿ ಸಾಮಾಜಿಕ, ಐತಿಹಾಸಿಕ, ಮಕ್ಕಳ ೧೦ ನಾಟಕಗಳು, ಸಂಪಾದಿತ ಕವನ ಸಂಕಲನ ಸೇರಿದಂತೆ ೦೩ ಕವನ ಸಂಕಲನಗಳು, ೦೨ ಜೀವನ ಚರಿತ್ರೆಗಳು, ಬಂಜಾರ ಜನಾಂಗದ ಸಂಸ್ಕೃತಿಯ ಅನಾವರಣ ಮತ್ತು ಪೌರಾಣಿಕ ಗೀತ ರಾಮಾಯಣ ಕೃತಿಗಳನ್ನು ಬರೆದು ಕವಿಯಾಗಿ, ಚರಿತ್ರೆಕಾರರಾಗಿ, ನಾಟಕ ರಚನಾಕಾರರಾಗಿ, ಮಕ್ಕಳ ಸಾಹಿತಿಯಾಗಿ ಜಾತ್ಯಾತೀತವಾಗಿ ಒಟ್ಟಾರೆ ೧೭ ಗ್ರಂಥಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆ ಮಾಡಿರುವುದು ಅಭಿನಂದನೀಯ.
ನಾಟಕಕಾರ ಶಂಕರ ಲಮಾಣಿಯವರು ನಟಿಸಿದ ನಾಟಕಗಳು ಮತ್ತು ನಾಟಕ ತಂಡಗಳ ವಿವರ
ಕನ್ನಡದ ಖ್ಯಾತ ನಾಟಕಕಾರರ ಕಂದಗಲ್ಲ ಹನುಮಂತರಾಯ ಕೃತ ಶ್ರೀ ಕೃಷ್ಣ ಗಾರುಡಿಗ ನಾಟಕದಲ್ಲಿ ೧೯೬೦ರಲ್ಲಿ ವಿದ್ಯಾರ್ಥಿ ದೆಸೆಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ನಟನೆ, ೧೯೬೩ರಲ್ಲಿ ಎಚ್. ಎನ್. ಹೂಗಾರ ಕೃತ ದಸರಾ ನಾಟಕದಲ್ಲಿ, ೧೯೬೪ರಲ್ಲಿ ಎಚ್. ಆರ್ ಭಸ್ಮೆ ಕೃತ ಸ್ತ್ರೀ ರತ್ನ ನಾಟಕದಲ್ಲಿ, ೧೯೬೫ರಲ್ಲಿ ಎಚ್. ಎನ್. ಹೂಗಾರ ಕೃತ ಪುತ್ತಳಿ ನಾಟಕದಲ್ಲಿ ೧೯೬೬ರಲ್ಲಿ ಶಂಕರ ಲಮಾಣಿ ತಾವು ಬರೆದ ಸೋತು ಗೆದ್ದವಳು ನಾಟಕದಲ್ಲಿ, ೧೯೮೫ರಲ್ಲಿ ಶ್ರೀರಂಗ ಕೃತ ಕತ್ತಲೆ ಬೆಳಕು ನಾಟಕ ಹೀಗೆ ಹಲವಾರು ನಾಟಕಗಳಲ್ಲಿ ವಿಭಿನ್ನ ಪಾತ್ರಧಾರಿಯಾಗಿ ಅಭಿನಯಿಸುತ್ತ ನೋಡುಗರಿಂದ ಸೈ ನಿಸಿಕೊಂಡವರು; ನಾಟಕಾಸಕ್ತರ ಮೈಮನ ತಣಿಸುದವರು. ನೋಡುಗರ ಆಶೋತ್ತರ ಇಡೆರಿಸದವರು. ೧೯೮೭ರ ವಿಭಾಗಿಯ ನಾಟಕೋತ್ಸವದಲ್ಲಿ ಸಂಘಟಕರಾಗಿ, ಸಲಹೆಗಾರರಾಗಿ ಮತ್ತು ಪಾತ್ರಧಾರಿಯಾಗಿ ಕಾರ್ಯನಿರ್ವಹಿಸಿರುವ ಶ್ರೀಯುತರು ದುರ್ಗಾದೇವಿ ಅಮೆಚೂರ್ ಮುಚಖಂಡಿ ಎಲ್. ಟಿ. ಒಂದು, ರಂಗ ಸಮೂಹ ಬಾಗಲಕೋಟೆ, ಕಲಾ ಸಂಗಮ ಬಾಗಲಕೋಟೆ ಮುಂತಾದ ನಾಟಕ ತಂಡಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.
ಬಹುಮುಖ ಪ್ರತಿಭೆ ಸಾಹಿತಿ ಶಂಕರ ಲಮಾಣಿಯವರ ಪ್ರತಿಭೆಗೆ ಒಲಿದು ಬಂದ ಪುರಸ್ಕಾರಗಳು
ಬಹುಮುಖ ಪ್ರತಿಭಾಶೀಲರಾದ ಹಿರಿಯಜೀವ ಶಂಕರರವರ ಪ್ರತಿಭೆಗೆ ಹಲವು ಪುರಸ್ಕಾರಗಳು ಲಭಿಸಿದ್ದು; ೨೦೦೨ರಲ್ಲಿ ಕೊನೆಯ ಯಾವಾಗ ನಾಟಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ೨೦೦೪ರಲ್ಲಿ ಮಾನೆ ಹೊಲ ನಾಟಕ ಕೃತಿಗೆ ಕ. ಸಾ. ಪ ದತ್ತಿ ನಿಧಿ ಪ್ರಶಸ್ತಿ, ೨೦೦೬ರಲ್ಲಿ ಹಾಲುಮತದ ವೀರಗಾಥೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಕೃತಿಗೆ ಕ. ಸಾ ಪ ದತ್ತಿ ನಿಧಿ ಪ್ರಶಸ್ತಿ, ೨೦೦೬ರಲ್ಲಿ ಮಕ್ಕಳ ಸಾಹಿತ್ಯ ಸಮಾಜ ಬಾಗಲಕೋಟೆ ಪ್ರಶಸ್ತಿ, ೨೦೦೭ರಲ್ಲಿ ಹಂಬಲ ಸಾಹಿತ್ಯ ಮಾಸಿಕ ನಾಟಕ ಪ್ರಶಸ್ತಿ, ೨೦೧೧ರಲ್ಲಿ ಮಕ್ಕಳ ಸಾಹಿತ್ಯ ಸಮಾಗಮ ಬಾಗಲಕೋಟ ೭೦ನೇ ಮಾಸಿಕ ಕವಿ ಸಮ್ಮೇಳದಲ್ಲಿ ಪುರಸ್ಕಾರ, ೨೦೧೨ರಲ್ಲಿ ಗೋರ ಬಂಜಾರಾ ಲಂಬಾಣಿ ಸಂಸ್ಕೃತಿ ಪರಿಚಯ ಕೃತಿಗೆ ಕ. ಸಾ. ಪ ದತ್ತಿ ನಿಧಿ ಪ್ರಶಸ್ತಿ, ೨೦೧೪ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಬೆನಕಟ್ಟಿ ಪುರಸ್ಕಾರ, ೨೦೧೪ರಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಬಾಗಲಕೋಟ ಪುರಸ್ಕಾರ, ೨೦೧೪ರಲ್ಲಿ ಜಿಲ್ಲಾ ರಂಗ ಗೌರವ ಪುರಸ್ಕಾರ, ೨೦೧೫ರಲ್ಲಿ ಬಾಗಲಕೋಟ ಜಿಲ್ಲಾ ಆಡಳಿತದಿಂದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪುರಸ್ಕಾರ, ೨೦೧೮ ರಲ್ಲಿ ಅವ್ವ ಸಾಂಸ್ಕೃತಿಕ ಸಮಾರಂಭದ ಅವ್ವ ಪ್ರಶಸ್ತಿ, ೨೦೨೦ರಲ್ಲಿ ಜನಪದ ಗೀತ ರಾಮಾಯಣ ಕೃತಿಗೆ ಕ. ಸಾ. ಪ ದತ್ತಿನಿಧಿ ಪ್ರಶಸ್ತಿ, ೨೦೨೨ ರಲ್ಲಿ ಬಾಗಲಕೋಟೆ ೦೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ ಸಂದಿವೆ.
ಭಾರತ ಸೇವಕ ಸಮಾಜದ ಶಿಬಿರದಲ್ಲಿ ಕಾರ್ಯನಿರ್ವಹಣೆ, ಕಾಂಗ್ರೆಸ್ ಸೇವಾದಳ ಮೈಸೂರು ಪ್ರದೇಶ ಶಿಬಿರದಲ್ಲಿ ಸ್ವಯಂ ಸೇವೆ, ಕಲಾ ಸಂಗಮ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಂಯೋಜಿಸಿದ ರಂಗಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದು; ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶನಾಲಯ ಬೆಂಗಳೂರು ಇವರು ಹಮ್ಮಿಕೊಂಡ ಕನ್ನಡ ಆಡಳಿತ ಕಾರ್ಯಾಗಾರ ಶಿಬಿರದಲ್ಲಿ ಭಾಗವಹಿಸಿದ್ದು, ಶಿವಾನಂದ ಯೋಗಕೇಂದ್ರ ಭದ್ರಾವತಿ ಇವರ ಯೋಗ ಶಿಬಿರದಲ್ಲಿ ಸಕ್ರಿಯರಾದದ್ದು, ಪ್ರಾಣಿದಯಾಸಂಘ ತರಬೇತಿ ಶಿಬಿರದಲ್ಲಿ ಭಗವಹಿಸಿದ್ದು, ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಿಕೆ, ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ, ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ, ರಾಜ್ಯದ ವಿವಿಧ ಸಂಘಟನೆಗಳಿಂದ ಜರುಗಿದ ಸಾವಿರಾರು ವಿಚಾರ ಸಂಕಿರಣ, ಕವಿಗೋಷ್ಟಿಗಳಲ್ಲಿ ಭಾಗಿಯಾಗಿ ಕನ್ನಡ ನಾಡು ನುಡಿ ಸೇವೆ ಮಾಡಿರುವ ಹಿರಿಯ ಚೇತನ ಶಂಕರ ಲಮಾಣಿಯವರು.
ಬಂಡಾಯ ಸಾಹಿತಿ ಬಿ. ಟಿ. ಲಲಿತಾ ನಾಯಕ, ಇಂದುಮತಿ ಲಮಾಣಿ, ಹರಿಲಾಲ ಪವಾರ, ಖಂಡ್ಡೊಬಾ, ಸಣ್ಣರಾಮ ನಾಯಕ, ಡಿ. ಬಿ. ಲಮಾಣಿ (ಸಾಹಿತ್ಯ), ಆರ್. ಬಿ. ನಾಯಕ (ಬಂಜಾರ ಜನಪದ ಗೀತೆ) ಇವರ ಸಮಬಲ ನಿಲ್ಲುವ ಬಹು ಪ್ರತಿಭಾ ಸಂಪನ್ನ ಶಂಕರ ಲಮಾಣಿಯವರಿಗೆ ಇದುವರೆಗೂ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸದಿರುವುದು ಬೇಸರದ ಸಂಗತಿಯಾಗಿದೆ. ಬಂಜಾರ ಜನ ಸಂಸ್ಕೃತಿ ರೀತಿ ರಿವಾಜು ಮತ್ತು ಬಂಜಾರ ಕುಲಗುರು ಸಂತ ಸೇವಾಲಾರ ಅಸ್ತಿತ್ವವನ್ನು ಎತ್ತಿಹಿಡಿದಿರುವ ಇವರು ಲಂಬಾಣಿ ಸಂಪ್ರದಾಯದಾಚೆಯೂ ಬಹುತ್ವದಲ್ಲಿ ಐಕ್ಯತೆ ತರುವ ಸಾಹಿತ್ಯ ಕೃಷಿಮಾಡಿರುವ ಅಪರೂಪದ ವ್ಯಕ್ತಿ ಬರಹಗಾರರಾದ ಮಾನ್ಯರಿಗೆ ಹಿನ್ನಡೆಯ ಎಲ್ಲದರ ಮೊತ್ತ ಎಂಬಂತೆ ಮುನ್ನಲೆಗೆ ತಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರುನಾಡಿನ ಜನತೆಗೆ ಪರಿಚಯಮಾಡಿಕೊಡಬೇಕೆಂದು ಪ್ರಜಾಪ್ರಭುತ್ವ ಮಾದರಿ ಸರಕಾರಕ್ಕೆ ಹಕ್ಕೋತ್ತಾಯದ ಮನವಿ ಬರಹವಿದು.
ತಮ್ಮ ಹದಿಹರೆಯದ ದಿನಮಾನಗಳಿಂದ ಅಂದರೆ ೬೦ರ ದಶಕಗಳಿಂದ ಇದುವರೆಗೂ ಸುಮಾರು ೬೫ ವರುಷಗಳು ಸಾಹಿತ್ಯ ಕಲಾ ಸೇವೆ ಮಾಡಿರುವ ಸಾಹಿತಿ ನಾಟಕ ಕಲಾ ಹಿರಿಯ ಚೇತನ ಶಂಕರ ಲಮಾಣಿಯವರು ಈಗ ೮೦ ವರ್ಷದ ಹೊಸ್ತಿಲಲ್ಲಿದ್ದು; ಶ್ರೀಯುತರ ಸೇವೆಗೆ ಪ್ರಸ್ತುತ ೨೦೨೩ನೇ ವರ್ಷದಲ್ಲಿ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷಗಳ ಸಂದಿರುವ ನಿಮಿತ್ತ ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆ ಸುಸಂದರ್ಭದಲ್ಲಿ ಹಲವಾರು ಸಾಧಕರ ಸಾಲಿನಲ್ಲಿ ಸಂಕೀರ್ಣ ಸಾಧಕ ಶಂಕರರವರಿಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬುಡಕಟ್ಟು ಬಂಜಾರ ಸಮೂದಾಯದ ಸಬಲಿಕರಣಕ್ಕೆ ಇಮ್ಮುಡಿ ಮುಮ್ಮುಡಿ ಸ್ಫೂರ್ತಿ ಸಿಗಲೆಂದು ವಿನಯವಿನಂತಿ ಬರಹ.
ಸುಹೇಚ ಪರಮವಾಡಿ