ಆ ಕರಾಳ ದಿನ, ಯುದ್ದ ಭೂಮಿಯಲ್ಲಿ ಸಿಲುಕಿಕೊಂಡ ಕೂಸೊಂದರ ಸ್ವಗತ-ಅಮ್ಮು ರತನ್ ಶೆಟ್ಟಿ

ವಿಶೇಷ ಲೇಖನ

ಆ ಕರಾಳ ದಿನ,

ಯುದ್ದ ಭೂಮಿಯಲ್ಲಿ ಸಿಲುಕಿಕೊಂಡ

ಕೂಸೊಂದರ ಸ್ವಗತ-

ಅಮ್ಮು ರತನ್ ಶೆಟ್ಟಿ

ನಾನೀಗ ೩ವರ್ಷದ ಕಂದಮ್ಮ , ನನ್ನ ಹೆಸರು ಏನೆಂದೂ  ನನಗೆ ಸರಿಯಾಗಿ ನೆನಪಿಲ್ಲ, ಎಲ್ಲ ಮಕ್ಕಳ ಹಾಗೆ ಏನೂ ಅರಿಯದ ಮುಗ್ದ ಜೀವ . ಈಗಿನ್ನೂ ಕಣ್ಣು ತೆರೆದು, ಅಮ್ಮನ ಮಡಿಲಲ್ಲಿ ಸುಖವಾಗಿದ್ದೆ. ಮನಸ್ಥಾಪ , ಹಣ, ಅಸೂಯೆ ಇದಾವುದೂ ನನಗೆ ಗೊತ್ತಿಲ್ಲ, ನಾನು ಯಾವ ಧರ್ಮಕ್ಕೆ ಸೇರಿದವನು ? ಅದು ಗೊತ್ತಿಲ್ಲ. ಅಮ್ಮ ಕೊಟ್ಟ ತಿಂಡಿ ತಿನ್ನುತ್ತಾ , ನನ್ನ ಸಹೋದರಿಯ ಜೊತೆಗೆ ನಾನು ಖುಷಿಯಿಂದ ಇದ್ದೆ.  ನಮಗೆ ಯಾರ ಭಯವೂ ಇರಲಿಲ್ಲ ,ಯಾರ ನಿರ್ಬಂಧವೂ  ಇರಲಿಲ್ಲ. ಗಲ್ಲಿಯ ಕೆಲ ಸ್ನೇಹಿತರನ್ನು ಬಿಟ್ಟು ಮತ್ಯಾರ ಪರಿಚಯವೂ ನಮಗಿರಲಿಲ್ಲ. ಆಟಿಕೆಗಳ ಜೊತೆ ಆಡುತ್ತಾ  ಸುಖವಾಗಿದ್ದ ಬಾಲ್ಯ ನಮ್ಮದು. ಟಿವಿ ಯಲ್ಲಿ ಬರುವ ವಿಷಯಗಳು ಏನೆಂದೂ
ಅರ್ಥವಾಗದಷ್ಟು ಚಿಕ್ಕ ವಯಸ್ಸು ನನ್ನದು. ನನ್ನ ಪುಟ್ಟ ತಂಗಿಗೆ ಇನ್ನೂ ನಡೆಯಲು ಗೊತ್ತಿಲ್ಲ, ಅವಳೀಗಲೂ ಜೋಳಿಗೆಯಲ್ಲಿ ಮಲಗಿದ್ದಾಳೆ. ಆದರೆ ಇಂತಹ ಸಂತೋಷದ ಬಾಲ್ಯವನ್ನು
ದೇವರು ನಮ್ಮಿಂದ ಯಾಕೆ ಕಿತ್ತುಕೊಂಡ ? ಅದು ಗೊತ್ತಿಲ್ಲ, ಆ ದೇವರು ಅಂದರೆ ಯಾರು? ಅವನಷ್ಟು ಕ್ರೂರಿಯೇ? ಇಷ್ಟು ಹಿಂಸೆ ಕೊಡುವ ಅವನು ನಿಜಕ್ಕೂ ದೇವರಾ ? ನಿಜಕ್ಕೂ
ಅವನ ಅಸ್ತಿತ್ವ ಇರಬಹುದೇ? ಇದ್ದರೆ ಅವನ ಹೆಸರೇನು ? ಈ ಯಾವ ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ . ಪ್ರಶ್ನೆ ಕೇಳಲು ನನ್ನ ಅಪ್ಪ-ಅಮ್ಮ ಇಬ್ಬರೂ ಬದುಕಿಲ್ಲ . ಈಗ ನಮ್ಮ ಜೀವನದಲ್ಲಿ ಇರುವುದು ಬರಿಯ ನೋವು .

ಅದೇನಾಯ್ತು ನಿಜಕ್ಕೂ ಗೊತ್ತಿಲ್ಲ, ಅದು ಯಾರೋ ಬಾಂಬ್ ದಾಳಿ ಮಾಡಿದ್ದರು. ಆ ಬಾಂಬ್ ಹಾಗಂದರೆ ಏನು? ಅದು ಕೂಡ ನನಗೆ ಗೊತ್ತಿಲ್ಲ. ನೋವು ನೀಡುವ ಅಥವಾ  ಇನ್ನೊಬ್ಬರ ಜೀವ ತೆಗೆಯುವ ಆ ಸಾಧನ ಉತ್ಪಾದನೆ ಯಾಕೆ ಮಾಡ್ತಾರೆ?  ಅದೂ ನನಗೆ ಅರ್ಥವಾಗುತ್ತಿಲ್ಲ .  ಅವರು ಯಾಕೆ ನಮಗೆಲ್ಲ ತೊಂದರೆ ಮಾಡೋದು?
ನಾವು ನಮ್ಮ ಮನೆಯಲ್ಲಿ ಆರಾಮಾಗಿ ಇದ್ದವರು. ಯಾರ ತಂಟೆಗೂ ಹೋಗಿಲ್ಲ
ಯಾರಿಗೋ ಯಾರದ್ದೋ ಮೇಲೆ ದ್ವೇಷ. ಅವರ ನಿಲುವೇನು, ಅವರ ಉದ್ದೇಶವೇನೋ ನಮಗೆ ಅರ್ಥವಾಗೋದಿಲ್ಲ. ಅವರ ವೈಯಕ್ತಿಕ ದ್ವೇಷಕ್ಕೆ ನಮ್ಮಂತ ಅಮಾಯಕರನನ್ನು ಯಾಕೆ ಬಲಿ ಪಡೆಯುತ್ತಾರೆ. ಅವರು ಯಾಕೆ ದಾಳಿ ಮಾಡಿದ್ದೋ, ಮತ್ತೆ ಇವರ ಪ್ರತಿದಾಳಿ ಏಕೋ? ನಿಜಕ್ಕೂ ನಮಗೇನೂ ಗೊತ್ತಾಗ್ತಿಲ್ಲ. ಆದರೆ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ತೆತ್ತ ನನ್ನ ಅಪ್ಪ ಅಮ್ಮನನ್ನು ನೋಡಿ ಅಳುವುದೋ, ಗಾಯಗೊಂಡು ಅಳುತ್ತಿರುವ ನನ್ನ ಪುಟ್ಟ ತಂಗಿಯನ್ನು ಸಮಾಧಾನ ಮಾಡುವುದೋ, ಅಥವಾ ನನಗೆ ಹಸಿವಾಗುತ್ತಿದೆ ಅಂತ ಕೂಗಿ ಹೇಳಬೇಕೋ ನನಗೆ ಅರ್ಥವಾಗುತ್ತಿಲ್ಲ. ದಣಿವಾಗುತ್ತಿದೆ ಆದರೆ ವಿಶ್ರಾಂತಿ ಪಡೆಯಲು ನಮ್ಮದೆಂದು ಸೂರಿಲ್ಲ,
ಎತ್ತ ನೋಡಿದರೂ ಡಂ ಡಂ ಅನ್ನುವ ಶಬ್ದ ಕೇಳುತ್ತೆ, ಯಾರೋ ಅಪರಿಚಿತರು ನಮ್ಮ ಜೊತೆಗಿದ್ದಾರೆ, ಯಾವುದೋ ಗುಹೆಯಂತ ಜಾಗದಲ್ಲಿ  ಅಡಗಿ ಕುಳಿತಿದ್ದೇವೆ , ಬರಿಯ ಅಳು , ಚೀರಾಟದ ಹೊರತೂ ಮತ್ತೇನೂ ಕೇಳುತ್ತಿಲ್ಲ. ಸುತ್ತಲೂ ನಮ್ಮಂತೆ ಪುಟ್ಟ ಮಕ್ಕಳು, ನಮಗೆಲ್ಲ ಹಸಿವು, ಸುರಿಯುವ ರಕ್ತ, ಗಾಯದ ನೋವು,  ಅತ್ತು ಸಾಕಾಗಿ ಕೆನ್ನೆಯಲ್ಲೇ ಬತ್ತಿದ ಕಣ್ಣೀರು. ನಮ್ಮವರೆಂದು ಅಲ್ಲಿ ಯಾರೂ ಇರಲಿಲ್ಲ.

ನನಗೆ ಚಿಕ್ಕ ನೋವಾದರೂ ಸಮಾಧಾನ ಮಾಡುತ್ತಿದ್ದ ಅಮ್ಮನಾಗಲಿ ಅಪ್ಪನಾಗಲಿ ಇಲ್ಲ.  ಇಷ್ಟು ನೋವಾದರೂ ಹೇಳೋಕಾಗ್ತಿಲ್ಲ , ನಮ್ಮ ನಾಳೆಗಳ ಬಗ್ಗೆ ಯೋಚನೆ ಇಲ್ಲ, ಯಾಕೆಂದರೆ ನಾಳೆ ನಾವು ಬದುಕಿರೋದೆ ಖಾತರಿ ಇಲ್ಲ .  ಆದರೆ ನಮ್ಮನ್ನೂ ಯಾರು ನೋಡಿಕೊಳ್ತಾರೋ? ನಮಗೆ ಯಾರು ಊಟ ಕೊಡಬಹುದು?  ಮತ್ತೆ ನಾವೆಲ್ಲಿ ಇರಬೇಕು ? ನಮಗೆ ಗೊತ್ತಿಲ್ಲ . ಕಣ್ಣೀರು ಮಾತ್ರ ಆಗಾಗ್ಗೆ ಜೊತೆಗಾರನಾಗಿದೆ. ಆದರೆ ಕಣ್ಣೊರೆಸುವ ಕೈಗಳು ಸಿಗುತ್ತಿಲ್ಲ.ಅಕ್ಕ ಪಕ್ಕದವರ ಮುಖದಲ್ಲಿ ಕೂಡ ಕಾಣುತ್ತಿರುವುದು ಭಯ ಭೀತಿಯೇ . ನಿನ್ನೆಯವರೆಗೆ ಸುಂದರವಾಗಿದ್ದ ಬದುಕು,  ಇಂದು ಬೀದಿ ಪಾಲಾಗಿದೆ . ಅದರಲ್ಲೂ ನಮಗೆ ನಾಳೆ ಬದುಕಿರುವ ನಂಬಿಕೆಯೇ ಹುಸಿಯಾಗಿದೆ. ಈ ಸಂಘರ್ಷಗಳು ಯಾರಿಗೆ ಬೇಕು ಕಾಣೇ.., ಆದರೆ ನಮ್ಮಂತಹ ಅಮಾಯಕರನ್ನು
ಅನಾಥರಾಗಿಸಿದ ಅವರಿಗೆಂದು ನಮ್ಮ ಶಾಪವಿದೆ .


ಅಮ್ಮು ರತನ್ ಶೆಟ್ಟಿ

3 thoughts on “ಆ ಕರಾಳ ದಿನ, ಯುದ್ದ ಭೂಮಿಯಲ್ಲಿ ಸಿಲುಕಿಕೊಂಡ ಕೂಸೊಂದರ ಸ್ವಗತ-ಅಮ್ಮು ರತನ್ ಶೆಟ್ಟಿ

    1. ತುಂಬಾ ದುಃಖವಾಯಿತು.ಆಂಮರಾಳದ ದುಃಖ ಮಗುವಿನ ನೋವು ಕಂಬನಿ ತರಿಸಿತು.

Leave a Reply

Back To Top