ಕಭೀ ಖುಷೀ ಕಭಿ ಘಂ-ಲಹರಿ ಆದಪ್ಪ ಹೆಂಬಾ

ಲಹರಿ ಸಂಗಾತಿ

ಲಹರಿಸಂಗಾತಿ

ಆದಪ್ಪ ಹೆಂಬಾ

ಕಭೀ ಖುಷೀ ಕಭಿ ಘಂ 

ಭಾಗ ಎರಡು

ನಾನು ಭಾವನಾತ್ಮಕ ಕಥಾ ಹಂದರ ಇರುವಂತಹ ಸಿನೆಮಾಗಳ ಅಭಿಮಾನಿ. ಭಾಷೆ ಯಾವುದೇ ಇರಲಿ ಭಾವನೆಗಳು ಮುಖ್ಯ. ಕನ್ನಡದ ಬಂಗಾರದ ಮನುಷ್ಯ ನೆನೆಸಿಕೊಳ್ಳಿ.ಆ ಚಿತ್ರದ ಕ್ಲೈಮಾಕ್ಸ್ ಸೀನ್ ನಲ್ಲಿ ನಮ್ಮ ವರನಟ ರಾಜಕುಮಾರ್ ತಾನು ಹದಗೊಳಿಸಿ, ಹಸನು ಮಾಡಿ, ಉತ್ತಿ ಬಿತ್ತಿದ್ದ ಮಣ್ಣನ್ನು ಬಿಟ್ಟು ಹೋಗುವ ಸಂದರ್ಭ ಬರುತ್ತೆ. ಆಗ ಅಣ್ಣಾವ್ರು, “ಅಮ್ಮಾ ತಾಯಿ, ನಿನ್ನ ಸೇವೆ ಮಾಡದೇ ನಿನ್ನನ್ನ ಬಿಟ್ಟು  ದೂ……ರ…… ಹೋಗ್ತಾಯಿದ್ದೀನಮ್ಮ. ನೀನು ನನ್ನನ್ನು ಸಲುಹಿದಂತೆ ಇವರನ್ನೂ ಸಲುಹಮ್ಮ……ನನ್ನನ್ನು ಕ್ಷಮಿಸು ತಾಯಿ” ಅಂತ ಆ ಮಣ್ಣನ್ನು ತನ್ನ ಎದೆಗೆ ಹಚ್ಕೋತಾರೆ. ಆ ದೃಶ್ಯ ಎಂಥ ಕಟುಕನ ಹೃದಯವನ್ನೂ ಕಲಕಿ ಬಿಡುತ್ತೆ. ಹಾಗಿತ್ತು ರಾಜಕುಮಾರರ ಆ ಅಭಿನಯ. ಅದೇರೀತಿ ಬಂಧನದ ವಿಷ್ಣುವರ್ಧನ್, ಮಣ್ಣಿನ ದೋಣಿಯ ಅಂಬರೀಷ್, ಅರುಣರಾಗದ ಅನಂತನಾಗ್,  ನಮ್ಮ ಹೃದಯವನ್ನು ಕಲಕಿ ಬಿಡುತ್ತಾರೆ. ಇವರೆಲ್ಲ ನಮ್ಮ ಕನ್ನಡ ಚಿತ್ರರಂಗದ ಅಭಿನಯ ವಿಶ್ವವಿದ್ಯಾಲಯ ಇದ್ದಂತೆ. ಇಂತಹವರ ಸಿನೆಮಾಗಳನ್ನು ಅನುಭವಿಸಿ ನೋಡಿದರೆ ಸಾಕು. ಬೇರಾವ ಅಭಿನಯದ ಪಾಠ ಬೇಕಿಲ್ಲ. ಹಿಂದಿಯಲ್ಲೂ ಇಂತಹ ಅನೇಕ ಲೆಜೆಂಡರಿ ಯ್ಯಾಕ್ಟರಗಳಿದ್ದಾರೆ ಖರೆ. ನಾನು ಹೆಚ್ಚು ಹಿಂದಿ ಸಿನೆಮಾ ನೋಡುವವನಲ್ಲ. ಆದರೆ  ಅಮಿತಾಭ್ ರನ್ನು ಬಿಡುವವನಲ್ಲ. ಆತನ ಅಭಿನಯದಲ್ಲಿ ಎನೋ ಒಂದು ಆಕರ್ಷಣೆ ಇದೆ. ಧ್ವನಿಯಲ್ಲಿ ಒಂದು ಗತ್ತಿದೆ. ಧ್ವನಿಯಲ್ಲಿನ ಆ ಗತ್ತನ್ನು ಕನ್ನಡದ ನಮ್ಮ ಸುದೀಪ್ ರಲ್ಲಿ ಕಾಣಬಹುದೇನೋ. ನಿನ್ನೆ ಮನಸ್ಸು ವಿಲವಿಲಿಸುತ್ತಿದ್ದರೂ ಮುದ್ದಿನ ಮಗಳ ಒತ್ತಾಸೆಗೆ ಮಣಿದು ಸಿನೆಮಾ ನೋಡಲು ಒಪ್ಪಿಕೊಂಡಿದ್ದು ಅದರಲ್ಲಿ ಅಮಿತಾಭ್ ಇದಾರೆ ಅನ್ನೋ ಕಾರಣಕ್ಕೆ. ಮತ್ತು ಅದು ಕಭೀ ಖುಷಿ ಕಭಿ ಗಮ್ ಅನ್ನೋ ಕಾರಣಕ್ಕೆ. ಅಮಿತಾಭ್-ಜಯಬಾಧುರಿ, ಶಾರುಖ್-ಕಾಜೋಲ್, ಹೃತಿಕ್-ಕರೀನಾ, ಅತಿಥಿಯಾಗಿ ರಾಣಿ ಮುಖರ್ಜಿ, ರಂತಹ ಮಹಾನ್ ಕಲಾವಿದರ ಮನೋಜ್ಞ ಅಭಿನಯದ, ಹಲವಾರು ಭಾವನಾತ್ಮಕ ಸೀಕ್ವೆನ್ಸ್ ಗಳ ಒಟ್ಟು ಫಲಿತಾಂಶವೇ ಕಭೀ ಖುಷಿ ಕಭಿ ಗಮ್. ಕರಣ್ ನ ಎನ್ನುವ ನಿರ್ದೇಶಕ ಸಿಂಪಲ್ ಆಗಿರೋ ಕಥೆಯನ್ನು ಸೊಗಸಾಗಿ ಹೆಣೆದು, ಲೆಜೆಂಡರಿ ಕಲಾವಿದರನ್ನು ಒಗ್ಗೂಡಿಸಿ ಅವರಿಂದ ದಿ ಬೆಸ್ಟ್ ಅನ್ನು ಹೊರತೆಗೆದಾಗ ಸೃಷ್ಟಿ ಯಾಗಿರುವುದು ಇಂಥ ಒಂದು ಸಿನೆಮಾ.ಆ ಜೋಹರ್ ಗೊಮ್ಮೆ ಕೈ ಎತ್ತಿ ಮುಗಿಲೇ ಬೇಕು. ಇನ್ನು ಅಷ್ಟೂ ಕಲಾವಿದರ ಅಭಿನಯಕ್ಕೆ ಅವರೇ ಸಾಟಿ.
            ಅಮಿತಾಭ್-ಜಯಬಾಧುರಿ ದಂಪತಿಗಳದ್ದು ಒಂದು ರಾಯಲ್ ಫ್ಯಾಮಿಲಿ. ಒಂದು ಸಣ್ಣ ಪಿಕ್-ನಿಕ್ ಗೂ ಹೆಲಿಕಾಪ್ಟರ್ ತಗೆದುಕೊಂಡು ಹೋಗುವಷ್ಡರ ಮಟ್ಟಿಗೆ ಶ್ರೀಮಂತಿಕೆ ಇರುತ್ತೆ ಆ ಫ್ಯಾಮಿಲಿಗೆ. ಆ ಶ್ರೀಮಂತಿಕೆಗೆ ತಕ್ಕಂತೆ ನಮ್ಮ ಅಮಿತಾಭ್ ರ ಗತ್ತು. ಬ್ಯಾಡ್ ಲಕ್ ಅವರಿಗೆ ಮಕ್ಕಳಿರಲ್ಲ. ಚಿಂತೆಯಿಲ್ಲ. ಶಾರುಖ್ ನನ್ನು ದತ್ತು ಪಡೀತಾರೆ. ಸ್ವಂತ ಮಗನಿಗಿಂತ ಹೆಚ್ಚು ಪ್ರೀತಿಯಿಂದ ಸಾಕ್ತಾರೆ. ಆ ತಾಯಿ ಪ್ರೀತಿ ತೋರಿಸುವಲ್ಲಿ ಜಯಬಾಧುರಿಯವರದು ಅಭಿನಯವೇ ಅಲ್ಲ. ನೈಜ ನೈಜ. ಅವರು ತಮ್ಮ ಸ್ವಂತ ಮಗ ಅಭಿಷೇಕ್ ನನ್ನೂ ಅಷ್ಟು ಪ್ರೀತಿಸ್ತಾರೋ ಇಲ್ವೋ ಗೊತ್ತಿಲ್ಲ. ಅಷ್ಟು ಮುದ್ದಿಸ್ತಾರೆ ಶಾರುಖ್ ನನ್ನ. ಸುಮಾರು ಹತ್ತಾರು ವರ್ಷಗಳ ನಂತರ ಅಮಿತಾಭ್-ಜಯಬಾಧುರಿ ದಂಪತಿಗೆ ಒಬ್ಬ ಮಗ ಹುಟ್ತಾನೆ. ಅವನೇ ಹೃತಿಕ್. ಸ್ವಂತ ಮಗ ಬಂದ ಅಂತ ಸಾಕು ಮಗನ ಮೇಲಿನ ಪ್ರೀತಿ ಒಂದಿನಿತೂ ಕಡಿಮೆಯಾಗಲ್ಲ ಆ ತಾಯಿಗೆ. ಸರ್ಪ್ರೈಜಿಂಗ್ಲೀ ಸ್ವಂತ ಮಗನಿಗಿಂತ ಸಾಕು ಮಗನ ಮೇಲೇ ಹೆಚ್ಚು ಪ್ರೀತಿ ಇರುತ್ತೆ ಆಯಮ್ಮನಿಗೆ. ಅಮಿತಾಭ್ ನದೋ ಒಂದೇ ತೆರನಾದ ಗತ್ತು. ಇಬ್ಬರೂ ಮಕ್ಕಳ ಮುಂದೆ ಅದೇ ಶಿಸ್ತು ಅದೇ ಗಾಂಭೀರ್ಯ. ಆ ಎರಡು ಮಕ್ಕಳ ವಯಸ್ಸಿನ ಅಂತರ ತುಂಬಾ ಹೆಚ್ಚಿರುತ್ತೆ. ಹೃತಿಕ್ ತುಂಬಾ ಸಣ್ಣವನಿರುತ್ತಾನೆ. ಹೀಗಾಗಿ ಅವನ ವಾಸ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ. ಶಾರುಖ್ ಅದಾಗಲೇ ಶಾರುಖ್ ಆಗಿರುತ್ತಾನೆ. ಅಪ್ಪನ ವ್ಯವಹಾರ ನೋಡ್ಕೊಳ್ತಿರ್ತಾನೆ. ಅವನಿಗೆ ಮದುವೆ ಮಾಡಬೇಕು. ಅಮಿತಾಭ್ ತನ್ನ ಮುದ್ದಿನ ಸೊಸೆ ರಾಣಿ ಮುಖರ್ಜಿಯನ್ನು ತನ್ನ ಸಾಕು ಮಗ ಶಾರುಖ್ ನಿಗೆ ತಂದುಕೊಳ್ಳಬೇಕು ಅಂದುಕೊಳ್ಳುತ್ತಾನೆ. ಆದರೆ ಅಲ್ಲೇ ಸಮಸ್ಯೆ ಶುರುವಾಗುವುದು.  ಶಾರುಖ್ ಎಲ್ಲವನ್ನೂ ನೀಡಿದ್ದ ಸಾಕು ತಂದೆಯ ಮಾತು ದಿಕ್ಕಿರಿಸಿ ಕಾಜೋಲ್ ಳನ್ನು ಮದುವೆಯಾಗುವ ಸಂದರ್ಭ ಸೃಷ್ಟಿಯಾಗುತ್ತೆ.  ಮದುವೆಯಾಗಿಬಿಡುತ್ತಾನೆ. ಅಮಿತಾಬ್ ಗೆ ನೋವಾಗುತ್ತೆ. ಶಾರುಖ್ ನನ್ನು ಮನೆಬಿಟ್ಟು ಆಚೆ ಹಾಕುತ್ತಾನೆ. ಶಾರುಖ್ ಮನೆ ಬಿಟ್ಟು ಹೋಗುವಾಗ ಸಿಟ್ಟಿನಲ್ಲಿ ಅಮಿತಾಭ್ ಒಂದು ಮಾತು ಹೇಳ್ತಾನೆ, “ತುಮ್ ಮೇರೆ ಖೂನ್ ನಹಿ ಹೋ” ಶಾರುಖ್ ಗೆ ನೋವಾಗುತ್ತೆ. ಈ ನೋವು ತಂದೆ ಮಗನನ್ನು ಬೇರೆ ಮಾಡುತ್ತೆ. ತಾಯಿಗೆ ಅಳುವುದಷ್ಡೇ ಕೆಲಸ.
            ಚಿಕ್ಕವನಾಗಿದ್ದ ಹೃತಿಕ್ ಗೆ ಈ ವಿಷಯ ತುಂಬಾ ತಡವಾಗಿ ಗೊತ್ತಾಗುತ್ತೆ. ಮನೆ ಬಿಟ್ಟು ಹೋದಮೇಲೆ ಲಂಡನ್ ನಲ್ಲಿ ಸೆಟ್ಲ್ ಆಗಿದ್ದ ಅಣ್ಣ-ಅತ್ತಿಗೆ (ಶಾರುಖ್-ಕಾಜೊಲ್) ಯರನ್ನು ಮರಳಿ ಮನೆಗೆ ತರುವ ಹೃತಿಕ್ ನ ಪ್ರಯತ್ನವೇ ಚಿತ್ರದ ದ್ವಿತೀಯಾರ್ಧದಲ್ಲಿ ಬರೋದು. ಇದಕ್ಕಾಗಿ ಹೃತಿಕ್ ಪಡುವ ಕಷ್ಟ ಒಂದೆರಡಲ್ಲ. ಈ ಮಧ್ಯೆ ಮನರಂಜನಾತ್ಮಕ ಸರಕಾಗಿ ಹಾಡು, ಕುಣಿತ ಬೇಜಾನ್ ಇವೆ. ಒಂದು ಸೀನ್ ನಲ್ಲಂತೂ ಲಂಡನ್ ನ ಶಾಲೆಯಲ್ಲಿ ಓದುತ್ತಿದ್ದ ಶಾರುಖ್-ಕಾಜೋಲ್ ರ ಮಗ ತನ್ನ ಶಾಲಾ ವಾರ್ಷಿಕೋತ್ಸವದಲ್ಲಿ ಜನಗನಮನ ಹಾಡುವ, ಆಗ ಇಂಗ್ಲೆಂಡ್ ನ ಪ್ರೇಕ್ಷಕರೂ…… ಅದನ್ನು ನೋಡಿ ನಮ್ಮ ಸಿನೆಮಾ ಥೇಟರಿನ ಪ್ರೇಕ್ಷಕರನ್ನೂ ಎದ್ದು ನಿಲ್ಲಿಸುವ ಭಾವನಾತ್ಮಕ ಸನ್ನಿವೇಶ ಇದೆ.
           ಆದರೆ ಇವೆಲ್ಲವನ್ನೂ ಮೀರಿಸುವುದು ಕೊನೆಯ ಕ್ಲೈಮಾಕ್ಸ್ ದೃಶ್ಯ. ಇಗೋ ಬಿಟ್ಟ ಅಪ್ಪ-ಮಗ (ಅಮಿತಾಭ್-ಶಾರುಖ್) ಒಂದಾಗುವ ದೃಶ್ಯ. ಇಬ್ರೂ ಅಳ್ತಾರೆ, ನಗ್ತಾರೆ, ಅಮಿತಾಭ್  ಶಾರುಖ್ ನ ಕೆನ್ನೆ ಕೆನ್ನೆ ಬಾರಿಸ್ತಾ “ಮಗನೇ ಯಾಕೋ ನೀ ಸೋಲಲಿಲ್ಲ” ಅನ್ನೋದು, “ನಿಮ್ಮ ಎದುರು ಸೋಲೋಕೂ ಭಯ ಅಪ್ಪಾಜೀ” ಅಂತ ಶಾರುಖ್ ಅಳೋದು. ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತೆ. ಕೊನೆಗೆ ತಂದೆಯೇ ಕೈ ಮಗಿದು ಮಕ್ಕಳೆದುರು ಸಾರಿ ಕೇಳುವಾಗ,- ಬೆಳೆದ ಮಕ್ಕಳೆದುರು ಈ ಇಗೋ ಯಾಕೆ ಬೇಕು ? ಮಕ್ಕಳೋ ಬೆಳೆದಿದ್ದಾರೆ, ದೊಡ್ಡವರಾಗಿದ್ದಾರೆ. ಅವರಿಗೆ ತಂದೆಯರಾಗುವ ಬದಲು, ನಾವೇ ಅವರಿಗೆ ಮಕ್ಕಳಾಗಿಬಿಡುವುದು ಒಳಿತು- ಎನಿಸಿದ್ದು ಸುಳ್ಳಲ್ಲ.


 ಆದಪ್ಪ ಹೆಂಬಾ ಮಸ್ಕಿ

Leave a Reply

Back To Top